ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಇಂದು(ಅ.28) ನಡೆದ ಸಚಿವ ಸಂಪುಟ ಸಭೆಯಲ್ಲಿ ಒಳ ಮೀಸಲಾತಿ ಜಾರಿಗೊಳಿಸುವ ಮಹತ್ವದ ನಿರ್ಧಾರವನ್ನು ಕೈಗೊಳ್ಳಲಾಗಿದೆ. ಇದಕ್ಕಾಗಿ ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಅವರ ನೇತೃತ್ವದಲ್ಲಿ ಸಮಿತಿ ರಚಿಸಲು ತೀರ್ಮಾನಿಸಲಾಗಿದೆ. ಈ ಸಮಿತಿಯು 3 ತಿಂಗಳಲ್ಲಿ ವರದಿ ನೀಡಲಿದೆ. ವರದಿ ಬರುವವರಿಗೆ ಯಾವುದೇ ಹುದ್ದೆ ನೇಮಕಾತಿ ಮಾಡುವುದಿಲ್ಲ ಎಂದು ಸರ್ಕಾರ ಸ್ಪಷ್ಟಪಡಿಸಿದೆ.
ಕರ್ನಾಟಕದಲ್ಲಿ ಒಳ ಮೀಸಲಾತಿ ಜಾರಿ ವಿಚಾರ ಸಾಕಷ್ಟು ಕಾಲದಿಂದ ಕುತೂಹಲ ಕೆರಳಿಸಿತ್ತು. ಚಿತ್ರದುರ್ಗದಲ್ಲಿ 2023ರ ವಿಧಾನಸಭೆ ಚುನಾವಣೆಗೂ ಮುನ್ನ ನಡೆದಿದ್ದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಸಮಾವೇಶದಲ್ಲಿ ಏನು ನಿರ್ಣಯ ಕೈಗೊಳ್ಳಲಾಗಿತ್ತು, ಆ ನಿರ್ಣಯದಂತೆ ಸಚಿವ ಸಂಪುಟ ತೀರ್ಮಾನ ಮಾಡಿದೆ. ಸಂಪುಟ ಉಪ ಸಮಿತಿ ರಚಿಸಿ ಅದರ ಉಸ್ತುವಾರಿಯಲ್ಲಿ ಈ ಪ್ರಕ್ರಿಯೆ ಜಾರಿಯಾಗಬೇಕೆಂದು ಸಂಪುಟ ತೀರ್ಮಾನಿಸಿದೆ.
ಸಂಪುಟ ರಚಿಸುವ ಉಪ ಸಮಿತಿಯಲ್ಲಿ ಯಾರೆಲ್ಲ ಇರುತ್ತಾರೆ ಎಂಬುದು ತಿಳಿದುಬಂದಿಲ್ಲ. ಇದಲ್ಲದೆ ನಿವೃತ್ತ ಹೈಕೋರ್ಟ್ ನ್ಯಾಯಾಧೀಶರ ನೇತೃತ್ವದಲ್ಲಿ ಏಕವ್ಯಕ್ತಿಯ ಆಯೋಗವನ್ನು ರಚಿಸಿ 60 ರಿಂದ 90 ದಿನಗಳೊಳಗೆ ಒಳ ಮೀಸಲಾತಿಯ ನಿಯಮ, ರೂಪುರೇಷೆ, ಪ್ರಕ್ರಿಯೆಗಳನ್ನು ಜಾರಿಗೊಳಿಸಲು ತೀರ್ಮಾನಿಸಲಾಗಿದೆ. ಇಲ್ಲಿಯವರೆಗೂ ಸರ್ಕಾರದಿಂದ ಹೊರಡಿಸಲಾಗಿದ್ದ ಉದ್ಯೋಗ ಅಧಿಸೂಚನೆಯು ಯಥಾಪ್ರಕಾರ ಮುಂದುವರಿಯಲಿದೆ. ಇಂದಿನಿಂದ ಮುಂದಕ್ಕೆ ಒಳಮೀಸಲಾತಿ ಜಾರಿಯಾಗುವವರೆಗೆ ಯಾವುದೇ ಉದ್ಯೋಗ ಅಧಿಸೂಚನೆಯನ್ನು ಸರಕಾರದ ಕಡೆಯಿಂದ ಹೊರಡಿಸುವುದಿಲ್ಲ ಎಂದು ಸಂಪುಟ ತೀರ್ಮಾನಿಸಿದೆ.
60 ರಿಂದ 90 ದಿನಗಳಲ್ಲಿ ಗಣತಿಯನ್ನು ಕೈಗೊಳ್ಳಲಾಗುತ್ತಾ ಅಥವಾ ಈಗಿರುವ ದತ್ತಾಂಶಗಳನ್ನು ಆಧರಿಸಿ ಒಳ ಮೀಸಲಾತಿ ಜಾರಿಗೊಳಿಸಲಾಗುತ್ತದೆಯೇ ಎಂಬ ಬಗ್ಗೆ ಸರಿಯಾದ ಮಾಹಿತಿ ದೊರಕಿಲ್ಲ.
