ಬಹುಕೋಟಿ ಅದಿರು ಕಳ್ಳಸಾಗಾಣಿಕೆ: ಶಾಸಕ ಸತೀಶ್ ಸೈಲ್ ಜೈಲ್ ಜಾಡಿನ ಕುತೂಹಲಕರ ಕಥನ

Date:

Advertisements
ಲೋಕೋಪಯೋಗಿ ಇಲಾಖೆಯ ಬಡ ಓವರ್ಸೀಯರ್‍‌ನ ಮಗನಾದ ಸತೀಶ್ ಸೈಲ್, ಗೋವಾದ ಮಡಗಾಂವ್‌ನಲ್ಲಿ ಬಂದರು ಮಾಲೀಕರ ಬಳಿ ಕೆಲಸಗಾರನಾಗಿ ಸೇರಿ, ನಂತರ ಅದಿರು ಹ್ಯಾಂಡಲಿಂಗ್‌ಗೆ ಕೈಹಾಕಿ, ಸ್ವಂತ ಹಡಗು ಕಟ್ಟೆ ಕಟ್ಟಿ, ಭರ್ಜರಿ ಅದಿರು ರಫ್ತು ವಹಿವಾಟುದಾರನಾಗಿ ಜನಾರ್ದನ ರೆಡ್ಡಿ ರಿಪಬ್ಲಿಕ್ ಎಂಟ್ರಿ ಸಾಧಿಸುತ್ತಾರೆ. ಆನಂತರ ಸಮಾಜಸೇವಕರಾಗಿ, ಶಾಸಕರಾಗಿ, ಜನಪ್ರಿಯ ವ್ಯಕ್ತಿಯಾಗಿ... ಈಗ ಜೈಲು ಪಾಲಾಗಿದ್ದಾರೆ. 

ರಾಜ್ಯದ ಸಾಮಾಜಿಕ-ರಾಜಕೀಯ ವಲಯದಲ್ಲಿ ಅಲ್ಲೋಲಕಲ್ಲೋಲ ಉಂಟುಮಾಡಿದ್ದ ಬಳ್ಳಾರಿ ಗಣಿ ಲೂಟಿ ಇತಿಹಾಸದ ಮತ್ತೊಂದು ಕರಾಳ ಅಧ್ಯಾಯ ಅನಾವರಣಗೊಂಡಿದೆ. ಅದಿರು ಕಳ್ಳಸಾಗಾಣಿಕೆದಾರನೆಂದೇ ಗಣಿ ಹಗರಣದಲ್ಲಿ ಗುರುತಿಸಲ್ಪಟ್ಟಿದ್ದ ಕಾರವಾರದ ಶಾಸಕ ಸತೀಶ್ ಸೈಲ್ ಅದಿರು ಕದ್ದು ರಫ್ತು ಮಾಡಿದ ಪ್ರಕರಣದಲ್ಲಿ ಅಪರಾಧಿಯೆಂದು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಘೋಷಿಸಿ ಪರಪ್ಪನ ಅಗ್ರಹಾರ ಜೈಲಿಗೆ ಕಳಿಸಿದೆ. ಅಲ್ಲಿಗೆ ಗಣಿ ಅವ್ಯವಹಾರದ ಭಾನಗಡಿಯಲ್ಲಿ ಎರಡನೇ ಬಾರಿ ಶಾಸಕನಾಗಿರುವ ಸತೀಶ್ ಸೈಲ್ ಯಾನೆ ಸತೀಶ್ ಸಾಹುಕಾರ್ ಎರಡನೇ ಸಲ ಜೈಲು ಪಾಲಾದಂತಾಗಿದೆ. ಮೊದಲ ಬಾರಿ ಶಾಸಕನಾಗಿದ್ದಾಗ ಜೈಲಲ್ಲಿ ಹದಿನೈದು ತಿಂಗಳು ಖೈದಿಯಾಗಿ ಕಾರವಾರ-ಅಂಕೋಲೆಯನ್ನು ”ಎಮ್ಮೆಲ್ಲೆ ಇಲ್ಲದ ಕ್ಷೇತ್ರ’ವನ್ನಾಗಿಸಿದ್ದ ಸೈಲ್ ಹನ್ನೊಂದು ವರ್ಷದ ನಂತರ ಮತ್ತದೇ ದುರಂತ ಸೃಷ್ಟಿಸಿದ್ದಾರೆ.

ಅದಿರು ‘ವ್ಯವಹಾರ’ದ ಮೂಲಕವೇ ದೇಶಾದ್ಯಂತ ಸುದ್ದಿಯಾಗಿರುವ- ಬಿಜೆಪಿ ವಲಯದಲ್ಲಿ ಪ್ರಭಾವಿಯಾಗಿರುವ ಗಾಲಿ ಜನಾರ್ದನ ರೆಡ್ಡಿಯ ಮೈನಿಂಗ್ ಮಾಫಿಯಾ ಬಳ್ಳಾರಿ ಜಿಲ್ಲೆಯಲ್ಲಿ ಗೆಬರಿದ ಅಮೂಲ್ಯ ಕಬ್ಬಿಣದ ಅದಿರು ಉತ್ತರ ಕನ್ನಡದ ಅಂಕೋಲಾದ ಬೇಲೆಕೇರಿ ಬಂದರಿನಿಂದ ಬೃಹತ್ ಹಡಗುಗಳಲ್ಲಿ ವಿದೇಶಕ್ಕೆ ರಫ್ತಾಗುತ್ತಿತ್ತು. ಬಳ್ಳಾರಿ ಕಡೆಯಿಂದ ದಿನನಿತ್ಯ ಬರುತ್ತಿದ್ದ ಸಾವಿರಾರು ಲೋಡ್ ಅಕ್ರಮ ಅದಿರನ್ನು ಕಾರವಾರದ ಮಲ್ಲಿಕಾರ್ಜುನ ಕಂಪನಿ(ಸೈಲ್ ಕಂಪನಿ), ಗುಜರಾತಿನ ಆದಾನಿ ಕಂಪನಿ, ಗೋವಾದ ಸಾಲಗಾಂವಕರ್ ಕಂಪನಿ ಮತ್ತು ಬೆಂಗಳೂರಿನ ಲಾಲ್ ಮಹಲ್ ಕಂಪನಿಗಳು ಶೇಖರಿಸಿಟ್ಟುಕೊಂಡು ವಿದೇಶಗಳಿಗೆ ರವಾನೆ ಮಾಡುತ್ತಿದ್ದವು. ಈ ಎಕ್ಸ್‌ಪೋರ್ಟ್ ಕಂಪನಿಗಳಲ್ಲಿ ಜನಾರ್ದನ ರೆಡ್ಡಿ ಪರಮಾಪ್ತ ಸತೀಶ್ ಸೈಲ್ ತನ್ನ ಆರಾಧ್ಯದೈವ ಮಲ್ಲಿಕಾರ್ಜುನನ ಹೆಸರಿಟ್ಟದ್ದ ಕಂಪನಿಯ ಆರ್ಭಟ ಮಿತಿಮೀರಿತ್ತು. ಅಂದಿನ ಬಿಜೆಪಿ ಸರಕಾರದ ಆಯಕಟ್ಟಿ ಜಾಗದಲ್ಲಿದ್ದ ಜನಾರ್ದನ ರೆಡ್ಡಿಯ ಕೃಪಾಶೀರ್ವಾದದ ಈ ಮಲ್ಲಿಕಾರ್ಜುನ ಕಂಪನಿ ಅಕ್ರಮ ಅದಿರನ್ನು ರಾಜಾರೋಷವಾಗಿಯೇ ಹಡಗೇರಿಸಿ ಕಳಿಸುತಿತ್ತು. ಲೋಕಾಯುಕ್ತದವರು ಮುಟ್ಟುಗೋಲು ಹಾಕಿಕೊಂಡಿದ್ದ ಅದಿರನ್ನೂ ಯಾವ ಅಂಜಿಕೆ-ಅಳುಕೂ ಇಲ್ಲದೆ ಹಾಡುಹಗಲೇ ಕದ್ದು ರಫ್ತು ಮಾಡಿತ್ತು. ಯಾವ ಕಾನೂನು-ಕಟ್ಟಳೆಗೂ ಕೇರ್ ಮಾಡದೆ ಕಳ್ಳಸಾಣಿಕೆಯ ದುಸ್ಸಾಹಸಕ್ಕೆ ಕೈಹಾಕಿದ್ದೇ ಇವತ್ತು ಸತೀಶ್ ಸೈಲ್‌ಗೆ ಗಂಡಾಂತರಕ್ಕೀಡು ಮಾಡಿದೆ.

ಸನ್ಮಿತ್ರ ಜನಾರ್ದನ ರೆಡ್ಡಿ ಬಳಗ ಕಳುಹಿಸುತ್ತಿದ್ದ ಕಳ್ಳ ಅದಿರನ್ನಷ್ಟೇ ಸೈಲ್ ವಿದೇಶಕ್ಕೆ ರಫ್ತು ಮಾಡಿದ್ದರೆ ಒಂಚೂರು ಬಚಾವಾಗುತ್ತಿದ್ದರೋ ಏನೋ? ಆದರೆ ಈ ನೆಲದ ಕಾನೂನಿಗೂ ಕೇರ್ ಮಾಡದೆ ಸೈಲ್ ಲೋಕಾಯುಕ್ತ ಅಧಿಕಾರಿಗಳು ಸೀಜ್ ಮಾಡಿದ್ದ ಅದಿರನ್ನೇ ಕದ್ದು ವಿದೇಶಕ್ಕೆ ಸಾಗಿಸಿ ತನ್ನ ತಲೆ ಮೇಲೆ ತಾನೇ ಕಲ್ಲುಚಪ್ಪಡಿ ಎಳೆದುಕೊಂಡಿದ್ದರು. ಸುಪ್ರೀಮ್ ಕೋರ್ಟ್‌ನ ಹಸಿರು ಪೀಠದ ಆದೇಶದಂತೆ 2009ರ ಆರಂಭದಿಂದ ಮೇ 2010ರತನಕ ನಡೆದಿರುವ ಅಕ್ರಮ ಗಣಿಗಾರಿಕೆ ಮತ್ತು ಅದಿರು ಕಳ್ಳಸಾಗಾಣಿಕೆ ಪ್ರಕರಣದ ತನಿಖೆ ಸಿಬಿಐ ಕೈಗೆತ್ತಿಕೊಂಡಿತ್ತು. ಸಹಜವಾಗಿಯೇ ಸೈಲ್‌ನ ಮಲ್ಲಿಕಾರ್ಜುನ ಶಿಪ್ಪಿಂಗ್ ಪ್ರೈವೇಟ್ ಕಂಪನಿ, ಜನಾರ್ದನ ರೆಡ್ಡಿ ಸಹಚರ ಖಾರದಪುಡಿ ಮಹೇಶನ ಲಕ್ಷ್ಮೀ ವೆಂಕಟೇಶ್ವರ ಟೇಡರ್ಸ್, ಜನಾರ್ದನ ರೆಡ್ಡಿಯ ಮತ್ತೊಬ್ಬ ಅತ್ಯಾಪ್ತ ಕೆ.ವಿ.ನಾಗರಾಜ್ ಯಾನೆ ಸ್ವಸ್ತಿಕ್ ನಾಗರಾಜ್ ಮತ್ತು ಗೋವಿಂದರಾಜುರ ಸ್ವಸ್ತಿಕ್ ಸ್ಟೀಲ್ಸ್ ಕಂಪನಿ, ಚೇತನ್ ಶಾನ ಆಶಾಪುರ ಕಂಪನಿ, ಸೋಮಶೇಖರ್ ಮಾಲೀಕತ್ವದ ಐಎಲ್‌ಸಿ ಕಂಪನಿ, ಪ್ರೇಮ್‌ಚಂದ್ ಗರ್ಗ್‌ನ ಲಾಲ್ ಮಹಲ್ ಕಂಪನಿ ಮತ್ತು ಅರಣ್ಯಾಧಿಕಾರಿಗಳು ಜಪ್ತಿ ಮಾಡಿದ್ದ ಅದಿರನ್ನು ಕದ್ದು ಸಾಗಿಸಲು ಸಹಕರಿಸಿದ್ದ ಕಾರವಾರ ಪೋರ್ಟ್‌ನ ಉಪಸಂರಕ್ಷಣಾಧಿಕಾರಿ ಮಹೇಶ್ ಬಿಲಿಯೆ ಮೇಲೆ ಸಿಬಿಐ ಕೆಂಗಣ್ಣು ಬಿದ್ದಿತ್ತು.

Advertisements

ಆರು ಪ್ರತ್ಯೇಕ ಎಫ್ಐಆರ್ 13.9.2013ರಂದು ದಾಖಲಿಸಿದ್ದ ಸಿಬಿಐ ಪೊಲೀಸರು ಶಾಸಕ ಸೈಲ್, ಕಾರವಾರ ಬಂದರಿನ ಡೆಪ್ಯೂಟಿ ಕನ್ಸರ್ವೇಟರ್ ಬಿಲಿಯೆ ಸೇರಿದಂತೆ ಏಳು ಆರೋಪಿಗಳನ್ನು ಬಂದಿಸಿದ್ದರು. ಸಿಬಿಐ ಸೈಲ್ ಮತ್ತಿತರರ ಮೇಲೆ ಐಪಿಸಿ 120 ಬಿ ಪೆರಕಾರ ಕ್ರಿಮಿನಲ್ ಒಳಸಂಚು, ವಂಚನೆ, ಅರಣ್ಯ ನಾಶ, ಲೂಟಿ, ಲೋಕಾಯುಕ್ತ ಜಪ್ತಿ ಮಾಡಿದ್ದ ಅದಿರನ್ನು ಕದ್ದು ಸಾಗಿಸಿದ ಆರೋಪ ಹೊರಿಸಿತ್ತು. ಆಗ ಒಂದು ವರ್ಷ ಮೂರು ತಿಂಗಳು ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿದ್ದ ಸೈಲ್ 16.12.2014ರಂದು ಜಾಮೀನು ಪಡೆದು ಹೊರಬಂದಿದ್ದರು. ಆನಂತರ ತನಿಖೆ ಪೂರ್ಣಗೊಳಿಸಿದ ಸಿಬಿಐ ಆರೋಪ ಪಟ್ಟಿ ಸಲ್ಲಿಸಿತ್ತು. ಈಗದರ ತೀರ್ಪು ಬಂದಿದ್ದು, ಎಲ್ಲ ಆರೂ ಕೇಸಲ್ಲಿ ಶಾಸಕ ಸೈಲ್ ದೋಷಿ ಎಂದು 82ನೇ ಜನಪ್ರತಿನಿಧಿಗಳ ನ್ಯಾಯಾಲಯ ಹೇಳಿದೆ. ಬೇರೆ ಬೇರೆ ಎಫ್ಐಆರ್-ಚಾರ್ಜ್ ಶೀಟ್‌ನಂತೆ ಬಂದರು ಉಪ-ಸಂರಕ್ಷಣಾಧಿಕಾರಿಯೂ ಸೇರಿದಂತೆ ಉಳಿದೆಲ್ಲ ಆರೋಪಿಗಳೂ ಅಪರಾಧಿಗಳೆಂದು ನ್ಯಾಯಾಲಯ ಪರಿಗಣಿಸಿದೆ.

ಬೇಲೆಕೇರಿ ಬಂದರಿನಿಂದ ಸೈಲ್‌ರ ಮಲ್ಲಿಕಾರ್ಜುನ ಶಿಪ್ಪಿಂಗ್ ಕಂಪನಿ ಕೇವಲ ಎಂಟೇ ತಿಂಗಳಲ್ಲಿ 7.23 ಲಕ್ಷ ಮೆಟ್ರಿಕ್ ಟನ್ ವಿದೇಶಕ್ಕೆ ಕಳುಹಿಸಿದೆ. 2009ರಿಂದ 2010ರ ಮೇ ವರೆಗೆ ಈ ಬಂದರಿನಿಂದ 73 ಸೇವಾ ಪೂರೈಕೆದಾರ ಕಂಪನಿಗಳು ಒಟ್ಟು 88.06 ಲಕ್ಷ ಮೆಟ್ರಿಕ್ ಟನ್ ಹೊರದೇಶಕ್ಕೆ ರಫ್ತು ಮಾಡಿವೆ. ಇದರಲ್ಲಿ ರಫ್ತಿಗೆ ಪರವಾನಿಗೆ(ಎಂಡಿಪಿ) ಇದ್ದದ್ದು ಕೇವಲ 38.22 ಲಕ್ಷ ಮೆಟ್ರಿಕ್ ಅದಿರಿಗಷ್ಟೇ ಎಂಬುದನ್ನು ಸಿಇಸಿ(ಉನ್ನತಾಧಿಕಾರ ಸಮಿತಿ) ತನ್ನ ತನಿಖಾ ವರದಿಯಲ್ಲಿ ಹೇಳಿತ್ತು. ಅಂದರೆ 50 ಲಕ್ಷ ಮೆಟ್ರಿಕ್ ಟನ್ ಅದಿರು ಬೇಲೆಕೇರಿ ಬಂದರಿನಿಂದ ಕಳ್ಳಸಾಗಾಣಿಕೆಯಾಗಿದೆ ಎಂಬ ಅಂಶ ಸಿಇಸಿಗೆ ಮನವರಿಕೆಯಾಗಿತ್ತು. ಸೈಲ್ ಶಿಪ್ಪಿಂಗ್ ಕಂಪನಿ 7.23 ಲಕ್ಷ ಮೆಟ್ರಿಕ್ ಟನ್ ಅದಿರು ಅಕ್ರಮವಾಗಿ ವಿದೇಶಕ್ಕೆ ಕಳಿಸಿರುವ ಬಗ್ಗೆ ಸಿಬಿಐ ಪ್ರಬಲ ಸಾಕ್ಷ್ಯಾಧಾರ ಕಲೆ ಹಾಕಿತ್ತು. ಇದು ಸೈಲ್ ಕಂಪನಿಯ ಕಪ್ಪು ವಹಿವಾಟಿನ ವೃತ್ತಾಂತ.

ಸತೀಶ್ ಸೈಲ್3

ಮತ್ತೊಂದೆಡೆ ಲೋಕಾಯುಕ್ತ ಟೀಮು ಜಪ್ತಿ ಮಾಡಿದ್ದ ಅಕ್ರಮ ಅದಿರನ್ನು ಕದ್ದು ಸೈಲ್ ತನ್ನ ಶಿಪ್ಪಿಂಗ್ ಕಂಪನಿ ಮೂಲಕ ವಿದೇಶಕ್ಕೆ ಕಳ್ಳಸಾಗಾಣಿಕೆ ನಡೆಸಿ ಸಿಕ್ಕಿಬಿದ್ದಿದ್ದಾರೆ. ನ್ಯಾಯ, ನಿಷ್ಠುರ ಲೋಕಾಯುಕ್ತರಾಗಿದ್ದ ನ್ಯಾ. ಸಂತೋಷ್ ಹಗ್ಡೆ ನಿರ್ದೇಶನದ ತಂಡ ಅರಣ್ಯಾಧಿಕಾರಿಗಳು 2010ರ ಮಾರ್ಚ್ 20ರಂದು ಬೇಲೆಕೇರಿಯ ನಾಲ್ಕು ಸ್ಟೀಲ್ ಕಂಪನಿಗಳ ಜಟ್ಟಿ(ಹಡಗು ಕಟ್ಟೆ) ಮೇಲೆ ದಾಳಿ ಮಾಡಿ 8,05,991 ಮೆಟ್ರಿಕ್ ಟನ್ ಅದಿರನ್ನು ಮುಟ್ಟುಗೋಲು ಹಾಕಿಕೊಂಡಿದ್ದರು. ಇದರಲ್ಲಿ ಸೈಲ್ ಕಂಪನಿಯ ಜಟ್ಟಿಯಿಲ್ಲಿದ್ದ 2,29,279.02 ಮೆಟ್ರಿಕ್ ಟನ್ ಅಕ್ರಮ ಅದಿರೂ ಸೇರಿತ್ತು. ಇದು 23 ಹ್ಯಾಂಡಲಿಂಗ್ ಕಂಪನಿಗಳಿಂದ ಪಡೆದಿದ್ದ 21 ರಫ್ತುಗಾರಿಕೆಯ ಕಳ್ಳ ಅದಿರಾಗಿತ್ತು. ಜತೆಗೆ ಆದಾನಿ ಕಂಪನಿ, ಸಾಲ್ಗಾಂವಕರ್ ಕಂಪನಿ, ಲಾಲ್ ಮಹಲ್ ಕಂಪನಿಯೇ ಮುಂತಾದ ರಫ್ತು ಸಂಸ್ಥೆಗಳ ಅನಧಿಕೃತ ಅದಿರು ಸಹ ಇತ್ತು.

ಲೋಕಾಯುಕ್ತದ ದಾಳಿ ತಂಡ ವಶಪಡಿಸಿಕೊಂಡಿದ್ದ ಅದಿರನ್ನು ಕಾರವಾರದ ಬಂದರು ಇಲಾಖೆಯ ಉಪ ಸಂರಕ್ಷಣಾಧಿಕಾರಿ ಮಹೇಶ್ ಬಿಲಿಯೆ ಸುಪರ್ದಿಗೆ ವಹಿಸಲಾಗಿತ್ತು. ಅದನ್ನು ಕಾಪಾಡುವ ಹೊಣೆ ಮಹೇಶ್ ಬಿಲಿಯೇದಾಗಿತ್ತು. ಆದರೆ ಈ ಡೆಪ್ಯೂಟಿ ಪೋರ್ಟ್ ಕನ್ಸರ್ವೇಟರ್ ಸೈಲ್ ಮತ್ತಿತರ ಆರೇಳು ಅದಿರು ಕಳ್ಳ ಸಾಗಾಣಿಕಾದಾರ ಕಂಪನಿಗಳ ಜತೆ ಶಾಮೀಲಾಗಿ ಜಪ್ತಿ ಮಾಡಲಾಗಿದ್ದ ಅದಿರಲ್ಲಿ 11,312 ಮೆಟ್ರಿಕ್ ಟನ್ ನಾಪತ್ತೆಗೆ ನೆರವಾಗಿದ್ದರು. ಉಪ ಬಂದರು ಸಂರಕ್ಷಣಾಧಿಕಾರಿ ಮತ್ತು ಬೇರೆ-ಬೇರೆ ಇಲಾಖೆಯ ಅಧಿಕಾರಿಗಳನ್ನೆಲ್ಲ ಪಳಗಿಸಿದ್ದ ಸೈಲ್ ಮತ್ತಿತರ ಅದಿರು ರಫ್ತು ವಹಿವಾಟುದಾರರು ಬಂದರು ಉಪ ಸಂರಕ್ಷಣಾಧಿಕಾರಿ ಕಾವಲಿನಲ್ಲಿದ್ದ ಮುಟ್ಟಗೋಲು ಹಾಕಲಾಗಿದ್ದ ಅದಿರಲ್ಲಿ ಕೈಗೆ ಸಿಕ್ಕಷ್ಟನ್ನು ಕಳ್ಳಸಾಗಾಣಿಕೆ ಮಾಡಿದ್ದಾರೆ. ಇದರಲ್ಲಿ ಶಾಸಕ ಸೈಲ್ ಕಂಪನಿಯೊಂದೇ ಕದ್ದು ಸಾಗಾಟ ಮಾಡಿದ್ದು ಬರೋಬ್ಬರಿ 3.21 ಮೆಟ್ರಿಕ್ ಟನ್. ಸೈಲ್ ಗೋಲ್ ಮಾಲಿನಲ್ಲಿ ಸರ್ಕಾರದ ಬೊಕ್ಕಸಕ್ಕೆ 100 ಕೋಟಿಯಷ್ಟು ನಷ್ಟವಾಗಿದೆ ಎನ್ನಲಾಗಿತ್ತು. ಇದು ಲೋಕಾಯುಕ್ತದವರು ಮುಟ್ಟುಗೋಲು ಹಾಕಿದ್ದ ಅದಿರು ಕದ್ದು ವಿದೇಶಕ್ಕೆ ಸಾಗಿಸಿದ್ದರಿಂದಾದ ಲೂಟಿ ಅಷ್ಟೇ. ಇದಕ್ಕಿಂತ ಹತ್ತಾರು ಪಟ್ಟು ಹೆಚ್ಚು ಹಾನಿ 2-3 ವರ್ಷ ಸೈಲ್ ಕಂಪನಿ ಮಾಡಿರುವ ಅಕ್ರಮ ಅದಿರು ವಹಿವಾಟಿನಿಂದ ಆಗಿದೆ ಎಂದು ಅಂದಾಜಿಸಲಾಗುತ್ತಿದೆ.

ಇದನ್ನು ಓದಿದ್ದೀರಾ?: ಮರಕುಂಬಿ ಪ್ರಕರಣ | ಊರಿಗೆ ಊರೇ ನೀರವ ಮೌನ; ಮಾತನಾಡಲೂ ಹೆದರುತ್ತಿರುವ ಗ್ರಾಮಸ್ಥರು

ಸಿಬಿಐ ತನಿಖೆಗೂ ಮೊದಲೇ ಲೋಕಾಯುಕ್ತದ ತಪಾಸಣಾ ತಂಡದ ಕಾನೂನುನಿಷ್ಠ ಅರಣ್ಯಾಧಿಕಾರಿಗಳಾದ ಪಿಸಿಸಿಎಫ್ ಡಾ. ಯು.ವಿ. ಸಿಂಗ್ ಮತ್ತು ಕಾರವಾರದ ಡಿಎಫ್ಒ ಎನಿಸಿದ್ದ ಗೋಕುಲ್ ಅವರ ಎರಡು ತನಿಖಾ ವರದಿಗಳು ಬೇಲೆಕೇರಿ ಬಂದರಿನಲ್ಲಿ ಶಾಸಕ ಸತೀಶ್ ಸೈಲ್, ಪ್ರಧಾನಿ ಮೋದಿ ಸಖ್ಯದ ಅದಾನಿ ಶಿಪ್ಪಿಂಗ್ ಕಂಪನಿ ಮತ್ತಿತರ ರಫ್ತು ಸಂಸ್ಥೆಗಳು ಅಹೋರಾತ್ರಿ ಅಕ್ರಮ ವ್ಯವಹಾರ-ಕಳ್ಳಸಾಗಾಣಿಕೆ ನಡೆಸುತ್ತಿರುವುದು ಬಯಲಾಗಿಸಿತ್ತು. ಬೇಲೆಕೇರಿ ಬಂದರು ಏರಿಯಾ ಮತ್ತದಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯ ಇಕ್ಕೆಲಗಳೆಂದರೆ ರೆಡ್ಡಿ-ಸೈಲ್ ರಿಪಬ್ಲಿಕ್‌ನಂತಾಗಿತ್ತು. ಬೇಲೆಕೇರಿ ಬಂದರಿಗೆ ಹೋಗಿ ತನಿಖೆ ಮಾಡುವುದಿರಲಿ, ಅಲ್ಲಿ ತಲುಪುವುದೇ ರಿಸ್ಕ್ ಕೆಲಸವಾಗಿತ್ತು. ಅಂದಿನ ಬಿಜೆಪಿ ಸರಕಾರವನ್ನೇ ನಿಯಂತ್ರಿಸುತ್ತಿದ್ದ ಜನಾರ್ದನ ರೆಡ್ಡಿ ಇಶಾರೆಯಂತೆಯೇ ಬೇಲೆಕೇರಿ ಬಂದರಿನ ‘ಚಟುವಟಿಕೆ’ಗಳೆಲ್ಲ ನಡೆಯುತ್ತಿತ್ತು. ಅಲ್ಲಿ ಅಪಾಯಕಾರಿ ಗೂಂಡಾಗಳು ಕಾವಲಿರುತ್ತಿದ್ದರು. ಅದಿರು ಮಾಫಿಯಾ ಬಿಟ್ಟರೆ ಬೇರೆ ಯಾರಿಗೂ ಬೇಲೆಕೇರಿ ಪೋರ್ಟ್ ಯಾರ್ಡ್ ಪ್ರವೇಶ ಸಾಧ್ಯವಿರಲಿಲ್ಲ.

ಬೇಲೆಕೇರಿ ಬಂದರಿನ ಅಕ್ರಮಗಳ ತನಿಖೆಗೆ ಲೋಕಾಯುಕ್ತ ಸಂತೋಷ್ ಹೆಗ್ಡೆ ಖಡಕ್ ಅರಣ್ಯಾಧಿಕಾರಿ ಡಾ. ಯು.ವಿ. ಸಿಂಗ್ ನೇತೃತ್ವದ ತಂಡವೊಂದನ್ನು ರಚಿಸಿದ್ದರು. ಬೇಲೆಕೇರಿ ಬಂದರು ಮಾಫಿಯಾದ ಚಹರೆ ಅರಿತಿದ್ದ ಸಿಂಗ್ ಸಾದಾಸೀದಾ ಹೋದರೆ ಕೆಲಸ ಕೆಡುತ್ತದೆಂಬುದು ಖಾತ್ರಿಯಾಗಿತ್ತು. ಹಾಗಾಗಿ ಮಾರುವೇಷದಲ್ಲಿ ಬೇಲೆಕೇರಿ ಬಂದರು ದಾಳಿಗೆ ಸಿಂಗ್ ನೀಲನಕ್ಷೆ ಹಾಕಿಕೊಂಡರು. ಉತ್ತರ ಕರ್ನಾಟಕದ ಮಂದಿ ಧರ್ಮಸ್ಥಳ-ಕುಕ್ಕೆ ಸುಬ್ರಹ್ಮಣ್ಯ-ಉಡುಪಿ ಕಡೆ ತೀರ್ಥಯಾತ್ರೆ ಕೈಗೊಳ್ಳುವ ಭಕ್ತರ ರೀತಿಯಲ್ಲಿ ತಮ್ಮ ದಾಳಿ ತಂಡ ಸಜ್ಜುಗೊಳಿಸಿದ್ದರು. ವಾಹನಕ್ಕೆ ಕೇಸರಿ ಬಾವುಟ ಕಟ್ಟಿದ್ದರು. ದಾಳಿ ಟೀಮಿನವರು ಭಕ್ತಾದಿಗಳಂತೆ ಸಿಂಪಲ್ ಡ್ರೆಸ್ ತೊಡುವಂತೆ ನೋಡಿಕೊಂಡಿದ್ದರು. ಅಂತೂ ಬೇಲೆಕೇರಿ ಬಂದರು ಪ್ರಾಂಗಣ ಪ್ರವೇಶಿಸಿದ್ದ ಸಿಂಗ್ ತಂಡ ಸೈಲ್ ಶಿಪ್ಪಿಂಗ್ ಸಂಸ್ಥೆ ಮತ್ತು ಇತರ ಮೂರು ಅದಿರು ಕಳ್ಳಸಾಗಾಟ ನಿರತ ಕಂಪನಿಗಳ ಮೇಲೆ ದಾಳಿ ಮಾಡಿದ್ದರು.

ಸತೀಶ್ ಸೈಲ್2

ಈ ರೋಚಕ ಆಪರೇಷನ್‌ನಲ್ಲಿ ಸಿಂಗ್ ಪಡೆಗೆ ಬರೋಬ್ಬರಿ 40 ಗೋಣಿ ಚೀಲದಷ್ಟು ದಾಖಲೆ ಸಿಕ್ಕಿತ್ತು. ಕಂಪ್ಯೂಟರ್ ಸಾಪ್ಟ್ ಫೈಲ್‌ಗಳು, ಹಾರ್ಡ್ ಡಿಸ್ಕ್‌ಗಳು, ಸಿಡಿಗಳು ಇತ್ಯಾದಿ ದಾಖಲೆಗಳು- ಸೈಲ್, ಅದಾನಿ, ಸಾಲಗಾಂವಕರ್ ಮತ್ತು ರಾಜಮಹಲ್ ಸಿಲ್ಕ್ ಕಂಪನಿ ಮಾಲೀಕರು ಸರ್ಕಾರದ ಸಂಪತ್ತನ್ನು ಪ್ರತಿ ದಿನ ಕೋಟಿ-ಕೋಟಿ ಲೆಕ್ಕದಲ್ಲಿ ಲೂಟಿ ಮಾಡುತ್ತ ಕಳ್ಳ ಕುಬೇರರಾಗುತ್ತಿರುವುದನ್ನು ನಿಸ್ಸಂಶಯವಾಗಿ ಸಾಬೀತು ಪಡಿಸುತ್ತಿದ್ದವು. ಅರಣ್ಯಾಧಿಕಾರಿ ಸಿಂಗ್ ತಂದಿದ್ದ ದಾಖಲೆಗಳು ಮತ್ತು ತನಿಖೆಯ ಅಂಶಗಳನ್ನು ಆಧರಿಸಿ ನ್ಯಾ. ಸಂತೋಷ್ ಹೆಗ್ಡೆ ಗಣಿ ಅವ್ಯವಹಾರದ ವಿಸ್ತೃತ ವರದಿ ಸಿದ್ಧಪಡಿಸಿದಾಗಂತೂ ಬೇಲೆಕೇರಿ ಬಂದರಿನಲ್ಲಾಗುತ್ತಿದ್ದ ಕರಾಳ ದಂಧೆ ಜಗಜ್ಜಾಹೀರಾಗಿತ್ತು. ‘ಗಣ್ಯ’ ಕಳ್ಳರ ಅಸಲಿ ಅವತಾರ ಅನಾವರಣವಾಗಿತ್ತು.

ಕಾರವಾರದ ಡಿಸಿಎಫ್ ಗೋಕುಲ್ ಲೋಕಾಯುಕ್ತ ವರದಿ ಬಹಿರಂಗವಾಗುದಕ್ಕೂ ಮೊದಲೇ(23.6.2010ರಂದು) ಬೇಲೆಕೇರಿ ಬಂದರಿನ ಅದಿರು ಅವ್ಯವಹಾರದ ಬಗ್ಗೆ ಹೈಕೋರ್ಟಿಗೊಂದು ಪ್ರಮಾಣ ಪತ್ರ ಸಲ್ಲಿಸಿದ್ದರು. ಈ ಪ್ರಮಾಣ ಪತ್ರದಲ್ಲಿ 2009ರಿಂದ ಫೆಬ್ರುವರಿ 2010ರ ಅವಧಿಯಲ್ಲಿ ಕಾರವಾರ ಮತ್ತು ಬೇಲೆಕೇರಿ ಬಂದರಿಗೆ 1060 ಕೋಟಿ ಬೆಲೆಯ 35,319 ಲಕ್ಷ ಮೆಟ್ರಿಕ್ ಟನ್ ಅಕ್ರಮ ಅದಿರು ಬಂದಿದೆ. ಈ ಅಕ್ರಮ ಅದಿರನ್ನು ಸೈಲ್, ಅದಾನಿ, ಸಾಲಗಾಂವಕರ್ ಮತ್ತು ರಾಜಮಹಲ್ ಸಿಲ್ಕ್ ಕಂಪನಿಗಳು ಕಳ್ಳಸಾಗಾಣಿಕೆ ಮಾಡಿವೆ ಎಂಬ ಮಹತ್ವದ ಸಂಗತಿಯಿತ್ತು. ಆ ಬಳಿಕ ಧಾರವಾಡದ ಸಮಾಜ ಪರಿವರ್ತನಾ ಸಮುದಾಯದ ಎಸ್.ಆರ್. ಹಿರೇಮಠ ಬೇಲೆಕೇರಿ ಬಂದರಿನ ಅದಿರು ಹಗರಣದ ಹಿಂದೆ ಬಿದ್ದಿದ್ದರು. ಆಗ ಗಣಿ ಲೂಟಿ ವ್ಯವಹಾರದ ವಿಕಾರಗಳು ಒಂದರ ಹಿಂದೊಂದರಂತೆ ಹೊರ ಪ್ರಪಂಚಕ್ಕೆ ಗೋಚರಿಸಲಾಂಭಿಸಿತು.

ಅಕ್ರಮ ಗಣಿಗಾರಿಕೆಯ ಆರ್ಭಟ ಉತ್ತುಂಗಕ್ಕೇರಿದಾಗ ಕೆಟ್ಟ ಕಾರಣಕ್ಕಾಗಿ ಬೇಲೆಕೇರಿ ಬಳ್ಳಾರಿಯಷ್ಟೇ ಸುದ್ದಿಯಾಗಿತ್ತು. ಗಣಿ ಉದ್ಯಮಪತಿಗಳ ಕಾನೂನುಬಾಹಿರ ಪಾತಕದಿಂದಾಗುತ್ತಿದ್ದ ಅವ್ಯವಹಾರ, ಅನಾಹುತದಿಂದ ಇಡೀ ರಾಜ್ಯ ಬೆಚ್ಚಿಬಿದ್ದಿತ್ತು. ಉತ್ತರ ಕನ್ನಡಕ್ಕಂತೂ ಅಕ್ರಮ ಗಣಿಗಾರಿಕೆ ಉದ್ಯಮದ ಹಾವಳಿ ದುಃಸ್ವಪ್ನ. 2007-08 ಮತ್ತು 2009-10ರ ಗಣಿಗಾರಿಕೆ ಹೊತ್ತಲ್ಲಿ ಬಳ್ಳಾರಿ, ಸಂಡೂರು, ಹೊಸಪೇಟೆಯಿಂದ ಬೇಲೆಕೇರಿಗೆ ಬರುತ್ತಿದ್ದ ಅದಿರು ಹೊತ್ತ ಲಾರಿಗಳ ಅಬ್ಬರ-ದಟ್ಟಣೆಯಿಂದ ಯಲ್ಲಾಪುರ-ಬೇಲೆಕೇರಿ ಹೆದ್ದಾರಿಯಲ್ಲಾಗುತ್ತಿದ್ದ ಅನಾಹುತ, ಅಪಘಾತ, ಸಾವು, ನೋವು ಮತ್ತು ರಸ್ತೆಯುದ್ದಕ್ಕೂ ಚೆಲ್ಲುತ್ತಿದ್ದ ಅದಿರು ಧೂಳಿನಿಂದ ಜೀವ ಸಂಕುಲ-ಪರಿಸರದ ಮೇಲಾಗುತ್ತಿದ್ದ ದುಷ್ಪರಿಣಾಮ ಹೇಳತೀರದಾಗಿತ್ತು. ಉತ್ತರ ಕನ್ನಡ ಜನರಂತೂ ಅಕ್ಷರಶಃ ತತ್ತರಿಸಿಹೋದರು. ರಾಜ್ಯದ ಅಮೂಲ್ಯ ಖನಿಜ ಸಂಪತ್ತಿನ ಲೂಟಿ ಮತ್ತು ಈ ಕಳ್ಳ ವ್ಯವಹಾರದಿಂದ ಜನರಿಗಾಗುತ್ತಿರುವ ಹಿಂಸೆ ತಡೆಯುವಂತೆ ಕೂಗೆದ್ದಿತು.

ಇದನ್ನು ಓದಿದ್ದೀರಾ?: ಸ್ವತಂತ್ರ ಮೀಡಿಯಾದ ಬಾಯಿ ಬಡಿಯಲು ಕರಾಳ ಕಾಯಿದೆಗಳ ದುರುಪಯೋಗ: WAN- INFRA ಕಳವಳ

ಲೋಕಾಯುಕ್ತಕ್ಕೂ ದೂರು ಹೋಯಿತು. ಲೋಕಾಯುಕ್ತದ ವರಿಷ್ಠರಾಗಿದ್ದ ನ್ಯಾ. ಸಂತೋಷ್ ಹೆಗ್ಡೆ, ಲೋಕಾಯುಕ್ತದ ಐಪಿಎಸ್ ಅಧಿಕಾರಿಯಾಗಿದ್ದ ಮಧುಕರ್ ಶೆಟ್ಟಿ, ಹಿರಿಯ ಅರಣ್ಯಾಧಿಕಾರಿ ಯು.ವಿ.ಸಿಂಗ್ ಮತ್ತು ಕಾರವಾರದ ಡಿಎಫ್ಒ ಗೋಕುಲ್ ಅವರ ಪ್ರಾಮಾಣಿಕ-ದಿಟ್ಟ ಕರ್ತವ್ಯಪ್ರಜ್ಞೆಯಿಂದ ಅನೇಕ ಅದಿರು ಅವ್ಯವಹಾರ ಮತ್ತು ಕಳ್ಳಸಾಗಾಣಿಕೆ ಪ್ರಕರಣಗಳು ಬೆಳಕಿಗೆ ಬಂದವು. ಬಳ್ಳಾರಿ-ಬೇಲೆಕೇರಿ ಗಣಿ ದಂಧೆಯ ಕರಾಳ ಮಾಹಿತಿ ಸುಪ್ರೀಮ್ ಕೋರ್ಟ್ ಕಿವಿಗೂ ತಲುಪಿತು. ಸುಪ್ರೀಮ್ ಕೋರ್ಟ್ ಸಿಬಿಐ ತನಿಖೆಗೆ ಆದೇಶಿಸಿತು. ಸಿಬಿಐ ಗಣಿ ವ್ಯವಹಾರದ ಹಲವು ಅಕ್ರಮ, ಅನಾಹುತದ ಪ್ರಕರಣಗಳನ್ನು ಬಯಲುಗೊಳಿಸಿದೆ. ಇವತ್ತಿಗೂ ಅನೇಕ ಪ್ರಕರಣಗಳ ವಿಚಾರಣೆ ಆಗುತ್ತಲೇ ಇದೆ.

ಅಕ್ರಮ ಗಣಿ ಸಾಮ್ರಾಜ್ಯದ ಅನಭಿಷಕ್ತ ಸುಲ್ತಾನನಂತಿದ್ದ ಗಾಲಿ ಜನಾರ್ದನ ರೆಡ್ಡಿ ಜೈಲಲ್ಲಿ ಹಲವು ವರ್ಷ ಖೈದಿಯಾಗಿ ಕಾಲ ಕಳೆದು ಬಂದರು. ಜೈಲಿನಿಂದ ಹೊರ ಬಂದರೂ ಇತ್ತೀಚಿನವರೆಗೂ ಜನಾರ್ದನ ರೆಡ್ಡಿಗೆ ತವರು ಜಿಲ್ಲೆ ಬಳ್ಳಾರಿಗೆ ಪ್ರವೇಶಿಸದಂತೆ ನ್ಯಾಯಾಲಯದ ನಿರ್ಬಂಧ ವಿಧಿಸಿತ್ತು. ಗಣಿ ಹಗರಣದಿಂದಾಗಿ ಸಂತೋಷ್ ಲಾಡ್ ಒಮ್ಮೆ ಮಂತ್ರಿಗಿರಿ ಬಿಡಬೇಕಾಗಿ ಬಂತು. ಆನಂದ್ ಸಿಂಗ್, ಬಿ.ನಾಗೇಂದ್ರನಂಥ ‘ಗಣಿ ಗಣ್ಯರು’ ಜೈಲು ಕಂಡುಬಂದರು. ದಶಕದ ಹಿಂದೆ ಕಾರಾಗೃಹದಲ್ಲಿ ಒಂದೂಕಾಲು ವರ್ಷ ಕಳೆದಿದ್ದ ಶಾಸಕ ಸತೀಶ್ ಸೈಲ್ ಆನಂತರ ಜಾಮೀನಲ್ಲಿ ಹೊರಬಂದರೂ 2018ರ ಚುನಾವಣೆಯಲ್ಲಿ ಮತ್ತೆ ಎಮ್ಮೆಲ್ಲೆ ಆಗಲಾಗಲಿಲ್ಲ. 2023ರ ಚುನಾವಣೆಯಲ್ಲಿ ಬಿಜೆಪಿಯ ಶಾಸಕಿಯಾಗಿದ್ದ ರೂಪಾಲಿ ನಾಯ್ಕ್ ಜತೆಗಿನ ನಿಕಟ ಜಿದ್ದಾಜಿದ್ದಿಯಲ್ಲಿ ಸಣ್ಣ ಅಂತರದಲ್ಲಿ ಮತ್ತೆ ಶಾಸಕನಾದರು. ಆದರೆ ಬೇಲೆಕೇರಿ ಬಂದರು ಗಣಿ ರಫ್ತು ಪ್ರಕರಣದಲ್ಲಿ ಏಳು ವರ್ಷಗಳ ಶಿಕ್ಷೆಯಾಗಿರುವುದರಿಂದ ಸೈಲ್‌ರ ಶಾಸಕ ಸ್ಥಾನಕ್ಕೆ ಸಂಚಕಾರ ಬಂದಿದೆ. ಜನ ಪ್ರತಿನಿಧಿಗಳಿಗೆ ಎರಡು ವರ್ಷಕ್ಕಿಂತ ಹೆಚ್ಚು ಕಾಲದ ಕಾರಾಗೃಹ ಶಿಕ್ಷೆ ನ್ಯಾಯಾಲಯ ವಿಧಿಸಿದರೆ ಅಧಿಕಾರ ಸ್ಥಾನ ರದ್ದಾಗುತ್ತದೆ.

ಸತೀಶ್ ಸೈಲ್‌ಗೆ ಕಬ್ಬಿಣದ ಅದಿರು ವ್ಯವಹಾರದ ಸಂಪತ್ತು ನೆಮ್ಮದಿ ನೀಡಿದ್ದಕ್ಕಿಂತ ನಿದ್ದೆ ಕೆಡಿಸಿದ್ದೇ ಹೆಚ್ಚು. ಹಡಗುಗಳಿಗೆ ಲಕ್ಷಾಂತರ ಮೆಟ್ರಿಕ್ ಟನ್ ಅದಿರು ತುಂಬಿ ವಿದೇಶಕ್ಕೆ ಕಳಿಸಿ ಹಡಗುಗಳ ಲೆಕ್ಕದಲ್ಲೇ ಹಣ ಸಂಪಾದಿಸಿದ ಸೈಲ್ ಪ್ರೊಫೈಲ್ ರೋಚಕವಾಗಿದೆ. ಅಕ್ರಮ ಅದಿರು ಕಾಸಿನ ಬಲದಿಂದ ಕಾರವಾರ ಮತ್ತು ಅಂಕೋಲಾದ ಸಾಮಾಜಿಕ-ರಾಜಕೀಯ ಪಡಸಾಲೆಯಲ್ಲಿ ಪ್ರತಿಷ್ಠೆಯ ವ್ಯಕ್ತಿಯಾಗಿ ಅವತರಿಸಿರುವ ಸೈಲ್ ಅದಿರು ಕಸುಬು ಆರಂಭವಾಗಿದ್ದು ಪಕ್ಕದ ಗೋವಾದ ಶಿಪ್ಪಿಂಗ್ ಯಾರ್ಡ್ ಒಂದರಲ್ಲಿ. ಲೋಕೋಪಯೋಗಿ ಇಲಾಖೆಯ ಬಡ ಓವರ್ಸೀಯರ್‍‌ನ ಮಗನಾದ ಸತೀಶ್ ಸೈಲ್ ಡಿಗ್ರಿ ಮುಗಿಸಿ ಹೊಟ್ಟೆಪಾಡಿನ ಉದ್ಯೋಗ ಅರಸುತ್ತ ಹೋಗಿ ತಲುಪಿದ್ದು ಗೋವಾದ ಬಂದರು ನಗರಿ ಮಡಗಾಂವ. ಅಲ್ಲಿ ಶಿಪ್ಪಿಂಗ್ ಧಣಿಯೊಬ್ಬರ ಚಾಕರಿಕೆ ಸಿಗುತ್ತದೆ. ನಿಧಾನಕ್ಕೆ ಮಾಲೀಕನ ವ್ಯವಹಾರವನ್ನೇ ಸೈಲ್ ಸ್ವತಂತ್ರವಾಗಿ ಆರಂಭಿಸುತ್ತಾರೆ. ಸರಿಸುಮಾರು ಅದೇ ವೇಳೆಗೆ ಮಡಗಾಂವ್ ಬಂದರಿನಿಂದ ಅದಿರು ರಫ್ತು ವ್ಯವಹಾರ ಪ್ರಾರಂಭವಾಗುತ್ತದೆ. ಬಂದರು ದಂಧೆಯ ಮರ್ಮ ಅರಿತಿದ್ದ ಸೈಲ್ ಅದಿರು ಹ್ಯಾಂಡಲಿಂಗ್‌ಗೆ ಕೈಹಾಕುತ್ತಾರೆ. ಈ ದಲ್ಲಾಳಿಗಿರಿ ಸೈಲ್ ಕೈಹಿಡಿಯುತ್ತದೆ.

ಮಡಗಾಂವ್ ಬಂದರಿನ ಪ್ರಮುಖ ಶಿಪ್ಪಿಂಗ್ ಉದ್ಯಮಿಯಾಗಿ ಹೊರಹೊಮ್ಮಿದ ಸೈಲ್ ಕಣ್ಣು ಬೇಲೆಕೇರಿ ಬಂದರಿನ ಮೇಲೆ ಬೀಳುತ್ತದೆ. ಸ್ವಂತ ಖರ್ಚಿನಲ್ಲೇ ಅಲ್ಲೊಂದು ಹಡಗು ಕಟ್ಟೆ ಕಟ್ಟಿಕೊಳ್ಳುವ ಸೈಲ್ ಭರ್ಜರಿ ಅದಿರು ರಫ್ತು ವಹಿವಾಟುದಾರನಾಗಿ ಅದಿರು ದಂಧೆ ದೊರೆ ಜನಾರ್ದನ ರೆಡ್ಡಿಯ ಗಣಿ ರಿಪಬ್ಲಿಕ್ ಎಂಟ್ರಿ ಸಾಧಿಸುತ್ತಾರೆ. ಬಳ್ಳಾರಿಯ ಗಣಿ ಉದ್ಯಮಿಗಳಂತೆ ಸೈಲ್ ರಾಜಕೀಯ-ಸಾಮಾಜಿಕ ‘ಶ್ರೇಷ್ಠ’ನೂ ಆಗುತ್ತಾರೆ. ಅದಿರು ಅವ್ಯವಹಾರದ ಹಲವು ಕೇಸುಗಳ ಆರೋಪಿಯೂ ಆಗುತಾರೆ. ಈಗ ಆರು ಕೇಸುಗಳಲ್ಲಿ ಅಪರಾಧಿಯಾಗಿ ಜೈಲು ಪಾಲಾಗಿರುವ ಸೈಲ್, ಮೇಲೇರಿದಷ್ಟೇ ವೇಗವಾಗಿ ಪಾತಾಳಕ್ಕೆ ಜಾರಿದ್ದಾರೆ. ಮಾಡಬಾರದ್ದು ಮಾಡಿದರೆ ಆಗಬಾರದ್ದೇ ಆಗುತ್ತದೆಂದು ಕಾರವಾರ-ಕೋಲೆ ಜನರು ಮಾತಾಡಿಕೊಳ್ಳುತ್ತಿದ್ದಾರೆ.

ಸತೀಶ್ ಸೈಲ್1

ಸತೀಶ್ ಸೈಲ್ ಶಾಸಕತ್ವ ಅನರ್ಹವಾಗುವ ಹಿನ್ನಲೆಯಲ್ಲಿ ಕಾರವಾರ ಅಸೆಂಬ್ಲಿ ಕ್ಷೇತ್ರದಲ್ಲಿ ಉಪಚುನಾವಣೆ ಮೂಡ್ ಶುರುವಾಗಿದೆ. ಸೈಲ್ ಎದುರು ಕಳೆದ ಚುನಾವಣೆಯಲ್ಲಿ ಕೇವಲ 2,415 ಮತದಿಂದ ಸೋತಿದ್ದ ಬಿಜೆಪಿಯ ಮಾಜಿ ಶಾಸಕಿ ರೂಪಾಲಿ ನಾಯ್ಕ್ ಮತ್ತು ಎಮ್ಮೆಲ್ಲೆಯಾಗುವ ಆಸೆಯಲ್ಲಿರುವ ಜೆಡಿಎಸ್‌ನ ಮಾಜಿ ಮಂತ್ರಿ ಆನಂದ್ ಅಸ್ನೋಟಿಕರ್ ಬಳಗದಲ್ಲಿ ಒಂಥರಾ ಹುರುಪೇರಿದೆ. ಇಂಥದೊಂದು ತೀರ್ಪು ಬಂದು ಸತೀಶ್ ಸೈಲ್ ಶಾಸಕತ್ವ ಕಳೆದುಕೊಳ್ಳುವ ನೀರೀಕ್ಷೆಯಲ್ಲಿದ್ದ ರೂಪಾಲಿ ನಾಯ್ಕ್ ಈಚೆಗಂತೂ ತೀವ್ರ ಕ್ರಿಯಾಶೀಲರಾಗಿದ್ದರು. ಸೈಲ್ ಶಿಕ್ಷೆಗೆ ಮೇಲಿನ ನ್ಯಾಯಾಲಯದಲ್ಲಿ ತಡೆ ಸಿಗುವುದೋ? ಕಾರವಾರದಲ್ಲಿ ಉಪ ಚುನಾವಣೆ ಖಾತ್ರಿಯಾಗುವುದೋ? ಕುತೂಹಲವೀಗ ಎಲ್ಲೆಡೆ ಮೂಡಿದೆ.

-ನಹುಷ

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಉಪರಾಷ್ಟ್ರಪತಿ ಚುನಾವಣೆ | ಜಾತ್ಯತೀತ ಹೋರಾಟದ ಹಿನ್ನೆಲೆಯ ಅಭ್ಯರ್ಥಿಗೆ RSS ಕಟ್ಟಾಳು ಎದುರಾಳಿ

2025ರ ಉಪರಾಷ್ಟ್ರಪತಿ ಚುನಾವಣೆಯು ಕೇವಲ ಇಬ್ಬರು ವ್ಯಕ್ತಿಗಳ ನಡುವಿನ ಸ್ಪರ್ಧೆಯಲ್ಲ; ಅದು...

ಪಟ್ಟಣ ಪಂಚಾಯತ್ ಚುನಾವಣೆ: ಮೂರರಲ್ಲಿ ಕಾಂಗ್ರೆಸ್‌ಗೆ ಮೇಲುಗೈ; ಎರಡರಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿಗೆ ಜಯ

ಕರ್ನಾಟಕದಲ್ಲಿ ಐದು ಪ್ರದೇಶಗಳು ತಾಲೂಕು ಸ್ಥಾನಕ್ಕೇರಿದ ಬಳಿಕ ರಚನೆಯಾದ ಪಟ್ಟಣ ಪಂಚಾಯಿತಿಗೆ...

ಅಲೆಮಾರಿಗಳಿಗೆ ಅನ್ಯಾಯ; ಸರ್ಕಾರದ ವಿರುದ್ಧ ಭುಗಿಲೆದ್ದ ಜನಾಕ್ರೋಶ

ಮೀಸಲು ಹಂಚಿಕೆಯ ವಿವರಗಳು ಸ್ಪಷ್ಟವಾಗುತ್ತಿದ್ದಂತೆ ಸಂಭ್ರಮದ ಮನೆಯಲ್ಲಿ ಸಾವಿನ ಸೂತಕ ಆವರಿಸತೊಡಗಿತು....

Download Eedina App Android / iOS

X