ಮಲೆನಾಡ ಜನರಿಗೆ ಅದೊಂದು ಹೆಸರು ಸಹಕಾರ ಸಾರಿಗೆ ಬಸ್ ಮರೆಯಲಾಗದ ಹೆಸರೆಂದರೆ ತಪ್ಪಾಗಲಾರದು. ಹೌದು ಪ್ರತಿನಿತ್ಯ ಮಲೆನಾಡಿನ ಬಹುತೇಕ ಹಳ್ಳಿಗಳಲ್ಲಿಯೂ ಓಡಾಟ ನಡೆಸಲು ಇದ್ದಂತಹ ಬಸ್ ಸಹಕಾರ ಸಾರಿಗೆ. ಈ ಹೆಸರಿಗೆ ಒಂದು ಗತ್ತು ಗಮ್ಮತ್ತು ಇತ್ತು. ಇದು ಓಡಾಟ ನಡೆಸುತ್ತಿದ್ದ ಸಂದರ್ಭದಲ್ಲಿ ಇತರ ಬಸ್‌ಗಳ ಅವಶ್ಯಕತೆಯೇ ಬೇಡ ಎನ್ನುವಷ್ಟರ ಮಟ್ಟಿಗೆ ಜನರು ಇದನ್ನು ನಂಬಿಕೊಂಡಿದ್ದರು.
ಚಿಕ್ಕಮಗಳೂರು ಜಿಲ್ಲೆಯ ಕೊಪ್ಪದ ಟಿಸಿಎಸ್ ಎಂಬ ಸಂಸ್ಥೆಯ ಸಹಕಾರ ಸಾರಿಗೆ ಬಸ್, ಕೊಪ್ಪ, ಶೃಂಗೇರಿ, ಎನ್ ಆರ್ ಪುರ, ತೀರ್ಥಹಳ್ಳಿ, ಶಿವಮೊಗ್ಗ, ರಿಪ್ಪನ್ ಪೇಟೆ ಹೀಗೆ ಎಲ್ಲೆಡೆ ಸಂಚಾರ ಮಾಡುತ್ತಿದ್ದ ಸಾರಿಗೆ ಸಂಸ್ಥೆ ಹಲವಾರು ತೊಂದರೆಗಳಿಗೆ ಒಳಗಾಗಿ ಬಾಗಿಲು ಮುಚ್ಚುವ ಪರಿಸ್ಥಿತಿಗೆ ಬಂತು. ನಂತರ ಸಹಕಾರ ಸಾರಿಗೆಯ ಓಡಾಟ ನಿಲ್ಲಿಸಲಾಯಿತು. ಎಷ್ಟೋ ಜನರಿಗೆ ಓಡಾಟಕ್ಕೆ ಅನುಕೂಲವಾಗಿದ್ದ ಬಸ್ ಏಕಾಏಕಿ ಸ್ಥಗಿತವಾಯಿತು.
ಸಾರ್ವಜನಿಕರಿಗೆ, ಶಾಲೆ ಕಾಲೇಜು ವಿದ್ಯಾರ್ಥಿಗಳಿಗೆ ಇದೊಂದು ಬಸ್ ಎನ್ನುವಂತಾಗಿರದೆ ತಮ್ಮದೇ ವಾಹನ ಎಂಬಂತೆ ಓಡಾಟ ನಡೆಸುತ್ತಿದ್ದರು. ಶಾಲೆ ಕಾಲೇಜು ವಿದ್ಯಾರ್ಥಿಗಳಿಗಾಗಿ ಬಸ್ ಪಾಸ್ ವಿತರಣೆ ಮಾಡಿದ ಮೊದಲ ಖಾಸಗಿ ಬಸ್ ಸಂಸ್ಥೆ ಸಹಕಾರ ಸಾರಿಗೆಗೆ ಸಲ್ಲುತ್ತದೆ. ಬಸ್ ಮಾತ್ರವಲ್ಲದೆ ಅದರಲ್ಲಿದ್ದ ಚಾಲಕರು, ನಿರ್ವಾಹಕರೂ ಕೂಡಾ ಜನರ ಜತೆಗೆ ಉತ್ತಮ ಬಾಂಧವ್ಯ ಹೊಂದಿದ್ದ ಕಾರಣದಿಂದ ಅತ್ಯಂತ ಜನಪ್ರಿಯತೆ ಪಡೆದಿತ್ತು.
ಈಗ ಹಲವು ವರ್ಷಗಳ ನಂತರ ಮತ್ತೊಮ್ಮೆ ಸಹಕಾರ ಸಾರಿಗೆ ಬಸ್ ರಸ್ತೆಗೆ ಇಳಿದಿದೆ. ರಸ್ತೆಯಲ್ಲಿ ಓಡಾಟ ನಡೆಸುತ್ತಿರುವ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಹಲವು ವರ್ಷಗಳ ನಂತರವೂ ರಸ್ತೆಯಲ್ಲಿ ಈ ಬಸ್ ಓಡಾಟ ಆರಂಭಿಸಿದ್ದರೂ ಗಜ ಗಾಂಭೀರ್ಯ ನಡೆಯೆಂದರೆ ತಪ್ಪಾಗಲಾರದು. ಒಟ್ಟಿನಲ್ಲಿ ಹಲವು ವರ್ಷಗಳ ನಂತರ ಸಹಕಾರ ಸಾರಿಗೆ ತನ್ನ ಪುನರ್ಜನ್ಮ ಪಡೆದಿದೆ.
ಈ ಸುದ್ದಿ ಓದಿದ್ದೀರಾ? ತುಮಕೂರು | ಕೋಡಿ ನೀರಿನಲ್ಲಿ ಕೊಚ್ಚಿ ಹೋಗಿದ್ದ ಯುವತಿ 12 ಗಂಟೆಯ ಬಳಿಕ ಜೀವಂತವಾಗಿ ಪತ್ತೆ!
ಸಹಕಾರ ಸಾರಿಗೆ ಇನ್ನುಮುಂದೆ ಶಿವಮೊಗ್ಗದಲ್ಲಿ ಹಾಗೂ ಚಿತ್ರದುರ್ಗದಲ್ಲಿ ತನ್ನ ಗಾಂಭೀರ್ಯ ನಡೆಯನ್ನು ಮುಂದುವರೆಸಲಿದೆ. ಸಹಕಾರ ಸಾರಿಗೆ ಎಂಬ ಹೆಸರಿನಲ್ಲಿಯೇ ಮುಂದುವರೆಸುವಂತೆ ಮಲೆನಾಡ ಜನರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.
ಸುಳ್ಳು ಸುದ್ದಿ … ಯಾವುದೇ ಬಸ್ ಓಡಾಟ ನೆಡೆಸುತಿಲ್ಲ ಅದು ಬೇರೆ ಪ್ರೈವೇಟ್ ಕಂಪನಿ ಯವರು ಕೆಲವೊಂದು ಬಸ್ ಗಳನ್ನು ತಗೊಂಡಿದಾರೆ ಅಷ್ಟೇ…..