ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲೂಕಿನ ಹಟ್ಟಿ ಚಿನ್ನದ ಗಣಿಯ ಅಧಿಸೂಚಿತ ಪ್ರದೇಶದಲ್ಲಿ ಕೈಗೊಂಡ ಅಭಿವೃದ್ಧಿ ಕಾಮಗಾರಿಗಳು ಪೂರ್ಣಗೊಳಿಸಿ, ಕಾರ್ಮಿಕರ ಉಪಯೋಗಕ್ಕೆ ನೀಡುವಂತೆ ಒತ್ತಾಯಿಸಿ ಎಸ್ಎಫ್ಐ ನೇತೃತ್ವದಲ್ಲಿ ಅಪರ ಜಿಲ್ಲಾಧಿಕಾರಿ ಶಿವಾನಂದ ಭಜಂತ್ರಿ ಅವರಿಗೆ ಮನವಿ ಸಲ್ಲಿಸಲಾಯಿತು.
ಹಟ್ಟಿ ಚಿನ್ನದ ಗಣಿಯ ಅಧಿಸೂಚಿತ ಪ್ರದೇಶ ಸಮಿತಿಯು ಹಲವು ವರ್ಷಗಳಿಂದ ಸರ್ಕಾರದ ವಿವಿಧ ಯೋಜನೆಗಳ ಅಡಿಯಲ್ಲಿ ಹಟ್ಟಿ ಚಿನ್ನದ ಗಣಿ ಕಾರ್ಮಿಕರು ವಾಸವಾಗಿರುವ ಕ್ಯಾಂಪ್ ಪ್ರದೇಶದಲ್ಲಿ ಕೈಗೊಂಡ ಹಲವು ಅಭಿವೃದ್ಧಿ ಕಾಮಗಾರಿಗಳನ್ನು ಪೂರ್ಣಗೊಳಿಸದೇ ಅರ್ಧಕ್ಕೆ ಸ್ಥಗಿತಗೊಳಿಸಲಾಗಿದೆ. ಕೆಲವು ಕಾಮಗಾರಿಗಳು ಪೂರ್ಣಗೊಂಡರೂ ಉದ್ಘಾಟನೆಗೊಳ್ಳದೇ ಉಪಯೋಗಕ್ಕೆ ಇಲ್ಲದಂತಾಗಿದೆ. ಸರ್ಕಾರದ ಎಸ್‌ಎಫ್‌ಸಿ ಯೋಜನೆ ಅಡಿಯಲ್ಲಿ 2009-10ನೇ ಎಸ್‌ಎಫ್‌ಸಿ ಅನುದಾನದಲ್ಲಿ ಸುಮಾರು ರೂಪಾಯಿ 50 ಲಕ್ಷ ವೆಚ್ಚದಲ್ಲಿ ಒಟ್ಟು 20 ವಾಣಿಜ್ಯ ಮಳಿಗಳು ನಿರ್ಮಿಸಿತ್ತಾದರೂ ಉಪಯೋಗಕ್ಕೆ ದೊರಕಿಲ್ಲ ಎಂದು ಮನವಿಯಲ್ಲಿ ಉಲ್ಲೇಖಿಸಿದ್ದಾರೆ.
ವಾಣಿಜ್ಯ ಮಳಿಗೆಗಳ ಕಾಮಗಾರಿ 9 ವರ್ಷಗಳಿಂದ ನಡೆಯುತ್ತಿದೆ. ಇನ್ನೂ ಪೂರ್ಣಗೊಂಡಿಲ್ಲ ಕಾರ್ಮಿಕರ ಕುಟುಂಬದವರು ತರಕಾರಿ ಖರೀದಿಸಲು ಅನುಕೂಲವಾಗಲೆಂದು 2006-07ರಲ್ಲಿ ಸುಮಾರು ರೂಪಾಯಿ 48 ಲಕ್ಷ ಮೊತ್ತದ ತರಕಾರಿ ಮಾರುಕಟ್ಟೆಯನ್ನು ನಿರ್ಮಿಸಲಾಯಿತು. ಆದರೆ ಕೊನೆಯ ಹಂತದಲ್ಲಿ ಕಾಮಗಾರಿಯನ್ನು ಅರ್ಧಕ್ಕೆ ಮೊಟಕುಗೊಳಿಸಿದೆ. ಈಗ ಈ ಕಾಮಗಾರಿ ಸ್ಥಗಿತಗೊಂಡು ಸುಮಾರು 12 ವರ್ಷಗಳಾಗಿವೆ ಆದರೂ ತಮಗೆ ಸಂಬಂಧವಿಲ್ಲದಂತೆ ಅಧಿಕಾರಿಗಳು ವರ್ತಿಸುತ್ತಿದ್ದಾರೆ ಎಂದು ದೂರಿದರು.
2009-10ನೇ ಸಾಲಿನ ನಗರೋಧಾನ ಯೋಜನೆ ಅಡಿಯಲ್ಲಿ ಸಣ್ಣ ಮತ್ತು ಮಾಧ್ಯಮ ಪಟ್ಟಣಗಳ ಅಭಿವೃದ್ಧಿ ಕಾಮಗಾರಿಗಳ 1ನೇ ಹಂತದ ಕಾಮಗಾರಿಯಲ್ಲಿ ಸುಮಾರು 50 ಲಕ್ಷ ರೂಪಾಯಿ ವೆಚ್ಚದಲ್ಲಿ ಹೈ ಮಾಸ್ಟ್ ಬೀದಿ ದೀಪಗಳು ಅಳವಡಿಸಲಾಯಿತು. ಅಳವಡಿಸಿ 12 ವರ್ಷಗಳು ಗತಿಸಿದರೂ ಒಂದು ದಿನವೂ ಉರಿದಿಲ್ಲ. ಹಟ್ಟಿ ಕ್ಯಾಂಪ್‌ನಲ್ಲಿ2022-23ನೇ ಸಾಲಿನ 15ನೇ ಹಣಕಾಸು ಯೋಜನೆಯಡಿಯಲ್ಲಿ ಮಂಜೂರಾದ ಅನುದಾನದಲ್ಲಿ ಅಂದಾಜು 66 ಲಕ್ಷ ಮೊತ್ತದಲ್ಲಿ 5 ಆರ್‌ಒ (ನೀರು ಶುದ್ಧೀಕರಣ ಘಟಕಗಳು) ಮಂಜೂರು ಮಾಡಲಾಗಿದೆ. 5ರಲ್ಲಿ ಕೇವಲ 4 ಆರ್‌ಒ ಪ್ಲಾಂಟ್‌ಗಳು ಪೂರ್ಣಗೊಂಡಿವೆ. ಪೂರ್ಣಗೊಂಡು ಒಂದು ವರ್ಷವಾದರೂ ಇನ್ನೂ ಉದ್ಘಾಟನೆಗೊಂಡಿಲ್ಲ. ಹೀಗೆ ಇಲ್ಲಿಯ ಅಧಿಸೂಚಿತ ಪ್ರದೇಶ ಸಮಿತಿ ವತಿಯಿಂದ ಕೋಟಿ ಕೋಟಿ ರೂಪಾಯಿಗಳು ಖರ್ಚು ಮಾಡಿ ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತಿದೆ. ಆದರೆ, ಉಪಯೋಗಕ್ಕೆ ಒಂದೂ ಸಿಗುತ್ತಿಲ್ಲ ಎಂದು ತಿಳಿಸಿದ್ದಾರೆ.
ಮಾಡಿರುವ ಒಂದೂ ಕಾಮಗಾರಯು, ಕಾರ್ಮಿಕರ ಉಪಯೋಗಕ್ಕೆ ಬಾರದೇ ಸರ್ಕಾರ ಕೋಟ್ಯಾನುಗಟ್ಟಲೆ ಹಣ ಪೋಲು ಮಾಡಲಾಗುತ್ತಿದೆ. ಈ ಅಧಿಸೂಚಿತ ಪ್ರದೇಶ ಸಮಿತಿಯ ಅಧ್ಯಕ್ಷರು ರಾಯಚೂರು ಜಿಲ್ಲೆಯ ಜಿಲ್ಲಾಧಿಕಾರಿಗಳು ಆಗಿರುತ್ತಾರೆ. ಉಪಾಧ್ಯಕ್ಷರು ಲಿಂಗಸುಗೂರು ಉಪ ವಿಭಾಗದ ಸಹಾಯಕ ಆಯುಕ್ತರು ಆಗಿರುತ್ತಾರೆ. ಕಾರ್ಯದರ್ಶಿಯಾಗಿ ಅಧಿಸೂಚಿತ ಪ್ರದೇಶ ಸಮಿತಿಯ ಮುಖ್ಯಾಧಿಕಾರಿಗಳು ಇರುತ್ತಾರೆ. ಹಟ್ಟಿ ಚಿನ್ನದ ಗಣಿ ಆಡಳಿತ ವರ್ಗ ಅಧಿಕಾರಿಗಳು ಈ ಸಮಿತಿಯ ಸದಸ್ಯರಾಗಿರುತ್ತಾರೆ. ಇವರೆಲ್ಲರ ನಿರ್ಲಕ್ಷ್ಯದಿಂದ ಸರ್ಕಾರದ ಹಣ ಪೋಲಾಗುತ್ತಿದೆ ಎಂದು ಎಸ್‌ಎಫ್‌ಐ ಮುಖಂಡರು ಆಕ್ರೋಶ ಹೊರಹಾಕಿದ್ದಾರೆ.
ಇದನ್ನು ಓದಿದ್ದೀರಾ? ಮೈಸೂರು | ಅವೈಜ್ಞಾನಿಕ ದತ್ತಾಂಶಗಳನ್ನು ಆಧರಿಸಿದ ಒಳಮೀಸಲಾತಿ ಧಿಕ್ಕರಿಸುವಂತೆ ಕುಳುವ ಮಹಾಸಂಘ ಆಗ್ರಹ
ಆದುದರಿಂದ ಈ ಕೂಡಲೇ ಸಂಬಂಧ ಪಟ್ಟ ಇಲಾಖೆ ಸೂಚನೆ ನೀಡಿ ಈ ಅಪೂರ್ಣ ಕಾಮಗಾರಿಗಳು ಪೂರ್ಣಗೊಳಿಸಿ ಕಾರ್ಮಿಕರಿಗೆ ಉಪಯೋಗವಾಗುವಂತೆ ಕ್ರಮ ಜರುಗಸಬೇಕು. 15 ದಿನಗಳ ಒಳಗಾಗಿ ಕ್ರಮ ಜರುಗಿಸದಿದ್ದಲ್ಲಿ ಹಟ್ಟಿ ಚಿನ್ನದ ಗಣಿ ಅಧಿಸೂಚಿತ ಪ್ರದೇಶ ಸಮಿತಿ ಕಚೇರಿ ಎದುರುಗಡೆ ಅನಿರ್ದಿಷ್ಟಾವಧಿ ಧರಣಿ ನಡೆಸಲಾಗುವುದು ಎಚ್ಚರಿಕೆ ನೀಡಿದರು.
ಮನವಿ ಸಲ್ಲಿಸುವ ಸಂದರ್ಭದಲ್ಲಿ ಎಸ್ಎಫ್ಐ ರಾಯಚೂರು ಜಿಲ್ಲಾಧ್ಯಕ್ಷ ರಮೇಶ ವೀರಾಪೂರ, ಉಪಾಧ್ಯಕ್ಷ ಪವನ ಕಮದಾಳ, ನಾಗರಾಜ್ ಮಲ್ಕಾಪೂರು ಉಪಸ್ಥಿತರಿದ್ದರು.
