ವಕ್ಫ್ ವಿಚಾರದಲ್ಲಿ ಅನಗತ್ಯವಾಗಿ ಗೊಂದಲ ಸೃಷ್ಠಿಸಿ, ರೈತರನ್ನು ತಪ್ಪುದಾರಿಗೆ ಎಳೆಯುತ್ತಿರುವ ಬಿಜೆಪಿ ನಾಯಕರು ಇದೀಗ ವಕ್ಫ್ ರಾಜಕೀಯ ಮಾಡುತ್ತ ವಿಜಯಪುರಕ್ಕೆ ಬಂದಿದ್ದಾರೆ. ಅಹವಾಲು ಆಲಿಸಲು ಬಂದಿರುವ ಬಿಜೆಪಿ ತಂಡಕ್ಕೆ ರಾಜ್ಯ ಜನತೆಯ ಪರವಾಗಿ ಕೇಳುವ ನಾಲ್ಕೇ ನಾಲ್ಕು ಪ್ರಶ್ನೆಗಳಿಗೆ ಉತ್ತರ ನೀಡಬೇಕು ಎಂದು ಎಸ್ ಎಂ ಪಾಟೀಲ್ ಗಣಿಯಾರ ಹೇಳಿದರು.
ವಿಜಯಪುರ ನಗರದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, “ವಕ್ಫ್ ಬೋರ್ಡ್ ಮಂಡಳಿ ಸರ್ಕಾರದಿಂದ ನೇಮಿಸಿದ ಸ್ವಾಯತ್ತ ಸಂಸ್ಥೆಯಾಗಿದ್ದು, ಭಾರತೀಯ ಸಂವಿಧಾನ ನಿಯಮಗಳ ಅಡಿಯಲ್ಲಿ ಅದು ಕಾರ್ಯನಿರ್ವಹಿಸುತ್ತ ಬಂದಿದೆ. ಬಿಜೆಪಿಯವರು ಈಗ ಗೊಂದಲ ಸೃಷ್ಠಿಸಿದ್ದು, ಕಾಂಗ್ರೆಸ್ ಸರ್ಕಾರ ಮಾತ್ರ ರೈತರಿಗೆ ನೋಟಿಸ್ ನೀಡಿ, ಅನ್ಯಾಯ ಮಾಡಿದೆಯೆಂದು ಆರೋಪಿಸುತ್ತಿದ್ದಾರೆ. ಹಾಗಿದ್ದರೆ ಈ ಹಿಂದೆ ಆಡಳಿತ ನಡೆಸಿದ ಬಿಜೆಪಿ ಸರ್ಕಾರದ ಅವಧಿಯಲ್ಲಿ ಬಿ ಎಸ್ ಯಡಿಯೂರಪ್ಪ, ಡಿ ವಿ ಸದಾನಂದಗೌಡ, ಜಗದೀಶ್ ಶೆಟ್ಟರ್, ಬಸವರಾಜ ಬೊಮ್ಮಾಯಿಯವರು ಸರ್ಕಾರದ ನೇತೃತ್ವ ವಹಿಸಿದ ಸಂದರ್ಭದಲ್ಲಿ ಮಾಡಿರುವ ಕೆಲಸಗಳ ಕುರಿತು ಉತ್ತರಿಸಬೇಕು” ಎಂದರು.
“ಬಿಜೆಪಿ ಆಡಳಿತ ಅವಧಿಯಲ್ಲಿ ಎಷ್ಟು ಆಸ್ತಿಯನ್ನು ರೈತರು ಅಥವಾ ಸಾರ್ವಜನಿಕರಿಂದ ವಕ್ಫ್ ಆಸ್ತಿಯೆಂದು ಮರಳಿ ಪಡೆದಿದ್ದೀರಿ?. ಅವುಗಳಲ್ಲಿ ಎಷ್ಟು ಮ್ಯುಟೇಶನ್ ಮಾಡಿ ವಕ್ಫ್ ಆಸ್ತಿ ನೋಂದಣಿ ಮಾಡಿದ್ದೀರಿ?. ಬಿಜೆಪಿ ಆಡಳಿತದ ಅವಧಿಯಲ್ಲಿ ಎಷ್ಟು ರೈತರು ಅಥವಾ ಸಾರ್ವಜನಿಕರಿಗೆ ನೋಟಿಸ್‌ಗಳನ್ನು ನೀಡಿದ್ದಾರೆ?. ಬಿಜೆಪಿ ಅವಧಿಯಲ್ಲಿ ವಕ್ಫ್ ಕಾಯ್ದೆಗೆ ಸಂಬಂಧಿಸಿದಂತೆ ಎಷ್ಟು ಗೆಜೆಟ್ ನೋಟಿಫಿಕೇಶನ್‍ಗಳನ್ನು ಹೊರಡಿಸಿದ್ದಾರೆ?. ವಕ್ಫ್ ಆಸ್ತಿ ಸಂರಕ್ಷಿಸಲು ಬಿಜೆಪಿ ಸರ್ಕಾರದ ಅವಧಿಗಳಲ್ಲಿ ಸಂಬಂಧಿತ ಮಂತ್ರಿಗಳು ಎಷ್ಟು ಸಭೆಗಳನ್ನು ನಡೆಸಿದ್ದಾರೆ?. ಈ ಎಲ್ಲ ಪ್ರಶ್ನೆಗಳಿಗೆ ಮಹಾನ್ ಘನಕಾರ್ಯಕ್ಕೆ ಬಿಜೆಪಿ ನಾಯಕರು ಉತ್ತರವನ್ನು ನೀಡಿ ವಿಜಯಪುರದಿಂದ ಹೋಗಬೇಕು” ಎಂದು ತಾಕೀತು ಮಾಡಿದರು.
“ಕೆಲವು ಉದಾಹರಣೆಗಳನ್ನು ಮಾತ್ರ ನಾವು ಇಲ್ಲಿ ಒದಗಿಸುತ್ತೇವೆ. 2022ರ ಸೆಪ್ಟಂಬರ್ 14ರಂದು ಆನಂದ ಚಂದ್ರಶೇಖರ ಹಡಪದ, ಮತ್ತು 2022ರ ನವೆಂಬರ್ 18ರಂದು ಅಶೋಕ ಶಂಕ್ರಪ್ಪ ಬಣ್ಣದ, ಬಡಿಯಾಲ ಜಮನ ಲಾಹೋರಿ, ಗೋವಿಂದ ತಮ್ಮಣ್ಣಪ್ಪ ಲಿಂಗಸಾ, ಗಿರಿಮಲ್ಲಪ್ಪ ಶಿವಲಿಂಗಪ್ಪ ಚನ್ನಾಳ, ಎ ಸಂಜಯಕುಮಾರ ಶಶಿಮಲ್ಲ ಜೈನ, ಮಹಾವೀರ ಶಂಕರಲಾಲ ಒಸ್ವಾಲ, ರವಿ ರಾಮಣ್ಣ ಮಾದರ, ಬಸಪ್ಪ ಶಿದಪ್ಪ ಬಂಗಾರಿ, ಮಹಾಲಿಂಗಯ್ಯ ನಾಗಯ್ಯ ಹಿರೇಮಠ ಇವರಿಗೆಲ್ಲ ಸರ್ಕಾರ ನೋಟಿಸ್ ನೀಡಿತ್ತು. ಇವರುಗಳು ಯಾವ ಸಮುದಾಯಕ್ಕೆ ಸೇರಿದವರು?. ಇವರಿಗೆ ನೋಟಿಸ್ ನೀಡಿದ ಅವಧಿಯಲ್ಲಿ ಯಾವ ಸರ್ಕಾರ ಆಡಳಿತದಲ್ಲಿತ್ತು?, ಸದರಿಯವರಿಗೆ ಇವರಿಗೆ ನೋಟಿಸ್ ನೀಡಿದ ದಿನಾಂಕದಂದು ಜಿಲ್ಲೆಗೆ ಅಹವಾಲು ಆಲಿಸಲು ಬಂದ ಬಿಜೆಪಿ ತಂಡದಲ್ಲಿರುವ ಸದಸ್ಯರು ಯಾವ ಯಾವ ಹುದ್ದೆಯಲ್ಲಿದ್ದರು?, ಆಗ ಅಧಿಕಾರ ಅನುಭವಿಸುತ್ತಿದ್ದ ಇವರಿಗೆ, ರೈತರಿಗೆ, ಸಾರ್ವಜನಿಕರಿಗೆ ನೋಟಿಸ್ ನೀಡಿ, ಅವರ ಆಸ್ತಿಯನ್ನು ವಕ್ಫ್ ಆಸ್ತಿಯೆಂದು ಮರಳಿ ಪಡೆದ ಸಂದರ್ಭದಲ್ಲಿ ವಿಷಯ ತಿಳಿದಿರಲಿಲ್ಲವೇ? ಅಥವಾ ವಿಷಯ ತಿಳಿದು ಸುಮ್ಮನಿದ್ದರಾ? ಅಧಿಕಾರದಲ್ಲಿಗ ಒಂದು ಕಾಯ್ದೆ? ಅಧಿಕಾರಲ್ಲಿ ಇಲ್ಲದಿದ್ದಾಗ ಇನ್ನೊಂದು ಕಾಯ್ದೆಯಾ?” ಎಂದು ಛಾಟಿ ಬೀಸಿದರು.
“ವಿಜಯಪುರ ಜಿಲ್ಲೆಗೆ ಆಗಮಿಸುತ್ತಿರುವ ಬಿಜೆಪಿ ನಾಯಕುರುಗಳು ಈ ಪ್ರಶ್ನೆಗಳಿಗೆ ಉತ್ತರ ಒದಗಿಸಬೇಕು ಮತ್ತು ಸತ್ಯವನ್ನು ಬಹಿರಂಗ ಪಡಿಸಬೇಕು. ಪ್ರತಿ ವಿಷಯಕ್ಕೆ ಹಿಂದೂ-ಮುಸ್ಲಿಂ ಎಂದು ಭೇದಗಳನ್ನು ಸೃಷ್ಠಿಸಿ, ರಾಜಕೀಯ ಮಾಡುತ್ತಿರುವ ಇವರಿಗೆ ಎಲ್ಲ ವಿಷಯಗಳು ಬಹಿರಂಗವಾದರೆ ಇವರ ನಿಜವಾದ ಬಣ್ಣ ಹೊರಬರುತ್ತದೆ” ಎಂದರು.
“ಹಿಜಾಬ್, ಹಲಾಲ್, ಉರಿಗೌಡ-ನಂಜೆಗೌಡ ಪ್ರಕರಣಗಳನ್ನು ಸೃಷ್ಠಿಸಿ, ರಾಜಕೀಯ ಮಾಡುತ್ತಿದ್ದ ಬಿಜೆಪಿ ಮುಖಂಡರಿಗೆ ತಾವು ಅಧಿಕಾರಿದಲ್ಲಿದ್ದಾಗ ವಕ್ಫ್ ಮಂಡಳಿ ರೈತರಿಗೆ ನೋಟಿಸ್ ನೀಡಿದಾಗ ಸುಮ್ಮನಿದ್ದರು. ಇದೀಗ ಗೊಂದಲಗಳನ್ನು ನೆರೆಯ ಮಹಾರಾಷ್ಟ್ರದ ಚುನಾವಣೆ ಸಂದರ್ಭದಲ್ಲಿ ಸೃಷ್ಠಿಮಾಡಿ, ಇವರು ರಾಜಕೀಯ ಲಾಭ ಪಡೆಯಲು ಮುಗ್ದ ರೈತರನ್ನು ಪ್ರಚೋದಿಸಿ, ಹೋರಾಟ ಮಾಡುತ್ತಿದ್ದಾರೆ” ಎಂದು ಆರೋಪಿಸಿದರು.
ಈ ಸುದ್ದಿ ಓದಿದ್ದೀರಾ? ಗದಗ | ನ್ಯಾಯಬೆಲೆ ಅಂಗಡಿಗಳಲ್ಲಿ ಕಳಪೆ ಗುಣಮಟ್ಟದ ಜೋಳ ವಿತರಣೆ: ಕರವೇಯಿಂದ ದೂರು
“ಎಲ್ಲ ವಕ್ಫ್ ಆಸ್ತಿಗಳ ಕುರಿತು ಕೈಗಾರಿಕೆ ಸಚಿವ ಎಂ ಬಿ ಪಾಟೀಲರು ಜನರಿಗೆ ಸಮಗ್ರ ಮಾಹಿತಿ ಒದಗಿಸಿದ್ದಾರೆ. ನಿನ್ನೆ ಬೆಂಗಳೂರಿನಲ್ಲಿ ಕಂದಾಯ ಸಚಿವರು, ವಕ್ಫ್ ಸಚಿವರೊಂದಿಗೆ ಜಂಟಿ ಪತ್ರಿಕಾಗೋಷ್ಠಿ ನಡೆಸಿ ಎಲ್ಲ ವಿವರಗಳನ್ನು ಈಗಾಗಲೇ ಸಚಿವ ಎಂ ಬಿ ಪಾಟೀಲರು ನೀಡಿದ್ದಾರೆ. ಇನ್ನೂ ಹೆಚ್ಚಿನ ವಿವರಣೆಯ ಅಗತ್ಯವಿರುವುದಿಲ್ಲ. ಹಾಗಾಗಿ ಮೇಲಿನ ಎಲ್ಲ ಪ್ರಶ್ನೆಗಳಿಗೆ ಬಿಜೆಪಿ ನಾಯಕರು ರಾಜ್ಯದ ಜನತೆಯ ಎದುರು ಕೂಡಲೇ ಉತ್ತರ ಒದಗಿಸಬೇಕು” ಎಂದು ಆಗ್ರಹಿಸಿದರು.
ಮಾಜಿ ಶಾಸಕ ಪ್ರೊ. ರಾಜು ಆಲಗೂರ, ವಿಜಯಪುರ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಮಲ್ಲಿಕಾರ್ಜುನ ಲೋಣಿ, ಅಬ್ದುಲ್ ಹಮೀದ್ ಮುಶ್ರಿಫ್, ಡಾ ಗಂಗಾಧರ ಸಂಬಣ್ಣಿ ಇದ್ದರು.