ವಿದ್ಯುತ್ ಖಾಸಗೀಕರಣವಾದರೆ ಒಲೆಯ ಮೇಲಿನ ಅಕ್ಕಿ ಬೇಯುವುದಿಲ್ಲ. ರೈತನ ಕೃಷಿ ಪಂಪ್‌ಸೆಟ್ ಮೋಟಾರ್ ಓಡುವುದಿಲ್ಲ. ಈ ಹಿನ್ನೆಲೆಯಲ್ಲಿ ವಿದ್ಯುತ್ ಖಾಸಗೀಕರಣ ಸೇರಿದಂತೆ ರೈತ ಕಾರ್ಮಿಕ ವಿರೋಧಿ ನೀತಿಗಳನ್ನು ಹಿಂಪಡೆಯಲು ಸಂಘಟಿತ ಹೋರಾಟ ರೂಪಿಸಬೇಕಿದೆ ಎಂದು ರೈತ ಮುಖಂಡ ರಾಜ್ಯ ರೈತ ಸಂಘದ ಕಾರ್ಯಾಧ್ಯಕ್ಷ ಬಸವರಾಜಪ್ಪ ಎಚ್ ಆರ್. ಕರೆ ನೀಡಿದರು.
ದಾವಣಗೆರೆಯ ಎ ಪಿ ಎಂ ಸಿ ಸಭಾಂಗಣದಲ್ಲಿ ರೈತ ಸಂಘ ಮತ್ತು ಕಾರ್ಮಿಕ ಸಂಘಟನೆಗಳು ಆಯೋಜಿಸಿದ್ದ ಸಂಯುಕ್ತ ಹೋರಾಟ -ಕರ್ನಾಟಕ ಅಡಿಯಲ್ಲಿ ರೈತ- ಕಾರ್ಮಿಕರ ಸಂಘಟನಾ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸಂಯುಕ್ತ ಕಿಸಾನ್ ಮೋರ್ಚಾ ಸುಮಾರು 750ಕ್ಕೂ ಹೆಚ್ಚು ರೈತ ಸಂಘಟನೆಗಳ ಒಕ್ಕೂಟ. ಇದು ದೆಹಲಿಯಲ್ಲಿ 14 ತಿಂಗಳ ಐತಿಹಾಸಿಕ ಚಳುವಳಿ ನಡೆಸಿ, ದೇಶದ ಪ್ರಧಾನಿಯನ್ನು ಮಣಿಸಲು ಸಾಧ್ಯವಿಲ್ಲ ಎನ್ನುವ ಸಂದರ್ಭದಲ್ಲಿ ಪ್ರಧಾನಿಗಳೇ ರೈತರ ಮುಂದೆ ಮಣಿದು ಕಾಯ್ದೆ ವಾಪಸ್ ಪಡೆಯುವ ಪರಿಸ್ಥಿತಿಯನ್ನು ನಿರ್ಮಿಸಿತ್ತು. ಕಾಯ್ದೆಗಳನ್ನು ವಾಪಸ್ ಪಡೆದ ಸರ್ಕಾರ ಆಗ ರೈತರಿಗೆ ಕನಿಷ್ಠ ಬೆಂಬಲ ಬೆಲೆ , ರೈತರ ಸಾಲ ಮನ್ನಾ, ವಿದ್ಯುತ್ ಖಾಸಗೀಕರಣ ಹಿಂತೆಗೆತ, ಸ್ವಾಮಿನಾಥನ್ ವರದಿ ಜಾರಿಗೆ ಭರವಸೆ ಸೇರಿದಂತೆ ಹಲವು ವಾಗ್ದಾನಗಳನ್ನು ಲಿಖಿತ ರೂಪದಲ್ಲಿ ನೀಡಿತ್ತು. ಇಂದಿನವರೆಗೂ ಅವು ಜಾರಿಯಾಗಿಲ್ಲ. ಇಂದು ರೈತರ ಜೊತೆಗೆ ಕಾರ್ಮಿಕ, ದುಡಿಯುವ ವರ್ಗ ಕೂಡ ಹೋರಾಟದಲ್ಲಿ ಜೊತೆಗಿದೆ. ವಿದ್ಯುತ್ ಖಾಸಗೀಕರಣದಡಿಯಲ್ಲಿ ವಿದ್ಯುತ್ ಸ್ಮಾರ್ಟ್ ಮೀಟರ್ ಹಾಕಿ , ಮೊಬೈಲ್ ರಿಚಾರ್ಜ್ ರೀತಿ, ಹಣ ನೀಡಿದರೆ ಮಾತ್ರ ವಿದ್ಯುತ್ ಎನ್ನುವಂತೆ ಮುಂದಿನ ದಿನಗಳಲ್ಲಿ ಜನಜೀವನದ ಮತ್ತು ರೈತರ ಪರಿಸ್ಥಿತಿಯಾಗುತ್ತದೆ. ನೀವು ಮೊಬೈಲಿಗೆ ಯಾವ ರೀತಿ ಹಣ ಹಾಕಿಸುತ್ತಿರೋ ಅದೇ ರೀತಿ ರಿಚಾರ್ಜ್ ಮಾಡದಿದ್ದರೆ ಒಲೆಯ ಮೇಲಿನ ಅಕ್ಕಿ ಬೇಯುವುದಿಲ್ಲ , ರೈತನ ಕೃಷಿ ಪಂಪ್ ಸೆಟ್ ಮೋಟಾರ್ ಓಡಲ್ಲ. ವಿದ್ಯುತ್ ಖಾಸಗೀಕರಣವಾದರೆ ದೇಶದಲ್ಲಿ ರಕ್ತಪಾತವಾಗಲಿದೆ ಎಂದು ಎಚ್ಚರಿಸಿದರು.
ಎಲ್ಲವನ್ನೂ ಜಾಗತೀಕರಣಗೊಳಿಸಿದ್ದಾರೆ. ದೇಶಕ್ಕೆ ಅನ್ನ ಕೊಟ್ಟು , ಹೊರದೇಶಕ್ಕೆ ಧಾನ್ಯ ದವಸ ಕಾಳುಗಳನ್ನು ರಫ್ತು ವಹಿವಾಟು ಮಾಡಿದ್ದರೂ ರೈತರು ಸಾಲಗಾರರಾಗಿಯೇ ಉಳಿದಿದ್ದಾರೆ. ಚುನಾವಣೆಗೂ ಮುನ್ನ ಕಾಂಗ್ರೆಸ್ ರೈತ ವಿರೋಧಿ ಕಾಯ್ದೆ ವಾಪಸ್ ಭರವಸೆ ನೀಡಿದ್ದರೂ ಕೂಡ ಇಂದಿನವರೆಗೂ ರೈತ, ಬಡವರ ಕಾರ್ಮಿಕರ ಪರ ಭರವಸೆಯನ್ನು ಜಾರಿಗೊಳಿಸಿಲ್ಲ. ಚುನಾವಣೆ ಮುನ್ನ ಕಾಂಗ್ರೆಸ್ ನೀಡಿದ ವಾಗ್ದಾನದ ಕ್ಯಾಸೆಟ್ ಗಳು ನಮ್ಮಲ್ಲಿವೆ. ಬಿಜೆಪಿ ಮನೆಗೆ ಕಳುಹಿಸಿದ್ದು ಕಾಂಗ್ರೆಸ್ ಜೆಡಿಎಸ್ ಅಲ್ಲ, ರೈತರು ಕಾರ್ಮಿಕರು, ದುಡಿಯುವ ಬಡ ವರ್ಗದ ಜನತೆ. ಕಾಂಗ್ರೆಸ್ ನ್ನೂ ಕೂಡ ಮನೆಗೆ ಕಳಿಸುವ ಶಕ್ತಿ ಇದೆ. ಹಾಗಾಗಿ, ಸರ್ಕಾರಗಳು ಎಚ್ಚೆತ್ತು ಕೊಳ್ಳಬೇಕು ಎಂದು ಕಿಡಿಕಾರಿದರು.
ಈ ಮೂಲಕ ಸರ್ಕಾರಕ್ಕೆ ಎರಡು ದಿನದ ಜನತಾ ಅಧಿವೇಶನ ಕರೆದು ಚರ್ಚೆ ಮಾಡಿ, ಜನಾಗ್ರಹಗಳ ನಿರ್ಣಯಗಳನ್ನು ಕಾಲಮಿತಿಯೊಳಗೆ ಜಾರಿಗೆ ತರಬೇಕು ಎಂದು ಸರ್ಕಾರಕ್ಕೆ ಮುಖ್ಯಮಂತ್ರಿಗಳಿಗೆ ಒತ್ತಾಯಿಸುತ್ತೇವೆ. ಭೂಸ್ವಾಧೀನ, ಭೂಸುಧಾರಣೆ ಕಾಯ್ದೆಗಳು ಪರಿಷ್ಕರಣೆ ಆಗಬೇಕು. 3600ಎಕರೆ ಬಳ್ಳಾರಿ ಜಿಲ್ಲೆಯ ಕುಡಿತಿನಿಯಲ್ಲಿ ಭೂಸ್ವಾಧೀನ ಆಗಿ ಕಾರ್ಖಾನೆ ಪ್ರಾರಂಭವಾಗಿಲ್ಲ. ಇದರ ವಿರುದ್ಧ ಅಲ್ಲಿನ ರೈತರು 2 ವರ್ಷಗಳಿಂದ ಪ್ರತಿಭಟನೆ ನಡೆಸುತ್ತಿದ್ದಾರೆ. ಆದರೂ ಸರ್ಕಾರ ಇದರ ಬಗ್ಗೆ ಗಮನಹರಿಸುತ್ತಿಲ್ಲ ಎಂದು ಆರೋಪಿಸಿದರು.
10 ಎಚ್ ಪಿವರೆಗಿನ ಉಚಿತ ವಿದ್ಯುತ್ ರೈತರಿಗೆ ಬಂಗಾರಪ್ಪ, ಯಡಿಯೂರಪ್ಪ, ಕುಮಾರಸ್ವಾಮಿ ಕೊಟ್ಟಿದ್ದಲ್ಲ. 1980ರಲ್ಲಿ ರೈತ ಸಂಘ ಹೋರಾಟ ಮಾಡಿದ ಫಲ. ದೇಶದಲ್ಲಿ ಎರಡೇ ವರ್ಗಗಳಿವೆ ಒಂದು ಅನ್ನ ನೀಡುವ ರೈತ ವರ್ಗವಾದರೆ, ಇನ್ನೊಂದು ಅನ್ನಕ್ಕಾಗಿ ಬೆವರು ಸುರಿಸುವ ದುಡಿಯುವ ವರ್ಗ ಎಂದು ಸ್ಮರಿಸಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಉಮೇಶ್ ಆವರಗೆರೆ, 60-70ರ ದಶಕದಲ್ಲಿ ಜೆಪಿ ಮುಂತಾದವರ ನೇತೃತ್ವದಲ್ಲಿ ಕಿಸಾನ್ ಸಭಾ ಅಂದೇ ಬಂಡವಾಳಶಾಹಿ ರೈತರ ವಿರುದ್ಧ ಮತ್ತು ಸಾಲಮನ್ನಾಕ್ಕೆ ಆಗ್ರಹಿಸಿ ಹೋರಾಟ ನಡೆಸಿತ್ತು. ಹಿನ್ನೆಲೆಯಲ್ಲಿ ನಂಜುಂಡಸ್ವಾಮಿ ಅವರ ನೇತೃತ್ವದಲ್ಲಿ ರೈತ ಸಂಘ ಸಿ2 +50 , ರೈತರ ಸಬಲೀಕರಣ ಹೋರಾಟಗಳನ್ನು ರಾಜ್ಯದಲ್ಲಿ ಕೈಗೆತ್ತಿಕೊಂಡು ಯಶಸ್ವಿಯಾಗಿ ರೈತ ಸಂಘ ಹೋರಾಟ ನಡೆಸಿತ್ತು. ಅವಿಭಜಿಸಿದ ದಾವಣಗೆರೆ ಜಿಲ್ಲೆಯಲ್ಲಿ ರೈತ ಮುಖಂಡರು ಸೇರಿ ಆವರಗೆರೆ ಬೃಹತ್ ಸಮಾವೇಶ ಆಯೋಜಿಸಲಾಗಿತ್ತು. ಅಂದು ನಂಜುಂಡಸ್ವಾಮಿ ಸೇರಿದಂತೆ ಪ್ರಮುಖ ರೈತ ನಾಯಕರು ಉಪಸ್ಥಿತರಿದ್ದರು. ಅಂದು “ನುಗ್ಗಿ ನುಗ್ಗಿ ವಿಧಾನ ಸೌಧ, ಜಗ್ಗಿ ಜಗ್ಗಿ ಬಿಳಿ ಗಡ್ಡ” ಘೋಷಣೆ ಕೂಗಿ ಸರ್ಕಾರದ ಕಿವಿ ಹಿಂಡುವ ಕೆಲಸ ಮಾಡಲಾಗಿತ್ತು. ಈ ರೀತಿ ಜಿಲ್ಲೆಯ ರೈತ ಹೋರಾಟದ ಇತಿಹಾಸವಿದೆ ಎಂದು ನೆನಪಿಸಿಕೊಂಡರು.
ಇತ್ತೀಚೆಗೆ ಗಾಂಧಿ ಭವನದಲ್ಲಿ ರೈತ ಪರ ಸಂಘಟನೆಗಳ ಸಭೆಯಲ್ಲಿ ಕೆಲವೊಂದು ನಿರ್ಣಯಗಳನ್ನು ಕೈಗೊಂಡು ನ ನವಂಬರ್ 24 ರಂದು ದೇಶದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಎಚ್ಚರಿಕೆ ರ‌್ಯಾಲಿ ನಡೆಸಿ ರೈತ ಕೃಷಿ ವಿರೋಧಿ ಕಾಯ್ದೆ ರದ್ದು ಗೊಳಿಸಲು ಹೋರಾಟ ಹಮ್ಮಿಕೊಳ್ಳಲಾಗಿದೆ. ಸಂಯುಕ್ತ ಕಿಸಾನ್ ಮೋರ್ಚಾ ವೇದಿಕೆಯಡಿ ಒಟ್ಟುಗೂಡಿ ರೈತ ಕಾರ್ಮಿಕರ ಹಕ್ಕುಗಳನ್ನು ರಕ್ಷಿಸುವ ಕೆಲಸ ಮಾಡಬೇಕಾಗಿದೆ ಎಂದು ಹೇಳಿದರು.
ಪ್ರಾಂತ್ಯ ರೈತ ಸಂಘದ ಮುಖಂಡ ಕುರುವ ಗಣೇಶ್ ಚಳುವಳಿ ಇತಿಹಾಸದ ಬಗ್ಗೆ ಮಾತನಾಡಿ, ರೈತರ ಪವಿತ್ರ ಸಂಘಟನೆಗಳು ಗಟ್ಟಿಯಾಗಿ ಹೋರಾಟಕ್ಕೆ ನಿಂತಿವೆ. ಹಿಂದಿನ ಶಿವಮೊಗ್ಗ ಜಿಲ್ಲೆಯ ಹೊನ್ನಾಳಿ ತಾಲೂಕಿನ ಹೊಸಕೊಪ್ಪ ದ ಸ್ವಾತಂತ್ರ್ಯ ಹೋರಾಟಗಾರ ಎಚ್ ಎಸ್ ರುದ್ರಪ್ಪ ರೈತ ಹೋರಾಟವನ್ನು ಪ್ರಾರಂಭಿಸಿದರು. ಕಬ್ಬು ಬೆಳೆಗಾರರಿಗೆ ಬೆಲೆ ಮೋಸವಾದಾಗ ಕಬ್ಬು ಬೆಳೆಗಾರರ ಸಂಘ ಸ್ಥಾಪಿಸಿ ಹೋರಾಟ ಕಟ್ಟಿದರು. ಶಿವಮೊಗ್ಗದಲ್ಲಿ ರುದ್ದಪ್ಪನವರ ನೇತೃತ್ವದಲ್ಲಿ ನಂಜುಂಡಸ್ವಾಮಿ, ಸುಂದರೇಶ್, ತೇಜಸ್ವಿ, ಸೇರಿದಂತೆ ಪೂರ್ವಭಾವಿ ಸಭೆ ನಡೆಸಿ ರೈತ ಸಂಘ ಕಟ್ಟಿದರು. ಅಂದು ರೈತ ಕುಲವೊಂದೇ ಎಂದು ಘೋಷಿಸಿದರು. ರಸ್ತೆತಡೆ ಹೋರಾಟದಲ್ಲಿ ಗುಂಡೂರಾವ್ ಸರ್ಕಾರದಲ್ಲಿ 9600 ಜನ ರೈತರು ಜೈಲುಭರೋ ಮಾಡಿದರೆ ಗುಂಡೂರಾವ್ ಸರ್ಕಾರಕ್ಕೆ ಅವರಿಗೆ ಅನ್ನ ಹಾಕಲು ಸಾಧ್ಯವಾಗಲಿಲ್ಲ. ಕಬ್ಬನ್ ಪಾರ್ಕಿನಲ್ಲಿ ನಡೆದ ಹೋರಾಟದಲ್ಲಿ ಗುಡುಗಿದ ಪ್ರೊ.ನಂಜುಂಡಸ್ವಾಮಿಯವರು ಗುಂಡೂರಾವ್ ಸರ್ಕಾರಕ್ಕೆ, “ರೈತ ಸಾಲಗಾರನಲ್ಲ- ಸರ್ಕಾರವೇ ರೈತರಿಗೆ ಬಾಕಿದಾರ” ಎಂದು ಘೋಷಿಸಿ ಸಾಲದ ನೋಟೀಸ್ ಗಳನ್ನು ಸುಟ್ಟರು. ನಂತರದ ಚುನಾವಣೆಯಲ್ಲಿ ಕಾಂಗ್ರೆಸ್ ಮನೆಗೆ ಕಳಿಸಿ ಮಣ್ಣುಮುಕ್ಕಿಸಿದ ಇತಿಹಾಸ ರೈತ ಸಂಘಕ್ಕಿದೆ ಎಂದು ಸ್ಮರಿಸಿದರು.

ಎಐಕೆಕೆಎಂಎಸ್ ನ ಕಾರ್ಯದರ್ಶಿ ನಾಗಸ್ಮಿತ “ರೈತರಿಗೆ ಬೆಂಬಲ ಬೆಲೆ ಕಾನೂನು ಪ್ರಕಾರ ನೀಡಬೇಕು. ಸಿ2+50 ಸ್ವಾಮೀನಾಥನ ವರದಿಯ ಎಂ ಎಸ್ ಪಿ ಜಾರಿಯಾಗಬೇಕು, ಬೀಜ ಗೊಬ್ಬರ ಕೈಗೆಟುಕುವ ದರದಲ್ಲಿ ರೈತರಿಗೆ ದೊರಕಿಸಲು ಸರ್ಕಾರ ಕ್ರಮ ಕೈಗೊಳ್ಳಬೇಕು. ಬಗರ್ ಹುಕುಂ ಸಾಗುವಳಿದಾರರಿಗೆ ಹಕ್ಕುಪತ್ರ ನೀಡಬೇಕು, ಮತ್ತು ಕಾರ್ಮಿಕ ವಿರೋಧಿ ಬಿಲ್ ಕೋಡ್ ಹಿಂಪಡೆಯಬೇಕು ಹಾಗೂ ಇತರ ಗೊತ್ತುವಳಿ ಮಂಡನೆಗಳನ್ನು ಮಂಡಿಸಿದರು. ಬುಳ್ಳಾಪುರ ಪರಮೇಶ್ವರಪ್ಪ, ಬುಳ್ಳಾಪುರದ ಹನುಮಂತಪ್ಪ, ಐರಣಿ ಚಂದ್ರು ಹಾಗೂ ಇತರರು ರೈತರ ಮತ್ತು ಕಾರ್ಮಿಕರ ಗೀತೆಗಳು ಹಾಡಿದರು.
ಕಾರ್ಯಕ್ರಮದಲ್ಲಿ ರೈತ ಸಂಘದ ಮುಖಂಡರಾದ ರೈತ ಸಂಘದ ಕುರುವ ಗಣೇಶ್, ರೈತ ಮುಖಂಡ ಹೊನ್ನೂರು ಮುನಿಯಪ್ಪ, ಅರುಣ್ ಕುಮಾರ್ ಕುರುಡಿ, ಶ್ರೀನಿವಾಸ್ ಪ್ರಾಂತ್ಯ ರೈತ ಸಂಘ, ಗೀತಾ ಮತ್ತು ಕಾರ್ಮಿಕ ಸಂಘಟನೆಗಳ ಮುಖಂಡರಾದ ಆವರಗೆರೆ ಉಮೇಶ್, ಆವರಗೆರೆ ಚಂದ್ರು, ಆನಂದ್ ರಾಜ್, ಮಂಜುನಾಥ್ ಕೈದಾಳ, ಪವಿತ್ರ ಅರವಿಂದ್ ಜನಶಕ್ತಿ, ಬುಳ್ಳಾಪುರ ಹನುಮಂತಪ್ಪ, ಮಧು ತೊಗಲೇರಿ, ಸತೀಶ್ ಅರವಿಂದ್ ಜನಶಕ್ತಿ, ಹಾಗೂ ನೂರಾರು ರೈತರು ಮತ್ತು ಕಾರ್ಮಿಕರು ಭಾಗವಹಿಸಿದ್ದರು.
