ನಾಲ್ಕು ತಿಂಗಳ ಹಿಂದೆ, ಉತ್ತರ ಪ್ರದೇಶದ ಕಾನ್ಪುರದಲ್ಲಿ ಉದ್ಯಮಿಯೊಬ್ಬರ ಪತ್ನಿಯನ್ನು ಜಿಮ್ ಟ್ರೈನರ್ ಹತ್ಯೆಗೈದಿದ್ದ. ಆತನನ್ನು ಬಂಧಿಸಿ ವಿಚಾರಣೆ ಒಳಪಡಿಸಲಾಗಿದೆ. ಆತ, ತಾನು ಬಾಲಿವುಡ್ ಸಿನಿಮಾ ‘ದೃಶ್ಯಂ’ನಿಂದ ಪ್ರೇರಿತನಾಗಿ ಹತ್ಯೆಗೈದಿದ್ದಾಗಿ ಹೇಳಿಕೊಂಡಿದ್ದಾನೆ ಎಂದು ವರಿದಯಾಗಿದೆ.
ಕಾನ್ಪುರದ ನಿವಾಸಿ ಏಕ್ತಾ ಗುಪ್ತಾ ಅವರು ಜೂನ್ 24ರಂದು ನಾಪತ್ತೆಯಾಗಿದ್ದರು. ಅವರನ್ನು ಜಿಮ್ ಟ್ರೈನರ್ ವಿಮಲ್ ಸೋನಿ ಅಪಹರಿಸಿದ್ದಾನೆಂದು ಮಹಿಳೆಯ ಪತಿ ರಾಹುಲ್ ಗುಪ್ತಾ ಆರೋಪಿಸಿದ್ದರು. ಪೊಲೀಸರಿಗೆ ದೂರು ನೀಡಿದ್ದರು. ಬಳಿಕ, ಆರೋಪಿ ವಿಮಲ್‌ನನ್ನು ಪೊಲೀಸರು ಬಂಧಿಸಿದ್ದರು.
ವಿಚಾರಣೆ ವೇಳೆ, ಆಕೆಯನ್ನು ತಾನೇ ಕೊಲೆ ಮಾಡಿರುವುದಾಗಿ ಆರೋಪಿ ಒಪ್ಪಿಕೊಂಡಿದ್ದಾನೆ. ಮೃತದೇಹವನ್ನು ಉನ್ನತ ಸರ್ಕಾರಿ ಅಧಿಕಾರಿಯೊಬ್ಬರ ನಿವಾಸದ ಬಳಿ ಸಮಾಧಿ ಮಾಡಿರುವುದಾಗಿ ಪೊಲೀಸರಿಗೆ ತಿಳಿಸಿದ್ದಾನೆ. ಈ ಘಟನೆಯು ಅಜಯ್ ದೇವಗನ್ ಅಭಿನಯದ ‘ದೃಶ್ಯಂ’ ಸಿನಿಮಾದ ಕಥೆಗೆ ಹೋಲಿಕೆಯಾಗುತ್ತದೆ.
2015ರಲ್ಲಿ ಬಿಡುಗಡೆಯಾಗಿದ್ದ ‘ದೃಶ್ಯಂ’ ಸಿನಿಮಾದಲ್ಲಿ ನಾಯಕನು ಕೊಲೆಗೀಡಾದ ವ್ಯಕ್ತಿಯ ಮೃತದೇಹವನ್ನು ಪೊಲೀಸ್ ಠಾಣೆಯ ಅಡಿಯಲ್ಲಿ ಹೂತುಹಾಕುವ ದೃಶ್ಯವನ್ನು ಒಳಗೊಂಡಿದೆ. ಆರೋಪಿಯು ‘ದೃಶ್ಯಂ’ ಸನಿಮಾವನ್ನು ಹಲವಾರು ಬಾರಿ ವೀಕ್ಷಿಸಿದ್ದನು. ಆ ದೃಶ್ಯಗಳು ಮಹಿಳೆಯ ಮೃತದೇಹವನ್ನು ಐಷಾರಾಮಿ ಪ್ರದೇಶದಲ್ಲಿ ಹೂತುಹಾಕುವ ಯೋಜನೆಯನ್ನು ಆರೋಪಿಯಲ್ಲಿ ಹುಟ್ಟುಹಾಕಿದ್ದವು. ಈ ಬಗ್ಗೆ ಆರೋಪಿಯೇ ವಿವರಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಕೃತ್ಯ ನಡೆದ ದಿನದ ಸಿಸಿಟಿವಿ ದೃಶ್ಯಾವಳಿಗಳನ್ನು ವಶಕ್ಕೆ ಪಡೆಯಲಾಗಿದೆ. ಮೃತ ಮಹಿಳೆ ಮತ್ತು ಆರೋಪಿ ಜಿಮ್ ಟ್ರೈನರ್ ನಡುವೆ ವಿವಾಹೇತರ ಸಂಬಂಧ ಹೊಂದಿದ್ದರು. ಇತ್ತೀಚಗೆ, ಆರೋಪಿಗೆ ವಿವಾಹ ನಿಶ್ಚಯವಾಗಿದ್ದರಿಂದ ಮಹಿಳೆ ಅಸಮಾಧಾನಗೊಂಡಿದ್ದರು. ಈ ವಿಚಾರವಾಗಿ ಇಬ್ಬರ ನಡುವೆ ಜಗಳ ನಡೆದಿದ್ದು, ಆಕೆಯನ್ನು ಆರೋಪಿ ಹೊಡೆದು ಕೊಲೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ವಿಮಲ್ ಸೋನಿ ಕೆಲಸ ಮಾಡುತ್ತಿದ್ದ ಜಿಮ್‌ನಿಂದ ಸುಮಾರು ಒಂದು ಕಿಲೋಮೀಟರ್ ದೂರದಲ್ಲಿರುವ ಕಟ್ಟಡವೊಂದರಲ್ಲಿ ಆಕೆಯ ಮೃತದೇಹ ದೊರೆತಿದೆ. ಆ ಕಟ್ಟಡದ ಒಂದು ಭಾಗದಲ್ಲಿ ಜಿಲ್ಲಾ ಮ್ಯಾಜಿಸ್ಟ್ರೇಟ್ ಮತ್ತು ಅವರ ಕುಟುಂಬವು ವಾಸಿಸುತ್ತಿದೆ ಎಂದು ವರದಿಯಾಗಿದೆ.