ರೈಲುಗಳಲ್ಲಿನ ಆಹಾರ ಗುಣಮಟ್ಟ ಹಾಗೂ ಶುಚಿತ್ವದ ಕುರಿತು ಕೇಂದ್ರ ಸಚಿವ ರವನೀತ್ ಸಿಂಗ್ ಬಿಟ್ಟು ಅವರು ತಮಿಳುನಾಡು ಡಿಎಂಕೆ ಸಂಸದ ಎಂ.ಎಂ ಅಬ್ದುಲ್ಲಾ ಅವರಿಗೆ ಹಿಂದಿಯಲ್ಲಿ ಪತ್ರ ಬರೆದಿದ್ದಾರೆ. ಆ ಪತ್ರಕ್ಕೆ ತಮಿಳಿನಲ್ಲಿ ಪ್ರತಿಪತ್ರ ಬರೆದಿರುವ ಅಬ್ಬುಲ್ಲಾ, ‘ನನಗೆ ಏನೂ ಅರ್ಥವೇ ಆಗಿಲ್ಲ’ ಎಂದು ಉತ್ತರಿಸಿದ್ದಾರೆ.
ರೈಲುಗಳಲ್ಲಿ ಸೌಲಭ್ಯಗಳ ಬಗ್ಗೆ ಡಿಎಂಕೆ ನಾಯಕ, ರಾಜ್ಯಸಭಾ ಸಂಸದ ಪುದುಕೋಟ್ಟೈ ಎಂ.ಎಂ ಅಬ್ದುಲ್ಲಾ ಅವರು ಪ್ರಶ್ನಿಸಿದ್ದರು. ಅವರ ಪ್ರಶ್ನೆಗೆ ಉತ್ತರಿಸಿ ಕೇಂದ್ರ ಸಚಿವ ರವನೀತ್ ಸಿಂಗ್ ಅವರು ಹಿಂದಿಯಲ್ಲಿ ಪತ್ರ ಬರೆದಿದ್ದರು. ಆದರೆ, ಆ ಪತ್ರದಲ್ಲಿದ್ದ ಒಂದೇ ಒಂದು ಪದವೂ ತಮಗೆ ಅಥವಾಗಿಲ್ಲ ಎಂದು ಅಬ್ದುಲ್ಲಾ ಅವರು ಪ್ರತಿಪತ್ರ ಬರೆದಿದ್ದಾಎರ. ತಮಗೆ ಇಂಗ್ಲಿಷ್‌ನಲ್ಲಿ ಉತ್ತರ ಕಳಿಸುವಂತೆ ಕೇಳಿದ್ದಾರೆ.
ತಮಗೆ ಬಂದ ಪತ್ರ ಮತ್ತು ತಾವು ಪ್ರತಿಕ್ರಿಯಿಸಿರುವ ಪತ್ರಗಳನ್ನು ಅಬ್ದುಲ್ಲಾ ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. “ನನಗೆ ಹಿಂದಿ ಅರ್ಥವಾಗುವುದಿಲ್ಲ ಎಂದು ಹಲವು ಬಾರಿ ಒತ್ತಿ ಹೇಳಿದ್ದೇನೆ. ಆದರೂ, ಕೇಂದ್ರ ಸಚಿವರ ಕಚೇರಿಯಲ್ಲಿ ನಿಯೋಜನೆಗೊಂಡಿರುವ ಅಧಿಕಾರಿಗಳು ನನಗೆ ಹಿಂದಿ ಭಾಷೆಯಲ್ಲಿ ಪತ್ರಗಳನ್ನು ಕಳಿಸುತ್ತಿದ್ದಾರೆ” ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
“ನನಗೆ ಹಿಂದಿ ಬರುವುದಿಲ್ಲ. ದಯವಿಟ್ಟು ಇಂಗ್ಲಿಷ್‌ನಲ್ಲಿ ಪತ್ರ ಕಳುಹಿಸಿ ಎಂದು ಹಲವು ಬಾರಿ ಸಚಿವರ ಕಚೇರಿಯಲ್ಲಿರುವ ಅಧಿಕಾರಿಗಳಿಗೆ ಮನವಿ ಮಾಡಿದ್ದೇನೆ. ಆದರೂ, ಪತ್ರಗಳು ಮಾತ್ರ ಹಿಂದಿಯಲ್ಲೇ ಬರುತ್ತಿವೆ. ಈಗ, ಅವರಿಗೆ ಅರ್ಥವಾಗುವ ರೀತಿಯಲ್ಲಿ ನಾನು ಪ್ರತ್ಯುತ್ತರ ನೀಡಿದ್ದೇನೆ. ಇನ್ನು ಮುಂದೆ ನನಗೆ ಇಂಗ್ಲಿಷ್ ಭಾಷೆಯಲ್ಲೇ ಪತ್ರ ಕಳಿಸಬೇಕು” ಎಂದು ಹೇಳಿದ್ದಾರೆ.