ಶ್ರೀರಂಗಪಟ್ಟಣದಲ್ಲಿ ಮೈಸೂರು-ಬೆಂಗಳೂರು ಹೆದ್ದಾರಿ ಪಕ್ಕದಲ್ಲಿರುವ, ಇತ್ತೀಚೆಗೆ ಪತ್ತೆಯಾಗಿರುವ ಐತಿಹಾಸಿಕ ಜೋಡಿ ನೆಲಮಾಳಿಗೆಗಳ ಒಳಭಾಗವನ್ನು ಕಿಡಿಗೇಡಿಗಳು ಕೆಲವು ದಿನದ ಹಿಂದೆ ಅಗೆದು ಹಾಕಿರುವ ಹಿನ್ನೆಲೆಯಲ್ಲಿ ಶ್ರೀರಂಗಪಟ್ಟಣ ಪ್ರಜ್ಞಾವಂತ ನಾಗರಿಕರು ಅಕ್ಟೋಬರ್ 26ರ ಶನಿವಾರ ಭೇಟಿ ನೀಡಿ ವೀಕ್ಷಿಸಿದರು.
ಸುಮಾರು 8 ಅಡಿ ಅಗಲ ಮತ್ತು 15 ಅಡಿ ಉದ್ದ ಇರುವ ನೆಲಮಾಳಿಗೆಗಳ ಚುರಕಿ ಗಾರೆಯ ನೆಲಹಾಸನ್ನು ಹಾರೆ ಇಲ್ಲವೇ ಪಿಕಾಸಿ ಬಳಸಿ ಎರಡು ಅಡಿ ಆಳದಷ್ಟು ಅಗೆಯಲಾಗಿದೆ. ನೆಲಮಾಳಿಗೆಗಳ ಮುಂದಿನ ನಕ್ಷತ್ರಾಕಾರದ ಕಟ್ಟಡದ ಎರಡು ಕಲ್ಲಿನ ದಿಮ್ಮಿಗಳನ್ನೂ ಕೂಡ ಕೀಳಲಾಗಿದೆ. ಇದು ನಿಧಿಗಳ್ಳರ ಕೃತ್ಯವಿರಬಹುದೆಂದು ಶಂಕಿಸಲಾಗಿದೆ.
ಅಪ್ಸರ್ ಖಾನ್ ಮಾತನಾಡಿ, “ವಸ್ತುಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆಯ ಕ್ಯೂರೇಟರ್ ಎನ್ ಎನ್ ಗೌಡ ಹಾಗೂ ಮತ್ತಿತರ ಅಧಿಕಾರಿಗಳು ಅಕ್ಟೋಬರ್ 22ರಂದು ಭೇಟಿ ನೀಡಿದ್ದರು. ಮೇಲಧಿಕಾರಿಗಳಿಗೆ ವರದಿ ಮಾಡುತ್ತೇವೆ. ಇಲಾಖೆಯ ಲಭ್ಯ ಅನುದಾನ ನೋಡಿಕೊಂಡು ಈ ಸ್ಮಾರಕಗಳನ್ನು ಅಭಿವೃದ್ಧಿ ಮಾಡಲು ಕ್ರಮವಹಿಸಲಾಗುವುದೆಂದು ಭರವಸೆ ನೀಡಿದರು. ಈ ಮಾತಷ್ಟೇ ಸಾಕಾಗುವುದಿಲ್ಲ. ಶೀಘ್ರ ಶ್ರೀರಂಗಪಟ್ಟಣದ ಸ್ಮಾರಕಗಳ ಸಂರಕ್ಷಣೆಗೆ ಪುರಾತತ್ವ ಇಲಾಖೆ, ಪುರಸಭೆ, ಪೊಲೀಸ್ ಇಲಾಖೆ ಸೇರಿದಂತೆ ಎಲ್ಲರೂ ಕ್ರಮವಹಿಸಬೇಕು” ಎಂದು ಹೇಳಿದರು.
“ಪ್ರಾಚ್ಯವಸ್ತು ಇಲಾಖೆ ಸ್ಮಾರಕಗಳನ್ನು ಸಂರಕ್ಷಿಸಲು ಕ್ರಮವಹಿಸದ ಕಾರಣ ಅಪಾಯ ಎದುರಾಗಿದೆ. ಗಿಡಗಂಟಿಗಳ ಮಧ್ಯೆ ಮುಚ್ಚಿ ಹೋಗಿದ್ದ ಸ್ಮಾರಕಗಳ ಪರಿಸರವನ್ನು ವಿವಿಧ ಸಂಘ, ಸಂಸ್ಥೆಗಳ ಕಾರ್ಯಕರ್ತರು, ವಿಧ್ಯಾರ್ಥಿಗಳು ಸ್ವಚ್ಛಗೊಳಿಸಿ ಸಾರ್ವಜನಿಕರಿಗೆ ಕಾಣುವಂತೆ ಮಾಡಿದ್ದಾರೆ. ಆದರೆ ಇಲಾಖೆ ತನಗೂ ಇದಕ್ಕೂ ಸಂಬಂಧವಿಲ್ಲದಂತೆ ನಿರ್ಲಕ್ಷ್ಯ ವಹಿಸಿದೆ” ಎಂದು ಸಮರ್ಪಣಾ ಟ್ರಸ್ಟ್ ಅಧ್ಯಕ್ಷ ಕಡತನಾಳು ಕೆ ಎಸ್ ಜಯಶಂಕರ್ ಆರೋಪಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ರಾಯಚೂರು | ಜನರ ಸಮಸ್ಯೆಗಳ ಜೊತೆಗೆ ನಿಲ್ಲುವುದೇ ರಾಜಕೀಯ : ಸಂಸದ ಸಸಿಕಾಂತ್ ಸೆಂಥಿಲ್
“ಟಿಪ್ಪು ಸುಲ್ತಾನ್ ಕಾಲದ ನೆಲಮಾಳಿಗೆಗಳು ವಿಶಿಷ್ಟ ರಚನಾ ಶೈಲಿಯನ್ನು ಹೊಂದಿದ್ದು, ಮುಂದಿನ ಪೀಳಿಗೆಗೂ ಉಳಿಸಬೇಕು. ಪ್ರವಾಸಿ ತಾಣವಾಗಿ ಅಭಿವೃದ್ಧಿಪಡಿಸಲು ಕ್ರಮ ವಹಿಸಬೇಕು” ಎಂದು ಸ್ಥಳಕ್ಕೆ ಭೇಟಿ ನಿಡಿದ್ದ ಕನ್ನಡಪರ ಹೋರಾಟಗಾರರಾದ ಪ್ರಿಯ ರಮೇಶ್ ಮತ್ತು ಡಿಎಸ್‌ಎಸ್‌ನ ಟಿಪ್ಪು ಚಂದ್ರು ಆಗ್ರಹಿಸಿದರು.
ವೆಂಕಟೇಗೌಡ ಸೇವಾ ಸಮಿತಿಯ ಡಾ. ಕೆ ವೈ ಶ್ರೀನಿವಾಸ್, ಹೆಗ್ಗಡದೇವನಕೋಟೆಯ ಮಾಲಾರ ಪುಟ್ಟಯ್ಯ, ಬಾಬುರಾಯನಕೊಪ್ಪಲು ಚಂದ್ರಣ್ಣ, ರಂಗನಾಯಕಿ ಸಮಾಜದ ಸಂಸ್ಥಾಪಕರಾದ ಆಶಾಲತಾ ಪುಟ್ಟೆಗೌಡ, ಪ್ರಿಯ ರಮೇಶ್, ಅಪ್ಸರ್ ಖಾನ್, ಟಿಪ್ಪು ಚಂದ್ರು, ಅಯೂಬ್, ಪಾಲಹಳ್ಳಿ ಗಾಯತ್ರಿದೇವಿ, ಅಬ್ದುಲ್ ಸುಕೂರ್ ತರೀಪುರ ಸೇರಿದಂತೆ ಇತರರು ಭೇಟಿ ನೀಡಿದ್ದರು.