“ಫಾಲ್ಸ್ಗೆ ಬಿದ್ದಾಗ ಬಂಡೆ ಮಧ್ಯೆ ಸಿಲುಕಿದೆ. ರಾತ್ರಿ ಇಡೀ ನೀರಲ್ಲೇ ಕೂತಿದ್ದೆ. ಕಲ್ಲಿನ ಪೊಟರೆಯಲ್ಲಿ ಸಿಲುಕಿ ಹಾಕಿಕೊಂಡು ಇಡೀ ರಾತ್ರಿ ದೇವರು ಹಾಗೂ ನನ್ನ ತಂದೆ-ತಾಯಿಯನ್ನು ನೆನಪಿಸಿಕೊಂಡು ಧೈರ್ಯವಾಗಿದ್ದೆ”…ಹೀಗಂತ ಹೇಳಿದ್ದು ತುಮಕೂರಿನಲ್ಲಿ ಪವಾಡ ರೀತಿಯಲ್ಲಿ ಬದುಕುಳಿದ ವಿದ್ಯಾರ್ಥಿನಿ ಹಂಸ.
ತುಮಕೂರು ತಾಲೂಕಿನ ಮೈದಾಳ ಕೆರೆ ಕೋಡಿ ನೀರಿನಲ್ಲಿ ಸೆಲ್ಫಿ ತೆಗೆದುಕೊಳ್ಳುವಾಗ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು ಕೊಚ್ಚಿ ಹೋಗಿದ್ದ ವಿದ್ಯಾರ್ಥಿನಿ ಹಂಸ, 12 ಗಂಟೆಗಳ ಬಳಿಕ ಜೀವಂತವಾಗಿ ಪತ್ತೆಯಾಗುವ ಮೂಲಕ ಸಾವನ್ನೇ ಗೆದ್ದು ಬಂದಿದ್ದಾರೆ.
ಕ್ಯಾತ್ಸಂದ್ರ ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿಯವರ 12 ಗಂಟೆಗಳ ಸತತ ಕಾರ್ಯಾಚರಣೆಯ ಬಳಿಕ ಕಲ್ಲಿನ ಪೊಟರೆಯೊಂದರಲ್ಲಿ ಹಂಸ ಪತ್ತೆಯಾಗಿದ್ದರು. ಸದ್ಯ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಈ ವೇಳೆ ಮಾಧ್ಯಮಗಳೊಂದಿಗೆ ತಾನು ಅನುಭವಿಸಿದ ಪರಿಸ್ಥಿತಿಯನ್ನು ವಿವರಿದ ಹಂಸ, “ಮೈದಾಳ ಕೆರೆ ಕೋಡಿ ಬಿದ್ದ ಸ್ಥಳದಲ್ಲಿ ನನ್ನ ಸ್ಕೂಲ್ ಫ್ರೆಂಡ್ ಕೀರ್ತನಾ ಜೊತೆಗೆ ಹೋಗಿದ್ದೆ. ಫೋಟೋ ತಗೋಬೇಕಾದರೆ ಅದೇನೋ ಗೊತ್ತಿಲ್ಲ. ಪಟ್ ಅಂತ ಸ್ಲಿಪ್ ಆಗಿ ಜಾರಿಬಿದ್ದೆ. ನನಗೆ ಈಜು ಬರಲ್ಲ. ನೀರಿನ ರಭಸಕ್ಕೆ ಜಾರಿ ಹೋಗ್ತಿರಬೇಕಾದರೆ ಜೀವ ಹೋಯ್ತು ಅಂದುಕೊಂಡೆ. ನನ್ನ ಅದೃಷ್ಟ ಚೆನ್ನಾಗಿತ್ತು. ಹಾಗಾಗಿ, ಬಂಡೆ ಮಧ್ಯೆ ಹೋಗಿ ನಿಂತುಬಿಟ್ಟಿದ್ದೆ” ಎಂದು ತಿಳಿಸಿದ್ದಾರೆ.
“ಮಂಡಿಯ ನೆರವಿನಲ್ಲೇ ರಾತ್ರಿ ಹೊತ್ತು ಬಂಡೆಯ ಮಧ್ಯೆ ಕಳೆದೆ. ಇಡೀ ರಾತ್ರಿ ದೇವರು ಹಾಗೂ ನನ್ನ ತಂದೆ-ತಾಯಿಯನ್ನು ನೆನಪಿಸಿಕೊಂಡು ಧೈರ್ಯವಾಗಿದ್ದೆ. ಭಯವಾಗಿರಲಿಲ್ಲ. ನೆರವಿಗಾಗಿ ತುಂಬಾ ಕೂಗಾಡಿದ್ದೆ. ಟಿವಿಗಳಲ್ಲಿ ಡ್ರೋನ್ ಬಳಸಿ, ರಕ್ಷಣಾ ಕಾರ್ಯಾಚರಣೆ ಮಾಡುವುದನ್ನು ನೋಡಿದ್ದೆ. ಅದೇ ರೀತಿ ಇಲ್ಲೂ ಬರಬಹುದು ಎಂದುಕೊಂಡಿದ್ದೆ. ಅದೇ ರೀತಿ ಇಲ್ಲೂ ಸಹ ಬೆಳಕು ಬಂತು. ಅವರು ಕೂಗಿದ್ದು ನನಗೆ ಕೇಳಿಸಿತು. ಅದಾದ ಬಳಿಕ ನಾನು ಸಹ ಕೂಗಿದೆ. ಬಳಿಕ ಕಾರ್ಯಾಚರಣೆ ನಡೆಸಿ ನನ್ನನ್ನು ಅಗ್ನಿಶಾಮಕ ದಳದ ಸಿಬ್ಬಂದಿ ರಕ್ಷಣೆ ಮಾಡಿದರು. ನನ್ನನ್ನು ರಕ್ಷಣೆ ಮಾಡಿದ ಹಾಗೂ ನನಗಾಗಿ ಪ್ರಾರ್ಥಿಸಿದ ಎಲ್ಲರಿಗೂ ಧನ್ಯವಾದ ಸಲ್ಲಿಸುತ್ತೇನೆ” ಎಂದು ಹಂಸ ತಿಳಿಸಿದರು.
“ಇನ್ನು ಮುಂದೆ ಯಾವುದೇ ಕಾರಣಕ್ಕೂ ಈ ರೀತಿಯ ಫೋಟೋ ಗೀಳಿಗೆ ಯಾರೂ ಸಹ ಮುಂದಾಗಬಾರದು. ಪ್ರವಾಸದ ಸ್ಥಳಗಳಲ್ಲಿ ಎಲ್ಲರೂ ಎಚ್ಚರಿಕೆ ವಹಿಸಬೇಕು” ಎಂದು ಮನವಿ ಮಾಡಿದರು.
ಇದನ್ನು ಓದಿದ್ದೀರಾ? ತುಮಕೂರು | ಕೋಡಿ ನೀರಿನಲ್ಲಿ ಕೊಚ್ಚಿ ಹೋಗಿದ್ದ ಯುವತಿ 12 ಗಂಟೆಯ ಬಳಿಕ ಜೀವಂತವಾಗಿ ಪತ್ತೆ!
ನಿನ್ನೆ ಸಂಜೆ ಕೋಡಿ ನೀರಿನಲ್ಲಿ ಕೊಚ್ಚಿ ಹೋಗಿದ್ದ ವಿದ್ಯಾರ್ಥಿನಿ ಹಂಸ ಇಡೀ ರಾತ್ರಿ ಕಲ್ಲಿನ ಪೊಟರೆಯಲ್ಲಿ ಕಾಲ ಕಳೆದಿದ್ದು, ಪವಾಡ ಎಂಬಂತೆ ಬದುಕುಳಿದು ಬಂದಿರುವುದು ಪೋಷಕರು ಹಾಗೂ ವಿದ್ಯಾರ್ಥಿಗಳ ಖುಷಿಗೆ ಪಾರವೇ ಇಲ್ಲದಂತಾಗಿದೆ. ವಿದ್ಯಾರ್ಥಿನಿ ಹಂಸ ತುಮಕೂರು ನಗರದ ಎಸ್‌ಐಟಿ ಕಾಲೇಜಿನಲ್ಲಿ ಎಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿದ್ದವರು.

ವಿದ್ಯಾರ್ಥಿನಿ ಹಂಸ ಜೀವಂತವಾಗಿರುವ ವಿಷಯ ತಿಳಿದ ಕೂಡಲೇ ಎಸ್‌ಐಟಿ ಕಾಲೇಜಿನ ಆಡಳಿತ ಮಂಡಳಿ, ಉಪನ್ಯಾಸಕರ ವೃಂದ ಹಾಗೂ ವಿದ್ಯಾರ್ಥಿಗಳು ನಿಟ್ಟುಸಿರು ಬಿಟ್ಟಿದ್ದಾರೆ. ವಿದ್ಯಾರ್ಥಿನಿ ಹಂಸರವರನ್ನು ಜಿಲ್ಲಾಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ದಾಖಲಿಸಿದ ಸುದ್ದಿ ತಿಳಿಯುತ್ತಿದ್ದಂತೆ ಎಸ್‌ಐಟಿ ಕಾಲೇಜಿನ ವಿದ್ಯಾರ್ಥಿಗಳು ತಮ್ಮ ಸ್ನೇಹಿತೆಯನ್ನು ನೋಡಲು ಆಸ್ಪತ್ರೆ ಮುಂಭಾಗ ಜಮಾಯಿಸಿದ್ದ ದೃಶ್ಯ ಕಂಡು ಬಂತು.
ಸಾರ್ವಜನಿಕರು ಜಾಗರೂಕತೆ ವಹಿಸಬೇಕು: ಎಸ್‌ಪಿ ಅಶೋಕ್ ಕೆ.ವಿ. ಮನವಿ
ಈ ಘಟನೆಯ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿರುವ ತುಮಕೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಶೋಕ್ ಕೆ.ವಿ., “ಸತತ 12 ಗಂಟೆಗಳ ಕಾಲ ಅಗ್ನಿಶಾಮಕ ದಳದ ಸಿಬ್ಬಂದಿ ರಕ್ಷಣಾ ಕಾರ್ಯಾಚರಣೆ ನಡೆಸುವ ಮೂಲಕ ವಿದ್ಯಾರ್ಥಿನಿಯನ್ನು ಜೀವಂತವಾಗಿ ರಕ್ಷಿಸಿದ್ದಾರೆ. ಅಗ್ನಿಶಾಮಕ ದಳದ ಅಧಿಕಾರಿಗಳು ಹಾಗೂ ಸಿಬ್ಬಂದಿಯ ಕಾರ್ಯವೈಖರಿ ಶ್ಲಾಘನೀಯ” ಎಂದು ತಿಳಿಸಿದ್ದಾರೆ.
“ಸತತ ಕಾರ್ಯಾಚರಣೆಯಿಂದ ಸಾವನ್ನೇ ಯುವತಿ ಗೆದ್ದು ಬಂದಿದ್ದಾರೆ. ಜಿಲ್ಲೆಯಲ್ಲಿ ಸಾವಿರಕ್ಕೂ ಹೆಚ್ಚಿನ ನೀರಿನ ತಾಣಗಳಿವೆ. ಪೊಲೀಸರಿಂದ ನಿಗಾ ಇಡಲಾಗಿದೆ. ಎಲ್ಲೆಡೆ ಪೊಲೀಸರ ನಿಯೋಜನೆ ಕಷ್ಟ. ಆದ್ದರಿಂದ ಸಾರ್ವಜನಿಕರು ಪ್ರವಾಸದ ಸ್ಥಳಗಳಲ್ಲಿ ಜಾಗರೂಕತೆ ವಹಿಸಬೇಕು ಎಂದು ಎಸ್‌ಪಿ ಅಶೋಕ್ ಕೆ.ವಿ. ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.

Ayyo a selfi hucchi hamsa na Alle bidbekittu Alle hamsa agi kere Alle meenu thinkond irolu , een selfi huccho ivukke