ಜಾರ್ಖಂಡ್‌ನ ಕಾಂಗ್ರೆಸ್‌ನ ಮಾಜಿ ಕಾರ್ಯಾಧ್ಯಕ್ಷ ಮಾನಸ್ ಸಿನ್ಹಾ ವಿಧಾನಸಭೆ ಚುನಾವಣೆಗೂ ಮುನ್ನ ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ. ಬಿಜೆಪಿ ಪ್ರಧಾನ ಕಚೇರಿಯಲ್ಲಿ ನಡೆದ ಸಮಾರಂಭದಲ್ಲಿ ಜಾರ್ಖಂಡ್ ಬಿಜೆಪಿ ಕಾರ್ಯಾಧ್ಯಕ್ಷ ರವೀಂದ್ರ ರೈ ಮತ್ತು ಬಿಜೆಪಿಯ ರಾಜ್ಯ ಚುನಾವಣಾ ಉಸ್ತುವಾರಿಯೂ ಆಗಿರುವ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರು ಮಾನಸ್ ಸಿನ್ಹಾ ಅವರನ್ನು ಬಿಜೆಪಿಗೆ ಸ್ವಾಗತಿಸಿದರು.
ಬಿಜೆಪಿ ಸೇರ್ಪಡೆಗೊಂಡ ಬಳಿಕ ಮಾತನಾಡಿದ ಮಾನಸ್ ಸಿನ್ಹಾ, “ನಾನು ಕಳೆದ 27 ವರ್ಷಗಳಿಂದ ಕಾಂಗ್ರೆಸ್ ಪಕ್ಷಕ್ಕೆ ಸೇವೆ ಸಲ್ಲಿಸಿದ್ದೇನೆ. ವಿವಿಧ ಹುದ್ದೆಗಳನ್ನು ನಿರ್ವಹಿಸಿದ್ದೇನೆ. ಆದರೆ ಕಾಂಗ್ರೆಸ್‌ನಲ್ಲಿ ಸಮರ್ಪಿತ ಕಾರ್ಯಕರ್ತರಿಗೆ ಯಾವುದೇ ಗೌರವ ಉಳಿದಿಲ್ಲ. ಹಾಗಾಗಿ, ನಾನು ಬಿಜೆಪಿಗೆ ಸೇರಲು ನಿರ್ಧರಿಸಿದೆ. ಕಾಂಗ್ರೆಸ್ ಪಕ್ಷದ ಎಲ್ಲಾ ಹುದ್ದೆಗಳಿಗೆ ರಾಜೀನಾಮೆ ನೀಡಿದ್ದೇನೆ” ಎಂದು ಹೇಳಿದ್ದಾರೆ.
ಇದನ್ನು ಓದಿದ್ದೀರಾ? ಜಾರ್ಖಂಡ್ ಚುನಾವಣೆ | ಬಿಜೆಪಿಗೆ ಸೀಟು ಹಂಚಿಕೆ ಬಿಕ್ಕಟ್ಟು; ಮತ್ತೆ ಗೆಲ್ಲುವುದೇ ‘ಇಂಡಿಯಾ’?
ಈ ಸಂದರ್ಭದಲ್ಲೇ ಮಾತನಾಡಿದ ಅಸ್ಸಾಂ ಸಿಎಂ ಬಿಸ್ವಾ, “ಕಾಂಗ್ರೆಸ್‌ನಲ್ಲಿ ಪಕ್ಷಕ್ಕಾಗಿ ತಮ್ಮ ಜೀವನವನ್ನು ಮುಡಿಪಾಗಿಟ್ಟಿರುವ ಕಾಂಗ್ರೆಸ್ ಕಾರ್ಯಕರ್ತರಿಗೆ ಯಾವುದೇ ಪ್ರಾಮುಖ್ಯತೆ ಇಲ್ಲ. ಬಿಜೆಪಿ ಬಲಪಡಿಸಲು ಮತ್ತು ಚುನಾವಣೆಯಲ್ಲಿ ಗೆಲ್ಲಲು ಸಿನ್ಹಾ ಅವರ ಅನುಭವವನ್ನು ರಾಜ್ಯ ಮಟ್ಟದಲ್ಲಿ ಬಳಸಿಕೊಳ್ಳಲಾಗುವುದು” ಎಂದು ತಿಳಿಸಿದರು.
81 ಸದಸ್ಯ ಬಲದ ಜಾರ್ಖಂಡ್ ವಿಧಾನಸಭೆಗೆ ನವೆಂಬರ್ 13 ಮತ್ತು ನವೆಂಬರ್ 20ರಂದು ಚುನಾವಣೆ ನಡೆಯಲಿದೆ. ಮತ ಎಣಿಕೆ ನವೆಂಬರ್ 23ರಂದು ನಡೆಯಲಿದೆ. ಚುನಾವಣೆಯಲ್ಲಿ ಕಾಂಗ್ರೆಸ್ ಟಿಕೆಟ್ ನಿರೀಕ್ಷೆಯಲ್ಲಿ ಮಾನಸ್ ಸಿನ್ಹಾ ಇದ್ದರು. ಆದರೆ ಟಿಕೆಟ್ ಲಭ್ಯವಾಗಿಲ್ಲ. ಇದಾದ ಬೆನ್ನಲ್ಲೇ ಸಿನ್ಹಾ ಬಿಜೆಪಿಗೆ ಪಕ್ಷಾಂತರಗೊಂಡಿದ್ದಾರೆ.
ಈ ನಡುವೆ ಜಾರ್ಖಂಡ್‌ನ ಆಡಳಿತಾರೂಢ ಜೆಎಂಎಂ ಭಾನುವಾರ ಚುನಾವಣಾ ಆಯೋಗಕ್ಕೆ ಪತ್ರ ಬರೆದಿದೆ. ಮುಖ್ಯ ಚುನಾವಣಾ ಅಧಿಕಾರಿ ಕೆ ರವಿಕುಮಾರ್ ಮತ್ತು ಇಬ್ಬರು ಹಿರಿಯ ಐಪಿಎಸ್ ಅಧಿಕಾರಿಗಳು ಬಿಜೆಪಿ ಪರವಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದೆ. ಅವರನ್ನು ಪದಚ್ಯುತಗೊಳಿಸುವಂತೆ ಒತ್ತಾಯಿಸಿದೆ.
