ರಾಯಚೂರು ಜಿಲ್ಲೆಯ ವ್ಯಾಪಾರ ಹಾಗೂ ವಾಣಿಜ್ಯೋದ್ಯಮ ಸಂಸ್ಥೆಗಳ ನಾಮಫಲಕಗಳನ್ನು ಶೇ. 70ರಷ್ಟು ಕನ್ನಡದಲ್ಲಿರಬೇಕು ಎಂದು ನಮ್ಮ ಕರ್ನಾಟಕ ಸೇನೆ ವತಿಯಿಂದ ಜಿಲ್ಲಾಡಳಿತಕ್ಕೆ ಹಕ್ಕೊತ್ತಾಯ ಸಲ್ಲಿಸಿದರು.
ಜಿಲ್ಲೆಯಾದ್ಯಂತ ವ್ಯಾಪಾರ ಮತ್ತು ವಾಣಿಜ್ಯೋದ್ಯಮ ಸಂಸ್ಥೆಗಳು ಎಲ್ಲಾ ನಾಮಫಲಕಗಳನ್ನು ಕನ್ನಡದಲ್ಲಿ ಅಳವಡಿಸುವಂತೆ ಸೂಚಿಸಬೇಕು. ನಾಮಫಲಕಗಳಲ್ಲಿ ಶೇ.70 ರಷ್ಟು ಭಾಗ ಕನ್ನಡದಲ್ಲಿರತಕ್ಕದ್ದು ಉಳಿದ ಶೇ.30 ರಷ್ಟು ಭಾಗದಲ್ಲಿ ಇತರ ಭಾಷೆ ಬಳಸಬಹುದಾಗಿದೆ ಎಂಬುದು ಸರ್ಕಾರದ ಸುತ್ತೋಲೆಯಲ್ಲಿ ಆದೇಶಿಸಿದ್ದರೂ, ನಾಮಫಲಕಗಳಲ್ಲಿ ಕನ್ನಡ ಕಾಣಿಸುತ್ತಿಲ್ಲ ಎಂದು ಒತ್ತಾಯಿಸಿದರು.
ನಗರದಲ್ಲಿ ಜಿಲ್ಲಾಡಳಿತವು ಕನ್ನಡದ ಬಗ್ಗೆ ತಳೆದಿರುವ ನಿರ್ಲಕ್ಷ್ಯದಿಂದಾಗಿ ಅನ್ಯ ಭಾಷೆಗಳು ಬಹುಪಾಲು ನಾಮಫಲಕಗಳು ಆವರಿಸಿದ್ದು, ಎಲ್ಲಾ ಕಡೆ ಎದ್ದು ಕಾಣಿಸುತ್ತಿವೆ. ಆದ್ದರಿಂದ ಕೂಡಲೇ ನವೆಂಬರ್ 1ರೊಳಗಾಗಿ ಎಲ್ಲಾ ವ್ಯಾಪಾರ ಮತ್ತು ವಾಣಿಜ್ಯೋದ್ಯಮ ಸಂಸ್ಥೆಗಳಿಗೆ ತಿಳುವಳಿಕೆ ಪತ್ರ ಹೊರಡಿಸಿ ಕನ್ನಡ ನಾಮಫಲಕ ಕಾರ್ಯರೂಪಕ್ಕೆ ತರಬೇಕು ಹಾಗೂ ಖಡಕ್ ಸೂಚನೆ ಆದೇಶಿಸಬೇಕು ಎಂದು ಆಗ್ರಹಿಸಿದರು.
ನವೆಂಬರ್ 1ರಿಂದ ರಾಯಚೂರಿನ ಎಲ್ಲಾ ಚಿತ್ರಮಂದಿರಗಳಲ್ಲಿ ಕಡ್ಡಾಯವಾಗಿ ಕನ್ನಡ ಚಲನಚಿತ್ರಗಳನ್ನು ಪ್ರದರ್ಶಿಸಲು ಆದೇಶ ನೀಡಬೇಕು ಹಾಗೂ ಜಿಲ್ಲೆಯ ಕನ್ನಡ ಪರ ಸಂಘಟನೆಗಳು ಕನ್ನಡ ಕಂಪನ್ನು ಪಸರಿಸುವ ಕಾರ್ಯ ಕೈಗೊಳ್ಳಬೇಕಾಗಿದೆ ಎಂದು ಮನವಿ ಮಾಡಿದರು.
ಇದನ್ನು ಓದಿದ್ದೀರಾ? ಯಶ್ ನಟನೆಯ ‘ಟಾಕ್ಸಿಕ್’ ಸಿನಿಮಾಕ್ಕಾಗಿ ನೂರಾರು ಮರಕ್ಕೆ ಕೊಡಲಿ: ಕ್ರಮಕ್ಕೆ ಸೂಚಿಸಿದ ಸಚಿವ ಈಶ್ವರ್ ಖಂಡ್ರೆ
ನವೆಂಬರ್ 1 ರಂದು ಶಾಲಾ ಮಕ್ಕಳಿಗೆ ರಜೆ ಘೋಷಿಸದೇ ಕನ್ನಡದ ಧ್ವಜಾರೋಹಣ ಮಾಡಿ ನಾಡಗೀತೆ ಹಾಡಿ ರಾಜ್ಯೋತ್ಸವ ಆಚರಣೆಯ ಇತಿಹಾಸವನ್ನು ಮಕ್ಕಳಿಗೆ ತಿಳಿಸಬೇಕೆಂದು ಎಲ್ಲಾ ಶಾಲೆಗಳಿಗೆ ಆದೇಶ ಹೊರಡಿಸಬೇಕು ಎಂದರು.
ಈ ವೇಳೆ ನಮ್ಮ ಕರ್ನಾಟಕ ಸೇನೆ ಜಿಲ್ಲಾಧ್ಯಕ್ಷ ಕೊಂಡಪ್ಪ , ಎಂ ಎಸ್ ವೆಂಕಟೇಶ , ಮಹೇಶ್ ಪಾಟೀಲ್ , ರಾಜಶೇಖರ್ , ವೀರೇಶ್ ಎಲಿಗಾರ , ಇನ್ನಿತರರು ಹಾಜರಿದ್ದರು.