ದಲಿತ ಸಮುದಾಯಕ್ಕೆ ಸೇರಿದ ವೈದ್ಯೆಯನ್ನು ನಿಂದಿಸಿರುವ ಅರಕಲಗೂಡು ಸಾರ್ವಜನಿಕ ಆಸ್ಪತ್ರೆಯ ಪ್ರಭಾರಿ ಆಡಳಿತ ವೈದ್ಯಾಧಿಕಾರಿ ಡಾ. ಸ್ವಾಮಿಗೌಡ ಅವರನ್ನು ಕೂಡಲೇ ಬಂಧಿಸಿ ಸೇವೆಯಿಂದ ಅಮಾನತು ಮಾಡುವಂತೆ ಹಾಸನ ನಗರದಲ್ಲಿ ಜನಪರ ದಲಿತ, ಜನಪರ ಚಳುವಳಿಗಳ ಒಕ್ಕೂಟದ ಮುಖಂಡರು ಆಗ್ರಹಿಸಿದ್ದಾರೆ.
ಸಾರ್ವಜನಿಕ ಆಸ್ಪತ್ರೆ ಪ್ರಭಾರಿ ಆಡಳಿತ ವೈದ್ಯಾಧಿಕಾರಿ ಡಾ. ಸ್ವಾಮಿಗೌಡ ಇವರು ರಾಜ್ಯ ಸರ್ಕಾರಿ ನೌಕರರ ಚುನಾವಣೆಯ ವಿಷಯವಾಗಿ ಅರಕಲಗೂಡು ತಾಲೂಕು ಆರೋಗ್ಯಾಧಿಕಾರಿ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಆರೋಗ್ಯ ನಿರೀಕ್ಷಕ ಜಯರಾಂ ಎಂಬುವವರೊಂದಿಗೆ ಮೊಬೈಲ್ ಮುಖಾಂತರ ನಡೆಸಿರುವ ಸಂಭಾಷಣೆಯಲ್ಲಿ ಅರಕಲಗೂಡು ತಾಲೂಕು ಆರೋಗ್ಯ ಅಧಿಕಾರಿಯಾಗಿರುವ ದಲಿತ ಸಮುದಾಯದ ಪರಿಶಿಷ್ಟ ಜಾತಿಗೆ ಸೇರಿದ ಡಾ. ಪುಷ್ಪಲತ ಅವರನ್ನು ಜಾತಿ ನಿಂದನೆ ಮಾಡಿರುವುದಲ್ಲದೇ ಒಬ್ಬ ಮಹಿಳಾ ಅಧಿಕಾರಿಯನ್ನು ಅವಾಚ್ಯ ಪದಗಳಿಂದ ನಿಂದಿಸಿದ್ದಾರೆ ಎಂದು ತಿಳಿಸಿದರು.
ಆರೋಗ್ಯ ನಿರೀಕ್ಷಕ ಜಯರಾಂ ಅವರನ್ನೂ ಅವಾಚ್ಯ ಪದಗಳಿಂದ ನಿಂದಿಸಿ ಹಾಗೂ ಅವರ ಸಮುದಾಯವನ್ನೂ ನಿಂದಿಸಿ ದುರಂಹಂಕಾರದಿಂದ ವರ್ತಿಸಿ ಜಯರಾಂ ಅವರನ್ನು ಸರ್ಕಾರಿ ನೌಕರರ ಸಂಘದ ಚುನಾವಣಾ ಕಣದಿಂದ ಹಿಂದೆ ಸರಿಯುವಂತೆ ಬೆದರಿಕೆ ಹಾಕಿರುವುದನ್ನು ತೀವ್ರವಾಗಿ ಖಂಡಿಸುತ್ತೇವೆ ಎಂದು ಹಾಸನ ಜಿಲ್ಲಾ ಜನಪರ ದಲಿತ, ಜನಪರ ಚಳುವಳಿಗಳ ಒಕ್ಕೂಟ ತಿಳಿಸಿದೆ.
ದಲಿತ ವಿರೋಧಿ, ಮಹಿಳಾ ವಿರೋಧಿ, ಜಾತಿವಾದಿ, ಪ್ರಜಾಪ್ರಭುತ್ವ ವಿರೋಧಿ ಮತ್ತು ದುರಹಂಕಾರಿ ವ್ಯಕ್ತಿಯಾಗಿರುವ ಹಾಗೂ ಜಾತಿನಿಂದನೆ ಪ್ರಕರಣದಲ್ಲಿ ಎಸ್.ಸಿ. ಮತ್ತು ಎಸ್.ಟಿ. ದೌರ್ಜನ್ಯ ತಡೆ ಕಾಯ್ದೆಯಡಿಯಲ್ಲಿ ಪೋಲೀಸ್ ಪ್ರಕರಣದಲ್ಲಿ ಮುಖ್ಯ ಆರೋಪಿಯಾಗಿರುವ ಅರಕಲಗೂಡು ಸಾರ್ವಜನಿಕ ಆಸ್ಪತ್ರೆಯ ಪ್ರಭಾರಿ ಆಡಳಿತ ವೈದ್ಯಾಧಿಕಾರಿ ಡಾ. ಸ್ವಾಮಿಗೌಡ ಎಂಬುವವರನ್ನು ಜಿಲ್ಲಾಡಳಿತ ಕೂಡಲೇ ಸೇವೆಯಿಂದ ಅಮಾನತುಗೊಳಿಸಿ ಆತನ ಮೇಲೆ ಸೂಕ್ತವಾದ ಕಾನೂನು ಕ್ರಮ ಕೈಗೊಳ್ಳಬೇಕೆಂದು ಹಾಸನ ಜಿಲ್ಲಾ ದಲಿತ – ಜನಪರ ಚಳುವಳಿಗಳ ಒಕ್ಕೂಟ ಆಗ್ರಹಿಸಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಅರಕಲಗೂಡು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಜಾತಿ ನಿಂದನೆ ಪ್ರಕರಣದ ಪ್ರಮುಖ ಆರೋಪಿಯಾಗಿರುವ ಡಾ. ಸ್ವಾಮಿಗೌಡ ಎಂಬುವವರನ್ನು ಪೊಲೀಸರು ಕೂಡಲೇ ಬಂಧಿಸಿ, ಸೇವೆಯಿಂದ ಅಮಾನತುಗೊಳಿಸಿ ಸೂಕ್ತ ಕಾನೂನು ಕ್ರಮ ಜರುಗಿಸಬೇಕು. ಇಲ್ಲದಿದ್ದರೆ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ಜನಪರ ಚಳುವಳಿಗಳ ಒಕ್ಕೂಟ ತಿಳಿಸಿದ್ದಾರೆ.
ಇದನ್ನೂ ಓದಿದ್ದೀರಾ: ಈ ದಿನ ಸಂಪಾದಕೀಯ | ಒಳ ಮೀಸಲಾತಿ ತೀರ್ಮಾನ: ಹೋರಾಟಕ್ಕೆ ಸಂದ ಜಯ, ಕಾಯಿಸದಿರಲಿ ಸರ್ಕಾರ
ಈ ಸಂದರ್ಭದಲ್ಲಿ ಹಿರಿಯ ದಲಿತ ಮುಖಂಡ ಎಚ್.ಕೆ. ಸಂದೇಶ್, ದಸಂಸ ರಾಜ್ಯ ಸಂಚಾಲಕ ಎಂ. ಸೋಮಶೇಖರ್, ಸಿಐಟಿಯು ಜಿಲ್ಲಾಧ್ಯಕ್ಷ ಧರ್ಮೇಶ್, ಡಿಎಚ್‌ಎಸ್ ಜಿಲ್ಲಾ ಸಂಚಾಲಕರು ರಮೇಶ್, ಡಿಎಚ್‌ಎಸ್ ಜಿಲ್ಲಾ ಸಂಚಾಲಕ ಎಂ.ಜಿ. ಪೃಥ್ವಿ, ಎಸ್‌ಎಫ್‌ಐ ಜಿಲ್ಲಾ ಕಾರ್ಯದರ್ಶಿ ರಮೇಶ್ ಇನ್ನಿತರರು ಉಪಸ್ಥಿತರಿದ್ದರು.
