ರಾಜ್ಯ ಮುಖ್ಯಮಂತ್ರಿ ಯಾರು? ಎಂಬ ವಿಚಾರ ಜಟಿಲವಾಗಿದೆ. ಭಾನುವಾರ ಕಾಂಗ್ರೆಸ್ ಶಾಸಕರ ಸಭೆ ನಡೆದಿದ್ದು, ಎಲ್ಲರೂ ಮುಂದಿನ ಮುಖ್ಯಮಂತ್ರಿ ಯಾರಾಗಬೇಕು ಎಂಬುದಕ್ಕೆ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಆದರೂ, ಮುಖ್ಯಮಂತ್ರಿ ಯಾರು ಎಂಬ ನಿರ್ಣಯವನ್ನು ಹೈಕಮಾಂಡ್‌ಗೆ ಬಿಟ್ಟಿದ್ದಾರೆ.
ಕಾಂಗ್ರೆಸ್ ಹೈಕಮಾಂಡ್ ದೆಹಲಿಗೆ ಬರುವಂತೆ ಸಿದ್ದರಾಮಯ್ಯ ಮತ್ತು ಡಿ.ಕೆ ಶಿವಕುಮಾರ್‌ಗೆ ಸೋಮವಾರ ಬುಲಾವ್ ಹೊರಡಿಸಿತ್ತು. ಸಿದ್ದರಾಮಯ್ಯ ನಿನ್ನೆ ಮಧ್ಯಾಹ್ನವೇ ದೆಹಲಿಗೆ ತೆರಳಿದ್ದಾರೆ. ಅನಾರೋಗ್ಯದ ನೆಪ ಹೇಳಿದ ಡಿ.ಕೆ ಶಿವಕುಮಾರ್ ತಮ್ಮ ದೆಹಲಿ ಪ್ರವಾಸವನ್ನು ರದ್ದು ಮಾಡಿದ್ದರು. ಅವರು ಇಂದು (ಮಂಗಳವಾರ) ದೆಹಲಿಯತ್ತ ಪ್ರಯಾಣ ಬೆಳೆಸಲಿದ್ದಾರೆ.
ಇದೇ ವೇಳೆ, ಸೋಮವಾರ ಸೋನಿಯಾ ಗಾಂಧಿ ಅವರೂ ಕೂಡ ದೆಹಲಿಯಲ್ಲಿರಲಿಲ್ಲ. ಅವರು ಶಿಮ್ಲಾಗೆ ತೆರಳಿದ್ದರು. ಇಂದು ಅವರೂ ಕೂಡ ದೆಹಲಿಗೆ ಮರಳಲಿದ್ದಾರೆ. ಅವರನ್ನು ಭೇಟಿ ಮಾಡುವ ಉದ್ದೇಶದಿಂದ ಸೋಮವಾರದ ದೆಹಲಿ ಪ್ರಯಾಣವನ್ನು ರದ್ದುಗೊಳಿಸಿದ್ದಾಗಿಯೂ ಶಿವಕುಮಾರ್ ಹೇಳಿಕೊಂಡಿದ್ದಾರೆ.
“ಹೆಚ್ಚು ಶಾಸಕರು ಯಾರಿಗೆ ಬೆಂಬಲ ನೀಡುತ್ತಾರೆ ಎಂಬುದು ಮುಖ್ಯವಲ್ಲ. ನಾನು ಪಕ್ಷದ ಅಧ್ಯಕ್ಷ. ನನ್ನ ಅಧ್ಯಕ್ಷತೆಯಲ್ಲಿ 135 ಶಾಸಕರು ಆಯ್ಕೆಯಾಗಿದ್ದಾರೆ. ಮುಖ್ಯಮಂತ್ರಿ ನಿರ್ಧಾರದ ವಿಚಾರ ಪಕ್ಷದ ವರಿಷ್ಠರಿಗೆ ಬಿಟ್ಟಿದ್ದೇವೆ” ಎಂದು ಡಿ.ಕೆ ಶಿವಕುಮಾರ್ ಹೇಳಿದ್ದಾರೆ.
ಈ ಸುದ್ದಿ ಓದಿದ್ದೀರಾ?: ಕಾಂಗ್ರೆಸ್ ಗೆಲುವಿನಲ್ಲಿದೆ ಮಲ್ಲಿಕಾರ್ಜುನ ಖರ್ಗೆ ಅಪ್ರತಿಮ ಪಾತ್ರ
ಶಿವಕುಮಾರ್ ದೆಹಲಿ ಪ್ರಯಾಣವನ್ನು ನಿನ್ನೆ ರದ್ದುಗೊಳಿಸಿದ್ದರೂ, ಅವರ ಸಹೋದರ ಡಿ.ಕೆ ಸುರೇಶ್ ಅವರು ದೆಹಲಿಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡಿ, ಚರ್ಚಿಸಿದ್ದಾರೆ.
ಸಿದ್ದರಾಮಯ್ಯ ಅವರು ದೆಹಲಿಯಲ್ಲಿಯೇ ಉಳಿದಿದ್ದಾರೆ. ಶಿವಕುಮಾರ್ ಇಂದು ದೆಹಲಿಗೆ ತೆರಳಲಿದ್ದಾರೆ. ಆ ವೇಳೆಗೆ ಸೋನಿಯಾ ಗಾಂಧಿ ಅವರೂ ದೆಹಲಿಗೆ ಮರಳಲಿದ್ದು, ಖರ್ಗೆ ಮತ್ತು ಸೋನಿಯಾ ನೇತೃತ್ವದಲ್ಲಿ ಈ ಇಬ್ಬರು ನಾಯಕರೊಂದಿಗೆ ಚರ್ಚೆ ನಡೆಸಿದ ಬಳಿಕ, ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಯಾರು ಎಂದು ಘೋಷಿಸುವ ಸಾಧ್ಯತೆಗಳಿವೆ.