ವೃದ್ಧ ಅಂಧ ದಂಪತಿ ತಮ್ಮ ಮಗ ಮೃತಪಟ್ಟಿರುವ ವಿಷಯ ತಿಳಿಯದೆ 4 ದಿನಗಳ ಕಾಲ ಮೃತದೇಹದೊಂದಿಗೆ ಮನೆಯಲ್ಲೇ ಇದ್ದ ಹೃದಯ ವಿದ್ರಾವಕ ಘಟನೆ ತೆಲಂಗಾಣದ ಹೈದರಾಬಾದ್ನಲ್ಲಿ ನಡೆದಿದೆ.
30 ವರ್ಷದ ಪ್ರಮೋದ್ ಮೃತಪಟ್ಟಿದ್ದು, 60 ವಯಸ್ಸಿನ ಕೆ.ರಮಣ, 65 ವಯಸ್ಸಿನ ಶಾಂತಕುಮಾರಿ ಎಂಬ ಅಂಧ ಪೋಷಕರು ಅರೆಪ್ರಜ್ಞಾವಸ್ಥೆಯಲ್ಲಿ ಬಿದ್ದಿದ್ದರು. ಮನೆಯಿಂದ ದುರ್ವಾಸನೆ ಬರುತ್ತಿದ್ದಂತೆ ಅಕ್ಕಪಕ್ಕದ ಮನೆಯವರು ಪೊಲೀಸರಿಗೆ ಮಾಹಿತಿ ತಲುಪಿಸಿದ್ದಾರೆ. ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದಾಗ ಅರೆ ಪ್ರಜ್ಞಾವಸ್ಥೆಯಲ್ಲಿದ್ದ ವೃದ್ಧ ಅಂಧ ದಂಪತಿಯೊಂದಿಗೆ ವ್ಯಕ್ತಿಯ ಮೃತದೇಹ ಪತ್ತೆಯಾಗಿದೆ.
ʼಮನೆಯಲ್ಲಿ ವ್ಯಕ್ತಿ ಶವವಾಗಿ ಪತ್ತೆಯಾಗಿದ್ದು, ನಾಲ್ಕೈದು ದಿನಗಳ ಹಿಂದೆ ನಿದ್ರೆಯಲ್ಲಿಯೇ ಸಾವನ್ನಪ್ಪಿರುವ ಶಂಕೆ ಇದೆ ಎಂದು ನಾಗೋಲ್ ಪೊಲೀಸ್ ಠಾಣೆ ಎಸ್ಎಚ್ಒ ಸೂರ್ಯ ನಾಯಕ್ ಪ್ರಾಥಮಿಕ ತನಿಖೆಯಿಂದ ತಿಳಿಸಿದ್ದಾರೆ.
ʼ60 ವರ್ಷಕ್ಕಿಂತ ಮೇಲ್ಪಟ್ಟ ವೃದ್ಧ ಅಂಧ ದಂಪತಿಗೆ ತಮ್ಮ ಮಗ ಸಾವನ್ನಪ್ಪಿದ್ದಾನೆ ಎಂದು ತಿಳಿದಿರಲಿಲ್ಲ. ಆಹಾರ ಮತ್ತು ನೀರಿಗಾಗಿ ಆತನನ್ನು ಕರೆಯಲು ಪ್ರಯ್ನತಿಸಿದ್ದಾರೆ. ಆದರೆ, ಆತನಿಂದ ಯಾವುದೇ ಪ್ರತಿಕ್ರಿಯೆ ಬಂದಿರಲಿಲ್ಲ ಊಟ, ನೀರಿಲ್ಲದೆ ದಿನ ಕಳೆದ ಹಿನ್ನಲೆ ಅವರು ಸುಸ್ತಾಗಿದ್ದರು. ಅವರ ದುರ್ಬಲ ಧ್ವನಿ ನೆರೆಹೊರೆಯವರಿಗೂ ಕೇಳುತ್ತಿರಲಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.
ಈ ಸುದ್ದಿ ಓದಿದ್ದೀರಾ? ಕೇರಳ ಮುಖ್ಯಮಂತ್ರಿ ತೆರಳುತ್ತಿದ್ದ ಕಾರು – ಬೆಂಗಾವಲು ವಾಹನಗಳ ಮಧ್ಯೆ ಸರಣಿ ಅಪಘಾತ
ನಗರದ ಬೇರೆ ಪ್ರದೇಶದಲ್ಲಿ ವಾಸಿಸುತ್ತಿರುವ ತಮ್ಮ ಹಿರಿಯ ಮಗನ ಬಗ್ಗೆ ದಂಪತಿಯಿಂದ ಮಾಹಿತಿ ಪಡೆದ ನಂತರ ಪೊಲೀಸರು ಅವರಿಗೆ ಮಾಹಿತಿ ನೀಡಿದ್ದಾರೆ. ವ್ಯಕ್ತಿಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ. ಈ ಕುರಿತು ಪ್ರಕರಣ ದಾಖಲಾಗಿದೆ.