ಸರ್ಕಾರಿ ಗೋಮಾಳದಲ್ಲಿ ದಲಿತ ಕುಟುಂಬ ನಿರ್ಮಿಸಿದ್ದ ಜಾನುವಾರು ಶೆಡ್ಗೆ ದುಷ್ಕರ್ಮಿಗಳು ರಾತ್ರೋರಾತ್ರಿ ಬೆಂಕಿ ಹಚ್ಚಿರುವ ಘಟನೆ ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನಲ್ಲಿ ನಡೆದಿದೆ.
ರಾಯಬಾಗ ತಾಲೂಕಿನ ಮುಗಳಖೋಡ ಪಟ್ಟಣದಲ್ಲಿ ಈ ಘಟನೆ ನಡೆದಿದ್ದು, ಸರ್ಕಾರಿ ಗೋಮಾಳದಲ್ಲಿ ದಲಿತ ಕುಟುಂಬವು ಶೆಡ್ ನಿರ್ಮಿಸಿಕೊಂಡಿತ್ತು. ಈ ಶೆಡ್ಗೆ ರಾತ್ರೋರಾತ್ರಿ ನುಗ್ಗಿದ ದುಷ್ಕರ್ಮಿಗಳು ಬೆಂಕಿ ಹಚ್ಚಿ, ಪರಾರಿಯಾಗಿರುವುದಾಗಿ ವರದಿಯಾಗಿದೆ.
ಬೆಂಕಿ ಹಚ್ಚಿದ ಕೂಡಲೇ ಬೆಂಕಿಯನ್ನು ನಂದಿಸಲು ಅಗ್ನಿಶಾಮಕ ದಳಕ್ಕೆ ಸ್ಥಳೀಯರು ಕರೆ ಮಾಡಿದ್ದರಿಂದ ಸ್ಥಳಕ್ಕೆ ಆಗಮಿಸಿದ ಅಧಿಕಾರಿಗಳು, ಬೆಂಕಿ ನಂದಿಸುವಲ್ಲಿ ಯಶಸ್ವಿಯಾದರು.

ಈ ಕುರಿತು ಈ ದಿನ.ಕಾಮ್ ಜೊತೆ ಮಾತನಾಡಿದ ಸಂತ್ರಸ್ತ ದಲಿತ ಕುಟುಂಬದ ಸದಸ್ಯ ಅನಿಲ್, “ಭಾನುವಾರ ರಾತ್ರಿ ಮಲಗಿದ್ದ ವೇಳೆ ಶೆಡ್ಗೆ ದುಷ್ಕರ್ಮಿಗಳು ಬೆಂಕಿ ಹಚ್ಚಿದ್ದಾರೆ. ಬಳಿಕ ಕಲ್ಲು ತೂರಾಟ ನಡೆಸಿ, ಪರಾರಿಯಾಗಿದ್ದಾರೆ. ಇದರ ಹಿಂದೆ ಜೈನ ಸಮುದಾಯದ ವ್ಯಕ್ತಿಯೋರ್ವನ ಕೈವಾಡವಿದೆ” ಎಂದು ಆರೋಪಿಸಿದ್ದಾರೆ.
ಇದನ್ನು ಓದಿದ್ದೀರಾ? ಕಲಬುರಗಿ | ಅ.29,30: ಕಲ್ಯಾಣ ಕರ್ನಾಟಕದ ಬಯಲಾಟ ಪರಂಪರೆ ಕುರಿತು ವಿಚಾರ ಸಂಕಿರಣ; ಬಯಲಾಟ ಪ್ರದರ್ಶನ
“ಈ ಜಾಗವು ನಮ್ಮ ಹೆಸರಿನಲ್ಲಿದೆ. ಆದರೆ ಗ್ರಾಮ ಪಂಚಾಯಿತಿಯವರು ನಮ್ಮ ಹೆಸರಿನಲ್ಲಿ ಉತಾರ ಕೊಟ್ಟಿರುವುದಿಲ್ಲ. 2017ರಲ್ಲಿ ಇದೇ ರೀತಿಯಾಗಿ ಗಲಾಟೆ ಮಾಡಿದ್ದರು. ಆ ಸಂದರ್ಭದಲ್ಲಿ ಪೊಲೀಸರಿಗೆ ದೂರು ನೀಡಿದ್ದೆವು. ಮತ್ತೆ ಹೀಗೆ ಮಾಡಿದ್ದಾರೆ. ಇದಕ್ಕೆ ಕಾರಣ ಜೈನ ಸಮುದಾಯದ ವ್ಯಕ್ತಿಯಾಗಿದ್ದು, ಅವನ ವಿರುದ್ಧ ಮತ್ತೊಮ್ಮೆ ಪೊಲೀಸರಿಗೆ ದೂರು ಕೊಡುತ್ತೇವೆ” ಎಂದು ಹೇಳಿದ್ದಾರೆ.
