ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ನವದೆಹಲಿಯ ಸ್ಥಳೀಯ ಕ್ಷೌರದ ಅಂಗಡಿಗೆ ಭೇಟಿ ನೀಡಿ ಕ್ಷೌರಿಕನ ಜೊತೆ ಮಾತನಾಡುತ್ತಾ ಅವರ ಕಷ್ಟ, ಸುಖಗಳನ್ನು ಆಲಿಸಿದ್ದಾರೆ.
ಉತ್ತಮ್ ನಗರದ ಪ್ರಜಾಪತ್ ಕಾಲೋನಿಯಲ್ಲಿರುವ ಕ್ಷೌರಿದ ಅಂಗಡಿಗೆ ಭೇಟಿ ನೀಡಿದ ವಿಡಿಯೋವನ್ನು ರಾಹುಲ್ ಗಾಂಧಿ ಎಕ್ಸ್ ನಲ್ಲಿ ಹಂಚಿಕೊಂಡಿದ್ದಾರೆ. ಅವರು ತಮ್ಮ ಗಡ್ಡವನ್ನು ಟ್ರಿಮ್ ಮಾಡುವಾಗ ಕ್ಷೌರಿಕರ ಸಮಸ್ಯೆಗಳನ್ನು ಕೇಳುತ್ತಿರುವುದು ವಿಡಿಯೋದಲ್ಲಿ ಸೆರೆಯಾಗಿದೆ.
ಆದಾಯ ಕುಸಿತ ಮತ್ತು ಹೆಚ್ಚುತ್ತಿರುವ ಹಣದುಬ್ಬರ ಕಷ್ಟಪಟ್ಟು ದುಡಿಯುವ ಬಡ ಜನರ ಕನಸುಗಳನ್ನು ಕಸಿದುಕೊಂಡಿದೆ. ಆದ್ದರಿಂದ ಉಳಿತಾಯವನ್ನು ಉತ್ತೇಜಿಸುವ ಹೊಸ ಯೋಜನೆಗಳ ಜಾರಿ ಅವಶ್ಯಕತೆಯಿದೆ ಎಂದು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಮೂರು ಪಕ್ಷಗಳಿಂದಲೂ ಕುಟುಂಬ ಅಭ್ಯರ್ಥಿಗಳ ದುರಂತ ರಾಜಕಾರಣ
ವಿಡಿಯೋದಲ್ಲಿ ರಾಹುಲ್ ಕುರ್ಚಿಯ ಮೇಲೆ ಕುಳಿತಿದ್ದಾರೆ, ಅಜಿತ್ ಎಂಬ ಕ್ಷೌರಿಕ ರಾಹುಲ್ ಗಾಂಧಿಯ ಗಡ್ಡವನ್ನು ಟ್ರಿಮ್ ಮಾಡುತ್ತಾ ತನ್ನ ಕಥೆಯನ್ನು ಅವರ ಜೊತೆ ಹಂಚಿಕೊಂಡಿದ್ದಾರೆ.
“‘”ಉಳಿತಾಯಕ್ಕೆ ಏನೂ ಉಳಿದಿಲ್ಲ!’ ಅಜಿತ್ ಭಾಯ್ ಅವರ ಮಾತುಗಳು ಮತ್ತು ಅವರ ಕಣ್ಣೀರು ಇಂದು ಭಾರತದ ಪ್ರತಿಯೊಬ್ಬ ಕಷ್ಟಪಟ್ಟು ದುಡಿಯುವ ಬಡ ಮತ್ತು ಮಧ್ಯಮ ವರ್ಗದ ವ್ಯಕ್ತಿಯ ಕಥೆಯನ್ನು ಹೇಳುತ್ತದೆ. ಆದಾಯ ಕುಸಿತ ಮತ್ತು ಹೆಚ್ಚುತ್ತಿರುವ ಹಣದುಬ್ಬರವು ಕ್ಷೌರಿಕರು, ಚಮ್ಮಾರರು, ಕುಂಬಾರರು, ಬಡಗಿಗಳು ಸೇರಿದಂತೆ ಕಾರ್ಮಿಕ ವರ್ಗದ ಅಂಗಡಿ, ಮನೆ ಮತ್ತು ಸ್ವಾಭಿಮಾನದ ಕನಸುಗಳನ್ನು ಕಸಿದುಕೊಂಡಿದೆ” ಎಂದು ರಾಹುಲ್ ಗಾಂಧಿ ತನ್ನ ಪೋಸ್ಟ್ನಲ್ಲಿ ಹೇಳಿದ್ದಾರೆ.
