ಸುಪ್ರೀಂ ಕೋರ್ಟ್ ಆದೇಶವಿದ್ದರೂ ರಾಜ್ಯ ಸರ್ಕಾರ ಒಳಮೀಸಲಾತಿ ಜಾರಿಗೊಳಿಸದೇ ಹೊಸದಾಗಿ ಆಯೋಗ ರಚಿಸಲು ಮುಂದಾಗಿದೆ. ಈ ಮೂಲಕ ದಲಿತರ ಕಣ್ಣಿಗೆ ಮಣ್ಣೆರಚುವ ಕೆಲಸ ಮಾಡುತ್ತಿದೆ ಎಂದು ರಾಜ್ಯ ಒಳಮೀಸಲಾತಿ ಹೋರಾಟ ಸಮಿತಿ ಆಕ್ರೋಶ ಹೊರಹಾಕಿದೆ.
ಹಾವೇರಿ ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿದ ಒಳಮೀಸಲಾತಿ ಹೋರಾಟ ಸಮಿತಿಯ ಮುಖಂಡರಾದ ಗವಿಸಿದ್ದಪ್ಪ ದ್ಯಾಮಣ್ಣ, “30 ವರ್ಷಗಳಿಂದ ನಮ್ಮ ಸಮುದಾಯ ಸುದೀರ್ಘವಾಗಿ ಹೋರಾಟ ಮಾಡುತ್ತ ಬಂದಿದೆ. ಮೀಸಲಾತಿ ಜಾರಿಗೊಳಿಸುವ ಅಧಿಕಾರ ರಾಜ್ಯ ಸರ್ಕಾರಕ್ಕೆ ಇದೆ. ಸುಪ್ರೀಂಕೋರ್ಟ್ ಆದೇಶ ನೀಡಿರುವುದು ನಮಗೆ ಬಲ ತಂದಿದೆ. ಈ ಆದೇಶ ನೀಡಿ ಮೂರು ತಿಂಗಳಾದರೂ ರಾಜ್ಯ ಸರ್ಕಾರ ಜಾರಿಗೆ ತಂದಿಲ್ಲ” ಎಂದು ತಿಳಿಸಿದರು.
ಐದು ಗ್ಯಾರಂಟಿ ಜತೆಗೆ ಒಳಮೀಸಲಾತಿ ಜಾರಿಗೊಳಿಸುವುದಾಗಿ ಘೋಷಿಸಿದ್ದರು. ಒಂದೂವರೆ ವರ್ಷ ಕಳೆದರೂ ಕಾಂಗ್ರೆಸ್ ಸರ್ಕಾರ ಚಕಾರ ಎತ್ತುತ್ತಿಲ್ಲ. ಈಗ ಮತ್ತೊಂದು ಆಯೋಗ ರಚಿಸಬೇಕೆಂದು ಸರ್ಕಾರ ಹೇಳುತ್ತಿದೆ. ಅವರೇ ರಚಿಸಿದ್ದ ಆಯೋಗದ ವರದಿ ಅವರಿಗೆ ಬೇಡವಾಯಿತೇ? ಚುನಾವಣೆ ಹಿನ್ನೆಲೆಯಲ್ಲಿ ಕಾಲ ಹರಣ ಮಾಡುವ ಹುನ್ನಾರ ನಡೆಸಿದೆ. ಸಿಎಂ ಸಿದ್ದರಾಮಯ್ಯ ಯಾರ ಒತ್ತಡಕ್ಕೂ ಮಣಿಯದೇ, ಬೊಮ್ಮಾಯಿ ಅವರಂತೆ ದಿಟ್ಟ ನಿರ್ಧಾರ ತೆಗೆದುಕೊಂಡು ಕೂಡಲೇ ಒಳಮೀಸಲಾತಿ ಜಾರಿಗೊಳಿಸಬೇಕೆಂದು ದ್ಯಾಮಣ್ಣ ತಿಳಿಸಿದರು.
ಇದನ್ನೂ ಓದಿದ್ದೀರಾ:ಹಾವೇರಿ | ಶಾಸಕ ರುದ್ರಪ್ಪ ಲಮಾಣಿ ಕಾಣೆಯೆಂದು ರೈಲು ಟಿಕೆಟ್ ಕಾಯ್ದಿರಿಸಿದ ಮತದಾರ
ಸುದ್ದಿಗೋಷ್ಠಿ ವೇಳೆ ಉಡಚಪ್ಪ ಮಾಳಗಿ, ಅಶೋಕ ಮರೆಣ್ಣನವರ, ಮಾರುತಿ ಸೊಟ್ಟಪ್ಪನವರ, ಪರಶುರಾಮ ಹರಪನಹಳ್ಳಿ, ಮೃತ್ಯುಂಜಯ ಮುಷ್ಟಿ, ಜಗದೀಶ ಹರಿಜನ, ಹನುಮಂತಗೌಡ ತಳಮನಿ, ಬಸವರಾಜ ಕಾಳೆ, ದುರ್ಗಪ್ಪ ಮಾದರ ಇತರರು ಉಪಸ್ಥಿತರಿದ್ದರು.
