ಉತ್ತರ ಗಾಜಾದ ಮೇಲೆ ಇಸ್ರೇಲ್ ನಡೆಸಿದ ದಾಳಿಯಲ್ಲಿ ಕನಿಷ್ಠ 109 ಮಂದಿ ಸಾವನ್ನಪ್ಪಿದ್ದು ಹಲವರು ನಾಪತ್ತೆಯಾಗಿದ್ದಾರೆ.
ಗಾಜಾದ ಬೀಟ್ ಲಾಹಿಯಾದಲ್ಲಿ ನಿರಾಶ್ರಿತರು ಇದ್ದ ಐದು ಅಂತಸ್ತಿನ ವಸತಿ ಕಟ್ಟಡದ ಮೇಲೆ ದಾಳಿ ನಡೆಸಿದೆ. ದಾಳಿಯಲ್ಲಿ ಮಕ್ಕಳು ಸೇರಿದಂತೆ ಕನಿಷ್ಠ 109 ಪ್ಯಾಲೆಸ್ತೇನಿಯನ್ನರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.
2023ರ ಅಕ್ಟೋಬರ್ 7ರಂದು ಆರಂಭವಾದ ಯುದ್ದದಿಂದಾಗಿ ಈವರೆಗೆ ಗಾಜಾದಲ್ಲಿ 43,061 ಜನರು ಸಾವನ್ನಪ್ಪಿದ್ದಾರೆ. 101,223 ಜನರು ಗಾಯಗೊಂಡಿದ್ದಾರೆ ಎಂದು ಎನ್‌ಕ್ಲೇವ್‌ನ ಆರೋಗ್ಯ ಸಚಿವಾಲಯ ತಿಳಿಸಿದೆ. ಇದರಲ್ಲಿ ಕಳೆದ 24 ಗಂಟೆಗಳಲ್ಲಿ ನಡೆದ ಸಾವು ನೋವಿನ ಅಂಕಿ ಅಂಶ ಸೇರ್ಪಡೆಯಾಗಿಲ್ಲ.
ಇದನ್ನು ಓದಿದ್ದೀರಾ? ಇರಾನ್ ಸೇನಾ ನೆಲೆಗಳ ಮೇಲೆ ಇಸ್ರೇಲ್ ಬೆಳ್ಳಂಬೆಳಗ್ಗೆ ಕ್ಷಿಪಣಿ ದಾಳಿ
ಇಸ್ರೇಲ್ ದಾಳಿಗೆ ಪ್ರತೀಕಾರವಾಗಿ ಹಮಾಸ್ ನಡೆಸಿದ ದಾಳಿಯಿಂದಾಗಿ ಈವರೆಗೆ ಇಸ್ರೇಲ್‌ನಲ್ಲಿ ಅಂದಾಜು 1,139 ಜನರು ಕೊಲ್ಲಲ್ಪಟ್ಟಿದ್ದಾರೆ ಮತ್ತು 200ಕ್ಕೂ ಹೆಚ್ಚು ಜನರು ಸೆರೆಯಾಳುಗಳಾಗಿದ್ದಾರೆ ಎಂದು ಅಲ್ ಅಜೀರಾ ವರದಿ ಮಾಡಿದೆ.
ಇನ್ನು ಪೂರ್ವ ಲೆಬನಾನ್‌ನಲ್ಲಿ ಇಸ್ರೇಲ್ ನಡೆಸಿದ ದಾಳಿಯಿಂದಾಗಿ ಕನಿಷ್ಠ 60 ಮಂದಿ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ಇನ್ನು ಗಾಜಾ ಯುದ್ದ ಆರಂಭವಾದ ಬಳಿಕ ಇಸ್ರೇಲ್ ನಡೆಸಿದ ದಾಳಿಯಿಂದಾಗಿ ಲೆಬನಾನ್‌ನಲ್ಲಿ ಕನಿಷ್ಠ 127 ಮಕ್ಕಳು ಸೇರಿದಂತೆ ಕನಿಷ್ಠ 2,710 ಜನರು ಸಾವನ್ನಪ್ಪಿದ್ದಾರೆ ಮತ್ತು 12,592 ಮಂದಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.
