ಮಹಾರಾಷ್ಟ್ರ ವಿಧಾನಸಭಾ ಚುನಾವಣೆ ನಡೆಯುತ್ತಿದೆ. ಎಲ್ಲ ಪಕ್ಷಗಳು ತಮ್ಮ ಮೈತ್ರಿಕೂಟಗಳೊಳಗೆ ಕ್ಷೇತ್ರ ಹಂಚಿಕೆಯ ಕಸರತ್ತು ನಡೆಸುತ್ತಿವೆ. ಅಭ್ಯರ್ಥಿಗಳ ಪಟ್ಟಿ ಘೋಷಿಸುತ್ತಿವೆ. ಇದೇ ಸಮಯದಲ್ಲಿ, ಎರಡು ವರ್ಷಗಳ ಹಿಂದೆ ಶಿವಸೇನೆ ಮತ್ತು ಎನ್‌ಸಿಪಿಯನ್ನು ಒಡೆದು ಇಬ್ಭಾಗ ಮಾಡಿದ ಬಿಜೆಪಿಗೆ ತನ್ನ ಕೃತ್ಯದ ಬಗ್ಗೆ ವಿಷಾದವಿದೆಯೇ? ಉದ್ಧವ್ ಠಾಕ್ರೆ ನೇತೃತ್ವದ ಮಹಾ ವಿಕಾಸ್ ಅಘಾಡಿ (ಎಂವಿಎ) ಸರ್ಕಾರವು ಪೂರ್ಣಾವಧಿಗೆ ಮುಂದುವರಿಯಲು ಅವಕಾಶ ನೀಡಬೇಕಿಲ್ಲವೇ? ಎಂಬ ಅಂಶಗಳು ಚರ್ಚೆಯಲ್ಲಿವೆ.
ಮಹಾರಾಷ್ಟ್ರದಲ್ಲಿ ಬಿಜೆಪಿ ನಿರಂತರವಾಗಿ ತನ್ನದೇ ಆಡಳಿತ ಇರಬೇಕೆಂದು ಬಯಸುತ್ತಿದೆ. ಅದರಲ್ಲೂ ತಮ್ಮದೇ ಪೂರ್ಣ ಬಹುಮತದ ಸರ್ಕಾರ ಬೇಕೆಂದು ಹಂಬಲಿಸುತ್ತಿದೆ. ಹೇಗಾದರೂ ಸರಿ, ಅಧಿಕಾರಕ್ಕೆ ಏರಬೇಕು ಎಂಬ ಹಠಕ್ಕೆ ಬಿದ್ದಿದೆ. ಆ ಕಾರಣಕ್ಕಾಗಿಯೇ 2022ರಲ್ಲಿ ಎಂವಿಎ ಸರ್ಕಾರವನ್ನು ಉರುಳಿಸಿ, ಶಿವಸೇನೆ, ಎನ್‌ಸಿಪಿಯನ್ನು ಎರಡು ಓಳಾಗಿಸಿ, ಹಿಂಬಾಗಿಲಿನಿಂದ ಸರ್ಕಾರ ರಚಿಸಿತು. ಆದರೆ, ಆ ಮಹಾಯುತಿ ಸರ್ಕಾರದಿಂದ ಬಿಜೆಪಿಗೆ ಅನುಕೂಲವಾಗುವುದಕ್ಕಿಂತ, ಸಮಸ್ಯೆಗಳೇ ಹೆಚ್ಚಾಗಿವೆ. ಅದು ಇತ್ತೀಚೆಗೆ ಮುಗಿದ ಲೋಕಸಭಾ ಚುನಾವಣೆ ಫಲಿತಾಂಶದಲ್ಲಿ ಕಂಡುಬಂದಿದೆ.
ಈಗ, ನವೆಂಬರ್ 20ರಂದು ಮಹಾರಾಷ್ಟ್ರ ವಿಧಾನಸಭೆಗೆ ಮತದಾನ ನಡೆಯಲಿದೆ. ಮಹಾಯುತಿ ಸರ್ಕಾರದಲ್ಲಿ ಅಡಿಗಡಿಗೂ ಏಕನಾಥ್ ಶಿಂದೆ ಲಾಭ ಪಡೆದುಕೊಂಡಿದ್ದು, ತಾವೇ ಪ್ರಬಲರು ಎಂದು ಬಿಂಬಿಸಿಕೊಂಡಿದ್ದಾರೆ. ಎನ್‌ಸಿಬಿ(ಅಜಿತ್ ಬಣ)ದ ಮುಖಸ್ಥ, ಉಪ ಮುಖ್ಯಮಂತ್ರಿ ಅಜಿತ್ ಪವಾರ್ ಅವರೂ ಸದ್ದು ಮಾಡಲು ಆರಂಭಿಸಿದ್ದಾರೆ. ಹೀಗಾಗಿಯೇ, ಈ ಇಬ್ಬರೂ ಸೇರಿ, ‘ನಾವು ಇಲ್ಲದೆ ನೀವು ಅಧಿಕಾರಕ್ಕೆ ಬರಲು ಸಾಧ್ಯವಿಲ್ಲ’ ಎಂಬ ಸ್ಪಷ್ಟ ಸಂದೇಶವನ್ನು ಬಿಜೆಪಿಗೆ ನೀಡಿದ್ದಾರೆ.
ಇದು ಬಿಜೆಪಿಗೆ ಇರುಸುಮುರುಸು ಉಂಟುಮಾಡಿದೆ. ಆದರೆ, ಸದ್ಯಕ್ಕೆ ಸ್ವಂತ ಬಲದಿಂದ ಸರ್ಕಾರ ರಚಿಸಲಾಗದ ಸ್ಥಿತಿಯಲ್ಲಿರುವ ಬಿಜೆಪಿ, ಕಾದು ಹೊಡೆಯುವ ತಂತ್ರದಲ್ಲಿದೆ. ಶಿಂದೆ ಮತ್ತು ಅಜಿತ್‌ಗೆ ಈಗ ಹೆಚ್ಚು ಕೊಟ್ಟು, ಆನಂತರ ಎಲ್ಲವನ್ನೂ ಕಿತ್ತುಕೊಳ್ಳುವ ತಂತ್ರದಲ್ಲಿದೆ. ಅದು ಇತ್ತೀಚೆಗೆ ಅಮಿತ್ ಶಾ ಅವರ ಮಾತಿನಲ್ಲಿ ವ್ಯಕ್ತವಾಗಿದೆ.
2029ರ ಚುನಾವಣೆಯಲ್ಲಿ ರಾಜ್ಯದಲ್ಲಿ ಬಿಜೆಪಿ ಸ್ವಂತ ಬಲದಿಂದ ಅಧಿಕಾರಕ್ಕೆ ಬರಲಿದೆ ಎಂದು ಚುನಾವಣಾ ಪ್ರಚಾರದಲ್ಲಿ ಅಮಿತ್ ಶಾ ಹೇಳಿದ್ದರು. ಇದು, ಏಕನಾಥ್ ಶಿಂದೆ ಮತ್ತು ಅಜಿತ್ ಪವಾರ್‌ಗೆ ಮುಂದಿನ ದಿನಗಳಲ್ಲಿ ತಮ್ಮೊಂದಿಗೆ ಬಿಜೆಪಿ ಯಾವ ರೀತಿ ವ್ಯವಹರಿಸಬಹುದು ಎಂಬುದರ ಸಂದೇಶವನ್ನು ರವಾನಿಸಿದೆ.
ಉದ್ಧವ್ ಠಾಕ್ರೆ ಅವರು ಹಿಂದುತ್ವ ಮತ್ತು ಬಾಳ್ ಠಾಕ್ರೆ ಅವರ ಸಿದ್ಧಾಂತವನ್ನು ಕಡೆಗಣಿಸಿದ್ದಾರೆ. ಪಕ್ಷವು ತನ್ನ ಮೂಲ ಸಿದ್ಧಾಂತದಿಂದ ವಿಮುಖವಾಗಿದೆ ಎಂದು ಶಿಂದೆ ಆರೋಪಿಸಿದ್ದರು. ತಮ್ಮ ಬಣದೊಂದಿಗೆ ಬಿಜೆಪಿ ಜೊತೆಗೂಡಿ ಸರ್ಕಾರ ರಚಿಸಿದರು. ಆದರೆ, ಶಿಂದೆ ಅವರ ಹಿಂದುತ್ವದ ಬ್ರ್ಯಾಂಡ್ ತಮಗೆ (ಬಿಜೆಪಿ) ಅಗತ್ಯವಿಲ್ಲ ಎಂಬುದನ್ನು ಅಮಿತ್ ಶಾ ಹೇಳಿಕೆ ಸ್ಪಷ್ಟಪಡಿಸಿದೆ.
ಯಾವುದೇ ಸಂದರ್ಭದಲ್ಲೂ, ಬಿಜೆಪಿಯು ತನ್ನ ಮೀರಿ ಶಿವಸೇನೆ (ಶಿಂದೆ ಬಣ) ಮತ್ತು ಎನ್‌ಸಿಪಿ (ಅಜಿತ್ ಬಣ) ಬೆಳೆಯಲು ಬಿಡುವುದಿಲ್ಲ. ಗುಜರಾತ್, ಮಧ್ಯಪ್ರದೇಶ, ರಾಜಸ್ಥಾನ, ಛತ್ತೀಸ್‌ಗಢ ಮತ್ತು ಹಿಮಾಚಲ ಪ್ರದೇಶದಂತೆಯೇ ಮಹಾರಾಷ್ಟ್ರದಲ್ಲೂ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಹೋರಾಟವಿರಬೇಕು. ಅದರಲ್ಲಿ ತಾವೇ ಗೆಲ್ಲಬೇಕು ಎಂಬುದು ಬಿಜೆಪಿಯ ತಂತ್ರ. ಹೀಗಾಗಿ, ಶಿವಸೇನೆ ಮತ್ತು ಎನ್‌ಸಿಪಿ ಬಣಗಳನ್ನು ಬಿಜೆಪಿ ಅಂಚಿಗೆ ತಳ್ಳುತ್ತದೆ ಎಂಬುದು ಅಮಿತ್ ಶಾ ಮಾತಿನ ಹಿಂದೆ ಇರುವ ಮರ್ಮ.
ಗಮನಾರ್ಹ ಸಂಗತಿ ಎಂದರೆ, ಭ್ರಷ್ಟಾಚಾರದ ಆರೋಪ ಹೊತ್ತಿರುವ ಅಜಿತ್ ಪವಾರ್ ಜೊತೆ ಬಿಜೆಪಿ ವ್ಯವಹಾರ ನಡೆಸುತ್ತಿರುವ ಬಗ್ಗೆ ಬಿಜೆಪಿಯ ಒಂದು ವಿಭಾಗ ಮತ್ತು ಆರ್‌ಎಸ್‌ಎಸ್ ಅಸಮಾಧಾನಗೊಂಡಿವೆ. ತಾವು ಅಧಿಕಾರಕ್ಕೆ ಬಂದರೆ, ಅಜಿತ್ ಪವಾರ್ ಅವರನ್ನು ಜೈಲಿಗೆ ಹಾಕುವುದಾಗಿ ಈ ಹಿಂದೆ ಬಿಜೆಪಿಯೇ ಅಬ್ಬರದ ಪ್ರಚಾರ ಮಾಡಿತ್ತು. ಆದರೆ, ಈಗ ಅಜಿತ್ ಬಿಜೆಪಿಯ ಭಾಗವಾಗಿದ್ದಾರೆ. ಜೊತೆಗೆ, ಸರ್ಕಾರದಲ್ಲಿ ಉಪ ಮುಖ್ಯಮಂತ್ರಿ. ಇದನ್ನು ಸಹಿಸಿಕೊಳ್ಳಲು ಆರ್‌ಎಸ್‌ಎಸ್‌ಗೆ ಸಾಧ್ಯವಾಗುತ್ತಿಲ್ಲ. ಆದರೆ, ಮೋದಿ-ಶಾ ಜೋಡಿ ಆರ್‌ಎಸ್‌ಎಸ್ ಮಾತನ್ನು ಕೇಳುತ್ತಿಲ್ಲ. ಮಹಾರಾಷ್ಟ್ರದಲ್ಲಿ ಬಿಜೆಪಿ ಅಧಿಕಾರದಲ್ಲಿರಲು ಅಜಿತ್ ಪವಾರ್ ಕೂಡ ತಮಗೆ ಅಗತ್ಯವೆಂದು ಮೋದಿ-ಶಾ ಜೋಡಿ ಭಾವಿಸಿದೆ. ಅದಕ್ಕಾಗಿಯೇ, ಅಜಿತ್ ಅವರನ್ನು ಜೊತೆಯಲ್ಲಿಟ್ಟುಕೊಂಡಿದೆ.
ಮಹಾಯುತಿಯಲ್ಲಿ ಸೀಟು ಹಂಚಿಕೆಯ ಕಸರತ್ತು ಮುಗಿದಿದೆ. ಬಿಜೆಪಿ 152 ಸೀಟುಗಳನ್ನು ಪಡೆದುಕೊಂಡು ಮೈತ್ರಿಯಲ್ಲಿ ಸಿಂಹಪಾಲು ಪಡೆದುಕೊಂಡಿದೆ. ಸಿಂಧೆ ಬಣಕ್ಕೆ 88 ಮತ್ತು ಅಜಿತ್ ಬಣಕ್ಕೆ 52 ಸೀಟುಗಳನ್ನು ಕೊಟ್ಟಿದೆ. ಸದ್ಯ, ಮಹಾಯುತಿಯ ಮಿತ್ರಪಕ್ಷಗಳು ರಾಜ್ಯದಲ್ಲಿ ಸಮಾನ ಪ್ರಾಬಲ್ಯ ಹೊಂದಿರುವುದಾಗಿ ಹೇಳಿಕೊಳ್ಳುತ್ತಿವೆ. ಆದರೂ, ಸೀಟು ಹಂಚಿಕೆಯಲ್ಲಿ ತಾರತಮ್ಯ ಕಂಡುಬಂದಿದೆ. ಆದಾಗ್ಯೂ, ಶಿಂಧೆ ಮತ್ತು ಅಜಿತ್ ಅವರ ಬಣಗಳು ತಮ್ಮ ಮಾತೃ ಪಕ್ಷಗಳ ಸಂಪೂರ್ಣ ರಾಜಕೀಯ ನೆಲೆಯನ್ನು ಕಿತ್ತುಕೊಳ್ಳಲು ಸಾಧ್ಯವಾಗುವುದಿಲ್ಲ ಎಂಬ ಮಾತುಗಳಿವೆ. ಎಲ್ಲಕ್ಕಿಂತ ಮಿಗಿಲಾಗಿ ಮೂಲ ಶಿವಸೇನೆಯಿಂದ ಬೇರ್ಪಟ್ಟವರು ಚುನಾವಣೆಯಲ್ಲಿ ಮತದಾರರನ್ನು ಸೆಳೆಯಬಹುದಾದ ರೀತಿಯ ಯಾವುದೇ ಸಾಧನೆ ಮಾಡಿಲ್ಲ. ಇನ್ನು, ಎನ್‌ಸಿಪಿಯ ಅಜಿತ್ ಬಣದ ಕತೆ ಇನ್ನೂ ಹೀನಾಯ ಸ್ಥಿತಿಯಲ್ಲಿದೆ. ಮೂಲ ಎನ್‌ಸಿಪಿಯ ನಾಯಕ ಶರದ್ ಪವಾರ್ ಅವರು ಉತ್ತಮ ತಂತ್ರಗಾರ. ಅವರ ತಂತ್ರಗಳನ್ನು ಭೇದಿಸಲು ಅಜಿತ್‌ಗೆ ಸಾಧ್ಯವಿಲ್ಲ.
ಈ ವರದಿ ಓದಿದ್ದೀರಾ?: ಸಂಡೂರು ಉಪಚುನಾವಣೆ | ರೆಡ್ಡಿ-ರಾಮುಲು v/s ಲಾಡ್-ತುಕಾರಾಮ್; ಗೆಲ್ಲೋದ್ಯಾರು?
ಆದ್ದರಿಂದ, ಶಿವಸೇನೆ ಶಿಂದೆ ಬಣ ಮತ್ತು ಎನ್‌ಸಿಪಿ ಅಜಿತ್ ಬಣವನ್ನು ತುಳಿದು ಅಥವಾ ಆಪೋಷನ ತೆಗೆದುಕೊಂಡು ತನಗೆ ಅನುಕೂಲಕರವಾದ ರಾಜಕಾರಣ ಮಾಡಲು ಬಿಜೆಪಿ ಯತ್ನಿಸುತ್ತಿದೆ. ಆದರೆ, ಏಕನಾಥ್ ಶಿಂದೆ ಅವರ ಬೆಳೆಯುತ್ತಿರುವ ಜನಪ್ರಿಯತೆಯು ಬಿಜೆಪಿಗೆ ಸವಾಲಾಗಿಯೂ ಕಾಣಿಸುತ್ತಿದೆ. ಇತ್ತೀಚೆಗೆ ಜಾರಿಗೆ ಬಂದ, ಮಹಿಳೆಯರಿಗಾಗಿ ಲಡ್ಕಿ ಬೆಹನ್ ಯೋಜನೆ, ಯುವಜನರಿಗೆ ಲಡ್ಕಾ ಭಾವು ಯೋಜನೆ ಮತ್ತು ಕೃಷಿ ಸಾಲ ಮನ್ನಾ ಮುಂತಾದ ಯೋಜನೆಗಳು ಶಿಂದೆ ಅವರ ಜನಪ್ರಿಯತೆ ಹೆಚ್ಚಲು ಕಾರಣವಾಗಿವೆ.
ಮಹಾಯುತಿ ಒಳಗೆ ಬಿಜೆಪಿ ತನ್ನನ್ನು ಅಣ್ಣ ಎಂದು ಬಿಂಬಿಸಿಕೊಂಡಿದೆ. ಹೀಗಾಗಿ ಹೆಚ್ಚಿನ ಸ್ಥಾನಗಳನ್ನು ಪಡೆದುಕೊಂಡಿದೆ. ಆದರೆ, ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯ ಸಾಧನೆಯು ಕಳಪೆಯಾಗಿದ್ದು, ಅದರ ಆಧಾರದ ಮೇಲೆ ಸಮಾನ ಪಾಲು ನೀಡಬೇಕೆಂದು ಶಿಂದೆ, ಅಜಿತ್ ಕೇಳುತ್ತಿದ್ದಾರೆ.
ಹತ್ತು ವರ್ಷಗಳಿಂದ ಈಚೆಗೆ ರಾಷ್ಟ್ರಮಟ್ಟದಲ್ಲಿ ಬಿಜೆಪಿ ಹೆಚ್ಚು ಸ್ಥಾನ ಗಳಿಸಲು ಮೋದಿ ಅವರು ಸಂಖ್ಯಾಶಾಸ್ತ್ರದ ಯುನೊ ಆಗಿದ್ದರು. ಆದರೆ, ಮಹಾರಾಷ್ಟ್ರದಲ್ಲಿ ತಮ್ಮ ಪ್ರಭಾವ, ಪ್ರಾಬಲ್ಯವನ್ನು ಕಂಡುಕೊಳ್ಳುವಲ್ಲಿ ಮೋದಿ ವಿಫಲರಾಗಿದ್ದಾರೆ. ಮೋದಿ ಅಲೆಯ ಹೊರತಾಗಿಯೂ ಬಿಜೆಪಿ ಸ್ವಂತ ಬಲದಿಂದ ಮಹಾರಾಷ್ಟ್ರದಲ್ಲಿ ಸರ್ಕಾರ ರಚಿಸಲು ಸಾಧ್ಯವಾಗಿಲ್ಲ. 2019ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಭಾರೀ ಬಹುಮತ ಪಡೆದರೂ, ಅದೇ ವರ್ಷ ನಡೆದ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಹೆಚ್ಚಿನ ಸ್ಥಾನ ಗೆಲ್ಲಲು ಬಿಜೆಪಿಗೆ ಸಾಧ್ಯವಾಗಲಿಲ್ಲ. ಹೀಗಾಗಿ, ಅಲ್ಲಿ ಬಿಜೆಪಿ ತನ್ನ ತಾತ್ಕಾಲಿಕ ಲಾಭಕ್ಕಾಗಿ ಶಿಂದೆ ಅವರ ಸೇನೆ ಮತ್ತು ಅಜಿತ್ ಅವರ ಎನ್‌ಸಿಪಿಯನ್ನು ಅವಲಂಬಿಸಿದೆ. ಕೊಟ್ಟಂಗೆ ಮಾಡಿ, ಬಡ್ಡಿ ಸಮೇತ ಕಿತ್ತುಕೊಳ್ಳುವ ಆಟ ಆಡುತ್ತಿದೆ.