ಪರಿಶಿಷ್ಟ ಜಾತಿಗಳ ಒಳಮೀಸಲಾತಿ ವರ್ಗೀಕರಣದ ಕುರಿತಾಗಿ ರಾಜ್ಯ ಸಚಿವ ಸಂಪುಟದಲ್ಲಿ ತೀರ್ಮಾನ ತೆಗೆದುಕೊಂಡು ಮತ್ತೊಂದು ಸಮಿತಿ ರಚಿಸಲು ನಿರ್ಧರಿಸಿರುವುದು ತರಾತುರಿಯ ನಿರ್ಧಾರವಾಗಿದೆ ಎಂದು ಮಾದಿಗ ಮೀಸಲಾತಿ ಹೋರಾಟ ಸಮಿತಿ ರಾಜ್ಯ ಗೌರವಾಧ್ಯಕ್ಷ ಎಸ್.ಮಾರೆಪ್ಪ ಹೇಳಿದರು.
ರಾಯಚೂರು ಪ್ರೆಸ್‌ಕ್ಲಬ್‌ನಲ್ಲಿ ಮಂಗಳವಾರ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ರಾಜ್ಯ ಸರ್ಕಾರದ ಬಳಿ ಪರಿಶಿಷ್ಟ ಜಾತಿಗಳ ದತ್ತಾಂಶವಿದ್ದರೂ ಉದ್ದೇಶಪೂರ್ವಕವಾಗಿ ವಿಳಂಬ ಮಾಡುವ ಉದ್ದೇಶದಿಂದ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಅಧ್ಯಕ್ಷತೆಯಲ್ಲಿ ಮತ್ತೊಂದು ಸಮಿತಿ ರಚಿಸಲು ನಿರ್ಧರಿಸಲಾಗಿದೆ. ಮೂರು ತಿಂಗಳೊಳಗೆ ಸಮುದಾಯ ಸಮೀಕ್ಷೆ ನಡೆಸಲು ಸಾಧ್ಯವಾಗುವುದಿಲ್ಲ ಎಂದು ಹೇಳಿದರು.
ಹಿಂದಿನ ಬಿಜೆಪಿ ಸರ್ಕಾರ ನ್ಯಾಯಮೂರ್ತಿ. ಎ.ಜೆ.ಸದಾಶಿವ ಆಯೋಗದ ವರದಿ ಅಂಕಿ-ಅಂಶಗಳ ಆಧಾರದ ಮೇಲೆ ಒಳ ಮೀಸಲಾತಿ ವರ್ಗಿಕರಣಕ್ಕೆ ಕೇಂದ್ರಕ್ಕೆ ಶಿಫಾರಸ್ಸು ಮಾಡಿತ್ತು. ಆಯೋಗದ ವರದಿಯಲ್ಲಿಯೇ ಆದಿ ಕರ್ನಾಟಕ, ಆದಿ ದ್ರಾವಿಡದ ಕುರಿತು ಪ್ರತ್ಯೇಕ ಕಲಂಗಳನ್ನು ಸಮೀಕ್ಷೆ ಫಾರಂನಲ್ಲಿ ಅಳವಡಿಸಲಾಗಿತ್ತು. ವೈಜ್ಞಾನಿಕವಾಗಿಯೇ ಸಮೀಕ್ಷೆ ನಡೆಸಲಾಗಿದೆ. ಆದರೆ ಕಾಂಗ್ರೆಸ್ ಸರ್ಕಾರದ ರಾಜ್ಯದಲ್ಲಿ ನಡೆಯುತ್ತಿರುವ ಮೂರು ಉಪ ಚುನಾವಣೆಯಲ್ಲಿ ಮಾದಿಗ ಸಮುದಾಯದ ಮತ ಪಡೆಯುವ ಉದ್ದೇಶದಿಂದ ತರಾತುರಿಯಲ್ಲಿ ನಿರ್ಧರಿಸಿರುವುದು ಸಮಾಧಾನ ತಂದಿಲ್ಲ ಎಂದು ಹೇಳಿದರು.

ಒಳಮೀಸಲಾತಿ ಜಾರಿಗೆ ತರುವ ನಿರ್ದಾರ ಸ್ವಾಗತಾರ್ಹವಾಗಿದ್ದರೂ ಜನರನ್ನು ದಾರಿತಪ್ಪಿಸುವ ಕೆಲಸ ಸಚಿವ ಸಂಪುಟ ಕೈಗೊಂಡಿದೆ. ಹೊಸದಾಗಿ ಸಮಿತಿ ರಚಿಸುವ ಅವಶ್ಯಕತೆ ಇರಲಿಲ್ಲ. ಜಾರಿಗೊಳಿಸಲು ಮತ್ತಷ್ಟು ವಿಳಂಬ ಮಾಡುವ ಉದ್ದೇಶ ಸರ್ಕಾರ ಹೊಂದಿರುವ ಸಂಶಯಗಳಿವೆ. ಈಗಾಗಲೇ ಸಂಡೂರು, ಹಾವೇರಿ ಉಪ ಚುನಾವಣೆಯಲ್ಲಿ ಮಾದಿಗ ಸಮೂದಾಯ ಜನರು ಕಾಂಗ್ರೆಸ್ ಬೆಂಬಲಿಸಲು ಮುಂದಾಗಿಲ್ಲ. ಇನ್ನೆರಡು ದಿನಗಳಲ್ಲಿ ಹೋರಾಟ ಸಮಿತಿಯ ಸಭೆ ನಡೆಸಿ, ಮುಂದಿನ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದರು.
ಇದನ್ನು ಓದಿದ್ದೀರಾ? ಕೇರಳ ಮುಖ್ಯಮಂತ್ರಿ ತೆರಳುತ್ತಿದ್ದ ಕಾರು – ಬೆಂಗಾವಲು ವಾಹನಗಳ ಮಧ್ಯೆ ಸರಣಿ ಅಪಘಾತ
ಈಗಾಗಲೇ ಕಾಂಗ್ರೆಸ್ ಸೋಲಿಸಲು ಪ್ರಚಾರ ಕಾರ್ಯವನ್ನು ಹೋರಾಟ ಸಮಿತಿ ಕೈಗೊಂಡಿದೆ. ಸಚಿವ ಸಂಪುಟ ತೀರ್ಮಾನದಂತೆ ಮೇಲ್ನೋಟಕ್ಕೆ ಒಳಮೀಸಲಾತಿ ಜಾರಿಗೊಳಿಸುವುದಾಗಿ ಹೇಳಿದ್ದರೂ ವಿಳಂಬವಾಗುವ ಎಲ್ಲ ಲಕ್ಷಣಗಳಿವೆ. ಸಮುದಾಯದ ಜನರು ಯಾವುದೇ ಅವಸರದ ನಿರ್ಧಾರ ಕೈಗೊಳ್ಳದೇ ಹೋರಾಟ ತಾರ್ಕಿಕ ಅಂತ್ಯ ಕಾಣಿಸುವ ನಿರ್ಧಾರಕ್ಕೆ ಬೆಂಬಲಿಸಬೇಕೆಂದರು.
ಸುದ್ದಿಗೋಷ್ಠಿಯಲ್ಲಿ ಹೋರಾಟ ಸಮಿತಿ ರಾಜ್ಯಾಧ್ಯಕ್ಷ ಶಿವರಾಯ ಅಕ್ಕರಕಿ, ಉಪಾಧ್ಯಕ್ಷ ಹೇಮರಾಜ ಅಸ್ಕಿಹಾಳ, ನರಸಿಂಹ ಮರ್ಚಟ್ಹಾಳ, ಆಂಜಿನಯ್ಯ ಉಟ್ಕೂರು, ತಾಯಪ್ಪ ಗಧಾರ, ಆಂಜಿನೇಯ್ಯ ಕುರಬದೊಡ್ಡಿ, ನರಸಿಂಹಲು, ಶ್ರೀನಿವಾಸ ಕೊಪ್ಪರ, ಅಬ್ರಹಾಂ ಕಮಲಾಪುರು ಉಪಸ್ಥಿತರಿದ್ದರು.
