ಪೊಲೀಸ್ ಠಾಣೆಯಲ್ಲಿ ಯುವಕನೊಬ್ಬ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಆಕ್ರೋಶಗೊಂಡ ಜನಸಮೂಹವು ಪೊಲೀಸರ ಮೇಲೆ ದಾಳಿ ನಡೆಸಿರುವ ಘಟನೆ ಛತ್ತೀಸ್‌ಗಢದ ಬಲರಾಮ್‌ಪುರ ಜಿಲ್ಲೆಯಲ್ಲಿ ನಡೆದಿದೆ.
ಇತ್ತೀಚಿನ ತಿಂಗಳುಗಳಲ್ಲಿ ಛತ್ತೀಸ್‌ಗಢದಲ್ಲಿ ಪೊಲೀಸರ ಮೇಲೆ ಜನರು ಆಕ್ರೋಶಗೊಂಡಿದ್ದಾರೆ. ಪೊಲೀಸ್ ಠಾಣೆಗಳ ಮೇಲೆ ಆಗ್ಗಾಗ್ಗೆ ದಾಳಿ ನಡೆದಿರುವ ಘಟನೆಗಳು ನಡೆದಿವೆ. ಕೊತ್ವಾಲಿ ಪೊಲೀಸ್ ಠಾಣೆಯ ಸ್ನಾನದ ಕೊಠಡಿಯಲ್ಲಿ ಯುವಕ ಸಾವನ್ನಪ್ಪಿದ್ದು, ಪೊಲೀಸರು ನೀಡಿದ ಕಿರುಕುಳದಿಂದ ಆತ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಆರೋಪಿಸಲಾಗಿದೆ.
ಮೃತನನ್ನು ಆರೋಗ್ಯ ಕಾರ್ಯಕರ್ತ ಗುರ್ಚನ್ ಮಂಡಲ್ ಎಂದು ಗುರುತಿಸಲಾಗಿದೆ. ತನ್ನ ಪತ್ನಿ ಕಾಣೆಯಾಗಿದ್ದಾರೆಂದು ಗುರ್ಚನ್ ದೂರು ದಾಖಲಿಸಿದ್ದರು. ಅದೇ ಪ್ರಕರಣದ ವಿಚಾರಣೆಗಾಗಿ ಗುರ್ಚನ್‌ನನ್ನು ಪೊಲೀಸ್ ಠಾಣೆಗೆ ಪೊಲೀಸರು ಕರೆಸಿಕೊಂಡಿದ್ದರು. ಈ ವೇಳೆ, ಆತನಿಗೆ ಪೊಲೀಸರು ಚಿತ್ರಹಿಂಸೆ ನೀಡಿದ್ದರಿಂದಲೇ, ಆತ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಜನರು ಆರೋಪಿಸಿದ್ದಾರೆ.
ಘಟನೆಯಿಂದ ಆಕ್ರೋಶಗೊಂಡ ಜನರು ಪೊಲೀಸ್ ಠಾಣೆಯ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ಆಸ್ತಿ ಮತ್ತು ವಾಹನಗಳಿಗೆ ಹಾನಿ ಮಾಡಿದ್ದಾರೆ. ಜನರ ಮೇಲೆ ಪೊಲೀಸರು ಲಾಠಿ ಚಾರ್ಜ್ ಮತ್ತು ಅಶ್ರುವಾಯು ಶೆಲ್‌ಗಳನ್ನು ಪ್ರಯೋಗಿಸಿದ್ದಾರೆ. ಕೊತ್ವಾಲಿಯಲ್ಲಿ ಹಿಂಸಾಚಾರ ಭುಗಿಲೆದ್ದಿದೆ. ಬಲರಾಂಪುರ ಹೆಚ್ಚುವರಿ ಎಸ್‌ಪಿ ನಿಮಿಷಾ ಪಾಂಡೆ ಅವರನ್ನು ಸ್ಥಳೀಯ ಮಹಿಳೆಯರು ಥಳಿಸಿದ್ದಾರೆ.
ಘಟನೆ ಸಂಬಂಧ ಬಲ್ರಾಮ್‌ಪುರ ಜಿಲ್ಲಾ ಪೊಲೀಸ್ ಮುಖ್ಯಸ್ಥ ಕೊತ್ವಾಲಿ ಠಾಣಾ ಪ್ರಭಾರಿ ಮತ್ತು ಕಾನ್‌ಸ್ಟೆಬಲ್‌ನನ್ನು ಅಮಾನತು ಮಾಡಲಾಗಿದೆ.
ಈ ಘಟನೆಗೂ ಮುನ್ನ, ಈ ಹಿಂದೆ, ಬಲೋಡಾಬಜಾರ್, ಸೂರಜ್‌ಪುರ ಮತ್ತು ಕವರ್ಧಾ ಜಿಲ್ಲೆಗಳಲ್ಲಿಯೂ ಪೊಲೀಸ್ ಠಾಣೆಗಳ ಮೇಲೆ ದಾಳಿಗಳು ನಡೆದಿವೆ.