ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಹೊಸಕೋಟೆ ಬೆಟ್ಟದ ರೋಡಿಕ್ ಕಾಫಿ ಎಸ್ಟೇಟ್‌ನವರಿಗೆ ಗಣಿಗಾರಿಕೆಗಾಗಿ ನೀಡಿರುವ ಅನುಮತಿ ವಾಪಸ್ ಪಡೆಯುವಂತೆ ಒತ್ತಾಯಿಸಿ ಸಕಲೇಶಪುರ ತಾಲೂಕು ಕಚೇರಿ ಮುಂದೆ ದಲಿತ ಸಂಘರ್ಷ ಸಮಿತಿಯಿಂದ ಪ್ರತಿಭಟನೆ ನಡೆಸಲಾಯಿತು.
ಕೊಡಗು ಮತ್ತು ಹಾಸನ ಜಿಲ್ಲೆಯ ವತಿಯಿಂದ ಈ ಜಂಟಿ ಹೋರಾಟವನ್ನು ಹಮ್ಮಿಕೊಳ್ಳಲಾಗಿತ್ತು. ಸಕಲೇಶಪುರ ತಾಲೂಕು, ಯಸಳೂರು ಹೋಬಳಿ, ಹೊಸೂರು ಗ್ರಾಮಪಂಚಾಯಿತಿ ವ್ಯಾಪ್ತಿಗೆ ಒಳಪಡುವ ಹೊಸಕೋಟೆ ಬೆಟ್ಟ ಆರಾಧನ ಎಸ್ಟೇಟ್ ಪಕ್ಕದಲ್ಲಿರುವ ರೋಡಿಕ್ ಕಾಫಿ ಎಸ್ಟೇಟ್‌ನವರು ಆಲಂಕಾರಿಕ ಶಿಲಾ ಗಣಿಗಾರಿಕೆ ನಡೆಸುತ್ತಿದ್ದಾರೆ. ಇದರಿಂದ ಸುತ್ತಮುತ್ತಲಿನ ಗ್ರಾಮದಲ್ಲಿ ವಾಸಿಸುತ್ತಿರುವ ಜನರಿಗೆ ಮತ್ತು ಕಾಡು ಪ್ರಾಣಿಗಳಿಗೆ ತೊಂದರೆ ಆಗುತ್ತಿದೆ ಎಂದು ಪ್ರತಿಭಟನಾಕಾರರು ದೂರಿದರು.
ಬೆಟ್ಟವು ಸಮುದ್ರ ಮಟ್ಟದಿಂದ ಸುಮಾರು 4 ಸಾವಿರ ಅಡಿಗಳ ಎತ್ತರದಲ್ಲಿದೆ. ಈ ಪ್ರದೇಶವು ಪಶ್ಚಿಮ ಘಟ್ಟಕ್ಕೆ ಸೇರಿರುವುದರಿಂದ, ಈ ಪ್ರದೇಶವನ್ನು ಹೇಮಾವತಿ ನದಿಯ ಮೂಲಸ್ಥಾನವಾಗಿದೆ. ಬೆಟ್ಟದ ಬುಡದಲ್ಲಿ 30 ಗ್ರಾಮಗಳು ಇವೆ. ಎಲ್ಲಾ ರೈತಾಪಿ ಕುಟುಂಬದವರು ವಾಸವಿದ್ದಾರೆ. ಹೀಗಾಗಿ, ಹೊಸಕೋಟೆ ಬೆಟ್ಟದಲ್ಲಿ ಗಣಿಗಾರಿಕೆ ನಡೆಸದಂತೆ ತಡೆ ವಿಧಿಸಬೇಕು ಎಂದು ಆಗ್ರಹಿಸಿದ್ದಾರೆ.
ಗಣಿಗಾರಿಕೆಯಿಂದ ಭೂಕುಸಿತವಾಗುತ್ತದೆ. ಸುತ್ತಮುತ್ತಲಿನ ಗ್ರಾಮದವರು ಝರಿ ನೀರನ್ನೇ ಕುಡಿಯುವುದಕ್ಕಾಗಿ ಅವಲಂಬಿಸಿದ್ದಾರೆ. ಪಶ್ಚಿಮ ಘಟ್ಟ ಪ್ರದೇಶಕ್ಕೆ ಒಳಪಡುವ ಹಾಗೂ ಸಾರ್ವಜನಿಕರ ವಿರೋಧ ಇರುವ ಪ್ರದೇಶದಲ್ಲಿ ಗಣಿಗಾರಿಕೆ ನಡೆಸಲು ಅವಕಾಶ ನೀಡಬಾರದು, ನೀಡಿರುವ ಅನುಮತಿಯನ್ನು ವಾಪಸ್ ಪಡೆದು ಈ ಪೂರ್ಣ ಪ್ರದೇಶವನ್ನು ಗಣಿಗಾರಿಕಾ ನಿಷೇಧಿತ ಪ್ರದೇಶವೆಂದು ಘೋಷಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದ್ದಾರೆ.
ಇದನ್ನೂ ಓದಿದ್ದೀರಾ?http://ಮಹಾರಾಷ್ಟ್ರ | ಅಕ್ರಮ ಪಟಾಕಿ ಅಂಗಡಿಗಳ ಮೇಲೆ ‘ನೀರಿನ ದಾಳಿ’ ನಡೆಸಿದ ಅಧಿಕಾರಿಗಳು!
ಕ್ಷೇತ್ರದ ಶಾಸಕರಿಗೆ, ಅಧಿಕಾರಿಗಳಿಗೆ ಗಣಿಗಾರಿಕೆ ನಿಲ್ಲಿಸುವಂತೆ ಮನವಿ ಮಾಡಿದ್ದೇವೆ. ಗಣಿಗಾರಿಕೆ ನಿಲ್ಲಿಸದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡುತ್ತೇವೆಂದು ದಸಂಸ ಹಾಸನ ಜಿಲ್ಲಾ ಸಂಚಾಲಕರಾದ ರಾಜಶೇಖರ್ ತಿಳಿಸಿದ್ದಾರೆ.
ಪ್ರತಿಭಟನೆಯಲ್ಲಿ ಹೆತ್ತೂರು ಅಣ್ಣಯ್ಯ, ಶಿವಕುಮಾರ್ ನಾರೂರು, ವಸಂತ ಹೊಸೂರು , ಬೆಳಗೂಡು ಬಸವರಾಜ್ ಇನ್ನಿತರರು ಗ್ರಾಮಸ್ಥರು ಉಪಸ್ಥಿತರಿದ್ದರು.
