ವಕ್ಫ್ ಎನ್ನುವುದು ಇಸ್ಲಾಂ ಧರ್ಮ ಪಾಲನೆ ಮಾಡುವ ಯಾವುದೇ ವ್ಯಕ್ತಿ ತನಗೆ ಸೇರಿರುವ ಆಸ್ತಿಯನ್ನು ಸ್ವಯಂಕೃತವಾಗಿ ಸಾರ್ವಜನಿಕ ಹಿತಾಸಕ್ತಿ ಉದ್ದೇಶದಿಂದ ದೇವರ ಹೆಸರಿನಲ್ಲಿ ನೀಡುವ ದಾನವಾಗಿದೆ. ಈ ಆಸ್ತಿಯು ವಕ್ಫ್ ಆಗುತ್ತದೆ. ಒಮ್ಮೆ ಈ ರೀತಿ ನೀಡಿದ ಆಸ್ತಿಯು ಸದಾ ವಕ್ಫ್ ಆಗಿರುತ್ತದೆ. ಅದನ್ನು ಸದುಪಯೋಗ ಮಾಡಬಹುದು. ಆದರೆ, ಮಾರಾಟ ಮಾಡಲು ಬರುವುದಿಲ್ಲ.
ಕೇಂದ್ರ ಸರ್ಕಾರ ವಕ್ಫ್ ತಿದ್ದುಪಡಿ ಮಸೂದೆ 2024ರ ಮಂಡನೆ ಮಾಡಿದ ನಂತರ ಇದರ ಬಗ್ಗೆ ಸಾಕಷ್ಟು ಚರ್ಚೆ ನಡೆಯುತ್ತಿದೆ. ಹಲವಾರು ಜನ ವಕ್ಫ್ ಎನ್ನುವುದು “ಅನ್ಯರ ಜಮೀನು ಕಬ್ಜಾ ಮಾಡಲು ಇರುವ ವ್ಯವಸ್ಥೆ” ಎಂದು ತಿಳಿದಂತಿದೆ. ವಿಶೇಷವಾಗಿ ಬಿಜೆಪಿ ನಾಯಕರು ಇದೊಂದು ಹಿಂದೂ-ಮುಸ್ಲಿಮರ ನಡುವೆ ಇರುವ ಸಮಸ್ಯೆ ಎಂದೂ, ಕಾಂಗ್ರೆಸ್ ಪಕ್ಷ ಮುಸ್ಲಿಮರನ್ನು ಸಂತೃಪ್ತಿಪಡಿಸಲು ಮಾಡಿರುವ ಕುತಂತ್ರವೆಂದು ಗುಲ್ಲೆಬ್ಬಿಸಲಾಗುತ್ತಿದೆ. ಯಾರದ್ದೋ ಆಸ್ತಿಯನ್ನು ವಕ್ಫ್ ಆಸ್ತಿ ಎಂದು ಘೋಷಿಸುತ್ತದೆ, ವಕ್ಫ್ ಮಂಡಳಿಯಲ್ಲಿ ಮಹಿಳೆಯರಿಗೆ ಅವಕಾಶವಿಲ್ಲವೆಂದು ಅಪಪ್ರಚಾರ ಮಾಡುತ್ತಿದೆ. ಕೇಂದ್ರ ಸರ್ಕಾರ ವಕ್ಫ್ ತಿದ್ದುಪಡಿ ಮಸೂದೆ 2024ಯನ್ನು ಮಂಡನೆ ಮಾಡುವಾಗ ದೇಶದ ಜನರ ದಾರಿ ತಪ್ಪಿಸುವ ರೀತಿ ಹೇಳಿಕೆ ನೀಡಿರುವುದು ದೇಶದ ದುರಂತ. ವಕ್ಫ್ ಎಂದರೇನು ಎಂದು ತಿಳಿಯದೇ ಇರುವವರು ಸಹ ವಕ್ಫ್ ಬಗ್ಗೆ ಮಾತನಾಡುತ್ತಿದ್ದಾರೆ. ಸರ್ಕಾರ ನಡೆಸುವವರೇ ವಕ್ಫ್ ಕುರಿತು ಸುಳ್ಳು ಪ್ರಚಾರ ಮಾಡುತ್ತಿದ್ದಾರೆ.
ವಕ್ಫ್ ಎನ್ನುವುದು ಇಸ್ಲಾಂ ಧರ್ಮದಲ್ಲಿ ಇರುವ ಒಂದು ವ್ಯವಸ್ಥೆ. ಇಸ್ಲಾಂ ಧರ್ಮ ಪಾಲನೆ ಮಾಡುವ ಯಾವುದೇ ವ್ಯಕ್ತಿ ತನಗೆ ಸೇರಿರುವ ಆಸ್ತಿಯನ್ನು ಸ್ವಯಂಕೃತವಾಗಿ ಸಾರ್ವಜನಿಕ ಹಿತಾಸಕ್ತಿ ಉದ್ದೇಶದಿಂದ ದೇವರ ಹೆಸರಿನಲ್ಲಿ ನೀಡುವ ದಾನವಾಗಿದೆ. ಈ ಆಸ್ತಿಯು ವಕ್ಫ್ ಆಗುತ್ತದೆ. ಒಮ್ಮೆ ಈ ರೀತಿ ನೀಡಿದ ಆಸ್ತಿಯು ಸದಾ ವಕ್ಫ್ ಆಗಿರುತ್ತದೆ. ಅದನ್ನು ಸದುಪಯೋಗ ಮಾಡಬಹುದು. ಆದರೆ, ಮಾರಾಟ ಮಾಡಲು ಬರುವುದಿಲ್ಲ. ಇದು ಇಸ್ಲಾಂನ ಕೊನೆಯ ಪ್ರವಾದಿ ಹಜರತ ಮೊಹಮ್ಮದ (ಸ. ಅ.ವ. ಸ.) ಅವರ ಅವಧಿಯಿಂದ ಪ್ರಾರಂಭವಾಗಿದೆ. ಭಾರತದಲ್ಲಿ ಮೊಟ್ಟ ಮೊದಲ ಬಾರಿಗೆ 1923ರಲ್ಲಿ ಮುಸ್ಲಿಂ ವಕ್ಫ್ ಕಾಯ್ದೆ ಜಾರಿಯಾಗಿದೆ.ಇದು ವಕ್ಫ್ ಆಸ್ತಿಯನ್ನು ನಿರ್ವಹಣೆ ಮಾಡುವ ಒಂದು ವ್ಯವಸ್ಥೆ.
ದೇಶದಲ್ಲಿ ಸಂವಿಧಾನ ಜಾರಿಯಾದ ನಂತರ ವಕ್ಫ ನಿರ್ವಹಣೆಗೆ ವಕ್ಫ್ ಕಾಯ್ದೆ 1955ನ್ನು ಜಾರಿಗೊಳಿಸಲಾಯಿತು. ಅದರಡಿಯಲ್ಲಿ ಪ್ರತಿಯೊಂದು ರಾಜ್ಯಕ್ಕೆ ಒಂದು ವಕ್ಫ್ ಮಂಡಳಿ ರಚನೆ ಮಾಡಲು ಅವಕಾಶ ನೀಡಿದೆ. ಅಲ್ಲದೇ, ಜಿಲ್ಲಾ ಮಟ್ಟದಲ್ಲಿ ವಕ್ಫ್ ಸಲಹಾ ಸಮಿತಿ ರಚಿಸಲು ಅವಕಾಶ ನೀಡಲಾಗಿದೆ. ನಂತರ 1995ರಲ್ಲಿ ವಕ್ಫ್ ಕಾಯ್ದೆ 1955ರ ಬದಲಾಗಿ ಮತ್ತೊಂದು ಹೊಸ ಕಾಯ್ದೆ ಜಾರಿ ಮಾಡಲಾಗಿದೆ. 2013ರಲ್ಲಿ ವಕ್ಫ್ ಕಾಯ್ದೆ 1995ನ್ನು ತಿದ್ದುಪಡಿ ಮಾಡಲಾಗಿದೆ. ವಕ್ಫ್ ಮಂಡಳಿ ಮುಸ್ಲಿಮರಿಗೆ ಸೇರಿದ ವಕ್ಫ್ ಆಸ್ತಿ ನಿರ್ವಹಣೆ ಮಾತ್ರ ಮಾಡುವುದರಿಂದ ಮಂಡಳಿಯಲ್ಲಿ ಮುಸ್ಲಿಮರಿಗೆ ಮಾತ್ರ ಅವಕಾಶ ನೀಡಲಾಗಿದೆ. ಹಿಂದೂ ದತ್ತಿ ಕಾಯ್ದೆಯಲ್ಲಿ ಕೇವಲ ಹಿಂದೂಗಳಿಗೆ ಅವಕಾಶ ನೀಡಿದಂತೆ.

ಆದರೆ, ಈಗ ಕೇಂದ್ರ ಸರಕಾರ ಮಾಡಲು ಹೊರಟಿರುವ ತಿದ್ದುಪಡಿಯಲ್ಲಿ ಮುಸ್ಲಿಮರೇತರರನ್ನು ಅದರಲ್ಲಿ ಸೇರಿಸಲು ಪ್ರಯತ್ನಿಸುತ್ತಿದೆ. ವಕ್ಫ್ ಟ್ರಿಬ್ಯೂನಲ್ ನಲ್ಲಿ ನೀಡಲಾದ ತೀರ್ಪೇ ಅಂತಿಮ. ಅದನ್ನು ದೇಶದ ಯಾವುದೇ ಕೋರ್ಟಿನಲ್ಲಿ ಪ್ರಶ್ನಿಸಲು ಬರುವುದಿಲ್ಲ. ಇದೆಂತಹ ಕಾನೂನು ಎಂದು ಬಿಜೆಪಿ ನಾಯಕರು ಮಾತನಾಡುತ್ತಿದ್ದಾರೆ. ಇದೊಂದು ಅಪ್ಪಟ ಸುಳ್ಳು. ಈಗಾಗಲೇ ದೇಶದ ಹಲವಾರು ಹೈಕೋರ್ಟ್‌ಗಳಲ್ಲಿ, ಸುಪ್ರೀಂ ಕೋರ್ಟ್‌ಗಳಲ್ಲಿ ವಕ್ಫ್ ಸಂಬಂಧಪಟ್ಟ ಕೇಸುಗಳಿವೆ. ವಕ್ಫ್ ಕಾಯ್ದೆಯಲ್ಲಿ ಇರುವಂತೆಯೇ ವಕ್ಫ್ ಟ್ರಿಬ್ಯೂನಲ್‌ನಲ್ಲಿ ನೀಡಲಾದ ತೀರ್ಪೇ ಅಂತಿಮ ಎನ್ನುವುದು ವಕ್ಫ್ ಮಂಡಳಿಯ ಆಡಳಿತಾತ್ಮಕ ಆದೇಶಗಳಿಗೆ ಮಾತ್ರ ಅನ್ವಯಿಸುತ್ತದೆ. ಅದು ವಕ್ಫ್ ಆಸ್ತಿಗಳಿಗೆ ಅನ್ವಯಿಸುವುದಿಲ್ಲ. ಇದೇ ರೀತಿಯ ಅಂಶ ಹಿಂದೂ ದತ್ತಿ ಕಾಯ್ದೆಯಲ್ಲಿಯೂ ಇದೆ.
ದೇಶದ ಮೂಲೆ ಮೂಲೆಯಲ್ಲಿಯೂ ಮಸ್ಜೀದ್, ದರ್ಗಾ, ಆಶುರಖಾನಾ ಹೆಸರಿನಲ್ಲಿ ವಕ್ಫ್ ಸಂಸ್ಥೆಗಳಿವೆ. ಅವುಗಳನ್ನು ನಿರ್ವಹಣೆ ಮಾಡಲು ಸ್ಥಳೀಯ ಆಡಳಿತ ಮಂಡಳಿ ರಚನೆ ಮಾಡಲಾಗಿದೆ. ಅಥವಾ ವಂಶ ಪಾರಂಪರ್ಯವಾಗಿ ಮುತವಲ್ಲಿಗಳ ನೇಮಕ ಮಾಡಲಾಗಿದೆ. ಸದರಿ ವಕ್ಫ್ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸುವ ಕುಟುಂಬಗಳ ಹೆಸರಿನಲ್ಲಿ ವಕ್ಫ್ ಇನಾಂ ಆಸ್ತಿಗಳು ಇವೆ. ಇವುಗಳನ್ನು ಸೇವೆ ಸಲ್ಲಿಸುವ ಅವಧಿಗೆ ಉಪಯೋಗ ಮಾಡಲು ಅವಕಾಶ ಇದೆ. ಆದರೆ, ಕೆಲವು ಕಡೆ ಮುತವಲ್ಲಿಗಳು ಅಥವಾ ಅವರ ಕಟುಂಬದವರು ಸದರಿ ಆಸ್ತಿಗಳನ್ನು ಪಟ್ಟಾ ಜಮೀನು ಎಂದು ಮಾರಾಟ ಮಾಡಿರುವ ಉದಾಹರಣೆ ಇದೆ. ಅಂತಹ ಜಮೀನುಗಳನ್ನು ವಕ್ಫ್ ಮಂಡಳಿ ಆಸ್ತಿ ದಾಖಲೆಗಳಲ್ಲಿ ವಕ್ಫ್ ಮಂಡಳಿಗೆ ಸೇರಿದೆ ಎಂದು ನಮೂದಿಸುತ್ತಿದೆ. ಮಾರಾಟ ಮಾಡಿದ ಮುತವಲ್ಲಿಗಳು ಸದರಿ ಆಸ್ತಿಗಳ ಮಾಲೀಕರಲ್ಲದೇ ಇರುವುದರಿಂದ ಅವರು ಮಾರಾಟ ಮಾಡಿದ ಆಸ್ತಿಯು ಕಾನೂನಿನಲ್ಲಿ ಅಕ್ರಮವಾಗುತ್ತದೆ. ಅದನ್ನು ಖರೀದಿ ಮಾಡಿದವರು ತೊಂದರೆಗೆ ಸಿಲುಕುತ್ತಿದ್ದಾರೆ.
ದೇಶದಲ್ಲಿ ಲಕ್ಷಾಂತರ ಎಕರೆ ವಕ್ಫ್ ಆಸ್ತಿ ಇದೆ. ಒಮ್ಮೆ ವಕ್ಫ್ ಎಂದು ಘೋಷಿಸಿದ ನಂತರ ಅದನ್ನು ಮಾರಾಟ ಮಾಡಲು ಅವಕಾಶ ಇರುವುದಿಲ್ಲ. ಆದರೆ, 1974ರಲ್ಲಿ ಭೂಸುಧಾರಣೆ ಕಾಯ್ದೆ ಜಾರಿಯಾದ ನಂತರ ಹಲವು ರೈತರು ಭೂ ನ್ಯಾಯ ಮಂಡಳಿಯಲ್ಲಿ ವಕ್ಫ್ ಆಸ್ತಿಯನ್ನು ತಮ್ಮ ಹೆಸರಿಗೆ ಮಂಜೂರು ಮಾಡಲು ಕೋರಿರುತ್ತಾರೆ. ಅದೇ ಸಂದರ್ಭದಲ್ಲಿ ಹಲವು ಕಡೆ ವಕ್ಫ್ ಮಂಡಳಿಯವರು ತಕರಾರು ಸಲ್ಲಿಸದೇ ಇರುವುದರಿಂದ ವಕ್ಫ್ ಆಸ್ತಿ ರೈತರ ಹೆಸರಿಗೆ ಮಂಜೂರಾಗಿದೆ. ಅದರ ಬಗ್ಗೆ ವಕ್ಫ್ ಮಂಡಳಿ ಯಾವುದೇ ತಕರಾರು ತೆಗೆಯುತ್ತಿಲ್ಲ. ವಕ್ಫ್ ಸಂಸ್ಥೆಗಳಿಗೆ ನಿರ್ವಹಣೆ ಮಾಡಲು ಸ್ಥಳೀಯವಾಗಿ ಆಡಳಿತ ಮಂಡಳಿಗಳಿವೆ. ಪ್ರತಿ ಮೂರು ವರ್ಷಗಳಿಗೊಮ್ಮೆ ಹೊಸ ಆಡಳಿತ ಮಂಡಳಿ ರಚನೆ ಮಾಡುವ ವ್ಯವಸ್ಥೆ ಇದೆ.
ಇದನ್ನೂ ಓದಿ ವಕ್ಫ್ ಆಸ್ತಿ | ಬಿಜೆಪಿ ಅವಧಿಯಲ್ಲೂ ರೈತರಿಗೆ ನೋಟಿಸ್, ಎಂ ಬಿ ಪಾಟೀಲ್ ದಾಖಲೆ ಬಿಡುಗಡೆ
ಈಗ ರಾಜ್ಯಾದ್ಯಂತ ಬಿಜೆಪಿ ಎಬ್ಬಿಸಿರುವ ವಕ್ಫ್ ಜಮೀನುಗಳ ಪ್ರಕರಣಗಳನ್ನು ಕೂಲಂಕಷವಾಗಿ ಪರಿಗಣಿಸುವ ಅವಶ್ಯಕತೆ ಇದೆ. ಒಂದು ವಕ್ಫ್ ಜಮೀನು ಭೂ ನ್ಯಾಯ ಮಂಡಳಿಯ ಮೂಲಕ ರೈತರು ಪಡೆದಿದ್ದರೆ, ಅಂತಹ ದಾಖಲೆಗಳಲ್ಲಿ ವಕ್ಫ್ ಎಂದು ನಮೂದಿಸಲು ಬರುವುದಿಲ್ಲ. ಅಂತಹ ಆಸ್ತಿಗಳ ಬಗ್ಗೆ ನ್ಯಾಯಾಲಯದ ಮೂಲಕವೇ ಪರಿಹಾರ ಕಂಡುಹಿಡಿಯಬೇಕು. ಎರಡನೆಯದು ವಕ್ಫ್ ಆಸ್ತಿಯಿದ್ದು, ಮುತವಲ್ಲಿಗಳು ಮಾರಾಟ ಮಾಡಿದಲ್ಲಿ ಅಂತಹ ಆಸ್ತಿಗಳ ದಾಖಲೆಗಳಲ್ಲಿ ವಕ್ಫ್ ಮಂಡಳಿ ಎಂದು ನಮೂದಿಸಲಾಗುತ್ತಿದೆ. ಇದರಿಂದ ಸದರಿ ಆಸ್ತಿಗಳು ಮತ್ತೊಮ್ಮೆ ಮಾರಾಟ ಮಾಡಲು ಬರುವುದಿಲ್ಲ. ಅವುಗಳನ್ನು ಕಾನೂನು ಮೂಲಕ ವಕ್ಫ್ ಮಂಡಳಿ ವಾಪಸ್ ಪಡೆಯಲು ಪ್ರಯತ್ನಿಸುತ್ತದೆ. ನನ್ನ ಆಸ್ತಿ ಬೇರೊಬ್ಬರು ಮಾರಾಟ ಮಾಡಿದರೆ, ಅದನ್ನು ಪ್ರಶ್ನೆ ಮಾಡಬಾರದೆಂದು ಭಾವಿಸುವುದು ಎಷ್ಟರ ಮಟ್ಟಿಗೆ ಸರಿ? ವಕ್ಫ್ ಆಸ್ತಿ ಉಳಿಸುವುದೇ ವಕ್ಫ್ ಮಂಡಳಿಯ ಉದ್ದೇಶ. ಅದರಲ್ಲಿ ಹಿಂದೂ ಮುಸ್ಲಿಂ ಎನ್ನುವ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಆದರೂ ರಾಜಕೀಯ ಕಾರಣಕ್ಕೆ ಕೆಸರೆರಚಾಟ ನಡೆಯುತ್ತಿದೆ.

ಡಾ ರಝಾಕ್ ಉಸ್ತಾದ್
ರಾಜ್ಯ ಉಪಾಧ್ಯಕ್ಷರು, ಹೈದ್ರಾಬಾದ್ ಕರ್ನಾಟಕ ಹೋರಾಟ ಸಮಿತಿ ರಾಯಚೂರು