ಅಪೌಷ್ಟಿಕತೆಯು ಭಾರತವನ್ನು ನಿರಂತರವಾಗಿ ಕಾಡುತ್ತಿದೆ. ಹಸಿವು ಸೂಚ್ಯಂಕದಲ್ಲಿ ಭಾರತವು ಕಳಪೆ ಪ್ರದರ್ಶನ ನೀಡುತ್ತಿದೆ. ಭಾರತದ ಬಹುಸಂಖ್ಯಾತ ಜನರು ಹಸಿವು, ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ. 2017ರಲ್ಲಿ ಹಸಿವು ಸೂಚ್ಯಂಕದಲ್ಲಿ 125 ರಾಷ್ಟ್ರಗಳ ಪೈಕಿ 97ನೇ ಸ್ಥಾನದಲ್ಲಿದ್ದ ಭಾರತ, 2023ರ ವೇಳೆಗೆ 111ನೇ ಸ್ಥಾನಕ್ಕೆ ಕುಸಿದಿದೆ. ಇದು, ಭಾರತೀಯರಲ್ಲಿ ಹಸಿವಿನ ಪ್ರಮಾಣ ಹೆಚ್ಚುತ್ತಿರುವುದನ್ನು ಸೂಚಿಸುತ್ತಿದೆ.
ಈ ನಡುವೆ, ಈ ಅಪೌಷ್ಟಿಕತೆಯಲ್ಲಿ ಜಾತಿ ಅಸಮಾನತೆಯ ಪಾತ್ರವೂ ಇದೆ ಎಂಬುದನ್ನು ಸಂಶೋಧನಾ ಅಧ್ಯಯನವೊಂದು ಬಹಿರಂಗಪಡಿಸಿದೆ. ಜಾತಿಯ ಕಾರಣಕ್ಕಾಗಿ ಶೈಕ್ಷಣಿಕ, ಸಾಮಾಜಿಕ ಹಾಗೂ ಆರ್ಥಿಕವಾಗಿ ಹಿಂದುಳಿದ ಸಮುದಾಯಗಳಲ್ಲಿ ಅಪೌಷ್ಟಿಕತೆ ಹೆಚ್ಚಾಗಿದೆ ಎಂಬುದರ ಬಗ್ಗೆ ವರದಿ ಬೆಳಕು ಚೆಲ್ಲಿದೆ. ಮಾತ್ರವಲ್ಲದೆ, ಈ ಜಾತಿ ಅಸಮಾನತೆಯಿಂದ ಅಪೌಷ್ಟಿಕತೆ ತುತ್ತಾದವರಲ್ಲಿ ಜಾತಿ-ಧರ್ಮಾಧಾರಿತ ತಾರತಮ್ಯಗಳ ಅರಿವೇ ಇಲ್ಲದ ಮಕ್ಕಳೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ ಎಂಬುದು ಆತಂಕ ಮತ್ತು ಆಘಾತವನ್ನು ಹುಟ್ಟುಹಾಕಿದೆ.
ಆರ್ಥಿಕ ತಜ್ಞರಾದ ಅಶ್ವಿನಿ ದೇಶಪಾಂಡೆ ಮತ್ತು ರಾಜೇಶ್ ರಾಮಚಂದ್ರನ್ ಅವರ ತಂಡವು ದೀರ್ಘಕಾಲದ ಅಪೌಷ್ಟಿಕತೆಯ ಬಗ್ಗೆ ಜಾತಿ ಆಧಾರದ ಮೇಲೆ ಅಧ್ಯಯನ ನಡೆಸಿದೆ. ಜಾತಿ ತಾರತಮ್ಯದಿಂದಾಗಿ ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳ ಪ್ರಮಾಣದಲ್ಲಿ ಭಾರತವು ವಿಶ್ವದ ಅತ್ಯಂತ ಬಡ ಪ್ರದೇಶಗಳಲ್ಲಿ ಒಂದಾದ ಉಪ-ಸಹಾರನ್ ಆಫ್ರಿಕಾಕ್ಕಿಂತ ಹಿಂದುಳಿದಿದೆ. ಭಾರತದ ಮಕ್ಕಳು ಹೆಚ್ಚು ಅಪೌಷ್ಟಿಕತೆಗೆ ತುತ್ತಾಗಿದ್ದಾರೆ ಎಂಬುದನ್ನು ಅಧ್ಯಯನವು ಕಂಡುಕೊಂಡಿದೆ.
2019-21ರ ಅವಧಿಯಲ್ಲಿ ಮನೆ-ಮನೆ ಸಮೀಕ್ಷೆ ನಡೆಸಲಾಗಿದ್ದು, ಐದು ವರ್ಷದೊಳಗಿನ 2,00,000 ಮಕ್ಕಳನ್ನು ಸಮೀಕ್ಷೆಗೆ ಒಳಪಡಿಸಲಾಗಿದೆ. ಈ ಸಮೀಕ್ಷಾ ವರದಿಯಲ್ಲಿ ಉಪ-ಸಹಾರನ್ ಆಫ್ರಿಕಾದಲ್ಲಿ 34% ಮಕ್ಕಳಲ್ಲಿ ಬೆಳವಣಿಗೆ ಕುಂಠಿತವಾಗಿದ್ದರೆ, ಭಾರತದಲ್ಲಿ 36% ಮಕ್ಕಳ ಬೆಳವಣಿಗೆ ಕುಂಠಿತವಾಗಿದೆ ಎಂಬುದನ್ನು ಗಮನಿಸಿದೆ.
ಹಿಂದುಳಿದ ಜಾತಿಗಳ ಮಕ್ಕಳಿಗೆ ಹೋಲಿಸಿದರೆ ಪರಿಶಿಷ್ಟ ಜಾತಿಗಳು (ಎಸ್‌ಸಿ) ಮತ್ತು ಪರಿಶಿಷ್ಟ ಪಂಗಡಗಳ (ಎಸ್‌ಟಿ) ರೀತಿಯ ತಳ ಸಮುದಾಯದ ಮಕ್ಕಳಲ್ಲಿ 50%ಗೂ ಹೆಚ್ಚು ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ. ಅವರ ಬೆಳವಣಿಗೆಯು ಗಣನೀಯ ಪ್ರಮಾಣದಲ್ಲಿ ಕುಂಠಿತವಾಗಿದೆ. ಇನ್ನು, ಹಿಂದುಳಿದ ಜಾತಿಗಳ ಮಕ್ಕಳಲ್ಲಿ ಕುಂಠಿತವು 27% ಇದೆ.
ಮಕ್ಕಳ ಪೋಷಣೆ ಮತ್ತು ಬೆಳವಣಿಗೆ ಕುಂಠಿತ ಮಟ್ಟಗಳ ಮೇಲೆ ಪ್ರಭಾವ ಬೀರುವ ಸಾಮಾಜಿಕ-ಆರ್ಥಿಕ ಮತ್ತು ಇತರ ಅಂಶಗಳನ್ನು ಗಣನೆಗೆ ತೆಗೆದುಕೊಳ್ಳಲಾಗಿದೆ. ಆದಾಗ್ಯೂ, ಉಪ-ಸಹಾರನ್ ಆಫ್ರಿಕಾದ ಮಕ್ಕಳಿಗೆ ಹೋಲಿಸಿದರೆ, ಜಾತೀಯತೆ ತುತ್ತಾಗಿರುವ ಭಾರತದ ಮಕ್ಕಳಲ್ಲಿ ಬೆಳವಣಿಗೆ ಹೆಚ್ಚು ಕುಂಠಿತವಾಗಿದೆ.
‘ವಿಶಾಲ’ ಭಾರತ ಮತ್ತು ಉಪ-ಸಹಾರನ್ ಆಫ್ರಿಕಾ ನಡುವಿನ ಹೋಲಿಕೆಯು ಪೌಷ್ಠಿಕಾಂಶದ ಫಲಿತಾಂಶಗಳನ್ನು ಅಳೆಯುವಾಗ ಭಾರತದೊಳಗಿನ ಅಪಾರ ಪ್ರಮಾಣದ ಅಸಮಾನತೆ ಎದ್ದುಕಾಣಿಸಿದೆ. ಇದನ್ನು, ‘ಗುಪ್ತ ವಿಭಜನೆ’ ಎಂದು ಸಂಶೋಧಕರು ಕರೆದಿದ್ದಾರೆ.
“ನಮ್ಮ ಫಲಿತಾಂಶಗಳು ಭಾರತದ ಗುಂಪುಗಳ (ಜಾತಿ) ನಡುವಿನ ಅಂತರವು -ಸಬ್-ಸಹಾರನ್ ಆಫ್ರಿಕಾದ ಅಸಮಾನತೆಗಿಂತ ಹೆಚ್ಚಿದೆ. ಇದು, ಮಕ್ಕಳ ಬೆಳವಣಿಗೆ ಕುಂಠಿತತೆಯ ಮೇಲೆ ಪ್ರಭಾವ ಬೀರುತ್ತದೆ. ಜಾತಿ ಅಸಮಾನತೆಯ ಕಾರಣಕ್ಕಾಗಿನ ಮಕ್ಕಳ ಅಪೌಷ್ಟಿಕತೆಯಲ್ಲಿ ಸಬ್-ಸಹಾರನ್ ಆಫ್ರಿಕಾವನ್ನೂ ಭಾರತ ಹಿಂದಿಕ್ಕಿದೆ” ಎಂದು ಅಶೋಕ ವಿಶ್ವವಿದ್ಯಾಲಯದ ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥ ದೇಶಪಾಂಡೆ ಮತ್ತು ಮಲೇಷ್ಯಾದ ಮೊನಾಶ್ ವಿಶ್ವವಿದ್ಯಾಲಯದ ಅರ್ಥಶಾಸ್ತ್ರಜ್ಞ ರಾಮಚಂದ್ರನ್ ಹೇಳಿದ್ದಾರೆ.
“ಹೆಚ್ಚಿನ ಶೈಕ್ಷಣಿಕ ಗಮನವು ಭಾರತ ಮತ್ತು ಉಪ-ಸಹಾರನ್ ಆಫ್ರಿಕಾದ ಮೇಲೆ ಕೇಂದ್ರೀಕೃತವಾಗಿದೆ. ಭಾರತದಲ್ಲಿ ಜಾತಿ-ಜಾತಿಗಳ ನಡುವೆಯೂ ಮಕ್ಕಳ ಬೆಳವಣಿಗೆ ಕುಂಠಿತಗೊಳ್ಳುವ ವ್ಯತ್ಯಾಸಗಳು ಮತ್ತು ಆ ವ್ಯತ್ಯಾಸಗಳು ಏಕೆ ಮುಂದುವರಿಯುತ್ತವೆ ಎಂಬುದನ್ನು ನಾವು ಅರ್ಥಮಾಡಿಕೊಳ್ಳಬೇಕು” ಎಂದು ದೇಶಪಾಂಡೆ ಹೇಳಿದ್ದಾರೆ.
ಈ ವರದಿ ಓದಿದ್ದೀರಾ?: ಈ ದಿನ ಸಂಪಾದಕೀಯ | ಭಾರತ ಭವಿಷ್ಯಕ್ಕೆ ಅಪೌಷ್ಟಿಕತೆ ಮತ್ತು ಆಹಾರ ಭದ್ರತೆಯ ಸವಾಲು
ಗಮನಾರ್ಹವಾಗಿ, ಇತ್ತೀಚಿನ ದಿನಗಳಲ್ಲಿ ಮಕ್ಕಳು ಮತ್ತು ಮಹಿಳೆಯರಲ್ಲಿನ ಅಪೌಷ್ಟಿಕತೆ ಬಗ್ಗೆ ಹೆಚ್ಚು ಚರ್ಚೆಗಳು ನಡೆಯುತ್ತಿವೆ. ಜನಿಸಿದ ಮಕ್ಕಳಲ್ಲಿ ಬೆಳವಣಿಗೆಯು ಉತ್ತಮವಾಗಿರಬೇಕು ಎಂಬ ಕಾರಣಕ್ಕೆ ‘ಸಮಗ್ರ ಶಿಶು ಅಭಿವೃದ್ಧಿ ಯೋಜನೆ’ ಮತ್ತು ‘ಪೋಷಣ್ ಅಭಿಯಾನ’ವನ್ನು ಕೇಂದ್ರ ಸರ್ಕಾರ ನಡೆಸುತ್ತಿದೆ. ಆದರೂ, ಅದು ಫಲ ನೀಡುತ್ತಿಲ್ಲ. ಇತ್ತೀಚಿನ ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ 2019-21ರ ಪ್ರಕಾರ, ಐದು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಲ್ಲಿ 1/3 ಭಾಗದಷ್ಟು (36%) ಮಕ್ಕಳು ಕಡಿಮೆ ತೂಕ ಮತ್ತು ಬೆಳವಣಿಗೆ ಕುಂಠಿತತೆ ಹಾಗೂ 67% ಮಕ್ಕಳು ರಕ್ತಹೀನತೆಯಿಂದ ಬಳಲುತ್ತಿದ್ದಾರೆ.
‘ಗ್ಲೋಬಲ್ ನ್ಯೂಟ್ರಿಷನ್ ವರದಿ-2024’ ಹೇಳುವಂತೆ, 5 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಲ್ಲಿ ಶೇ.17 ಮಕ್ಕಳು ಕಡಿಮೆ ತೂಕ ಹೊಂದಿದ್ದಾರೆ. ಇದು, ಏಷ್ಯಾದ ಸರಾಸರಿಗಿಂತ ಅಧಿಕವಾಗಿದೆ. ಮಕ್ಕಳಲ್ಲಿ ಅಪೌಷ್ಟಿಕತೆಯು ಗಂಭೀರ ಸಮಸ್ಯೆಯಗಿದೆ. ಇದು ಭಾರತದ ಭವಿಷ್ಯದ ಮೇಲೂ ಪರಿಣಾಮ ಬೀರುತ್ತದೆ. ಆದಾಗ್ಯೂ, ಭಾರತ ಸರ್ಕಾರ ಮೌನವಾಗಿದೆ. ನಿರ್ಲಕ್ಷ್ಯ, ನಿರ್ಲಜ್ಜತನದಿಂದ ವರ್ತಿಸುತ್ತಿದೆ. ಅಂತಾರಾಷ್ಟ್ರೀಯ ಸಂಸ್ಥೆಗಳು ಸಿದ್ಧಪಡಿಸಿದ ‘ಅಪೌಷ್ಟಿಕತೆ’ ಕುರಿತ ವರದಿಯನ್ನೇ ನಿರಾಕರಿಸುತ್ತಿದೆ. ಆದರೆ, ಪೌಷ್ಟಿಕತೆಗೆ ಒತ್ತು ಕೊಡುತ್ತಿಲ್ಲ. ಮೋದಿ ಸರ್ಕಾರವು ಅಪೌಷ್ಟಿಕತೆಯನ್ನು ಗಂಭೀರವಾಗಿ ಪರಿಗಣಿಸಿಯೇ ಇಲ್ಲ.
ಆಹಾರ ಧಾನ್ಯಗಳ ಬೆಲೆ ಏರಿಕೆ ಬಗ್ಗೆ ಗಂಭೀರವಾಗಿ ಚಿಂತನೆ ನಡೆಸಬೇಕಿರುವ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು, ‘ನಾನು ಈರುಳ್ಳಿಯನ್ನೇ ತಿನ್ನುವುದಿಲ್ಲ. ಬೆಲೆ ಏರಿಕೆ ಸಮಸ್ಯೆ ನನಗಿಲ್ಲ’ ಎನ್ನುತ್ತಿದ್ದಾರೆ. ಭಾರತದ ಭವಿಷ್ಯಕ್ಕೆ ಶಕ್ತಿ ಇಲ್ಲದಂತೆ ಮಾಡುತ್ತಿದ್ದಾರೆ.