ಭಾರತದ ಫ್ರೆಂಚ್ ರಾಯಭಾರಿ ಥಿಯೆರಿ ಮ್ಯಾಥೌ ಅವರ ಮೊಬೈಲ್ ಅನ್ನೇ ದೆಹಲಿಯ ಚಾಂದಿನಿ ಚೌಕ್‌ನ ಮಾರುಕಟ್ಟೆಯಲ್ಲಿ ಕಳ್ಳತನ ಮಾಡಲಾಗಿದೆ. ಫ್ರೆಂಚ್ ರಾಯಭಾರಿ ಅಕ್ಟೋಬರ್ 20ರಂದು ದೀಪಾವಳಿ ಶಾಪಿಂಗ್ ಮಾಡುತ್ತಿದ್ದ ವೇಳೆ ಕಳ್ಳತನ ನಡೆದಿದೆ.
ಜನಪ್ರಿಯ ಮಾರುಕಟ್ಟೆಯಾದ ಚಾಂದಿನಿ ಚೌಕ್‌ಗೆ ಹೋದಾಗ ಫ್ರೆಂಚ್ ರಾಯಭಾರಿ ಜೇಬಿನಲ್ಲಿದ್ದ ಮೊಬೈಲ್ ಫೋನ್ ಕಳ್ಳತನವಾಗಿದೆ. ಜೈನ ಮಂದಿರದ ಬಳಿ ತನ್ನ ಮೊಬೈಲ್ ಫೋನ್ ಕಾಣೆಯಾಗಿದೆ ಎಂದು ಥಿಯೆರಿ ಮ್ಯಾಥೌ ಇ-ದೂರು ದಾಖಲಿಸಿದ್ದರು. ಮರುದಿನವೇ ಈ ಬಗ್ಗೆ ತನಿಖೆ ನಡೆಸುವಂತೆ ರಾಯಭಾರ ಕಚೇರಿಯು ಅಧಿಕಾರಿಗಳಿಗೆ ಸೂಚನೆ ನೀಡಿತ್ತು.
ಕೂಡಲೇ ಕಾರ್ಯಪ್ರವೃತ್ತರಾದ ದೆಹಲಿ ಪೊಲೀಸರು ಕಾರ್ಯಾಚರಣೆಗಾಗಿ ತಂಡ ರಚಿಸಿ ಮೊಬೈಲ್ ಕಳ್ಳತನಕ್ಕೆ ಸಂಬಂಧಿಸಿದಂತೆ ಎಲ್ಲ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಎಲ್ಲಾ ನಾಲ್ವರು ಆರೋಪಿಗಳ ವಯಸ್ಸು 20 ರಿಂದ 25 ಎಂದು ವರದಿಯಾಗಿದೆ. ಕದ್ದ ಮೊಬೈಲ್ ಫೋನ್ ಕೂಡ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನು ಓದಿದ್ದೀರಾ? ಕಲಬುರಗಿ | ಕಳ್ಳತನವಾಗಿದ್ದ 672 ಮೊಬೈಲ್ ಪತ್ತೆ ಹಚ್ಚಿ ವಾರಸುದಾರರಿಗೆ ಹಸ್ತಾಂತರಿಸಿದ ಪೊಲೀಸರು
ಇನ್ನು ಇತ್ತೀಚೆಗೆ ಮುಂಬೈನಲ್ಲಿ ನಡೆದ ಮತ್ತೊಂದು ಪ್ರಕರಣದಲ್ಲಿ, ಪೊಲೀಸರು 127 ಕಾಣೆಯಾದ ಮೊಬೈಲ್ ಫೋನ್‌ಗಳನ್ನು ಪತ್ತೆಹಚ್ಚಿ ಅದನ್ನು ಮಾಲೀಕರಿಗೆ ಹಿಂದಿರುಗಿಸಿದ್ದಾರೆ. ದೇಶದ ವಿವಿಧ ಭಾಗಗಳಲ್ಲಿ ಈ 127 ಮೊಬೈಲ್ ಫೋನ್‌ಗಳನ್ನು ಪತ್ತೆ ಹಚ್ಚಲಾಗಿದೆ.
ಅಂಧೇರಿ ಪೊಲೀಸ್ ಅಧಿಕಾರಿಗಳ ಪ್ರಕಾರ, ಭಯೋತ್ಪಾದನಾ ನಿಗ್ರಹ ದಳ (ಎಟಿಸಿ) 19 ಲಕ್ಷ ರೂಪಾಯಿ ಮೌಲ್ಯದ ಫೋನ್‌ಗಳನ್ನು ಪತ್ತೆ ಮಾಡಿದೆ. ಕಳೆದ ಎರಡು ವರ್ಷಗಳಲ್ಲಿ ಈ ಮೊಬೈಲ್ ಫೋನ್‌ಗಳು ಕಳ್ಳತನವಾಗಿತ್ತು. ಈ ಮೊಬೈಲ್ ಫೋನ್‌ಗಳನ್ನು ಕರ್ನಾಟಕ, ಅಸ್ಸಾಂ, ಪಶ್ಚಿಮ ಬಂಗಾಳ ಮತ್ತು ರಾಜಸ್ಥಾನದಲ್ಲಿ ವಶಪಡಿಸಿಕೊಳ್ಳಲಾಗಿದೆ.
