ವಿಧಾನಸಭೆ ಚುನಾವಣೆಗೆ ಟಿಕೆಟ್ ಸಿಗದ ಕಾರಣ ಅಸಮಾಧಾನಗೊಂಡು, “ಮುಖ್ಯಮಂತ್ರಿ ಏಕನಾಥ್ ಶಿಂದೆ ಅವರನ್ನು ಬೆಂಬಲಿಸಿ, ಅವರ ಬಣ ಸೇರಿ ಘೋರ ತಪ್ಪು ಮಾಡಿದೆ” ಎಂದು ಹೇಳಿಕೊಂಡಿದ್ದ ಮಹಾರಾಷ್ಟ್ರದ ಪಾಲ್ಘರ್‌ನ ಶಿವಸೇನೆಯ ಹಾಲಿ ಶಾಸಕ ಶ್ರೀನಿವಾಸ್ ವಂಗಾ ಸುಮಾರು 13 ಗಂಟೆಗಳಿಂದ ನಾಪತ್ತೆಯಾಗಿದ್ದಾರೆ ಎಂದು ವರದಿಯಾಗಿದೆ.
ದಿವಂಗತ ಬಿಜೆಪಿ ಸಂಸದ ಚಿಂತಾಮನ್ ವಂಗಾ ಅವರ ಪುತ್ರ ಶ್ರೀನಿವಾಸ್ ಅವರು 2019ರ ವಿಧಾನಸಭಾ ಚುನಾವಣೆಯಲ್ಲಿ ಪಾಲ್ಘರ್ (ಪರಿಶಿಷ್ಟ ಪಂಗಡಗಳು) ಕ್ಷೇತ್ರದಿಂದ ಶಿವಸೇನೆಯ ಅಭ್ಯರ್ಥಿಯಾಗಿ ಗೆದ್ದು ಶಾಸಕರಾದರು. ಅದಾದ ಬಳಿಕ ಶಿವಸೇನೆ ಎರಡು ಬಣಗಳಲ್ಲಿ ವಿಭಜನೆಯಾಗಿದ್ದು ಶ್ರೀನಿವಾಸ್ ವಂಗಾ ಅವರು ಶಿಂದೆ ಬಣವನ್ನು ಬೆಂಬಲಿಸಿದ್ದರು. ಈ ವಿಧಾನಸಭೆ ಚುನಾವಣೆಯಲ್ಲಿ ಶಿಂದೆ ನೇತೃತ್ವದ ಶಿವಸೇನೆಯ ಟಿಕೆಟ್ ಪಡೆಯುವ ನಿರೀಕ್ಷೆಯಲ್ಲಿದ್ದರು.
ಆದರೆ ಶಿಂದೆ ಶಿವಸೇನೆಯು ಜೂನ್ 2022ರಲ್ಲಿ ಉದ್ಧವ್ ಠಾಕ್ರೆ ಅವರ ನಾಯಕತ್ವದ ವಿರುದ್ಧ ಬಂಡಾಯವೆದ್ದು ಏಕನಾಥ್ ಶಿಂದೆ ಜೊತೆ ನಿಂತ ಮಾಜಿ ಸಂಸದ ರಾಜೇಂದ್ರ ಗವಿತ್‌ಗೆ ಟಿಕೆಟ್ ನೀಡಿದೆ. ಇದರಿಂದಾಗಿ ಅಸಮಾಧಾನಗೊಂಡಿರುವ ಶ್ರೀನಿವಾಸ್ ವಂಗಾ, ಶಿಂದೆಗೆ ಬೆಂಬಲ ನೀಡಿ ತಪ್ಪು ಮಾಡಿದೆ ಎಂದಿದ್ದರು.
ಇದನ್ನು ಓದಿದ್ದೀರಾ? ಮಹಾರಾಷ್ಟ್ರ | ಚುನಾವಣಾ ಸಮಯದಲ್ಲಿ ಮಹಾಯುತಿ ಜನಪರ ನೀತಿ; ಹೆಣಗಾಡುತ್ತಿವೆ ವಿಪಕ್ಷಗಳು
ಭಾನುವಾರ ಶಿವಸೇನೆ (ಶಿಂದೆ ಬಣ) ಪ್ರಕಟಿಸಿದ ಅಭ್ಯರ್ಥಿಗಳ ಪಟ್ಟಿಯಲ್ಲಿ ಪಾಲ್ಘರ್ ವಿಧಾನಸಭಾ ಕ್ಷೇತ್ರದಲ್ಲಿ ರಾಜೇಂದ್ರ ಗವಿತ್ ಅವರನ್ನು ಕಣಕ್ಕಿಳಿಸಿದೆ. ತನಗೆ ಟಿಕೆಟ್ ಸಿಕ್ಕಿಲ್ಲ ಎಂದು ಖಚಿತವಾದ ಬಳಿಕ ವಂಗಾ ಅಸಮಾಧಾನ ಹೊರಹಾಕಿದ್ದಾರೆ. ಜೊತೆಗೆ ಶಿವಸೇನೆ (ಯುಬಿಟಿ) ಮುಖ್ಯಸ್ಥ ಉದ್ಧವ್ ಠಾಕ್ರೆ ಅವರನ್ನು ‘ದೇವರಂತಹ ಮನುಷ್ಯ’ ಎಂದು ಬಣ್ಣಿಸಿದರು.
ಇನ್ನು ಈ ಬಗ್ಗೆ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ಅವರ ಕುಟುಂಬ ಸದಸ್ಯರು, “ಶ್ರೀನಿವಾಸ್ ವಂಗಾ ಆಹಾರ ಸೇವಿಸುವುದನ್ನು ನಿಲ್ಲಿಸಿದ್ದಾರೆ. ತೀವ್ರ ಮಾನಸಿಕವಾಗಿ ಕುಗ್ಗಿದ್ದು ಅಳುತ್ತಿದ್ದಾರೆ. ತಮ್ಮ ಪ್ರಾಣಕ್ಕೆ ಹಾನಿ ಮಾಡುವುದಾಗಿ ಬೆದರಿಕೆ ಹಾಕುತ್ತಿದ್ದಾರೆ” ಎಂದು ತಿಳಿಸಿದ್ದಾರೆ.
ಈ ವಿಚಾರ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿದ್ದಂತೆ ಶಿಂದೆ ಅವರು ವಂಗಾ ಪತ್ನಿಯನ್ನು ಸಂಪರ್ಕಿಸಿ, “ವಂಗಾ ಅವರನ್ನು ಮಹಾರಾಷ್ಟ್ರ ವಿಧಾನ ಪರಿಷತ್ತಿನ ಸದಸ್ಯರನ್ನಾಗಿ ಪರಿಗಣಿಸಲಾಗುವುದು” ಎಂದು ಭರವಸೆ ನೀಡಿದರು. ಈ ನಡುವೆ ಶಿಂದೆ ಬಣದ ಶಾಸಕ ಶ್ರೀನಿವಾಸ್ ವಂಗಾ ಮನೆಯಲ್ಲಿ ಯಾರಿಗೂ ತಿಳಿಸಿದೆ ಹೊರಹೋಗಿದ್ದಾರೆ. ಸುಮಾರು 13 ಗಂಟೆಗಳ ಕಾಲ ನಾಪತ್ತೆಯಾಗಿದ್ದಾರೆ ಎಂದು ವರದಿಯಾಗಿದೆ.
ಸದ್ಯ ವಂಗಾ ಅವರ ಭಾವನಾತ್ಮಕ ಪ್ರತಿಕ್ರಿಯೆ ವಿಡಿಯೋ ಸಾಮಾಜಿಕ ಮಾಧ್ಯಮ ಮತ್ತು ಸುದ್ದಿ ವಾಹಿನಿಗಳಲ್ಲಿ ವೈರಲ್ ಆಗಿವೆ.
288 ಸದಸ್ಯ ಬಲದ ಮಹಾರಾಷ್ಟ್ರ ವಿಧಾನಸಭೆಗೆ ನವೆಂಬರ್ 20ರಂದು ಚುನಾವಣೆ ನಡೆಯಲಿದ್ದು, ನವೆಂಬರ್ 23ರಂದು ಮತ ಎಣಿಕೆ ನಡೆಯಲಿದೆ.
