ಸಮಸ್ಯೆಗಳ್ನು ಬಗೆಹರಿಸಲು ರೈತರ ಕೆಲವು ಬೇಡಿಕೆಗಳನ್ನು ಈಡೇರಿಸಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಯಾದಗಿರಿ ಜಿಲ್ಲಾ ಸಮಿತಿ ಮತ್ತು ಎಲ್ಲ ತಾಲೂಕು ಸಮಿತಿ, ಗ್ರಾಮ ಸಮಿತಿಯಿಂದ ಸುರಪುರ ತಹಶೀಲ್ದಾರ್ ಕಾರ್ಯಾಲಯದ ಎದುರು ಪ್ರತಿಭಟನೆ ನಡೆಸಿದರು.
ಪ್ರತಿಭಟನೆ ಬಳಿಕ ಜಿಲ್ಲಾಧ್ಯಕ್ಷ ಅಯ್ಯಣ್ಣ ಹಾಲಭಾವಿಯವರು ತಹಶೀಲ್ದಾರ್ ಅವರಿಗೆ ಮನವಿ ಪತ್ರ ಸಲ್ಲಿಸಿ ಮಾತನಾಡಿ, “2022-23, 24ರ ಮಳೆಯ ಪ್ರಭಾವದಿಂದ ಅತಿವೃಷ್ಠಿ ಇಲ್ಲವೇ ಅನಾವೃಷ್ಠಿಯಿಂದ ಒಂದಲ್ಲಾ ಒಂದು ಸಮಸ್ಯೆಗಳು ಉಂಟಾಗಿ ರೈತರು ಬೆಳೆ ಬೆಳೆದಿದ್ದರೂ ಯಾವುದೇ ಬೆಲೆ ಇಲ್ಲದಂತಾಗಿದೆ. ಅತಿವೃಷ್ಠಿ, ಅನಾವೃಷ್ಠಿಯಿಂದ ಬೆಳೆಗಳು ಹಾಳಾಗಿವೆ. ಕರ್ನಾಟಕ ರಾಜ್ಯ ರೈತ ಸಂಘ 3 ವರ್ಷಗಳಿಂದ ಹೋರಾಟ ಮಾಡುತ್ತ ಸರ್ಕಾರದ ಗಮನಕ್ಕೆ ತಂದರೂ ಕೂಡ ಯಾವುದೇ ಪ್ರಯೋಜನವಾಗಿಲ್ಲ. ಯಾವೊಬ್ಬ ಅಧಿಕಾರಿಗಳೂ ಸರಿಯಾಗಿ ಪರಿಶೀಲಿಸದೆ ಸರ್ಕಾರದಿಂದ ಯಾವುದೇ ರೈತನಿಗೆ ಪರಿಹಾರವೂ ಸಿಕ್ಕಿಲ್ಲ” ಎಂದು ಹೇಳಿದರು.
“2, 3 ವರ್ಷಗಳಿಂದ ಕೇಂದ್ರ ಸರ್ಕಾರ ಘೋಷಿಸಿರುವ ಬೆಂಬಲ ಬೆಲೆಯ ಮುಖಾಂತರ ರೈತರು ಬೆಳೆದ ಬೆಳೆಗಳನ್ನು ಖರೀದಿಸಬೇಕೆಂದು ಆದೇಶವಿದ್ದರೂ ಯಾವೊಂದು ಮಾಲುಗಳನ್ನೂ ಬೆಂಬಲ ಬೆಲೆ ಮುಖಾಂತರ ಖರೀದಿಸುತ್ತಿಲ್ಲ. ಇಂದೇ ಸುರಪುರ ತಾಲೂಕಿನಲ್ಲಿ ಹತ್ತಿ ಖರೀದಿ ಕೇಂದ್ರ, ಭತ್ತದ ಖರೀದಿ ಕೇಂದ್ರ ತೆರೆಯಬೇಕೆಂದು ಮನವಿ ಪತ್ರ ಕೊಟ್ಟರೂ ಪ್ರಯೋಜನವಾಗಿಲ್ಲ. 2 ವರ್ಷಗಳಿಂದ ಮಳೆಯಿಲ್ಲದೆ ನಾರಾಯಣಪೂರ ಮತ್ತು ಆಲಮಟ್ಟಿ ಡ್ಯಾಂನಲ್ಲಿ ನೀರು ಸಂಗ್ರಹವಾಗದೆ ಬೇಸಿಗೆ ಬೆಳೆಗೆ ನೀರು ಕೊಡದೆ ಬೇಸಿಗೆ ಬೆಳೆ ಬೆಳೆಯಲಿಲ್ಲ. ಆದರೆ ಈ ವರ್ಷ ಮಳೆಯಾಗಿ ಈವರೆಗೆ ಒಳ ಹರಿವು ಇರುವುದರಿಂದ ನದಿಗಳಿಗೆ ನೀರು ಬಿಡುವುದನ್ನು ನಿಲ್ಲಿಸಿ ಕೂಡಲೇ ಸಲಹೆ ಸಮಿತಿ ಮಿಟಿಂಗ್ ಕರೆಯಬೇಕು. ಬೇಸಿಗೆ ಬೆಳೆ ಬೆಳೆಯಲು ರೈತರಿಗೆ ಅನುಕೂಲ ಮಾಡಿಕೊಡಬೇಕು. ನಿರ್ಲಕ್ಷ್ಯ ತೋರಿದರೆ ಮುಂದಿನ ದಿನಗಳಲ್ಲಿ ತೀವ್ರ ಹೋರಾಟ ಮಾಡಲಾಗುತ್ತದೆ” ಎಂದು ಎಚ್ಚರಿಸಿದರು.
“ಈ ಹಿಂದೆ ಬಹುದಿನಗಳಿಂದ ಸುರಪುರ ತಾಲೂಕಿನಲ್ಲಿ ಬರುವ ರಂಗಂಪೇಟೆಯಲ್ಲಿ ಪ್ರತಿ ಭಾನುವಾರದಂದು ದನದ ಸಂತೆ ನಡೆಯುತಿತ್ತು. ಆದರೆ ಸಂತೆ ನಡೆಯುವ ಜಾಗವನ್ನು ಅಕ್ರಮವಾಗಿ ಪ್ರಭಾವಿಗಳು ಒತ್ತುವರಿ ಮಾಡಿಕೊಂಡು ಬಿಲ್ಡಿಂಗ್ ಮಾಡಿ ಸಂತೆ ನಡೆಯದಂತೆ ಮಾಡಿದ್ದಾರೆ. ಕೂಡಲೇ ಪರಿಶೀಲಿಸಿ ಒತ್ತುವರಿ ಮಾಡಿರುವ ಜಾಗವನ್ನು ತೆರವುಗೊಳಿಸಿ ರೈತರಿಗೆ ದನದ ವ್ಯಾಪಾರ ಮಾಡುವುದಕ್ಕೆ ಅನುಕೂಲ ಮಾಡಿಕೊಡಬೇಕು. ಸುರಪುರ ತಹಶೀಲ್ದಾರ್ ಕಚೇರಿಯಲ್ಲಿ ಒಂದೇ ಒಂದು ಪಹಣಿ ಕೇಂದ್ರವಿದ್ದು, ಇದರಿಂದ ರೈತರಿಗೆ ತುಂಬಾ ಅನಾನುಕೂಲವಾಗಿದೆ. ಇನ್ನು ಎರಡ್ಮೂರು ಪಹಣಿ ಕೇಂದ್ರ ತೆರೆದು ರೈತರಿಗೆ ಅನುಕೂಲ ಮಾಡಿಕೊಡಬೇಕು ಮತ್ತು ತಹಶೀಲ್ ಕಚೇರಿಯಲ್ಲಿ ಸಾರ್ವಜನಿಕರಿಗೆ ಕುಡಿಯುವ ನೀರು ಹಾಗೂ ಶೌಚಾಲಯ ವ್ಯವಸ್ಥೆ ಮಾಡಿಕೊಡಬೇಕು” ಎಂದು ಒತ್ತಾಯಿಸಿದರು.
ಈ ಸುದ್ದಿ ಓದಿದ್ದೀರಾ? ಯಾದಗಿರಿ | ತಾಲೂಕು ಮಟ್ಟದ ಅಥ್ಲೆಟಿಕ್ಸ್; ವಂಕಸಂಬರ ಗ್ರಾಮದ ಸರ್ಕಾರಿ ಶಾಲೆ ಮಕ್ಕಳು ಜಿಲ್ಲಾಮಟ್ಟಕ್ಕೆ ಆಯ್ಕೆ
“ಅತಿವೃಷ್ಠಿ ಹಾಗೂ ಅನಾವೃಷ್ಠಿಯಿಂದ ರೈತರ ಬೆಳೆ ಹಾಳಾಗಿರುವುದನ್ನು ಖುದ್ದಾಗಿ ಭೇಟಿಯಾಗಿ ಪರಿಶೀಲಿಸಿದೆ ಕಚೇರಿಯಲ್ಲಿ ಕುಳಿತು ಸುಳ್ಳು ವರದಿಯನ್ನು ತಯಾರಿಸಿ ತಮ್ಮ ಕಚೇರಿಗೆ ಸಲ್ಲಿಸಿ ರೈತರಿಗೆ ವಂಚನೆ ಮಾಡುತ್ತಿರುವ ಗ್ರಾಮ ಲೆಕ್ಕಾಧಿಕಾರಿಗಳ ಮೇಲೆ ಕ್ರಮ ಜರುಗಿಸಿ ತಮ್ಮ ಕಚೇರಿಗೆ ನೈಜ ವರದಿ ಸಲ್ಲಿಸುವಂತೆ ಸೂಚಿಸಬೇಕು. ಇಡೀ ಯಾದಗಿರಿ ಜಿಲ್ಲಾದ್ಯಂತ ಬರುವ ಎಲ್ಲ ತಾಲೂಕುಗಳಲ್ಲಿ ಗ್ರಾಮೀಣ ರಸ್ತೆಗಳು ಹಾಳಾಗಿದ್ದು, ಕೂಡಲೇ ರಸ್ತೆಗಳನ್ನು ದುರಸ್ತಿ ಮಾಡಿಸಬೇಕು” ಎಂಬುದು ಸೇರಿದಂತೆ ಬಹುತೇಕ ಬೇಡಿಕೆಗಳನ್ನಿಟ್ಟು ಈಡೇರಿಸುವಂತೆ ಆಗ್ರಹಿಸಿದರು.
ತಾಲೂಕು ಅಧ್ಯಕ್ಷ ಹಣಮಂತ್ರಾಯ ಚಂದಲಾಪೂರ, ಗೌರವಾಧ್ಯಕ್ಷ ಸಾಹೇಬಗೌಡ ಮದಲಿಂಗನಾಳ, ವೆಂಕಟೇಶಗೌಡ ಕುಪಗಲ್, ತಿಪ್ಪಣ್ಣ ಜಂಪಾ, ಭೀಮನಗೌಡ ಕರ್ನಾಳ, ಇಮಾಮಸಾಬ ತಿಪ್ಪನಟಗಿ, ಶಿವನಗೌಡ ರುಕ್ಕಾಪೂರ, ಮಾನಪ್ಪ ಕೊಂಬಿನ್, ಅವಿನಾಶ ಕೊಡೇಕಲ್, ಮರೆಪ್ಪ ಮಾಸ್ಟರ್, ಗದ್ದೆಪ್ಪ ನಾಗದೇವಿನಾಳ, ಪರಮಣ್ಣ ಬಾಣತಿಹಾಳ ಸೇರಿದಂತೆ ಇತರರು ಇದ್ದರು.