- ಅಮೆರಿಕ ನ್ಯೂಯಾರ್ಕ್‌ನಲ್ಲಿ ರಾಹುಲ್ ಗಾಂಧಿ ಸಮಾವೇಶ
- ಜೂನ್ 22ಕ್ಕೆ ಅಮೆರಿಕಗೆ ಭೇಟಿ ನೀಡಲಿರುವ ಪ್ರಧಾನಿ ಮೋದಿ
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸಮಾವೇಶ ಮತ್ತು ಚರ್ಚೆಗಳಲ್ಲಿ ಭಾಗವಹಿಸಲು ಇದೇ ತಿಂಗಳ 31ರಂದು 10 ದಿನಗಳ ಕಾಲ ಅಮೆರಿಕ ಪ್ರವಾಸ ಕೈಗೊಳ್ಳಲಿದ್ದಾರೆ.
ಜೂನ್ 4ರಂದು ನ್ಯೂಯಾರ್ಕ್‌ನ ಮ್ಯಾಡಿಸನ್ ಸ್ಕ್ವೇರ್ ಗಾರ್ಡನ್‌ನಲ್ಲಿ ರಾಹುಲ್ ಅವರು ಸಮಾವೇಶ ನಡೆಸಲಿದ್ದಾರೆ ಎಂದು ಮಾಧ್ಯಮಗಳು ಮಂಗಳವಾರ (ಮೇ 16) ವರದಿ ಮಾಡಿವೆ.
ರಾಹುಲ್ ಗಾಂಧಿ ಸಮಾವೇಶ ಮತ್ತು ಚರ್ಚೆಯಲ್ಲಿ ಸುಮಾರು ಐದು ಸಾವಿರ ಅನಿವಾಸಿ ಭಾರತೀಯರು ಭಾಗವಹಿಸಲಿದ್ದಾರೆ. ರಾಹುಲ್ ಅವರು ಚರ್ಚಾಕೂಟಗಳಲ್ಲಿ ಭಾಗವಹಿಸಲು ವಾಷಿಂಗ್ಟನ್ ಮತ್ತು ಕ್ಯಾಲಿಫೋರ್ನಿಯಾಗೆ ಭೇಟಿ ನೀಡಲಿದ್ದಾರೆ. ಸ್ಯಾನ್‌ಫೋರ್ಡ್‌ನಲ್ಲೂ ಭಾಷಣ ಮಾಡಲಿದ್ದಾರೆ. ಈ ವೇಳೆ ಅವರು ರಾಜಕಾರಣಿಗಳು ಹಾಗೂ ಉದ್ಯಮಿಗಳನ್ನು ಭೇಟಿಯಾಗಲಿದ್ದಾರೆ.
ಜೂನ್ 22ರಂದು ಪ್ರಧಾನಿ ಮೋದಿ ಅವರೂ ಅಮೆರಿಕಗೆ ಅಧಿಕೃತ ಪ್ರವಾಸ ಕೈಗೊಳ್ಳಲಿದ್ದಾರೆ. ಅದಕ್ಕೆ ಮೊದಲು, ರಾಹುಲ್ ಗಾಂಧಿ ಅವರ ಅಮೆರಿಕ ಪ್ರವಾಸ ನಿರ್ಧಾರವಾಗಿದೆ.
ಈ ಸುದ್ದಿ ಓದಿದ್ದೀರಾ? ಕಾಂಗ್ರೆಸ್ ಗ್ಯಾರಂಟಿ | ‘ಉಚಿತ ಕೊಡುಗೆ’ ನೀಡಿದರೆ ಬೊಕ್ಕಸಕ್ಕೆ ಹೊರೆ ಆಗುತ್ತಾ? ವಾಸ್ತವ ಏನು?
ಪ್ರಧಾನಿ ಮೋದಿ ಭೇಟಿ ವೇಳೆ ಅಮೆರಿಕ ಅಧ್ಯಕ್ಷ ಜೋ ಬೈಡನ್ ಮತ್ತು ಪತ್ನಿ ಹಾಗೂ ದೇಶದ ಪ್ರಥಮ ಮಹಿಳೆ ಜಿಲ್ ಬೈಡನ್ ಅವರು ಶ್ವೇತಭವನದಲ್ಲಿ ಆತಿಥ್ಯ ನೀಡಲಿದ್ದಾರೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಕಳೆದ ವಾರ ತಿಳಿಸಿತ್ತು.
“ಪ್ರಧಾನಿ ಮೋದಿ ಅವರ ಭೇಟಿಯು ಎರಡು ದೇಶಗಳ ನಡುವಿನ ಮುಕ್ತ, ಸಮೃದ್ಧ ಮತ್ತು ಸುರಕ್ಷಿತ ಇಂಡೋ-ಪೆಸಿಫಿಕ್‌ಗೆ ಹಂಚಿಕೆ ಬಲಪಡಿಸುತ್ತದೆ. ಭಾರತ ಹಾಗೂ ಅಮೆರಿಕ ನಡುವಿನ ಆಳವಾದ ಮತ್ತು ನಿಕಟ ಬಾಂಧವ್ಯವನ್ನು ದೃಢಪಡಿಸುತ್ತದೆ. ಅಮೆರಿಕನ್ನರು ಮತ್ತು ಭಾರತೀಯರ ಮೈತ್ರಿಯನ್ನು ವೃದ್ಧಿಸುತ್ತದೆ” ಎಂದು ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ ಕರೀನ್ ಜೀನ್-ಪಿಯರ್ ಅವರು ಪ್ರಕಟಣೆಯೊಂದರಲ್ಲಿ ತಿಳಿಸಿದ್ದರು.
ಈ ವೇಳೆ ಉಭಯ ದೇಶಗಳ ಎಲ್ಲ ರಂಗಗಳಲ್ಲಿಯ ಬಾಂಧವ್ಯ ವೃದ್ಧಿ ಕುರಿತು ಚರ್ಚಿಸಲಾಗುವುದು ಎಂದು ಕರೀನ್ ಜೀನ್ ಅವರು ಹೇಳಿದರು.
2021ರ ಸೆಪ್ಟೆಂಬರ್ 23ರಂದು ಪ್ರಧಾನಿ ಮೋದಿ ಅವರು ಅಮೆರಿಕ ದೇಶಕ್ಕೆ ಕೊನೆಯ ಭೇಟಿ ನೀಡಿದ್ದರು. ಬಳಿಕ ಕ್ವಾಡ್ ಶೃಂಗಸಭೆಯಲ್ಲಿಯೂ ಅಮೆರಿಕದ ಜೊತೆ ಮಾತುಕತೆ ನಡೆಸಿದ್ದರು.