ಮಾಜಿ ಮುಖ್ಯಮಂತ್ರಿ ದಿವಂಗತ ಎಸ್ ಬಂಗಾರಪ್ಪ ಕೇವಲ ರಾಜಕಾರಣಿ ಮಾತ್ರವಷ್ಟೇ ಅಲ್ಲದೆ ಸಮಾಜವಾದಿ ನಾಯಕ, ನ್ಯಾಯವಾದಿ, ಕ್ರೀಡಾಪಟು, ಹಾಡುಗಾರ, ಸಂಗೀತ ವಿದ್ವಾಂಸ, ಶಿಕ್ಷಣಪ್ರೇಮಿಯಾಗಿದ್ದು, ವೈವಿಧ್ಯಮಯ ವ್ಯಕ್ತಿತ್ವ ಹೊಂದಿದ್ದ ನಾಡಿನ ಅತ್ಯಂತ ಜನಪ್ರಿಯ ನಾಯಕ ಎಂದು ಅಹಿಂದ ಚಳವಳಿ ಸಂಘಟನೆ ಜಿಲ್ಲಾ ಪ್ರಧಾನ ಸಂಚಾಲಕ ಪ್ರೊ. ಜಿ ಪರಮೇಶ್ವರಪ್ಪ ಸ್ಮರಿಸಿದರು.
ಶಿವಮೊಗ್ಗ ನಗರದ ಆರ್‌ಟಿಒ ರಸ್ತೆ ಶ್ರೀ ಕಲಾ ಕೌಶಲ್ಯಾಭಿವೃದ್ಧಿ ಕೇಂದ್ರದಲ್ಲಿ ಅಹಿಂದ ಸಂಘಟನೆಗಳಿಂದ ಜರುಗಿದ ಮಾಜಿ ಮುಖ್ಯಮಂತ್ರಿ ನಾಡಿನ ಹಿಂದುಳಿದ ವರ್ಗಗಳ ಜನಪ್ರಿಯ ನಾಯಕ ದಿವಂಗತ ಎಸ್ ಬಂಗಾರಪ್ಪ ಅವರ ತೊಂಬತ್ತೆರಡನೇ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಬಂಗಾರಪ್ಪ ಭಾವಚಿತ್ರಕ್ಕೆ ಪುಷ್ಫನಮನ ಸಲ್ಲಿಸಿ ಮಾತನಾಡಿದರು. ಚುನಾವಣಾ ಪ್ರವಾಸ ಕಾಲದಲ್ಲಿ ಪ್ರತಿಯೊಂದು ಹಳ್ಳಿ-ಊರಿನಲ್ಲೂ ಮಧ್ಯರಾತ್ರಿಯವರೆಗೂ ಜನರು ಕಾದು ಕುಳಿತ್ತಿರುತ್ತಿದ್ದ ಘಟನೆಗಳನ್ನು ಮೆಲುಕು ಹಾಕಿದರು.
ಸಂಚಾಲಕ ಪ್ರೊ. ಎ ಕೆ ಚಂದ್ರಪ್ಪ ಮಾತನಾಡಿ, “ಬಂಗಾರಪ್ಪನವರು ಮುಖ್ಯಮಂತ್ರಿಯಾಗಿದ್ದಾಗ ಕೈಗೊಂಡ 10,800 ಮಂದಿ ಕಾಲೇಜು ಉಪನ್ಯಾಸಕರನ್ನು ಖಾಯಂಗೊಳಿಸುವ ತೀರ್ಮಾನ, ಸಾವಿರಾರು ಪೊಲೀಸ್ ಹೆಡ್ ಕಾನ್ಸ್‌ಟೆಬಲ್‌ಗಳಿಗೆ ಅಸಿಸ್ಟೆಂಟ್ ಸಬ್ ಇನ್ಸ್‌ಪೆಕ್ಟರ್‌ಗಳಾಗಿ ಮುಂಬಡ್ತಿ ನೀಡಿದ ಆದೇಶ ಐತಿಹಾಸಿಕವಾದುದು. ಆ ಹಿನ್ನೆಲೆಯಲ್ಲಿ ಬಂಗಾರಪ್ಪನವರ ಜನ್ಮದಿನ ಆಚರಿಸಿ ಗೌರವಿಸುತ್ತಿರುವುದು ನಮ್ಮನ್ನು ನಾವೇ ಗೌರವಿಸಿಕೊಂಡಂತೆ” ಎಂದರು.
ಹಿಂದುಳಿದ ಜನ ಜಾಗೃತಿ ವೇದಿಕೆ ಗೌರವಾಧ್ಯಕ್ಷ ಪ್ರೊ. ಹೆಚ್ ರಾಚಪ್ಪ ಅಧ್ಯಕ್ಷತೆ ವಹಿಸಿ ಮಾತನಾಡಿ, “ಗ್ರಾಮೀಣ ಜನರ ಅಭಿವೃದ್ಧಿಗಾಗಿ ಜಾರಿಗೊಳಿಸಿದ ವಿಶ್ವ, ಅಕ್ಷಯ, ಆರಾಧನ, ಗ್ರಾಮೀಣ ವಿದ್ಯಾರ್ಥಿಗಳಿಗೆ ಕೃಪಾಂಕ, ರೈತರ ಜಮೀನಿಗೆ ಹತ್ತು ಹೆಚ್ ಪಿ ಉಚಿತ ವಿದ್ಯುತ್ ಬಂಗಾರಪ್ಪನವರ ಸಾರ್ವಕಾಲಿಕ ಸಾಧನೆಗಳು, ಈ ಹಿನ್ನೆಲೆಯಲ್ಲಿ ದಿವಂಗತ ಬಂಗಾರಪ್ಪನವರ ಸ್ಮರಣೆ ಬಡವರು ಹಾಗೂ ಹಿಂದುಳಿದವರ ಆದ್ಯ ಕರ್ತವ್ಯವಾಗಿದೆ. ಆ ಮೂಲಕ ಹಿಂದುಳಿದ ವರ್ಗಗಳು ಸಮಾಜದಲ್ಲಿ ಜಾಗೃತರಾಗಿರುವುದರ ಸಂಕೇತವೂ ಆಗಿದೆ” ಎಂದು ಶ್ಲಾಘಿಸಿದರು.
ಈ ಸುದ್ದಿ ಓದಿದ್ದೀರಾ? ಚಿತ್ರದುರ್ಗ | ಕಾಂಗ್ರೆಸ್ ರಾಜ್ಯದಲ್ಲಿಯೇ ಹೆಚ್ಚು ಬಲಿಷ್ಠ ಭದ್ರಕೋಟೆಯಾಗಿದೆ: ಎ ಎನ್ ನಟರಾಜ್ ಗೌಡ
ಆರಂಭದಲ್ಲಿ ಹಿಂದುಳಿದ ಜನ ಜಾಗೃತಿ ವೇದಿಕೆ ಸಂಚಾಲಕ ಆರ್ ಟಿ ನಟರಾಜ್ ಕಾವೇರಿ ನದಿ ನೀರು ಹೋರಾಟದಲ್ಲಿ ತಮಿಳುನಾಡಿನ ವಿರುದ್ಧ ಕೆಚ್ಚೆದೆಯ ಕನ್ನಡಿಗನಾಗಿ ಸುಗ್ರೀವಾಜ್ಞೆ ಹೊರಡಿಸಿದ ಬಂಗಾರಪ್ಪನವರ ಧೀಮಂತಿಕೆಯನ್ನು ಸ್ಮರಿಸಿ ಸರ್ವರನ್ನೂ ಸ್ವಾಗತಿಸಿದರು. ಕೊನೆಯಲ್ಲಿ ಪ್ರೊ. ಉಮೇಶ್ ಯಾದವ್ ಬಂಗಾರಪ್ಪನವರ ವರ್ಣರಂಜಿತ ವ್ಯಕ್ತಿತ್ವವನ್ನು ಬಣ್ಣಿಸಿ ವಂದನೆ ಸಲ್ಲಿಸಿದರು.