ಮತದಾರರ ಪರಿಷ್ಕರಣೆಯನ್ನು ಗುಬ್ಬಿ ವಿಧಾನಸಭಾ ಕ್ಷೇತ್ರದ 199 ಮತಗಟ್ಟೆಯಲ್ಲಿ ಹಾಗೂ ತಾಲ್ಲೂಕು ಕಚೇರಿಯಲ್ಲಿ ಆರಂಭಿಸಲಾಗಿದೆ. ಮತದಾರರು ಹಕ್ಕು ಮತ್ತು ಆಕ್ಷೇಪಣೆ ಇತ್ಯರ್ಥ ಪಡಿಸಲು ಡಿಸೆಂಬರ್ 24 ಕೊನೆಯ ದಿನವಾಗಿದೆ ಎಂದು ತಹಶೀಲ್ದಾರ್ ಬಿ.ಆರತಿ ತಿಳಿಸಿದರು.
ಗುಬ್ಬಿ ಪಟ್ಟಣದ ತಾಲೂಕು ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು ಗುಬ್ಬಿ ವಿಧಾನಸಭಾ ಕ್ಷೇತ್ರದಲ್ಲಿ 1,84,372 ಒಟ್ಟು ಮತದಾರರಿದ್ದು, 91,357 ಪುರುಷರು, 93,005 ಮಹಿಳೆಯರಿದ್ದಾರೆ. ಈ ಪೈಕಿ 2254 ಅಂಗವಿಕಲ ಮತದಾರರು ಇದ್ದಾರೆ ಎಂದು ವಿವರಿಸಿದರು.
ಮತದಾರರ ಪರಿಷ್ಕರಣೆ 2025 ರ ಸಂಬಂಧ ಅರ್ಹತಾ ಅನುಸಾರ ಸೇರ್ಪಡೆಗೆ ನಮೂನೆ 6 ಅರ್ಜಿ, ಕೈ ಬಿಡತಕ್ಕದ್ದಕ್ಕೆ ನಮೂನೆ 7, ವರ್ಗಾವಣೆಗೆ ನಮೂನೆ 8 ಅರ್ಜಿ ಸಲ್ಲಿಸಲು ತಿಳಿಸಿದ ಅವರು ಆಯಾ ಮತಗಟ್ಟೆ ಬಿಎಲ್ ಓ ಹಾಗೂ ಅನ್ ಲೈನ್ ಮೂಲಕ ಕೂಡಾ ಅರ್ಜಿ ಸಲ್ಲಿಸಬಹುದಾಗಿದೆ. ಮುಖ್ಯ ಚುನಾವಣಾಧಿಕಾರಿಗಳ ನಿರ್ದೇಶನದಂತೆ ಪ್ರತಿ ಶನಿವಾರ ಮತ್ತು ಭಾನುವಾರದಂದು ವಿಶೇಷ ಅಭಿಯಾನ ಮಿಂಚಿನ ನೋಂದಣಿ ಕಾರ್ಯಕ್ರಮವನ್ನು ಕೊನೆಯ ದಿನ ಡಿಸೆಂಬರ್ 24 ರವರೆಗೆ ನಡೆಸಲಾಗುವುದು. ಪರಿಷ್ಕರಣೆ ನಂತರ 2025 ಜನವರಿ 6 ರಂದು ಅಂತಿಮ ಪಟ್ಟಿ ಸಿದ್ಧಗೊಳಿಸಲಾಗುವುದು ಎಂದು ತಿಳಿಸಿದರು.
ಗ್ರಾಮ ಪಂಚಾಯಿತಿ ಉಪ ಚುನಾವಣೆ
ತಾಲ್ಲೂಕಿನ 34 ಗ್ರಾಮ ಪಂಚಾಯಿತಿಯ ಪೈಕಿ 6 ಗ್ರಾಮ ಪಂಚಾಯಿತಿಯಲ್ಲಿ ತೆರವಾಗಿದ್ದ ಸ್ಥಾನಗಳಿಗೆ ಚುನಾವಣೆ ನವಂಬರ್ 23 ರಂದು ಬೆಳಿಗ್ಗೆ 7 ರಿಂದ ಸಂಜೆ 5 ರವರೆಗೆ ಮತದಾನ ನಡೆಯಲಿದೆ. ಶಿವಪುರ ಗ್ರಾಪಂ ವ್ಯಾಪ್ತಿಯ ಗಳಿಗೇಕೆರೆ ಕ್ಷೇತ್ರ, ಎಂ.ಎನ್.ಕೋಟೆ ಗ್ರಾಪಂ ಒಂದು ಕ್ಷೇತ್ರ, ಅಡಗೂರು ಗ್ರಾಪಂ ಒಂದು ಕ್ಷೇತ್ರ, ಜಿ.ಹೊಸಹಳ್ಳಿ ಒಂದು ಕ್ಷೇತ್ರ, ಎಸ್.ಕೊಡಗೀಹಳ್ಳಿ ಗ್ರಾಪಂ ಒಂದು ಕ್ಷೇತ್ರ ಹಾಗೂ ಪೆದ್ದನಹಳ್ಳಿ ಗ್ರಾಪಂ ನ ಬೋಚಿಹಳ್ಳಿ ಈ ಕ್ಷೇತ್ರದಲ್ಲಿ ಚುನಾವಣೆ ನಡೆಯಲಿದೆ ಎಂದರು.
ಇದನ್ನು ಓದಿದ್ದೀರಾ? ತುಮಕೂರು ಜಿಲ್ಲೆಯಲ್ಲಿ 4 ಶೇಂಗಾ ಖರೀದಿ ಕೇಂದ್ರ ಸ್ಥಾಪನೆ : ಶುಭ ಕಲ್ಯಾಣ್
ಅಕ್ರಮ ಪಟಾಕಿ ಮಾರಿದರೆ ಕಾನೂನು ಕ್ರಮ
ತಾಲ್ಲೂಕಿನಲ್ಲಿ ಒಟ್ಟು ನಾಲ್ಕು ಹಸಿರು ಪಟಾಕಿ ಅಂಗಡಿಗಳಿಗೆ ಪರವಾನಗಿ ನೀಡಲಾಗಿದೆ. ಗುಬ್ಬಿ ಪಟ್ಟಣದಲ್ಲಿ ಎರಡು ಅಂಗಡಿ ಹಾಗೂ ನಿಟ್ಟೂರು ಗ್ರಾಮದಲ್ಲಿ ಎರಡು ಮಳಿಗೆ ತಾತ್ಕಾಲಿಕವಾಗಿ ಜಂಕ್ ಶೀಟ್ ನಲ್ಲಿ ನಿರ್ಮಾಣ ಮಾಡಲು ಸೂಚಿಸಲಾಗಿದೆ. ಉಳಿದಂತೆ ಯಾವುದೇ ಅಂಗಡಿಗಳಲ್ಲಿ ಅಕ್ರಮ ಪಟಾಕಿ ಮಾರಾಟ ಮಾಡಿದರೆ ಅಥವಾ ಹಸಿರು ಪಟಾಕಿ ಚಿಹ್ನೆ ಇಲ್ಲದ ಪಟಾಕಿ ಮಾರಾಟ ಮಾಡಿದರೆ ಕಾನೂನು ರೀತಿ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಚುನಾವಣಾ ಶಿರಸ್ತೇದಾರ್ ಲೋಕೇಶ್, ಕಂದಾಯ ನಿರೀಕ್ಷಕ ಗುರು ಪ್ರಸಾದ್ ಇದ್ದರು.
