ಹೊನವಾಡದ 11 ಎಕರೆ‌ ಮಾತ್ರ ವಕ್ಫ್ ಆಸ್ತಿ, ರೈತರ ಜಮೀನು ಸುರಕ್ಷಿತ: ಮೂವರು ಸಚಿವರಿಂದ ಸ್ಪಷ್ಟನೆ

Date:

Advertisements

ವಿಜಯಪುರ ಜಿಲ್ಲೆಯ ತಿಕೋಟಾ ತಾಲೂಕಿನ ಹೊನವಾಡ ಗ್ರಾಮದಲ್ಲಿ ವಕ್ಫ್ ಆಸ್ತಿಯೆಂದು ಯಾವ ರೈತರಿಗೂ ನೋಟಿಸ್ ಕೊಟ್ಟಿಲ್ಲ. ಆದ್ದರಿಂದ ಯಾರೂ ಆತಂಕಕ್ಕೆ ಒಳಗಾಗಬೇಕಿಲ್ಲ. ಈ ವಿಚಾರದಲ್ಲಿ ಬಿಜೆಪಿ ಬೇಕೆಂದೇ ರಾಜಕೀಯ ಮಾಡಿ, ಇದನ್ನು ವಿವಾದ ಮಾಡುತ್ತಿದೆ ಎಂದು ಸರಕಾರದ ಪರವಾಗಿ ಮೂವರು ಸಚಿವರು ಸೋಮವಾರ ವಾಗ್ದಾಳಿ ನಡೆಸಿದ್ದಾರೆ.

ವಿಜಯಪುರ ಜಿಲ್ಲೆಯಲ್ಲಿ ಈ ಸಂಬಂಧ ಉಂಟಾಗಿರುವ ಗೊಂದಲಗಳನ್ನು ನಿವಾರಿಸುವ ಉದ್ದೇಶದಿಂದ ವಿಜಯಪುರ ಜಿಲ್ಲಾ ಉಸ್ತುವಾರಿ ಮತ್ತು ಬೃಹತ್ ಹಾಗೂ ಮಧ್ಯಮ ಕೈಗಾರಿಕಾ ಸಚಿವ ಎಂ ಬಿ ಪಾಟೀಲ, ಕಂದಾಯ ಸಚಿವ ಕೃಷ್ಣ ಬೈರೇಗೌಡ ಮತ್ತು ವಕ್ಫ್ ಸಚಿವ ಜಮೀರ್ ಅಹಮದ್ ಖಾನ್ ಅವರು ವಿಧಾನಸೌಧದಲ್ಲಿ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ಕೃಷ್ಣ ಬೈರೇಗೌಡ ಮಾತನಾಡಿ, “ವಿಜಯಪುರ ಜಿಲ್ಲೆಯಲ್ಲಿ ಒಂದು ಕಾಲಕ್ಕೆ 14,201.32 ಎಕರೆ ವಕ್ಫ್ ಮಂಡಳಿಯದಾಗಿತ್ತು. ಈ ಪೈಕಿ ಭೂ ಸುಧಾರಣಾ ಕಾಯ್ದೆಯಡಿ 11,835.29 ಎಕರೆ ಮತ್ತು ಇನಾಂ ರದ್ದತಿ ಕಾಯ್ದೆಯಡಿ 1,459.26 ಎಕರೆಯನ್ನು ರೈತರಿಗೆ ಮಂಜೂರು ಮಾಡಲಾಗಿದೆ. 137 ಎಕರೆಯನ್ನು ವಿವಿಧ ಯೋಜನೆಗಳಿಗೆ ಸ್ವಾಧೀನ ಪಡಿಸಿಕೊಳ್ಳಲಾಗಿದ್ದು, ಮಿಕ್ಕ 773 ಎಕರೆ ಮಾತ್ರ ವಕ್ಫ್ ಸಂಸ್ಥೆಗಳ ಅಡಿಯಲ್ಲಿದೆ. ತಿಕೋಟಾ ತಾಲ್ಲೂಕಿನ ಹೊನವಾಡ ಗ್ರಾಮದ ರೈತರಿಗೆ ವಕ್ಫ್ ಆಸ್ತಿಯೆಂದು ಯಾವುದೇ ನೋಟಿಸ್ ನೀಡಿಲ್ಲ. ಈ ಸಂಬಂಧ ಸಚಿವ ಎಂ ಬಿ ಪಾಟೀಲ ಅವರೂ ಈಗಾಗಲೇ ಸ್ಪಷ್ಟಪಡಿಸಿದ್ದಾರೆ” ಎಂದರು.

Advertisements

“1974ರ ಗೆಜೆಟ್ ಅಧಿಸೂಚನೆಯಲ್ಲಿ ವಿಜಯಪುರದ ಮಹಾಲಬಾಗಾಯತದ ಪಕ್ಕದಲ್ಲಿ ಬ್ರ್ಯಾಕೆಟ್ ಒಳಗೆ ವಕ್ಫ್ ಆಸ್ತಿಯಡಿಯಲ್ಲಿ ಹೊನವಾಡ ಎಂದು ತಪ್ಪಾಗಿ ನಮೂದಿಸಲಾಗಿತ್ತು.1977ರಲ್ಲಿ ವಕ್ಫ್ ಮಂಡಳಿಯೇ ತನ್ನ ತಪ್ಪನ್ನು ಸರಿಪಡಿಸಿದೆ. ಇದು ವಿವಾದವೇ ಅಲ್ಲ. ಬಿಜೆಪಿಯಲ್ಲಿ ವಿಜಯೇಂದ್ರ ಮತ್ತು ಬಸವರಾಜ ಪಾಟೀಲ ಯತ್ನಾಳ ನಡುವೆ ನಡೆಯುತ್ತಿರುವ ತಿಕ್ಕಾಟದಿಂದ ಇದು ರಾಜಕೀಯ ಬಣ್ಣ ಪಡೆದುಕೊಂಡಿದೆ” ಎಂದು ಸ್ಪಷ್ಟಪಡಿಸಿದರು.

“ಇಂಡಿ ತಾಲ್ಲೂಕಿನಲ್ಲಿ ಮಾತ್ರ ಅಲ್ಲಿಯ ತಹಸೀಲ್ದಾರರು ಯಾವುದೇ ನೋಟಿಸ್ ನೀಡದೆ, 41 ಆಸ್ತಿಗಳನ್ನು ಇಂದೀಕರಣ ಮಾಡಿದ್ದಾರೆ. ಇದು ನಿಯಮಗಳಿಗೆ ವಿರುದ್ಧವಾಗಿದೆ. ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ರೈತರು 1974ಕ್ಕಿಂತ ಮೊದಲಿನ ದಾಖಲೆ ಕೊಟ್ಟರೆ ಅಂತಹ ಆಸ್ತಿಗಳನ್ನು ವಕ್ಫ್ ಅಧಿಸೂಚನೆಯಿಂದ ಕೈಬಿಡಲಾಗುವುದು. ಬಾಧಿತ ರೈತರು ಉಪವಿಭಾಗಾಧಿಕಾರಿಗಳಿಗೆ ಅರ್ಜಿ ಸಲ್ಲಿಸಿದರೆ, ಅವರು ಪರಿಶೀಲಿಸಿ, ಅಂತಿಮ ತೀರ್ಮಾನ ಕೈಗೊಳ್ಳುತ್ತಾರೆ” ಎಂದು ಕೃಷ್ಣ ಬೈರೇಗೌಡ ಹೇಳಿದರು.

ಇದಕ್ಕೆ ಪೂರಕವಾಗಿ ಮಾತನಾಡಿದ ಸಚಿವ ಎಂ ಬಿ ಪಾಟೀಲ, “ಈ ಪ್ರಕರಣ ಕುರಿತು ವಿಚಾರಣೆ ನಡೆಸಲು ಜಿಲ್ಲಾಧಿಕಾರಿಗಳ ನೇತೃತ್ವದ ಟಾಸ್ಕ್ ಫೋರ್ಸ್ ರಚಿಸಲಾಗಿದೆ. ವಿಜಯಪುರ ಪ್ರಕರಣದಲ್ಲಿ 1964ರಿಂದ 1973ರವರೆಗಿನ ಕಂದಾಯ ಮತ್ತು ವಕ್ಫ್ ದಾಖಲೆಗಳನ್ನು ತೌಲನಿಕವಾಗಿ ಪರಿಶೀಲಿಸಲು ಆದೇಶ ನೀಡಲಾಗಿದೆ” ಎಂದರು.

“ಮಹಾರಾಷ್ಟ್ರ ಮತ್ತು ಜಾರ್ಖಂಡ್ ಚುನಾವಣೆಗಳನ್ನು ಗಮನದಲ್ಲಿ ಇಟ್ಟುಕೊಂಡು ಜನರ ನಡುವೆ ಗೊಂದಲ ಸೃಷ್ಟಿಸುವ ಕೆಲಸ ಬಿಜೆಪಿ ಮುಖಂಡರಿಂದ ಆಗುತ್ತಿದೆ. ಇದರಲ್ಲಿ ಧ್ರುವೀಕರಣದ ಸಂಚಿದೆ. ಸತ್ಯ ಶೋಧನೆಗೆ ಬಿಜೆಪಿ ಸಮಿತಿ ಬಂದರೆ ಕಾಫಿ- ಟೀ ಕೊಟ್ಟು ಪೂರ್ಣ ಮಾಹಿತಿ ನೀಡಲು ಜಿಲ್ಲಾಡಳಿತಕ್ಕೂ ಸೂಚಿಸಲಾಗಿದೆ‌” ಎಂದು ಸಚಿವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ವಕ್ಫ್ ಸಚಿವ ಜಮೀರ್ ಅಹಮದ್ ಮಾತನಾಡಿ, “ನಮಗೆ ರೈತರ ಯಾವ ಜಮೀನೂ ಬೇಡ. ನಾನೂ ರೈತನ ಮಗನೇ. ವಕ್ಫ್ ಆಸ್ತಿಗೆ ಇಂದೀಕರಣ ಮಾಡಿಕೊಡಿ ಎಂದಷ್ಟೇ ಕೇಳಿರುವುದು.‌ ಇಷ್ಟಕ್ಕೂ ಹೊನವಾಡದಲ್ಲಿ 11 ಎಕರೆ ಮಾತ್ರ ವಕ್ಫ್ ಮಂಡಳಿಯದೇ ವಿನಾ 1,200 ಎಕರೆ ಅಲ್ಲ. ಅದೆಲ್ಲ‌ ರೈತರದೇ ಆಗಿದೆ” ಎಂದು ಸ್ಪಷ್ಟಪಡಿಸಿದರು.

“ವಿಜಯಪುರದಲ್ಲಿ 1,345 ಎಕರೆ ವಕ್ಫ್ ಆಸ್ತಿ ಒತ್ತುವರಿಯಾಗಿದ್ದು, ಇದು ಯಾರಿಗೂ ಅಧಿಕೃತವಾಗಿ ಹಂಚಿಕೆ ಆಗಿಲ್ಲ. ಇದರಲ್ಲಿಯೂ ಸುಮಾರು 26 ಎಕರೆ ಜಾಗಕ್ಕೆ ಸಂಬಂಧಿಸಿದಂತೆ ವಿವಾದ ಕೋರ್ಟ್ ನಲ್ಲಿದೆ. ಇದು ಬಿಟ್ಟರೂ 1,319 ಎಕರೆ ವಕ್ಪ್ ಆಸ್ತಿ ಅಕ್ರಮವಾಗಿ ಬೇರೆ ವ್ಯಕ್ತಿ/ಸಂಸ್ಥೆಗಳ ವಶದಲ್ಲಿ ಇದ್ದು ಅದನ್ನು ಸರಿ‌ ಮಾಡಿಕೊಡಲು ಕೇಳಲಾಗಿದೆ. ಇದು ಬಿಟ್ಟರೆ ನಮಗೆ ಬೇರೆ ಯಾರ ಆಸ್ತಿಯೂ‌ ಬೇಡ” ಎಂದು ಸ್ಪಷ್ಟಪಡಿಸಿದರು.

“ವಿಜಯಪುರದಲ್ಲಿ ವಕ್ಫ್ ಅದಾಲತ್ ನಡೆಸಿದಾಗ ಅಲ್ಲಿನ ಶಾಸಕರಾದ ಬಸನಗೌಡ ಪಾಟೀಲ ಯತ್ನಾಳ ಅವರಿಗೂ ಆಹ್ವಾನ ನೀಡಲಾಗಿತ್ತು. ಅಂದು ಸಭೆಗೆ ಬಾರದ ಅವರು ಈಗ ಬೇಕೆಂದೇ ಗೊಂದಲ ಸೃಷ್ಟಿಸುತ್ತಿದ್ದಾರೆ” ಎಂದು ಟೀಕಿಸಿದರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದಾವಣಗೆರೆ | ಪರಿಶಿಷ್ಟ ಜಾತಿ ಒಳಮೀಸಲಾತಿ; ಅಲೆಮಾರಿಗಳಿಗೆ ಅನ್ಯಾಯ ವಿರೋಧಿಸಿ ಪ್ರತಿಭಟನೆ

""ಒಳ ಮೀಸಲಾತಿ ಹಂಚಿಕೊಳ್ಳುವಾಗ ನಿರ್ಗತಿಕ ಅಲೆಮಾರಿ ಜಾತಿಗಳನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದೆ. ಅಲೆಮಾರಿ...

ಧರ್ಮಸ್ಥಳ ಪ್ರಕರಣ | ಯೂಟ್ಯೂಬರ್ ಸಮೀರ್ ಎಂ.ಡಿ.ಗೆ ನಿರೀಕ್ಷಣಾ ಜಾಮೀನು: ಬಂಧನ ಭೀತಿಯಿಂದ ಪಾರು

ಧರ್ಮಸ್ಥಳದಲ್ಲಿ ಅಕ್ರಮವಾಗಿ ಶವಗಳನ್ನು ಹೂಳಲಾಗಿದೆ ಎಂಬ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣದಲ್ಲಿ...

ದಾವಣಗೆರೆ | ಜಗಳೂರಿನಲ್ಲಿ ಶುಕ್ರದೆಸೆ ಮೀಡಿಯಾ ಸಂಸ್ಥೆಯಿಂದ ಕರೋಕೆ ಸಂಗೀತ ಸ್ಪರ್ಧೆ ಸಂಭ್ರಮ

ಶುಕ್ರದೆಸೆ ಮೀಡಿಯಾ ಸಂಸ್ಥೆ ವತಿಯಿಂದ ದಾವಣಗೆರೆ ಜಿಲ್ಲೆ ಜಗಳೂರು ನಗರದಲ್ಲಿ ರಾಜ್ಯಮಟ್ಟದ...

ಹೈದರಾಬಾದ್‌ | ಕಲಬುರಗಿ ಮೂಲದ ಒಂದೇ ಕುಟುಂಬದ ಐವರು ಅನುಮಾನಾಸ್ಪದ ಸಾವು

ಒಂದೇ ಕುಟುಂಬಕ್ಕೆ ಸೇರಿದ ಕಲಬುರಗಿ ಮೂಲದ ಐವರು ತೆಲಂಗಾಣದ ಹೈದರಾಬಾದ್‌ ನಗರದ...

Download Eedina App Android / iOS

X