ನಟ-ರಾಜಕಾರಣಿ ವಿಜಯ್ ಅವರು ನೂತನ ಪಕ್ಷ ‘ತಮಿಳಗ ವೆಟ್ರಿ ಕಳಗಂ’ (TVK)ನ ಮೊದಲ ರಾಜ್ಯ ಸಮ್ಮೇಳನವನ್ನು ಭಾನುವಾರ ನಡೆಸಿದ್ದಾರೆ. ಸ್ವಾತಂತ್ರ್ಯ ಹೋರಾಟಗಾರರು ಮತ್ತು ಭಾಷಾ ಹುತಾತ್ಮರ ಭಾವಚಿತ್ರಗಳಿಗೆ ಪುಷ್ಪ ನಮನ ಸಲ್ಲಿಸಿದ ವಿಜಯ್, ಸಮಾವೇಶಕ್ಕೆ ಚಾಲನೆ ನೀಡಿದರು.
ಸಮಾವೇಶದ ಆರಂಭದಲ್ಲಿ, ದೇಶದ ವಿಮೋಚನೆಗಾಗಿ ಪ್ರಾಣ ತ್ಯಾಗ ಮಾಡಿದ ಹೋರಾಟಗಾರರು ಮತ್ತು ತಮಿಳು ಜನರ ಹಕ್ಕುಗಳಿಗಾಗಿ ಅವಿರತವಾಗಿ ಹೋರಾಡಿದ ಅಸಂಖ್ಯಾತ ಯೋಧರನ್ನು ಗೌರವಿಸುವುದಾಗಿ ಟಿವಿಕೆ ಪದಾಧಿಕಾರಿಗಳು ಪ್ರತಿಜ್ಞೆ ಮಾಡಿದರು.
ಜಾತಿ, ಧರ್ಮ, ಲಿಂಗ ಮತ್ತು ಜನ್ಮಸ್ಥಳದ ಆಧಾರದ ತಾರತಮ್ಯಗಳನ್ನು ತೊರೆದು ಹಾಕಲು, ಜನರಲ್ಲಿ ಜಾಗೃತಿ ಮೂಡಿಸಲು ಮತ್ತು ಎಲ್ಲರಿಗೂ ಸಮಾನ ಅವಕಾಶಗಳು ಹಾಗೂ ಹಕ್ಕುಗಳು ದೊರೆಯುವಂತೆ ಮಾಡಲು ಶ್ರಮಿಸುತ್ತೇವೆ ಎಂದು ದೃಢಸಂಕಲ್ಪ ಮಾಡಿದ್ದಾರೆ.
ಪೆರಿಯಾರ್, ಕಾಮರಾಜ್, ಅಂಬೇಡ್ಕರ್, ವೇಲು ನಾಚಿಯಾರ್ ಮತ್ತು ಅಂಜಲೈ ಅಮ್ಮಾಳ್ ತಮ್ಮ ಪಕ್ಷದ ಸೈದ್ಧಾಂತಿಕ ನಾಯಕರು. ಅವರ ಆಶಯದಂತೆ, ಜಾತಿ, ಧರ್ಮ ಅಥವಾ ಲಿಂಗದ ಭೇದವಿಲ್ಲದೆ ಸಮಸಮಾಜವನ್ನು ಕಟ್ಟುವುದು ತಮ್ಮ ಧ್ಯೇಯವೆಂದು ಪಕ್ಷವು ಹೇಳಿಕೊಂಡಿದೆ.
ಮಧುರೈನಲ್ಲಿ ರಾಜ್ಯ ಸಚಿವಾಲಯದ ಶಾಖೆ ಸ್ಥಾಪಿಸುವುದು, ಶಿಕ್ಷಣದಲ್ಲಿ ದ್ವಿ-ಭಾಷಾ ನೀತಿಯನ್ನು ಅಳವಡಿಸುವುದು, ರಾಜ್ಯಪಾಲರ ಹುದ್ದೆಯನ್ನು ತೆಗೆದುಹಾಕುವುದು, ಒತ್ತುವರಿಯಾಗಿರುವ ಕೃಷಿ ಭೂಮಿಯನ್ನು ವಾಪಸ್ ಪಡೆಯುವುದು, ಜಲಮೂಲಗಳ ಒತ್ತುವರಿಯನ್ನು ತೆರವುಗೊಳಿಸುವುದು, ಮಾದಕ ವಸ್ತುಗಳ ನಿರ್ಮೂಲನೆಗೆ ವಿಶೇಷ ಕಾನೂನು ಜಾರಿಗೊಳಿಸುವುದು, ನೇಕಾರ ಸಮುದಾಯವನ್ನು ಬೆಂಬಲಿಸಲು ಸರ್ಕಾರಿ ಅಧಿಕಾರಿಗಳು ವಾರಕ್ಕೆ ಎರಡು ಬಾರಿ ಹತ್ತಿ ಬಟ್ಟೆ ಧರಿಸುವುದನ್ನು ಕಡ್ಡಾಯಗೊಳಿಸುವುದು, ತಾಳೆ ಉದ್ಯಮವನ್ನು ಸುಧಾರಿಸುವುದು, ಕರುಪಟ್ಟಿ ಹಾಲನ್ನು ಆವಿನ್ ಪಾರ್ಲರ್‌ಗಳ ಮೂಲಕ ಮಾರಾಟ ಮಾಡುವುದು ತಮ್ಮ ಗುರಿಯೆಂದು ಪಕ್ಷ ಹೇಳಿದೆ.
ಸಮಾವೇಶದಲ್ಲಿ ಮಾತನಾಡಿದ ಪಕ್ಷದ ಅಧ್ಯಕ್ಷ, ನಟ ವಿಜಯ್, “ರಾಜಕೀಯದಲ್ಲಿ ನಾವು ಮಕ್ಕಳೆಂದು ಹಲವರು ಹೇಳುತ್ತಿದ್ದಾರೆ. ಆದರೆ, ನಾವು ರಾಜಕೀಯವೆಂಬ ಹಾವಿನೊಂದಿಗೆ ಆತ್ಮವಿಶ್ವಾಸದಿಂದ ಆಟವಾಡುವ ಮಕ್ಕಳು. ಭಯವಿಲ್ಲದೆ ಗಂಭೀರತೆ ಮತ್ತು ನಗುವಿನೊಂದಿಗೆ ಹಾವನ್ನು ಎದುರಿಸಲು ಇಲ್ಲಿ ನರೆದಿದ್ದೇವೆ” ಎಂದು ಪ್ರತಿಪಾದಿಸಿದರು.
ಈಗಿರುವ ರಾಜಕೀಯ ಭಾಷಣಗಳ ಶೈಲಿಯನ್ನು ಟೀಕಿಸಿದ ಅವರು, “ನೇರವಾಗಿ ವಿಷಯಕ್ಕೆ ಬರುವುದು ನಮ್ಮ ವಿಧಾನವಾಗಿರಬೇಕು. ಎಲ್ಲವೂ ಬದಲಾದಾಗ ರಾಜಕೀಯವೂ ಬದಲಾಗಬೇಕು. ವಿಜ್ಞಾನ ಮತ್ತು ತಂತ್ರಜ್ಞಾನ ಮಾತ್ರ ಬದಲಾಗಬೇಕು ಮತ್ತು ಅಭಿವೃದ್ಧಿ ಹೊಂದಬೇಕು ಎಂದರೆ ಹೇಗೆ? ರಾಜಕೀಯ ಬದಲಾಗಬಾರದೇ ಮತ್ತು ಅಭಿವೃದ್ಧಿ ಹೊಂದಬಾರದೇ” ಎಂದು ಪ್ರಶ್ನಿಸಿದರು.
“ಇತರ ರಾಜಕಾರಣಿಗಳ ಬಗ್ಗೆ ಚರ್ಚಿಸಿ ಸಮಯ ವ್ಯರ್ಥ ಮಾಡುವುದಿಲ್ಲ. ಹಾಗೆಂದು, ನಾನು ಅವರನ್ನು ಗಮನಿಸುವುದಿಲ್ಲ ಎಂದಲ್ಲ. ಆದರೆ, ನಾನು ಇತಿಹಾಸವನ್ನು ಮೆಲುಕು ಹಾಕುವುದಿಲ್ಲ. ಪೆರಿಯಾರ್ ನಮ್ಮ ಸೈದ್ಧಾಂತಿಕ ನಾಯಕ. ಆದರೆ, ನಾವು ಅವರ ನಾಸ್ತಿಕ ನಿಲುವನ್ನು ಮಾತ್ರ ಅಳವಡಿಸಿಕೊಳ್ಳುವುದಿಲ್ಲ. ಸಿ.ಎನ್. ಅಣ್ಣಾದೊರೈ ಹೇಳಿದಂತೆ, ‘ಒಂದ್ರೆ ಕುಲಂ, ಒರುವನೇ ತೇವನ್’ ಎಂಬುದು ನಮ್ಮ ನಿಲುವು. ಆದಾಗ್ಯೂ, ನಾವು ಮಹಿಳಾ ಶಿಕ್ಷಣ, ಸಮಾನತೆ ಮತ್ತು ಸಾಮಾಜಿಕ ನ್ಯಾಯದ ಕುರಿತು ಪೆರಿಯಾರ್ ಅವರ ತತ್ವಗಳನ್ನು ಅಳವಡಿಸಿಕೊಳ್ಳುತ್ತೇವೆ” ಎಂದರು.
ಈ ವರದಿ ಓದಿದ್ದೀರಾ?: ಉಪಚುನಾವಣೆ | ಕುಟುಂಬ ರಾಜಕಾರಣ; ಎಲ್ಲೋಯ್ತು ಬಿಜೆಪಿ ನೈತಿಕತೆ
“ನಮ್ಮ ಇನ್ನೊಬ್ಬ ಸೈದ್ಧಾಂತಿಕ ನಾಯಕ ಕೆ.ಕಾಮರಾಜ್. ಅದೇ ರೀತಿ ಬಿ.ಆರ್ ಅಂಬೇಡ್ಕರ್ ಅವರ ಹೆಸರು ಸಾಮಾಜಿಕ ಸಮಾನತೆಗಾಗಿನ ಹೋರಾಟ ಇರುವುವರೆಗೆ, ಸಮಾನತೆ ಬರುವವರೆಗೆ ಹಾಗೂ ಬಂದ ನಂತರವೂ ಈ ನೆಲದಲ್ಲಿರುತ್ತದೆ. ಅವರ ನಮ್ಮ ಹಾದಿಯ ಶಕ್ತಿಯಾಗಿದ್ದಾರೆ” ಎಂದರು.
“ರಾಜಕೀಯವಾಗಿ ನಿಲುವು ತೆಗೆದುಕೊಳ್ಳುವುದು ಮುಖ್ಯ. ನಾವು ಒಂದು ನಿಲುವು ತೆಗೆದುಕೊಂಡರೆ, ಅದು ನಮ್ಮ ವಿರೋಧಿಗಳು ಯಾರು ಎಂಬುದನ್ನು ಸ್ವಯಂಚಾಲಿತವಾಗಿ ಗುರುತಿಸುತ್ತದೆ. ‘ಎಲ್ಲರೂ ಸಮಾನವಾಗಿ ಹುಟ್ಟುತ್ತಾರೆ’ ಎಂದು ನಾವು ಹೇಳಿದಾಗ, ನಮ್ಮ ನಿಜವಾದ ವಿರೋಧಿಗಳು ಯಾರು ಎಂದು ನಾವು ಗುರುತಿಸಿದ್ದೇವೆ. ನಾವು ವಿಭಜಕ ರಾಜಕೀಯದ ವಿರುದ್ಧ ಮಾತ್ರವಲ್ಲದೆ ಭ್ರಷ್ಟ ಶಕ್ತಿಗಳ ವಿರುದ್ಧವೂ ಹೋರಾಟ ನಡೆಸುತ್ತೇವೆ’’ ಎಂದರು.
“ವಿಭಜಕ ಶಕ್ತಿಗಳನ್ನು ಗುರುತಿಸುವುದು ಸುಲಭ, ಆದರೆ ಸಿದ್ಧಾಂತ ಮತ್ತು ತತ್ವಗಳ ಮುಖವಾಡದ ಹಿಂದೆ ಅಡಗಿರುವ ಭ್ರಷ್ಟ ಶಕ್ತಿಗಳನ್ನು ಗುರುತಿಸುವುದು ಕಷ್ಟ. ಇಲ್ಲಿ ಆಳುವವರು ಭ್ರಷ್ಟ ಶಕ್ತಿಗಳು” ಎಂದು ಹೆಸರನ್ನು ಉಲ್ಲೇಖಿಸದೆ ಡಿಎಂಕೆ ವಿರುದ್ಧ ವಾಗ್ದಾಳಿ ನಡೆಸಿದರು.