ಸಮುದಾಯ ಭವನವನ್ನೇ ಗುತ್ತಿಗೆದಾರರೊಬ್ಬರು ಕಾನೂನು ಬಾಹಿರವಾಗಿ ದಾಸ್ತಾನು ಕೇಂದ್ರವನ್ನಾಗಿ ಮಾಡಿಕೊಂಡಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಜನ್ನಾಪುರ ಸಮೀಪದ ಮಣ್ಣೀಕೆರೆ ಗ್ರಾಮದಲ್ಲಿ ನಡೆದಿದೆ.

ಸಾರ್ವಜನಿಕ ಕಾರ್ಯಕ್ರಮಗಳನ್ನು ಮಾಡಲು ಸಮುದಾಯ ಭವನವನ್ನು ನಿರ್ಮಿಸಲಾಗಿದೆ. ಆದರೆ, ಮಣ್ಣೀಕೆರೆ ಗ್ರಾಮದಲ್ಲಿ ಕಳೆದ ಹತ್ತು ತಿಂಗಳಿಂದ ಗುತ್ತಿಗೆದಾರರೊಬ್ಬರು ಸಿಮೆಂಟ್, ಪೈಪುಗಳನ್ನು ಸಂಗ್ರಹಕ್ಕೆ ಬಳಸಿಕೊಂಡಿದ್ದಾರೆ ಎಂದು ಸ್ಥಳೀಯರು ದೂರು ನೀಡಿದ್ದಾರೆ.
ಸ್ಥಳೀಯ ಜನರ ಉಪಯೋಗಕ್ಕೆ ಸಮುದಾಯ ಭವನ ಇರುವುದು. ಅದನ್ನು ಗುತ್ತಿಗೆದಾರನೋರ್ವ ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ ಎಂದು ಗ್ರಾಮದ ನಿವಾಸಿ ಸುನಿಲ್ ಈ ದಿನ.ಕಾಮ್‌ಗೆ ಮಾಹಿತಿ ನೀಡಿದ್ದಾರೆ.
ಮೂಡಿಗೆರೆ ತಾಲೂಕಿನ ಗೋಣಿಬೀಡು ಗ್ರಾಮ ಪಂಚಾಯಿತಿ ಅವರಿಗೆ ಮಾಹಿತಿ ತಿಳಿಸಿದರೆ, ಬೇಜವಾಬ್ದಾರಿ ಉತ್ತರ ನೀಡುತ್ತಾರೆ ಎಂದು ಮಣ್ಣೀಕೆರೆ ಗ್ರಾಮದ ಗ್ರಾಮಸ್ಥರ ಆರೋಪವಾಗಿದೆ.
ಇದನ್ನೂ ಓದಿದ್ದೀರಾ? ಕರ್ನಾಟಕದಲ್ಲಿ ಒಳಮೀಸಲಾತಿ ಜಾರಿ: ಸಚಿವ ಸಂಪುಟ ತೀರ್ಮಾನ
ಮೇಲಧಿಕಾರಿಗಳಿಗೆ ದೂರು ನೀಡಲು ಗ್ರಾಮಸ್ಥರು ನಿರ್ಧರಿಸಿದ್ದಾರೆ. ಕೂಡಲೇ ಸಂಬಂಧಪಟ್ಟ ಇಲಾಖೆಯವರು ಕ್ರಮ ಕೈಗೊಂಡು ಅಕ್ರಮವಾಗಿ ಸಿಮೆಂಟ್ ಮತ್ತು ಪೈಪುಗಳನ್ನು ಸಂಗ್ರಹ ಮಾಡಿರುವ ಗುತ್ತಿಗೆದಾರರ ವಿರುದ್ಧ ಕ್ರಮ ಜರುಗಿಸಿ ಸಮುದಾಯ ಭವನದಲ್ಲಿ ಸಂಗ್ರಹಿಸಿರುವ ಸಿಮೆಂಟ್ ಮೂಟೆಗಳನ್ನು ತೆರವು ಮಾಡಿ, ಸ್ವಚ್ಛಗೊಳಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕೆಂದು ಮಣ್ಣೀಕೆರೆ ಗ್ರಾಮದ ಜನರು ಈ ದಿನ.ಕಾಮ್ ಮೂಲಕ ಸಂಬಂಧಪಟ್ಟ ಅಧಿಕಾರಿಗಳಲ್ಲಿ ಕೇಳಿಕೊಂಡಿದ್ದಾರೆ.
