ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಪ್ರಯಾಣಿಸುತ್ತಿದ್ದ ವಾಹನವೂ ಸೇರಿದಂತೆ ಅವರ ಬೆಂಗಾವಲು ವಾಹನಗಳು ಸರಣಿ ಅಪಘಾತಕ್ಕೀಡಾಗಿರುವ ಘಟನೆ ಕೇರಳದ ತಿರುವನಂತಪುರಂ ಬಳಿ ಸೋಮವಾರ ಸಂಜೆ ನಡೆದಿದೆ.
ಘಟನೆಯಲ್ಲಿ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅಪಾಯದಿಂದ ಪಾರಾಗಿದ್ದಾರೆ. ಅಲ್ಲದೆ, ಭದ್ರತಾ ಸಿಬ್ಬಂದಿಗಳಿಗೂ ಯಾವುದೇ ಅಪಾಯವಾಗಿಲ್ಲ. ಆದರೆ, ವಾಹನಗಳಿಗೆ ಹಾನಿಯಾಗಿದೆ ಎಂದು ವರದಿಯಾಗಿದೆ.
ಪಿಣರಾಯಿ ವಿಜಯನ್ ಅವರು ಕೊಟ್ಟಾಯಂನಿಂದ ತಿರುವನಂತಪುರಂಗೆ ತೆರಳುತ್ತಿದ್ದರು. ಈ ವೇಳೆ, ಸ್ಕೂ ಟಿಯಲ್ಲಿ ತೆರಳುತ್ತಿದ್ದ ಮಹಿಳೆಯೊಬ್ಬರು ಬಲಕ್ಕೆ ತಮ್ಮ ವಾಹನವನ್ನು ತಿರುಗಿಸಿದ್ದಾರೆ. ದಿಡೀರನೇ ಅಡ್ಡ ಬಂದ ಮಹಿಳೆಗೆ ಡಿಕ್ಕಿಯಾಗುವುದನ್ನು ತಪ್ಪಿಸಲು ಪಿಣರಾಯಿ ವಿಜಯನ್ ಅವರ ಬೆಂಗಾವಲು ವಾಹನದ ಚಾಲಕ ಬ್ರೇಕ್ ಹಾಕಿದ್ದು, ಹಿಂದಿನಿಂದ ಬಂದ ವಾಹನಗಳು ಪರಸ್ಪರ ಡಿಕ್ಕಿಯಾಗಿವೆ. ಎಲ್ಲ ವಾಹನಗಳ ಚಾಲಕರೂ ಘಟನೆಯನ್ನು ಅರಿತು ಬ್ರೇಕ್ ಹಾಕಿದ್ದರಿಂದ ಹೆಚ್ಚಿನ ಅಪಾಯ ಸಂಭವಿಸಿಲ್ಲ ಎಂದು ತಿಳಿದುಬಂದಿದೆ.
ಘಟನೆಯಿಂದಾಗಿ ರಸ್ತೆಯಲ್ಲಿ ವಾಹನ ದಟ್ಟಣೆ ಉಂಟಾಗಿತ್ತು. ಘಟನೆಯ ಬಳಿಕ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಬೇರೆ ವಾಹನದಲ್ಲಿ ತಿರುವನಂತಪುರಂಗೆ ತೆರಳಿದರು. ಘಟನೆಯ ದೃಶ್ಯ ಸಿಸಿ ಕ್ಯಾಮೆರಾಗಳಲ್ಲಿ ಸೆರೆಯಾಗಿದ್ದು, ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.