- ಪಕ್ಷದ ವರಿಷ್ಟರಿಗೆ ನನ್ನ ಕೆಲಸಗಳ ಬಗ್ಗೆ ಗೊತ್ತಿದೆ
- ನನಗೆ ನಮ್ಮ ಪಕ್ಷದ ಶಿಸ್ತಿನ ಚೌಕಟ್ಟಿನ ಅರಿವು ಇದೆ
“ನಾನೂ ಮುಖ್ಯಮಂತ್ರಿ ಪದವಿ ಆಕಾಂಕ್ಷಿಯೇ; ನನಗೆ ರಾಜಕೀಯ ಹಾಗೂ ಪಕ್ಷದ ಪರಿಧಿಯ ಅರಿವಿದೆ. ಹೀಗಾಗಿ ಸುಮ್ಮನಿದ್ದೇನೆ. ಹಾಗೆಂದ ಮಾತ್ರಕ್ಕೆ ನಾನು ಅಸಮರ್ಥ ಎಂದಲ್ಲ” ಎಂದು ಮಾಜಿ ಡಿಸಿಎಂ ಪರಮೇಶ್ವರ್ ಹೇಳಿದರು.
ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, “ನಾನು ಪಕ್ಷದ ವರಿಷ್ಠರನ್ನು ನಂಬಿದ್ದೇನೆ. ನಾನು ಕೂಡ 50 ಶಾಸಕರ ಗುಂಪು ಕಟ್ಟಿಕೊಂಡು ಹೋಗಬಹುದು. ಆದರೆ ನಾನು ಹಾಗೆ ಮಾಡುವುದಿಲ್ಲ. ನನಗೆ ಪ್ರಿನ್ಸಿಪಲ್ ಇದೆ. ನನಗೆ ಶಿಸ್ತು ಮುಖ್ಯ” ಎಂದರು.
“ಹೈಕಮಾಂಡ್ ಜವಾಬ್ದಾರಿ ಕೊಟ್ಟರೆ ಖಂಡಿತ ನಿಭಾಯಿಸುತ್ತೇನೆ. ಅವಕಾಶ ಕೊಟ್ಟರೆ ಮಾಡಲ್ಲ ಎಂದು ಹೇಳುವುದಿಲ್ಲ. ಹೈಕಮಾಂಡ್‌ಗೆ ನನ್ನ ಬಗ್ಗೆ, ನನ್ನ ಕೆಲಸದ ಬಗ್ಗೆ ಗೊತ್ತಿದೆ. ಲಾಬಿ ಮಾಡಬಾರದು ಎಂದು ಸುಮ್ಮನೆ ಇದ್ದೇನೆ. ನಾನು ಹೀಗಿದ್ದೇನೆ ಎಂದರೆ ಅದರ ಅರ್ಥ ಅಸಮರ್ಥ ಎಂದಲ್ಲ” ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ?:ವಿಧಾನಸೌಧ ಪ್ರವೇಶಿಸುತ್ತಿರುವ ಅತಿ ಕಿರಿಯ ಹಾಗೂ ಹಿರಿಯ ಶಾಸಕರಿವರು
ಇನ್ನು ಪಕ್ಷದ ಗ್ಯಾರಂಟಿ ಯೋಜನೆಗಳ ಬಗ್ಗೆ ಮಾತನಾಡಿದ ಪರಮೇಶ್ವರ್, ಮೊದಲ ಕ್ಯಾಬಿನೆಟ್‌ನಲ್ಲಿ 5 ಗ್ಯಾರಂಟಿಗಳನ್ನು ಈಡೇರಿಸುವ ಭರವಸೆ ಕೊಟ್ಟಿದ್ದೇವೆ. ಅದಕ್ಕೆ ನಾವು ಬದ್ಧರಾಗಿರುತ್ತೇವೆ ಎಂದರು.
ಆಯಾ ಇಲಾಖೆ ಸಚಿವರು ಕೂತು ಇದರ ಬಗ್ಗೆ ಚರ್ಚಿಸಿ ಲಾಭ ನಷ್ಟಗಳ ಪರಾಮರ್ಶೆ ಮಾಡಿ ಅದನ್ನು ಜಾರಿ ಮಾಡುತ್ತಾರೆ. ಕಾಂಗ್ರೆಸ್‌ನ ಗ್ಯಾರಂಟಿಗಳಿಗೆ ಕಂಡಿಷನ್ಸ್ ಇರುತ್ತವೆ. ಹಾಗೇ ಸುಮ್ಮನೆ ಕೊಟ್ಟರೆ ಎಲ್ಲರೂ ತೆಗೆದುಕೊಳ್ಳುತ್ತಾರೆ. ಹೀಗಾಗಿ ಗ್ಯಾರಂಟಿಗಳಿಗೆ ಮಾನದಂಡ ಇರುತ್ತೆ ಎಂದರು.
ಇನ್ನು ಮುಖ್ಯಮಂತ್ರಿ ಆಯ್ಕೆ ವಿಚಾರವಾಗಿ ಮಾತನಾಡಿದ ಅವರು, ಮುಖ್ಯಮಂತ್ರಿ ಆಯ್ಕೆ ಸುಸೂತ್ರವಾಗಿ ಆಗಲಿದೆ. ನಮ್ಮ ವರಿಷ್ಠರು ಈಗಾಗಲೇ ಶಾಸಕರ ಅಭಿಪ್ರಾಯ ಪಡೆದಿದ್ದಾರೆ. ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಅವರುಗಳು ಚರ್ಚೆ ಮಾಡಿ ಈ ಬಗ್ಗೆ ನಿರ್ಧರಿಸುತ್ತಾರೆ ಎಂದು ಹೇಳಿದರು.