ರೈತರು ಕೇವಲ ಸಾಂಪ್ರದಾಯಿಕ ಬೆಳೆಗಳ ಮೇಲೆ ಅವಲಂಬಿತರಾದರೆ ಹೆಚ್ಚಿನ ಲಾಭ ಪಡೆಯಲು ಸಾಧ್ಯವಿಲ್ಲ. ಆದ್ದರಿಂದ ಹೊಸ ತಂತ್ರಜ್ಞಾನ ಬಳಸಿಕೊಂಡು ತೋಟಗಾರಿಕೆ ಬೆಳೆಗಳನ್ನು ಬೆಳೆದರೆ ಕಡಿಮೆ ಅವಧಿಯಲ್ಲಿ ಹೆಚ್ಚು ಲಾಭ ಪಡೆಯಬಹುದು ಎಂಬುದಕ್ಕೆ ಯುವ ರೈತರೊಬ್ಬರು ತಮ್ಮ ಹೊಲದಲ್ಲಿಚೆಂಡು ಹೂ ಬೆಳೆದಿದ್ದು ಹೆಚ್ಚಿನ ಲಾಭದ ನಿರೀಕ್ಷೆಯಲ್ಲಿದ್ದಾರೆ.
ಬೀದರ್ ಜಿಲ್ಲೆಯ ಭಾಲ್ಕಿ ತಾಲ್ಲೂಕಿನ ಅಹಮದಾಬಾದ್ ಗ್ರಾಮದ ಯುವ ರೈತ ಅಮರ್ ಸಿಂಧೆ ತಮ್ಮ ಒಂದುವರೆ ಎಕರೆ ಪ್ರದೇಶದಲ್ಲಿ ಚೆಂಡು ಹೂವು ಬೆಳೆದಿದ್ದಾರೆ. ಚೆಂಡು ಹೂವು ಹುಲುಸಾಗಿ ಬೆಳೆದಿದ್ದು, ಒಂದು ಲಕ್ಷ ಆದಾಯದ ನಿರೀಕ್ಷೆಯಲ್ಲಿದ್ದಾರೆ.

ಚಂಡು ಬೆಳೆಯಲು ಭೂಮಿ ಹದ, ಔಷಧಿ ಸಿಂಪಡಣೆ, ಸಾವಯವ ಗೊಬ್ಬರ ಸೇರಿದಂತೆ ಇನ್ನಿತರ ಸೇರಿ ಒಟ್ಟು ₹70 ಸಾವಿರ ಖರ್ಚಾಗಿದೆ. 90 ದಿನಗಳ ಬೆಳೆಯಾದ ಈ ಚೆಂಡು ಹೂವು ಬೀಜವನ್ನು ಹಾಕುವ ಮೂಲಕ ದಸರಾ ಹಾಗೂ ದೀಪಾವಳಿ ಹಬ್ಬಕ್ಕೆ ಬರುವಂತೆ ಬೆಳೆ ಬೆಳೆಯಲಾಗುತ್ತದೆ. ಆಗಸ್ಟ್ 1ರಂದು ನಾಟಿ ಮಾಡಲಾಗಿತ್ತು. ಈಗಾಗಲೇ ದಸರಾ ಸಮಯದಲ್ಲಿ 20 ಕ್ವಿಂಟಲ್ ಕಟಾವು ಮಾಡಿ ಮಾರಾಟ ಮಾಡಿದ್ದೇನೆ.ಇದರಿಂದ ನಾನು ಖರ್ಚು ಮಾಡಿದ ಹಣ ನನ್ನ ಕೈಸೇರಿದೆ ಎನ್ನುತ್ತಾರೆ ಅಮರ್ ಸಿಂಧೆ.
ʼಮಹಾರಾಷ್ಟ್ರದ ಶಹಜಾನಿ ಔರಾದದಿಂದ ಅಷ್ಟಗಂಧ ತಳಿಯ 9 ಸಾವಿರ ಬೀಜ ಖರೀದಿಸಲಾಗಿದೆ. 3-4 ರೂಪಾಯಿಗೆ ಒಂದರಂತೆ ಖರೀದಿಸಿ ತಂದು ನಾಟಿ ಮಾಡಲಾಗಿದೆ. ದಸರಾ ಸಮಯದಲ್ಲಿ ಒಟ್ಟು 20 ಕ್ವಿಂಟಲ್ ಕಟಾವು ಮಾಡಿದ್ದೇನೆ. ಇದೀಗ ದೀಪಾವಳಿ ಹಬ್ಬವಿದೆ, ಇನ್ನು ಎರಡು ಬಾರಿ ಕಟಾವು ಮಾಡಲಾಗುತ್ತದೆ. ಒಟ್ಟು 45 ಕ್ವಿಂಟಲ್‌ವರೆಗೆ ಇಳುವರಿ ಬರುವ ನಿರೀಕ್ಷೆಯಿದೆ. ಸದ್ಯ ಮಾರುಕಟ್ಟೆಯಲ್ಲಿ ಕೆ.ಜಿ.ಗೆ ₹50 ರಿಂದ ₹60 ಕೆ.ಜಿ. ಮಾರಾಟ ಆಗುತ್ತಿದೆʼ ಎಂದು ಹೇಳಿದರು.
ಮಾರುಕಟ್ಟೆ :
ʼನಾನು ಬೆಳೆದ ಚೆಂಡು ಹೂವು ಬೆಳೆದು ತೆಲಂಗಾಣದ ಹೈದರಾಬಾದ್ ಮಾರುಕಟ್ಟೆಗೆ ಸಾಗಾಟ ಮಾಡುತ್ತೇನೆ. ಸ್ಥಳೀಯ ಮಾರುಕಟ್ಟೆಯಲ್ಲಿ ನಿರೀಕ್ಷಿತ ಬೆಲೆ ಸಿಗುವುದಿಲ್ಲ. ಹೀಗಾಗಿ ಯಾವಾಗಲೂ ಹೈದ್ರಾಬಾದ್ ಮಾರುಕಟ್ಟೆಯಲ್ಲಿ ಮಾರಾಟ ಮಾಡಲಾಗುತ್ತದೆ. ಹೀಗಾಗಿ ವಾಹನ ಸಾಗಾಟ ಖರ್ಚು ಅಧಿಕ ಬರುತ್ತಿದೆ. ಇದೀಗ ದೀಪಾವಳಿ ಹಬ್ಬದಲ್ಲಿ ಉತ್ತಮ ಬೆಲೆ ದೊರೆತರೆ ಆದಾಯ ಸಿಗಬಹುದು” ಎಂದು ಹೂವು ಬೆಳೆಗಾರ ಅಮರ್ ಶಿಂಧೆ ʼಈ ದಿನ.ಕಾಮ್ʼ ಜೊತೆಗೆ ಮಾತನಾಡಿ ಖುಷಿ ಹಂಚಿಕೊಂಡಿದ್ದಾರೆ.
ಐದು ವರ್ಷದಿಂದ ಚೆಂಡು ಹೂ ಕೃಷಿ :
ಅಮರ್ ಸಿಂಧೆ ಓದಿದ್ದು ಪಿಯುಸಿ, ತದನಂತರ ಓದು ಬಿಟ್ಟು ಕೃಷಿಯತ್ತ ಮುಖ ಮಾಡಿದರು. ಆರು ಎಕರೆ ಸ್ವಂತ ಜಮೀನಿನಲ್ಲಿ ವಿವಿಧ ವಾಣಿಜ್ಯ ಬೆಳೆಗಳ ಕೃಷಿ ಕೈಗೊಳ್ಳುವ ಮೂಲಕ ಹೆಚ್ಚಿನ ಆದಾಯ ಕಂಡುಕೊಂಡು ಮಾದರಿ ರೈತರಾಗಿ ಹೊರಹೊಮ್ಮಿದ್ದಾರೆ.
ಸದ್ಯ ತೋಟದಲ್ಲಿ ಸಮೃದ್ಧವಾಗಿ ಬೆಳೆದ ಕೇಸರಿ ಹಾಗೂ ಹಳದಿ ಬಣ್ಣದ ಚೆಂಡು ಹೂಗಳಿಂದ ಕಂಗೊಳಿಸುತ್ತಿದೆ. ರಸ್ತೆಯಲ್ಲಿ ತೆರಳುವ ಪಾದಚಾರಿ, ವಾಹನ ಸವಾರರಿಗೆ ತನ್ನತ್ತ ಸೆಳೆಯುತ್ತಿದೆ. ಕೆಲವರಂತೂ ಹೂದೋಟಕ್ಕೆ ಭೇಟಿ ನೀಡಿ ಮನದಣಿಸಿಕೊಳ್ಳುತ್ತಿದ್ದಾರೆ.

ʼಈ ಹಿಂದೆ ಸೋಯಾಬಿನ್, ತೊಗರಿ, ಉದ್ದು ಸೇರಿದಂತೆ ಇತರೆ ಸಾಂಪ್ರದಾಯಿಕ ಬೆಳೆಗಳು ಬೆಳೆಯುತ್ತಿದ್ದರು. ನಾನು ಕೃಷಿಗೆ ತೊಡಗಿಸಿಕೊಂಡ ನಂತರ ಪೂರ್ಣ ವಾಣಿಜ್ಯ ಕೃಷಿ ಮಾಡುತ್ತಿದ್ದೇವೆ. 6 ಎಕರೆಯಲ್ಲಿ ಹೂವು, ಶುಂಠಿ ಸೇರಿದಂತೆ ತರಕಾರಿ ಬೆಳೆಯುತ್ತೇನೆ. ಕಳೆದ ಐದು ವರ್ಷದಿಂದ ಚಂಡು ಹೂ ಬೆಳೆಯುತ್ತಿದ್ದೇನೆ. ಆದರೆ, ತೋಟಗಾರಿಕೆ ಇಲಾಖೆಯಿಂದ ಇಲ್ಲಿಯವರೆಗೆ ಯಾವುದೇ ಸಹಾಯಧನ ಸಿಗಲಿಲ್ಲ. ಹಲವು ಬಾರಿ ತೋಟಗಾರಿಕೆ ಇಲಾಖೆಯ ತಾಲ್ಲೂಕು ಕಚೇರಿಗೆ ಭೇಟಿ ನೀಡಿ ಮಾಹಿತಿ ನೀಡಿದ್ದೇನೆ. ಯಾವುದೇ ಯೋಜನೆಗಳಿಲ್ಲ ಎಂದು ಅಧಿಕಾರಿಗಳು ವಾಪಸ್ ಕಳಿಸಿದ್ದಾರೆ. ಹೀಗಾಗಿ ಸ್ವಂತ ಖರ್ಚಿನಲ್ಲೇ ಎಲ್ಲಾ ಬೆಳೆ ಬೆಳೆಯುತ್ತೇನೆʼ ಎಂದು ಅಮರ್ ಹೇಳುತ್ತಾರೆ.
ಈ ಸುದ್ದಿ ಓದಿದ್ದೀರಾ? ರೇಣುಕಸ್ವಾಮಿ ಹತ್ಯೆ ಪ್ರಕರಣ: ನಟ ದರ್ಶನ್‌ಗೆ ಹೈಕೋರ್ಟ್ ಮಧ್ಯಂತರ ಜಾಮೀನು
ತೋಟಗಾರಿಕೆ ಕೃಷಿ ಮಾಡುವವರಿಗೆ ಇಲಾಖೆಯಿಂದ ಹಲವಾರು ಯೋಜನೆಗಳಿದ್ದರೂ ಪ್ರಗತಿಪರ ಯುವ ರೈತರಿಗೆ ದಕ್ಕದೇ ಇರುವುದು ವಿಪರ್ಯಾಸವೇ ಸರಿ. ಸಂಬಂಧಪಟ್ಟ ಅಧಿಕಾರಿಗಳು ಇಂಥ ಯುವ ರೈತರಿಗೆ ಸೂಕ್ತ ಮಾರ್ಗದರ್ಶನ ಒದಗಿಸಿದರೆ ಕೃಷಿಯಲ್ಲಿ ಹೆಚ್ಚಿನ ಜನರು ತೊಡಗಿಸಿಕೊಳ್ಳಲು ಸಾಧ್ಯ ಎನ್ನುವುದು ರೈತರ ಅಭಿಪ್ರಾಯ.

ಬಾಲಾಜಿ ಕುಂಬಾರ್
ಬಾಲಾಜಿ ಕುಂಬಾರ ಅವರು ಔರಾದ್ ತಾಲ್ಲೂಕಿನ ಚಟ್ನಾಳ ಗ್ರಾಮದವರು. ಸಾಹಿತ್ಯ, ಶಿಕ್ಷಣ ಹಾಗೂ ರಾಜಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ್ದಾರೆ. ಸದ್ಯ 'ಈದಿನ.ಕಾಮ್' ಮಾಧ್ಯಮ ಸಂಸ್ಥೆಯಲ್ಲಿ ಬೀದರ್ ಜಿಲ್ಲಾ ಹಿರಿಯ ಸಂಯೋಜಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕವಿತೆ, ಲೇಖನ, ದೇಶಿ ನುಡಿ ಬರಹ ಬರೆಯುವುದು ಇವರ ಮುಖ್ಯ ಹವ್ಯಾಸ.