ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿಸಿದ್ದ ಆರೋಪಿ ನಟ ದರ್ಶನ್ ಬುಧವಾರ ಸಂಜೆ ಜೈಲಿನಿಂದ ಬಿಡುಗಡೆಯಾಗಿದ್ದಾರೆ. ಆರೋಗ್ಯ ಸಮಸ್ಯೆಯನ್ನು ಆಧರಿಸಿ ಅವರಿಗೆ ಕರ್ನಾಟಕ ಹೈಕೋರ್ಟ್ 6 ವಾರಗಳ ಮಧ್ಯಂತರ ಜಾಮೀನು ನೀಡಿದ್ದು, ಅವರು ಬಳ್ಳಾರಿ ಜೈಲಿನಿಂದ ಬಿಡುಗಡೆಯಾಗಿದ್ದಾರೆ.
ಒಂದು ವಾರದಲ್ಲಿ ಚಿಕಿತ್ಸೆಯ ವಿವರವನ್ನು ಕೋರ್ಟ್‌ಗೆ ನೀಡಬೇಕು. ಕೋರ್ಟ್‌ಗೆ ಪಾಸ್‌ಪೋರ್ಟ್ ಒಪ್ಪಿಸಬೇಕು. ದರ್ಶನ್ ಇಚ್ಛಿಸಿದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಬಹುದು ಎಂದು ಹೈಕೋರ್ಟ್ ನ್ಯಾಯಮೂರ್ತಿ ವಿಶ್ವಜಿತ್ ಶೆಟ್ಟಿ ಅವರಿದ್ದ ಏಕಸದಸ್ಯ ಪೀಠ ಷರತ್ತುಬದ್ಧ ಜಾಮೀನು ನೀಡಿದೆ.
ದರ್ಶನ್ ಬೆನ್ನುನೋವಿನಿಂದ ಬಳಲುತ್ತಿದ್ದಾರೆ. ಬೆನ್ನುಹುರಿ ನೋವಿಗೆ ಪರಿಹಾರ ಪಡೆಯಲು ಶಸ್ತ್ರ ಚಿಕಿತ್ಸೆಗೆ ಅವಕಾಶ ಕಲ್ಪಿಸಿಕೊಂಡಬೇಕೆಂದು ಕೋರಿ ಸೆಷನ್ಸ್ ಕೋರ್ಟ್ ಮೊರೆ ಹೋಗಿದ್ದರು. ಆದರೆ, ಅಲ್ಲಿ ಜಾಮೀನು ತಿರಸ್ಕೃತಗೊಂಡ ಪರಿಣಾಮ ಹೈಕೋರ್ಟ್ ಮೆಟ್ಟಿಲೇರಿದ್ದರು.
ಹೈಕೋರ್ಟ್‌ನಲ್ಲಿ ದರ್ಶನ್ ಪರ ವಕೀಲ ಸಿ.ವಿ ನಾಗೇಶ್, “ದರ್ಶನ್ ಅವರಿಗೆ ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸುವ ಅವಶ್ಯಕತೆ ಇದೆ. ಇಲ್ಲವಾದಲ್ಲಿ ದರ್ಶನ್ ಒಂದು ಕಾಲಿಗೆ ಆಗಿರುವ ಸಮಸ್ಯೆ ಎರಡೂ ಕಾಲಿಗೆ ಆಗಬಹುದು. ಹೀಗಾಗಿ 3 ತಿಂಗಳು ಮಧ್ಯಂತರ ಜಾಮೀನು ನೀಡಬೇಕು” ಎಂದು ಮನವಿ ಮಾಡಿದ್ದರು.
ವಾದವನ್ನು ಆಲಿಸಿದ ನ್ಯಾಯಾಲಯ, ದರ್ಶನ್‌ಗೆ ಶರತ್ತು ಬದ್ಧ ಜಾಮೀನು ನೀಡಿದೆ. ಈ ಬೆನ್ನಲೇ, ದರ್ಶನ್ ಜೈಲಿನಿಂದ ಬಿಡುಗಡೆಯಾಗಿದ್ದಾರೆ.