ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಆನಂದಪುರದಿಂದ ಶಿಕಾರಿಪುರ ರಾಷ್ಟ್ರೀಯ ಹೆದ್ದಾರಿಯ ಕಣ್ಣೂರು ಗ್ರಾಮದಲ್ಲಿ ರಸ್ತೆಯ ಪಕ್ಕದಲ್ಲಿ ಒಂದು ಬೃಹತ್ತಾದ ಒಣಗಿದ ಮರ ಬೀಳುವ ಹಂತಕ್ಕೆ ತಲುಪಿತ್ತು. ಅಪಾಯದ ಸ್ಥಿತಿಯಲ್ಲಿರುವ ಮರವನ್ನು ತೆರವುಗೊಳಿಸುವಂತೆ ಸಾರ್ವಜನಿಕರು ಆಗ್ರಹಿಸಿದ್ದರ ಬಗ್ಗೆ ಈ ದಿನ.ಕಾಮ್ ವರದಿ ಪ್ರಕಟಿಸಿತ್ತು. ಇದರ ಬೆನ್ನಲ್ಲೇ ಮರವನ್ನು ಅಧಿಕಾರಿಗಳು ತೆರವುಗೊಳಿಸಿದ್ದಾರೆ.
ಅ.24ರಂದು ‘ಶಿವಮೊಗ್ಗ | ಬೀಳುವ ಹಂತಕ್ಕೆ ತಲುಪಿದ ಒಣಗಿರುವ ಬೃಹತ್ ಮರ: ತೆರವಿಗೆ ಸಾರ್ವಜನಿಕರ ಆಗ್ರಹ’ ಎಂಬ ಶೀರ್ಷಿಕೆಯಡಿಯಲ್ಲಿ ವರದಿ ಪ್ರಕಟಿಸಲಾಗಿತ್ತು. ಸುದ್ದಿಯನ್ನು ಗಮನಿಸಿದ ಅರಣ್ಯ ಇಲಾಖೆಯ ಅಧಿಕಾರಿಗಳು, ಕಣ್ಣೂರು ಗ್ರಾಮದ ರಸ್ತೆಯ ಪಕ್ಕದಲ್ಲಿದ್ದ ಒಣಗಿದ ಮರಕ್ಕೆ ಮುಕ್ತಿ ನೀಡಿದ್ದಾರೆ.

ವಿದ್ಯುತ್ ಕಂಬಗಳು ಸಹ ಮರದ ಅಕ್ಕಪಕ್ಕದಲ್ಲಿದೆ ಹಾಗೂ ಈ ರಾಷ್ಟ್ರೀಯ ಹೆದ್ದಾರಿಯಲ್ಲಿ ಹಲವಾರು ವಾಹನಗಳು ದಿನನಿತ್ಯ ಸಂಚರಿಸುತ್ತವೆ. ಶಾಲಾ-ಕಾಲೇಜುಗಳಿಗೆ ಮಕ್ಕಳು ನಡೆದುಕೊಂಡು ಹೋಗುತ್ತಿರುತ್ತಾರೆ. ಒಂದು ವೇಳೆ ದಿಡೀರನೆ ಈ ಬೃಹತ್ ಮರ ಬಿದ್ದರೆ ಬಹಳ ಅನಾಹುತಗಳು ಸಂಭವಿಸಬಹುದು ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದರು.
ಇದಕ್ಕೆ ಸ್ಪಂದಿಸಿದ ಅರಣ್ಯಾಧಿಕಾರಿಗಳಾದ ಚಂದ್ರಶೇಖರ್ ಅವರು, ಕೆಇಬಿ ಅಧಿಕಾರಿಗಳ ಸಹಕಾರದೊಂದಿಗೆ ಇಂದು ಮರವನ್ನು ತೆರವುಗೊಳಿಸಿದ್ದಾರೆ ಎಂದು ಆನಂದಪುರಂ ಸ್ಥಳೀಯರಾದ ಅಮಿತ್ ಆರ್. ಈ ದಿನ.ಕಾಮ್‌ಗೆ ಮಾಹಿತಿ ನೀಡಿದ್ದು, ವರದಿ ಮಾಡುವ ಮೂಲಕ ಅಧಿಕಾರಿಗಳ ಗಮನಕ್ಕೆ ತಂದಿದ್ದಕ್ಕೆ ಧನ್ಯವಾದಗಳನ್ನು ತಿಳಿಸಿದ್ದಾರೆ.


