ರಾಜ್ಯದಲ್ಲಿ ಕನ್ನಡ ಡಿಂಡಿಮ ಬಾರಿಸಬೇಕೆಂದರೆ ಡಾ. ಸರೋಜಿನಿ ಮಹಿಷಿ ವರದಿಯನ್ನು ಯಥಾವತ್ತಾಗಿ ಜಾರಿಗೆ ತರಬೇಕೆಂದು ಕನ್ನಡ ಅಭಿವೃದ್ದಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಎಸ್.ಜಿ.ಸಿದ್ದರಾಮಯ್ಯ ಒತ್ತಾಯಿಸಿದರು.
ತುರುವೇಕೆರೆ ತಾಲೂಕಿನ ದಬ್ಬೇಘಟ್ಟದ ಶ್ರೀ ಕಾಲಭೈರವೇಶ್ವರ ದೇವಾಲಯದ ಆವರಣದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಹಮ್ಮಿಕೊಂಡಿದ್ದ ದಬ್ಬೇಘಟ್ಟ ಹೋಬಳಿ ಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಪರಿಷ್ಕೃತ ವರದಿಯನ್ನು ಈ ಹಿಂದೆಯಿಂದಲೂ ಸರ್ಕಾರದ ಮಟ್ಟದಲ್ಲಿ ಚರ್ಚೆ ಮಾಡಲಾಗಿದೆ. ಆದರೆ ಅದನ್ನು ಅನುಷ್ಠಾನಗೊಳಿಸುವ ಇಚ್ಚಾಶಕ್ತಿಯನ್ನು ಇದುವರೆಗೆ ಬಂದ ಸರ್ಕಾರಗಳು ತೋರಿಲ್ಲ. ಆದರೆ ಈಗಿರುವ ಸರ್ಕಾರ ಡಾ.ಸರೋಜಿನಿ ಮಹಿಷಿ ವರದಿಯನ್ನು ಜಾರಿಗೆ ತರುವ ಮೂಲಕ ಕನ್ನಡಿಗರ ಭಾವನೆಗೆ ಗೌರವ ತೋರಿಸಬೇಕೆಂದು ಎಸ್.ಜಿ.ಸಿದ್ದರಾಮಯ್ಯ ಒತ್ತಾಯಿಸಿದರು.
ಎಲ್ಲ ಭಾಷೆಗಳಂತೆ ನಮ್ಮ ಕನ್ನಡ ಭಾಷೆಗೂ ನಮ್ಮದೇ ಆದ ಪರಂಪರೆ ಇದೆ. ಬೇರೆ ಭಾಷೆಗಳ ಅಕ್ರಮಣದಿಂದಾಗಿ ಶೇ.60 ರಷ್ಟು ನಮ್ಮ ಕನ್ನಡ ಕಲಿಯುತ್ತಿದ್ದ ವಿದ್ಯಾರ್ಥಿಗಳು ಬೇರೆ ಭಾಷೆ ಕಲಿಯುವಂತಾಗಿದೆ. ನಮ್ಮ ರಾಜ್ಯದ ಸಾಹಿತಿಗಳ, ಸ್ವಾತಂತ್ರ ಹೋರಾಟಗಾರ ಚರಿತ್ರೆಯನ್ನು ಕಲಿಯಲು ಸಾಧ್ಯವಾಗದಂತಹ ಪರಿಸ್ಥಿತಿಗೆ ಬಂದಿದ್ದೇವೆ ಎಂದು ವಿಷಾದಿಸಿದರು.
ಸರ್ಕಾರ ಕನ್ನಡ ಭಾಷಾ ನೀತಿಯನ್ನು ರೂಪಿಸಬೇಕು. ತಮಿಳುನಾಡಿನಲ್ಲಿ ದ್ವಿ ಭಾಷಾ ಸೂತ್ರ ಇದೆ. ಅಲ್ಲಿನ ಶಿಕ್ಷಣದಲ್ಲಿ ಪ್ರಥಮ ಭಾಷೆ ತಮಿಳು ಕಡ್ಡಾಯವಾಗಿದೆ. ಆದರೆ ನಮ್ಮ ರಾಜ್ಯದಲ್ಲಿ ತ್ರಿಭಾಷಾ ಸೂತ್ರ ಇರುವುದರಿಂದ ಶಿಕ್ಷಣದಲ್ಲಿ ದ್ವಿತೀಯ, ತೃತೀಯ ಭಾಷೆಯಾಗಿ ಕನ್ನಡ ಇದ್ದು ಆಟಕ್ಕೆ ಉಂಟು, ಲೆಕ್ಕಕ್ಕೆ ಇಲ್ಲದಂತಾಗಿದೆ. ರಾಜ್ಯ ಸರ್ಕಾರ ಕನ್ನಡವನ್ನು ಶಿಕ್ಷಣದಲ್ಲಿ ಪ್ರಥಮ ಅಥವಾ ದ್ವಿತೀಯ ಭಾಷೆಯಾಗಿ ಶಿಕ್ಷಣದಲ್ಲಿ ಕಲಿಸುವಂತೆ ನೀತಿ ರೂಪಿಸಬೇಕು. ಹಾಗಾದಲ್ಲಿ ಮಾತ್ರ ಕನ್ನಡ ಶಿಕ್ಷಣದಲ್ಲಿ, ಆಡಳಿತದಲ್ಲಿ ಉಳಿಯುತ್ತದೆ ಎಂದು ಸಿದ್ದರಾಮಯ್ಯನವರು ಪ್ರತಿಪಾದಿಸಿದರು.

ಸಮ್ಮೇಳನಾಧ್ಯಕ್ಷ ನಿವೃತ್ತ ಕನ್ನಡ ಪ್ರಾಧ್ಯಾಪಕ ಎಲ್.ಮಂಜಯ್ಯಗೌಡ ಮಾತನಾಡಿ ಆಂಗ್ಲ ಮಾಧ್ಯಮ ಶಾಲೆಗಳು ಹೆಚ್ಚಾಗಿ ಕನ್ನಡ ಭಾಷೆಗೆ ಕುತ್ತುಂಟಾಗುತ್ತಿದೆ. ಇಂಗ್ಲೀಷ್ ಶಾಲೆಗಳಲ್ಲಿ ವ್ಯಾಸಂಗ ಮಾಡಿದ ಮಕ್ಕಳಿಗೆ ಜಾನಪದ ಸೊಗಡು ನಂಟು ಸಿಗುವುದಿಲ್ಲ. ಕನ್ನಡ ಭಾಷೆಗೆ ತನ್ನದೇ ಆದ ಇತಿಹಾಸವಿದೆ. ಅದನ್ನು ಮಕ್ಕಳಿಗೆ ತಿಳಿಸಬೇಕಿದೆ. ಮಠಮಾನ್ಯಗಳು ಸಹ ಕನ್ನಡ ಶಾಲೆ ತೆರೆಯದೇ ಆಂಗ್ಲ ಮಾಧ್ಯಮ ಶಿಕ್ಷಣಕ್ಕೆ ಆಧ್ಯತೆ ನೀಡಿ ಪರೋಕ್ಷವಾಗಿ ಕನ್ನಡ ಶಾಲೆಗಳು ಮುಚ್ಚಲು ಕಾರಣವಾಗಿವೆ ಎಂದು ವಿಷಾದಿಸಿದರು.
ಎಲ್ಲಾ ಶಿಕ್ಷಣ ಸಂಸ್ಥೆಗಳು ಕನ್ನಡ ಶಾಲೆಯನ್ನು ಹೆಚ್ಚು ತೆರೆದು ಕನ್ನಡ ಉಳಿಸುವ ಕಾರ್ಯ ಮಾಡಬೇಕಿದೆ. ನ್ಯಾಯಾಲಯದಲ್ಲಿಯೂ ಸಹ ಕನ್ನಡದಲ್ಲಿ ವಾದ ವಿವಾದಗಳು ನಡೆಯುವಂತಾಗಬೇಕು. ತೀರ್ಪು ಸಹ ಕನ್ನಡದಲ್ಲಿ ಬರಬೇಕು. ಸರ್ಕಾರ ಹಾಗೂ ಖಾಸಗಿ ಎಲ್ಲ ಸಂಘ ಸಂಸ್ಥೆಗಳಲ್ಲಿಯೂ ಕನ್ನಡದಲ್ಲಿಯೇ ವ್ಯವಹಾರ ಮಾಡಬೇಕು. ಬೆಂಗಳೂರು ಸೇರಿದಂತೆ ಎಲ್ಲ ಕಡೆಗಳಲ್ಲಿ ಕಡ್ಡಾಯವಾಗಿ ಕನ್ನಡದ ನಾಮ ಫಲಕ ಹಾಕುವಂತೆ ಕಾನೂನು ರೂಪಿಸಬೇಕು ಎಂದು ಒತ್ತಾಯಿಸಿದರು.
ಕಾರ್ಯಕ್ರಮಕ್ಕೂ ಮುನ್ನಾ ಪೂರ್ಣ ಕುಂಭಾ, ಕೋಲಾಟ, ಸೋಮನ ಕುಣಿತ, ಚಿಟ್ಟಿಮೇಳವಾದ್ಯ, ವೀರಗಾಸೆ ಕುಣಿತ ಸೇರಿ ವಿವಿಧ ಜಾನಪದ ಕಲಾವಿದರ ತಂಡದೊಂದಿಗೆ ಸಮ್ಮೇಳಾನಾಧ್ಯಕ್ಷರನ್ನು ಮೆರವಣಿಗೆಯಲ್ಲಿ ವೇದಿಕೆಗೆ ಕರೆತರಲಾಯಿತು.
ವೇದಿಕೆಯಲ್ಲಿ ಗಣ್ಯರಿಂದ ಕಲ್ಪ ತೀರ್ಥ ಸ್ಮರಣ ಸಂಚಿಕೆ ಹಾಗೂ ಲೇಖಕ ಮಂಜೇಶ್ ಗುಪ್ತ ರಚಿಸಿರುವ ಹಸಿವಿನ ನರ್ತನ ಎಂಬ ಪುಸ್ತಕ ಬಿಡುಗಡೆಗೊಳಿಸಲಾಯಿತು.
ದಬ್ಬೇಘಟ್ಟ ಕೆಂಪಮ್ಮ ದೇವಿ ಕ್ರೀಡಾಕೂಟ ಸಂಘದಿಂದ ಸುಗ್ಗಿ ಕುಣಿತ ನಡೆಯಿತು. ಶಾಲಾ ಮಕ್ಕಳು ಕನ್ನಡ ಗೀತೆಗೆ ನೃತ್ಯ ರೂಪಕ ನಡೆಯಿತು. ಕಿರುತೆರೆ ನಟ ಮಿಮಿಕ್ರಿ ಗೋಪಿಯಿಂದ ಹಾಸ್ಯ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮ ಮುನ್ನಾ ನಾಡಗೀತೆ, ರೈತ ಗೀತೆ ಹಾಡಲಾಯಿತು. ಉದ್ಘಾಟನಾ ಕಾರ್ಯಕ್ರಮ ನಂತರ ಕೃಷಿಗೋಷ್ಠಿ ಮತ್ತು ಕವಿಗೋಷ್ಠಿ ನಡೆಸಲಾಯಿತು. ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಸಾಧಕರನ್ನು ಸನ್ಮಾನಿಸಲಾಯಿತು.
ಶಾಸಕ ಎಂ.ಟಿ.ಕೃಷ್ಣಪ್ಪ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಪ್ರಸನ್ನನಾಥ ಸ್ವಾಮೀಜಿಯವರು ಆಶೀರ್ವಚನ ನೀಡಿದರು. ಕಸಾಪ ತಾಲೂಕು ಅಧ್ಯಕ್ಷ ಡಿ.ಪಿ.ರಾಜು ಪ್ರಾಸ್ತಾವಿಕವಾಗಿ ಮಾತನಾಡಿದರು.
ಮಾಜಿ ಶಾಸಕ ಎಂ.ಡಿ.ಲಕ್ಷ್ಮೀನಾರಾಯಣ್, ಕಾಂಗ್ರೆಸ್ ಮುಖಂಡ ಮುರುಳಿಧರಹಾಲಪ್ಪ, ಸ್ವಾಗತ ಸಮಿತಿ ಅಧ್ಯಕ್ಷ ಸುಬ್ರಮಣಿ ಶ್ರೀಕಂಠೇಗೌಡ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಛಾಯಾ ಈಶ್ವರ್, ಗಾಂಧೀ ಸೇವಾ ಪ್ರಶಸ್ತಿ ಪುರಸ್ಕೃತರಾದ ಪ್ರೊ.ಜಿ.ಬಿ.ಶಿವರಾಜ್, ಬಿಇಓ ಸೋಮಶೇಖರ್, ಸಾಹಿತಿ ಪ್ರೊ.ಪುಟ್ಟರಂಗಪ್ಪ, ಮುಖಂಡರಾದ ಕಡೇಹಳ್ಳಿ ಸಿದ್ದೇಗೌಡ, ಟಿ.ಎಸ್.ಬೋರೇಗೌಡ, ವೆಂಕಟೇಶ್ ಕೃಷ್ಣಪ್ಪ, ಪ್ರಚಾರ ಸಮಿತಿ ಅಧ್ಯಕ್ಷ ತ್ಯಾಗರಾಜು, ಉಗ್ರೇಗೌಡ, ಎ.ಬಿ.ಜಗದೀಶ್, ಹಿಂಡುಮಾರನಹಳ್ಳಿ ನಾಗರಾಜು, ಡಾ.ನವೀನ್, ತಾತಯ್ಯ, ಜಿಲ್ಲಾ ಕಸಾಪ ಯೋಗಾನಂದ್, ಡಾ.ರವಿ, ಹೋಬಳಿ ಘಟಕದ ಅಧ್ಯಕ್ಷ ಕೆ.ಟಿ.ಸಂಪತ್ತು, ಹುಲಿಕಲ್ ಕೃಷ್ಣಚಾರ್ ಸೇರಿದಂತೆ ನೂರಾರು ಸಾಹಿತ್ಯಾಸಕ್ತರು, ವಿವಿಧ ಸಂಘಟನೆಗಳ ಮುಖಂಡರು ಇದ್ದರು.
ವರದಿ- ಎಸ್ ನಾಗಭೂಷಣ್