ಈ ದಿನ ಸಂಪಾದಕೀಯ | ಜಾಹೀರಾತುಗಳಲ್ಲಿ ಸೆಲೆಬ್ರಿಟಿಗಳು; ರಾಜ್‌ರಿಂದ ಕಲಿಯುವುದು ಬಹಳಷ್ಟಿದೆ

Date:

Advertisements
ಅಭಿಮಾನಿಗಳಿಗೆ ಮದ್ಯ ಸೇವನೆಯನ್ನು ತೋರಿಸಬಾರದೆಂಬ ರಾಜ್ ಅವರ ನಿಲುವು, ಕೋಟಿ ಕೊಟ್ಟರೂ ಪಾನ್ ಮಸಾಲಾ ಪ್ರಚಾರ ಮಾಡಲ್ಲವೆಂಬ ಅನಿಲ್ ಕಪೂರ್ ಅವರ ಬದ್ಧತೆ, ಸೌಂದರ್ಯವರ್ಧಕಗಳು ಹೆಣ್ಣುಮಕ್ಕಳ ಆರೋಗ್ಯಕ್ಕೆ ಒಳ್ಳೆಯದಲ್ಲವೆಂದು ಜಾಹೀರಾತು ನಿರಾಕರಿಸಿದ ಸಾಯಿ ಪಲ್ಲವಿಯ ಕಾಳಜಿ– ಈ ಎಲ್ಲ ಸೆಲೆಬ್ರಿಟಿಗಳಿಗೆ ಮಾದರಿಯಾಗಬೇಕು. 

ಭಾರತೀಯ ಸಮಾಜದೊಳಗೆ ಅಧಿಕಾರಿಗಳು, ರಾಜಕಾರಣಿಗಳಿಂತ ಹೆಚ್ಚಾಗಿ ಸಿನಿಮಾ ಸೆಲೆಬ್ರಿಟಿಗಳನ್ನೇ ಜನರು ಅನುಸರಿಸುತ್ತಾರೆ. ಅವರ ಸಿನಿಮಾಗಳು, ನಡೆ-ನುಡಿಗಳನ್ನು ಅಭಿಮಾನಿಗಳು ಅಳವಡಿಸಿಕೊಳ್ಳುತ್ತಾರೆ. ತಮ್ಮ ಆದರ್ಶವೆಂದು ಭಾವಿಸುತ್ತಾರೆ. ನಂಬುತ್ತಾರೆ. ಆದ್ದರಿಂದಲೇ, ತಮ್ಮ ಖಾಸಗಿ ಜೀವನದಲ್ಲೂ ಆದರ್ಶವನ್ನು ಅನುಸರಿಸಬೇಕಾದ, ಪ್ರತಿಬಿಂಬಿಸಬೇಕಾದ ಹೊಣೆ ಸಿನಿಮಾ ಸ್ಟಾರ್‍‌ಗಳ ಮೇಲಿದೆ. ಆದರೆ, ಇಂದಿನ ದಿನಗಳಲ್ಲಿ ಏನಾಗುತ್ತಿದೆ. ತೆರೆಯ ಮೇಲಿನ ಆದರ್ಶಕ್ಕೂ, ತೆರೆಯ ಹಿಂದಿನ ಬದುಕಿಗೂ ಅರ್ಥವೇ ಇಲ್ಲವೆಂಬಂತೆ ವ್ಯತಿರಿಕ್ತವಾಗಿದ್ದಾರೆ ಸಿನಿಮಾ ಸ್ಟಾರ್‍‌ಗಳು.

ಪ್ರಸ್ತುತ ಜಗತ್ತಿನಲ್ಲಿ ಸಿನಿಮಾ ಮತ್ತು ಕ್ರೀಡಾ ಸ್ಟಾರ್ ಸೆಲೆಬ್ರಿಟಿಗಳು ಜಾಹೀರಾತು ವಲಯದಲ್ಲಿ ಹೆಚ್ಚು ಕಾಣಿಸಿಕೊಳ್ಳುತ್ತಿದ್ದಾರೆ. ಆ ಮೂಲಕವೂ ಹಣ ಸಂಪಾದನೆಗಳಿದಿದ್ದಾರೆ. ಪೆನ್ನುಗಳು ಮತ್ತು ಒಳ ಉಡುಪುಗಳಿಂದ ಹಿಡಿದು ಆಭರಣಗಳು, ಕಾರುಗಳು, ಮನೆಗಳು, ಪಾನ್ ಮಸಾಲಾ, ಮದ್ಯ ಹಾಗೂ ಜೂಜಾಟಗಳ ಪ್ರಚಾರದ ರಾಯಭಾರಿಗಳಾಗುತ್ತಿದ್ದಾರೆ.

ಕಪಿಲ್ ದೇವ್ ಅವರ ‘ಪಾಮೋಲಿವ್ ದಾ ಜವಾಬ್ ನಹಿ’, ಶಾರುಖ್ ಖಾನ್ ಅವರ ‘ಯೇ ದಿಲ್ ಮಾಂಗೆ ಮೋರ್’ ಹಾಗೂ ಸುದೀಪ್, ಹೃತಿಕ್ ರೋಷನ್ ಅವರ ‘ರಮ್ಮಿ ಆಡಿ ಕ್ಯಾಶ್ ಪ್ರೈಸ್ ಗೆಲ್ಲಿ’, ಅಜಯ್ ದೇವಗನ್, ಅಕ್ಷಯ್ ಕುಮಾರ್, ಶಾರೂಖ್ ಖಾನ್ ಅವರ ‘ಕಣ ಕಣದಲ್ಲೂ ಕೇಸರಿಯ ಶಕ್ತಿ’ ಸೇರಿದಂತೆ ನಾನಾ ಘೋಷಣೆಗಳು ಜಾಹೀರಾತಿನ ಕುರಿತು ಗಮನ ಸೆಳದಿವೆ. ಆ ಉತ್ಪನ್ನಗಳನ್ನು ಕೊಳ್ಳುವಂತೆ ತಮ್ಮ ಅಭಿಮಾನಿಗಳೂ ಸೇರಿದಂತೆ, ಜನರನ್ನು ಪ್ರಚೋದಿಸುತ್ತವೆ. ಪ್ರೇರೇಪಿಸುತ್ತವೆ.

Advertisements

ಈ ಸಿನಿಮಾ ಸ್ಟಾರ್‍‌ಗಳು, ಕ್ರೀಡಾಪಟುಗಳು ಹಾಗೂ ಕಿರುತೆರೆ ನಟ-ನಟಿಯರು ಬ್ರ್ಯಾಂಡ್ ರಾಯಭಾರಿಗಳಾಗಿ ಗ್ರಾಹಕರನ್ನು ಉತ್ಪನ್ನಗಳತ್ತ ಸೆಳೆಯುತ್ತಾರೆ. ಉತ್ಪನ್ನಗಳ ಆಕರ್ಷಣೆಯನ್ನು ಹೆಚ್ಚಿಸುತ್ತಾರೆ. ಹೀಗಾಗಿಯೇ, ಜಾಹೀರಾತುದಾರರು ತಮ್ಮ ಉತ್ಪನಗಳ ಜಾಹೀರಾತು ಮತ್ತು ಪ್ರಚಾರಕ್ಕೆ ಇಂತಹ ಸ್ಟಾರ್‍‌ಗಳ ಮೇಲೆ ಹೆಚ್ಚು ಅವಲಂಬಿಸುತ್ತಿದ್ದಾರೆ.

ಈ ಸ್ಟಾರ್‍‌ಗಳು ತಮ್ಮನ್ನು ಅನುಸರಿಸುವ, ಆರಾಧಿಸುವ, ಆದರ್ಶವೆಂದು ನಂಬಿರುವ ಅಭಿಮಾನಿಗಳು ಮೇಲೆ ತಾವು ಪ್ರಚಾರ ಮಾಡುವ ಉತ್ಪನ್ನಗಳು ಯಾವ ರೀತಿಯ ಪರಿಣಾಮ ಬೀರುತ್ತವೆ ಎಂಬುದರ ಬಗ್ಗೆ ಚಿಂತಿಸುವುದಿಲ್ಲ. ಆ ಬಗ್ಗೆ ಹಲವು ಸಂದರ್ಭಗಳಲ್ಲಿ ಅರಿಯದೆ ಅಥವಾ ಅರಿವಿದ್ದರೂ ಲೆಕ್ಕಿಸದೆ ಉತ್ಪನ್ನಗಳಿಗೆ ಬ್ರ್ಯಾಂಡ್ ಅಂಬಾಸಿಡರ್‍‌ಗಳಾಗಿ ಪ್ರಚಾರ ಮಾಡುತ್ತಾರೆ. ತಮ್ಮದೇ ಅಭಿಮಾನಿಗಳನ್ನು ಉತ್ಪನ್ನಗಳ ಖರೀದಿಗೆ ಪ್ರಚೋದಿಸುತ್ತಾರೆ.

ಆದರೆ, ಎಲ್ಲ ಸ್ಟಾರ್‍‌ಗಳಿಗೆ ಹಣ ಗಳಿಕೆ, ವಿಲಾಸಿ ಜೀವನವೇ ಪರಮ ಗುರಿಯಲ್ಲ. ಕೆಲವು ಸ್ಟಾರ್‍‌ಗಳು ತಾವು ಬೋಧಿಸುವ ಆದರ್ಶವನ್ನು ಪಾಲಿಸಿದ್ದಾರೆ, ಅನುಸರಿಸಿದ್ದಾರೆ, ಆದರ್ಶಗಳನ್ನು ಬಿಟ್ಟುಹೋಗಿದ್ದಾರೆ. ಕನ್ನಡದ ಮೇರು ನಟ ರಾಜಕುಮಾರ್ ಅವರು ಯಾವುದೇ ಜಾಹೀರಾತಿಗೆ ಬ್ರ್ಯಾಂಡ್ ಅಂಬಾಸಿಡರ್ ಆಗಿರಲಿಲ್ಲ. ಅದಕ್ಕಿಂತ ಮುಖ್ಯವಾಗಿ, ಅವರು ತಮ್ಮ ಸಿನಿಮಾಗಳಲ್ಲಿಯೂ ಧೂಮಪಾನ, ಮದ್ಯಪಾನ ಮಾಡುವ ಪಾತ್ರಗಳನ್ನು ನಿರ್ವಹಿಸಲಿಲ್ಲ. ಸಿನಿಮಾಗಳಲ್ಲಿ ಮದ್ಯಪಾನ, ಧೂಮಪಾನದ ದೃಶ್ಯಗಳನ್ನು ಪ್ರದರ್ಶಿಸುವುದು, ತಮ್ಮದೇ ಅಭಿಮಾನಿಗಳನ್ನು ಈ ವ್ಯಸನಕ್ಕೆ ದೂಡಬಹುದೆಂದು ರಾಜ್ ಭಾವಿಸಿದ್ದರು.

ಇದನ್ನು ಓದಿದ್ದೀರಾ?: ಈ ದಿನ ಸಂಪಾದಕೀಯ | ಮೂರು ಪಕ್ಷಗಳಿಂದಲೂ ಕುಟುಂಬ ಅಭ್ಯರ್ಥಿಗಳ ದುರಂತ ರಾಜಕಾರಣ

ಅಂತೆಯೇ, ಬಾಲಿವುಡ್ ನಟ ಅನಿಲ್ ಕಪೂರ್ ಅವರು ಪಾನ್ ಮಸಾಲಾ ಉತ್ಪನ್ನದ ಜಾಹೀರಾತಿನಲ್ಲಿ ನಟಿಸಲು ನಿರಾಕರಿಸಿದ್ದಾರೆ. 10 ಕೋಟಿ ರೂ. ಕೊಡುಗೆಯ ಜಾಹೀರಾತನ್ನು ತಿರಸ್ಕರಿಸಿದ್ದಾರೆ ಎಂದು ಇತ್ತೀಚೆಗೆ ವರದಿಯಾಗಿದೆ. ವಿಶೇಷವಾಗಿ ಅನಿಲ್ ಕಪೂರ್ ಅವರು ತಮ್ಮ ಪ್ರೇಕ್ಷಕರಿಗೆ ‘ಜವಾಬ್ದಾರಿ’ ಪ್ರಜ್ಞೆಯನ್ನು ತಾವು ಸೂಚಿಸಬೇಕೇ ಹೊರತು, ಅಮಲನ್ನಲ್ಲ ಎಂದಿದ್ದಾರೆ. ಅವರಲ್ಲದೆ, ಪುಲ್ಲೆಲ ಗೋಪಿಚಂದ್, ಅಲ್ಲು ಅರ್ಜುನ್, ಕಾರ್ತಿಕ್ ಆರ್ಯನ್ ಸೇರಿದಂತೆ ಹಲವರು ಕೂಡ ಇಂತಹ ಜಾಹೀರಾತುಗಳನ್ನು ನಿರಾಕರಿಸಿದ್ದಾರೆ ಎಂಬ ವರದಿಗಳಿವೆ.

ಗಮನಾರ್ಹವಾಗಿ, ಮಲಯಾಳಂ ನಟಿ ಸಾಯಿ ಪಲ್ಲವಿ ಅವರು ಸೌಂದರ್ಯವರ್ಧಕ ಉತ್ಪನ್ನದ ಜಾಹೀರಾತಿಗೆ ಬ್ರ್ಯಾಂಡ್ ಅಂಬಾಸಿಡರ್ ಆಗುವ ಪ್ರಸ್ತಾವವನ್ನು ತಿರಸ್ಕರಿಸಿದ್ದರು. ಮೂಲ ವೃತ್ತಿಯಲ್ಲಿ ವೈದ್ಯೆಯೂ ಆಗಿರುವ ಸಾಯಿ ಪಲ್ಲವಿ, ತಾವು ಅಭಿನಯಿಸುವ ಸಿನಿಮಾಗಳಲ್ಲಿಯೂ ಹೆಚ್ಚಿನ ಮೇಕಪ್ ಮಾಡಿಕೊಳ್ಳುವುದಿಲ್ಲ. ಯಾವುದೇ ಸೌಂದರ್ಯವರ್ಧಕವು ತಮ್ಮ ದೇಹದ ಬಣ್ಣ, ಹೊಳಪನ್ನು ಬದಲಿಸುವುದಿಲ್ಲ. ಬದಲಾಗಿ ಅವುಗಳಿಂದ ದೇಹಕ್ಕೆ ತೊಂದರೆ ಎಂದು ಅರಿತಿರುವ ಅವರು ಅಂತಹ ಜಾಹೀರಾತುಗಳಲ್ಲಿ ಅಭಿನಯಿಸಲು ತಿರಸ್ಕರಿಸಿದ್ದಾರೆ.

ಆದರೆ, ಬಹುಸಂಖ್ಯಾತ ಸೆಲೆಬ್ರಿಟಿಗಳು ಏನು ಮಾಡುತ್ತಿದ್ದಾರೆ? ಯಾವುದೇ ಯಶಸ್ವಿ ಬ್ರ್ಯಾಂಡ್-ಸೆಲೆಬ್ರಿಟಿ ಸಹಯೋಗದಲ್ಲಿ ವೈಯಕ್ತಿಕ ವಿಶ್ವಾಸಾರ್ಹತೆ ಮತ್ತು ಜವಾಬ್ದಾರಿ ನಿರ್ಣಾಯಕ. ಈ ವಿಶ್ವಾಸಾರ್ಹತೆ ಮತ್ತು ಜವಾಬ್ದಾರಿಯು ತಮ್ಮನ್ನು ಅನುಸರಿಸುವ ಅಭಿಮಾನಿಗಳ ವಿಚಾರದಲ್ಲಿ ಹೆಚ್ಚಿರಬೇಕು. ಆದರೆ, ಅವರಾರು ಈ ಬಗ್ಗೆ ಗಮನ ಹರಿಸುವುದಿಲ್ಲ. ಜವಾಬ್ದಾರಿ ನಿರ್ವಹಿಸುವುದಿಲ್ಲ.

ನಟ ಸುದೀಪ್ ಅವರು ‘ಎ23 ರಮ್ಮಿ’ ಜಾಹೀರಾತಿನಲ್ಲಿ ಅಭಿನಯಿಸಿದಾಗ, ನಾಗರಿಕ ಸಮಾಜವು ಭಾರೀ ವಿರೋಧ ವ್ಯಕ್ತಪಡಿಸಿತು. ತಮ್ಮ ಅಭಿಮಾನಿಗಳಿಗೆ ತಾವು ನೀಡುತ್ತಿರುವ ಸಂದೇಶವೇನು? ತಮ್ಮನ್ನು ಅನುಸರಿಸುವವರನ್ನು ತಾವು ಜೂಜಾಟಕ್ಕೆ ದೂಡುತ್ತಿದ್ದೀರಾ? ಜೂಜಿಗೆ ಪ್ರಚೋದನೆ ನೀಡುತ್ತಿದ್ದೀರಾ? ಎಂದು ಆಕ್ರೋಶ ವ್ಯಕ್ತವಾಯಿತು. ಪರಿಣಾಮ, ಸುದೀಪ್ ‘ರಮ್ಮಿ’ ಜಾಹೀರಾತಿನಿಂದ ಹೊರನಡೆದರು. ಇಂತಹ ಹಲವು ನಿದರ್ಶನಗಳೂ ನಮ್ಮ ಮುಂದಿವೆ.

ಭಾರತದ ಜಾಹೀರಾತು ಉದ್ಯಮವು ಪ್ರಚಂಡ ಬೆಳವಣಿಗೆ ಕಂಡಿದೆ. ಮ್ಯಾಗ್ನಾ ಗ್ಲೋಬಲ್ ಜಾಹೀರಾತು ವರದಿಯ ಪ್ರಕಾರ, ಜಾಹೀರಾತು ಉದ್ಯಮವು 2023ರಲ್ಲಿ 1.1 ಟ್ರಿಲಿಯನ್ ಇತ್ತು. ಇದು, 2024ರಲ್ಲಿ 1.2 ಟ್ರಿಲಿಯನ್‌ಗೆ ಏರಲಿದೆ ಎಂದು ಅಂದಾಜಿಸಲಾಗಿದೆ. ಈ ಉದ್ಯಮದಲ್ಲಿ 2-3% ಸೆಲೆಬ್ರಿಟಿಗಳು ತೊಡಗಿಸಿಕೊಂಡಿದ್ದಾರೆ.

ಆರೋಗ್ಯದ ಅಪಾಯಗಳ ಹೊರತಾಗಿಯೂ, ಪಾನ್ ಮಸಾಲಾ ಮಾರುಕಟ್ಟೆಯು ವಿಸ್ತರಿಸುವುದನ್ನು ಮುಂದುವರೆಸಿದೆ. ಇದು ಜಾಹೀರಾತು ಉದ್ಯಮಕ್ಕೆ 1,200 ಕೋಟಿಗೂ ಹೆಚ್ಚು ಕೊಡುಗೆ ನೀಡುತ್ತದೆ. ಪಿಚ್ ಮ್ಯಾಡಿಸನ್ ಜಾಹೀರಾತು ವರದಿ ಪ್ರಕಾರ, 2024ರ ಟಿವಿ ಜಾಹೀರಾತುಗಳಲ್ಲಿ ಪಾನ್-ಮಸಾಲಾ ಬ್ರ್ಯಾಂಡ್‌ಗಳು ಹೆಚ್ಚಿನ ಹಣ ಹೂಡಿಕೆ ಮಾಡಿವೆ. ‘ವಿಮಲ್ ಎಲೈಚಿ’ ಪಾನ್-ಮಸಾಲಾ ಜಾಹೀರಾತು ಉದ್ಯಮದಲ್ಲಿ 35% ಪಾಲನ್ನು ಹೊಂದಿದೆ.

ಈ ಪಾನ್ ಮಸಾಲಾ ಜಾಹೀರಾತು ಬಹುತೇಕ ಎಲ್ಲ ಐಪಿಎಲ್ ಮತ್ತು ಟಿ20 ವಿಶ್ವಕಪ್‌ನಂತಹ ಪ್ರಮುಖ ಸಂದರ್ಭಗಳಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ಅಮಿತಾಭ್ ಬಚ್ಚನ್, ಶಾರುಖ್ ಖಾನ್, ಅಕ್ಷಯ್ ಕುಮಾರ್, ಅಜಯ್ ದೇವಗನ್, ರಣವೀರ್ ಸಿಂಗ್, ಹೃತಿಕ್ ರೋಷನ್, ಸೈಫ್ ಅಲಿ ಖಾನ್ ಮತ್ತು ಅನುಷ್ಕಾ ಶರ್ಮಾ ಅವರಂತಹ ಹೈ-ಪ್ರೊಫೈಲ್ ನಟ-ನಟಿಯರು ಹಾಗೂ ಕಪಿಲ್ ದೇವ್, ಸುನಿಲ್ ಗವಾಸ್ಕರ್, ಕ್ರಿಸ್ ಗೇಲ್ ಮತ್ತು ವೀರೇಂದ್ರ ಸೆಹ್ವಾಗ್ ಮುಂತಾದ ಕ್ರೀಡಾಪಟುಗಳು ಪಾನ್ ಮಸಾಲಾ ಬ್ರ್ಯಾಂಡ್‌ಗಳ ರಾಯಭಾರಿಗಳಾಗಿ ಕಾಣಿಸಿಕೊಂಡಿದ್ದಾರೆ.

ಆದಾಗ್ಯೂ, 2021 ರಲ್ಲಿ, ಅಮಿತಾಭ್ ಬಚ್ಚನ್ ಮತ್ತು ರಣವೀರ್ ಸಿಂಗ್ ಪಾನ್ ಮಸಾಲಾ ಬ್ರ್ಯಾಂಡ್‌ನ ರಾಯಭಾರಿಯಾಗಿ ಕಾಣಿಸಿಕೊಂಡಿದ್ದರು. ಬಳಿಕ, ಅಕ್ಷಯ್ ಕುಮಾರ್ ಇದೇ ಜಾಹೀರಾತಿನಲ್ಲಿ ಕಾಣಿಸಿಕೊಂಡರು. ಆದರೆ, ಅವರು ಸಾರ್ವಜನಿಕ ಆಕ್ರೋಶವನ್ನು ಎದುರಿಸಿದರು. ಬಳಿಕ, ಪಾನ್ ಮಸಾಲಾ ಬ್ರ್ಯಾಂಡ್ ಅನ್ನು ಪ್ರಚಾರ ಮಾಡಿದ್ದಕ್ಕಾಗಿ ಕ್ಷಮೆ ಕೇಳಿ, ಜಾಹೀರಾತಿನಿಂದ ಹೊರನಡೆದರು.

ಇಂತಹ ಆಕ್ರೋಶ, ವಿರೋಧಗಳ ಹೊರತಾಗಿಯೂ ಇಂದಿಗೂ ಹಲವು ಸಿನಿಮಾ ಮತ್ತು ಕ್ರೀಡಾ ಸ್ಟಾರ್‍‌ಗಳು ಜನರನ್ನು ಹಾದಿ ತಪ್ಪಿಸುವ, ಪ್ರಚೋದಿಸುವ ಉತ್ಪನ್ನಗಳಿಗೆ ಜಾಹೀರಾತು ರಾಯಭಾರಿಗಳಾಗಿದ್ದಾರೆ. ತಂಬಾಕು, ಸಿಗರೇಟ್, ಗುಟ್ಕಾ ಮತ್ತು ಆಲ್ಕೋಹಾಲ್ ಅನ್ನು ಪಾನ್ ಮಸಾಲಾ, ಏಲಕ್ಕಿ, ಕ್ಲಬ್ ಸೋಡಾ ಅಥವಾ ಮಿನರಲ್ ವಾಟರ್‍‌ನಂತಹ ನಿರುಪದ್ರವಿ ಉತ್ಪನ್ನಗಳ ಸೋಗಿನಲ್ಲಿ ಹೆಚ್ಚಾಗಿ ಮಾರಾಟ ಮಾಡಲಾಗುತ್ತಿದೆ. ಇವುಗಳಲ್ಲಿ ಈ ಸ್ಟಾರ್‍‌ಗಳೇ ಅಂಬಾಸಿಡರ್‍‌ಗಳು.

“ಗ್ರಾಹಕರ ಆರೋಗ್ಯಕ್ಕೆ ಹಾನಿಯುಂಟುಮಾಡುವ ಬ್ರ್ಯಾಂಡ್ ಅನ್ನು ಸೆಲೆಬ್ರಿಟಿಗಳು ಪ್ರಚಾರ ಮಾಡಿದಾಗ, ಅವರು ಪರೋಕ್ಷವಾಗಿ ತಮ್ಮ ಅಭಿಮಾನಿಗಳನ್ನು ಉತ್ಪನ್ನದತ್ತ ಸೆಳೆಯುತ್ತಿರುತ್ತಾರೆ. ಆದ್ದರಿಂದ, ಅವರು ತಾವು ಪ್ರತಿನಿಧಿಸವು ಬ್ರ್ಯಾಂಡ್‌ಗಳು ತಮ್ಮ ಅಭಿಮಾನಿಗಳ ಬದುಕಿನ ಮೇಲೆ ಪರಿಣಾಮ ಅಥವಾ ಹಾನಿಯುಂಟು ಮಾಡುತ್ತವೆ ಎಂಬುದನ್ನು ಖಚಿತಪಡಿಸಿಕೊಳ್ಳುವುದು ಬಹಳ ಮುಖ್ಯ” ಎಂದಿದ್ದಾರೆ ವ್ಯಾಪಾರ ಮತ್ತು ಬ್ರ್ಯಾಂಡ್ ತಂತ್ರಜ್ಞ ಹರೀಶ್ ಬಿಜೂರ್.

ಮುಖ್ಯವಾಗಿ, ಅಡ್ವರ್ಟೈಸಿಂಗ್ ಸ್ಟ್ಯಾಂಡರ್ಡ್ಸ್ ಕೌನ್ಸಿಲ್ ಆಫ್ ಇಂಡಿಯಾ (ASCI) ಸೆಲೆಬ್ರಿಟಿಗಳಿಗೆ ಜಾಹೀರಾತು ಮಾರ್ಗಸೂಚಿಗಳನ್ನು ಜಾರಿಗೊಳಿಸಿದೆ. ಸೆಲೆಬ್ರಿಟಿಗಳು ತಪ್ಪುದಾರಿಗೆಳೆಯುವ ಪ್ರತಿಪಾದನೆಯುಳ್ಳ ಅಥವಾ ಆರೋಗ್ಯಕ್ಕೆ ಮಾರಕವಾದ ಉತ್ಪನ್ನಗಳನ್ನು ಪ್ರಚಾರ ಮಾಡುವ ಜಾಹೀರಾತುಗಳಲ್ಲಿ ಭಾಗವಹಿಸಬಾರದು ಎಂದು ಮಾರ್ಗಸೂಚಿ ಹೇಳಿದೆ. ಮಾತ್ರವಲ್ಲ, ಗ್ರಾಹಕ ಸಂರಕ್ಷಣಾ ಕಾಯ್ದೆಯು ಗ್ರಾಹಕರನ್ನು ದಾರಿತಪ್ಪಿಸುವ ಜಾಹೀರಾತುಗಳಲ್ಲಿ ತೊಡಗಿರುವ ಸೆಲೆಬ್ರಿಟಿಗಳಿಗೆ ದಂಡವನ್ನೂ ವಿಧಿಸುತ್ತದೆ.

ಇಂತಹ ಸಮಯದಲ್ಲಿ ಕ್ರೀಡಾ ಮತ್ತು ಸಿನಿಮಾ ಸ್ಟಾರ್‍‌ಗಳು ತಾವು ನೀಡುತ್ತಿರುವ ಜಾಹೀರಾತುಗಳು ಏನು ಹೇಳುತ್ತಿವೆ. ಉತ್ಪನ್ನ ಯಾವುದು, ಅದರಿಂದಾಗುವ ಪರಿಣಾಮಗಳೇನು ಎಂಬುದನ್ನು ಅರಿತುಕೊಳ್ಳಬೇಕು. ಜೊತೆಗೆ, ಅಭಿಮಾನಿಗಳಿಗೆ ಮದ್ಯ ಸೇವನೆಯನ್ನು ತೋರಿಸಬಾರದೆಂಬ ರಾಜ್ ಅವರ ನಿಲುವು, ಕೋಟಿ ಕೊಟ್ಟರೂ ಪಾನ್ ಮಸಾಲಾ ಪ್ರಚಾರ ಮಾಡಲ್ಲವೆಂಬ ಅನಿಲ್ ಕಪೂರ್ ಅವರ ಬದ್ಧತೆ, ಸೌಂದರ್ಯವರ್ಧಕಗಳು ಹೆಣ್ಣುಮಕ್ಕಳ ಆರೋಗ್ಯಕ್ಕೆ ಒಳ್ಳೆಯದಲ್ಲವೆಂದು ಜಾಹೀರಾತು ನಿರಾಕರಿಸಿದ ಸಾಯಿ ಪಲ್ಲವಿಯ ಕಾಳಜಿ– ಈ ಎಲ್ಲ ಸೆಲೆಬ್ರಿಟಿಗಳಿಗೆ ಮಾದರಿಯಾಗಬೇಕು.

ಈದಿನ
ಈ ದಿನ ಸಂಪಾದಕೀಯ
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ| ಅಸ್ಪೃಶ್ಯತೆಯ ಆಚರಣೆ ದೇಶದ್ರೋಹ ಎನಿಸಿಕೊಳ್ಳುವುದು ಯಾವಾಗ?

ಆತ್ಮಸಾಕ್ಷಿ ಜೀವಂತ ಇದ್ದಿದ್ದರೆ ಇವರು ದಲಿತರಿಗೆ ಹೇಲು ತಿನ್ನಿಸುತ್ತಿರಲಿಲ್ಲ, ಅವರ ಹೆಣ್ಣುಮಕ್ಕಳ...

ಈ ದಿನ ಸಂಪಾದಕೀಯ | ಸಂಪುಟದಿಂದ ರಾಜಣ್ಣ ವಜಾ- ಕಾಂಗ್ರೆಸ್ಸಿಗರಿಗೆ ಪಾಠವಾಗುವುದೇ?

ಇನ್ನು ಮುಂದಾದರೂ ಕಾಂಗ್ರೆಸ್ಸಿಗರು, ಬಿಜೆಪಿಯ ಷಡ್ಯಂತ್ರಕ್ಕೆ ಮತ್ತು ಮಡಿಲ ಮಾಧ್ಯಮಗಳ ಕುಯುಕ್ತಿಗೆ...

ಈ ದಿನ ಸಂಪಾದಕೀಯ | ಧರ್ಮಸ್ಥಳ ಕೇಸ್‌ನಲ್ಲಿ ಮುಸ್ಲಿಂ, ಕಮ್ಯುನಿಸ್ಟರ ಹೆಸರು ತಂದು ದಿಕ್ಕು ತಪ್ಪಿಸುವುದು ಅಕ್ಷಮ್ಯ

ಒಂದು ಕಡೆ ಹಿಂದುತ್ವ ಸಂಘಟನೆಗಳು ಹೋರಾಡುತ್ತಿದ್ದರೆ, ಮತ್ತೊಂದೆಡೆ ಎಡಪಂಥೀಯ ಸಂಘಟನೆಗಳೂ ಧರ್ಮಸ್ಥಳ...

ಈ ದಿನ ಸಂಪಾದಕೀಯ | ಬಿಜೆಪಿ ಅಧ್ಯಕ್ಷರ ನೇಮಕದಲ್ಲಿ ಬಗೆಹರಿಯುವುದೇ ಮೋದಿ-ಆರ್‌ಎಸ್‌ಎಸ್‌ ಕಗ್ಗಂಟು?

ಆರ್‌ಎಸ್‌ಎಸ್‌ ಮತ್ತು ಬಿಜೆಪಿ ನಡುವಿನ ಭಿನ್ನಾಭಿಪ್ರಾಯಗಳು ಯಾವ ರೀತಿಯಲ್ಲಿವೆ ಎಂದರೆ, ನಡ್ಡಾ...

Download Eedina App Android / iOS

X