- ದೇವೇಗೌಡರನ್ನು ಲೋಕಸಭೆ ಚುನಾವಣೆಗೆ ನಿಲ್ಲಿಸುತ್ತೇವೆ
- ಸಿದ್ದರಾಮಯ್ಯ ಅವರ ಮೇಲೆ ವೈಯಕ್ತಿಕವಾಗಿ ಗೌರವವಿದೆ
ಹಾಸನ ಜಿಲ್ಲೆಯಲ್ಲಿ ನಮ್ಮ ಪಕ್ಷದಿಂದ ನಾಲ್ಕು ಜನ ಶಾಸಕರು ಗೆದ್ದಿದ್ದೀವಿ. ಮೂವರು ಸೋತಿದ್ದೀವಿ, ಪಕ್ಷಾತೀತವಾಗಿ ನಮಗೆ ಮತ ಹಾಕಿದ ಜನರಿಗೆ ಧನ್ಯವಾದಗಳು ಎಂದು ಮಾಜಿ ಸಚಿವ ಎಚ್.ಡಿ ರೇವಣ್ಣ ಹೇಳಿದರು.
ಹಾಸನ ನಗರದಲ್ಲಿ ಮಂಗಳವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, “ಜನ ಕೆಲವು ಸಲ ಗೆಲ್ಲಿಸಿದ್ದಾರೆ, ಕೆಲವು ಸಲ ಸೋಲಿಸಿದ್ದಾರೆ. ಎರಡೂ ರಾಷ್ಟ್ರೀಯ ಪಕ್ಷಗಳು ನಮ್ಮ ಪಕ್ಷ ಮುಗಿಸಲು ಪ್ರಯತ್ನ ಪಟ್ಟರು” ಎಂದು ದೂರಿದರು.
“ಕಾಂಗ್ರೆಸ್ ಪಕ್ಷ ಗೆದ್ದಿದೆ, ಐದು ವರ್ಷ ಒಳ್ಳೆಯ ಕೆಲಸ ಮಾಡಲಿ, ಗ್ಯಾರಂಟಿ ಕಾರ್ಡ್ ಕೊಟ್ಟವ್ರೆ, ಜನಕ್ಕೆ ಅದನ್ನು ಕೊಡಲಿ. ನಾವು ವಿರೋಧ ಪಕ್ಷದಲ್ಲಿ ಕುಳಿತು ಕೆಲಸ ಮಾಡ್ತೀವಿ, ರಾಷ್ಟ್ರೀಯ ಪಕ್ಷದ ಮುಖಂಡರೇ ಸೋತಿರುವಾಗ ನಮ್ದು ಏನಿದೆ” ಎಂದು ಸೋಲಿಗೆ ವ್ಯಾಖ್ಯಾನ ನೀಡಿದರು.
“ಸಕಲೇಶಪುರದಲ್ಲಿ ನಮ್ಮ ತಪ್ಪಿನಿಂದ ಒಂದು ಸಾವಿರ ಮತಗಳ ಅಂತರದಿಂದ ಎಚ್.ಕೆ ಕುಮಾರಸ್ವಾಮಿ ಸೋತಿದ್ದಾರೆ. ಇದಕ್ಕೆಲ್ಲ ಧೃತಿಗೆಡಲ್ಲ” ಎಂದರು.
“1989ರಲ್ಲಿ ಎಂಟಕ್ಕೆ ಎಂಟೂ ಕ್ಷೇತ್ರ ಸೋತಿದ್ದೆವು. ಜಿಲ್ಲೆಯಲ್ಲಿ ಕೆಲವು ಅಭಿವೃದ್ಧಿ ಕೆಲಸಗಳು ನಿಂತಿವೆ, ಮುಂದೆ ನೋಡೋಣ. ದೇವೇಗೌಡರ ಶಕ್ತಿಯಿಂದ ನಾಲ್ಕು ಕ್ಷೇತ್ರಗಳಲ್ಲಿ ಜನ ಗೆಲ್ಲಿಸಿದ್ದಾರೆ. ಮುಂದಿನ ದಿನಗಳಲ್ಲಿ ಎಲ್ಲವನ್ನೂ ಸರಿ ಮಾಡಿಕೊಂಡು ಹೋರಾಟ ಮುಂದುವರಿಸುತ್ತೇವೆ” ಎಂದು ಹೇಳಿದರು.
ಸುಳ್ಳು ಮಾಹಿತಿ ನೀಡಿದ್ದರಿಂದ ಹಿನ್ನಡೆ
“ನನ್ನ ಬಗ್ಗೆ ಸುಳ್ಳು ಮಾಹಿತಿ ನೀಡಿರುವುದರಿಂದ ಚುನಾವಣೆಯಲ್ಲಿ ಅಂತರ ಕಡಿಮೆಯಾಗಿದೆ. ಇನ್ನೂ ಐದು ವರ್ಷ ಸಮಯ ಇದೆ ಅಷ್ಟರಲ್ಲಿ ಎಲ್ಲವನ್ನು ಸರಿಪಡಿಸಿಕೊಳ್ಳುತ್ತೇವೆ. ನಾನು ವೋಟ್ ಕೇಳಲು ಹೋಗಿಲ್ಲ, ಜನ ನನ್ನನ್ನು ಉಳಿಸಿಕೊಂಡಿದ್ದಾರೆ” ಎಂದರು.
“ಹೊಳೆನರಸೀಪುರ ಕ್ಷೇತ್ರದ ಜನ ಆರು ಬಾರಿ ನನ್ನನ್ನು ಗೆಲ್ಲಿದ್ದಾರೆ. ಕಡಿಮೆ ಏಕಾಯ್ತು ನನಗೆ ಗೊತ್ತಿದೆ. ಅದನ್ನು ಹೇಗೆ ಸರಿ ಮಾಡಿಕೊಳ್ಳಬೇಕು ಅನ್ನೋದೂ ಗೊತ್ತಿದೆ. ಹಾಸನ ಜಿಲ್ಲೆಗೆ, ಚನ್ನಪಟ್ಟಣಕ್ಕೆ ಪ್ರಧಾನ ಮಂತ್ರಿ ಬಂದಿದ್ದರು, ಕುಮಾರಸ್ವಾಮಿ ಗೆಲ್ಲಲಿವಾ? ಬಿಜೆಪಿ ಮುಖಂಡರ ತಪ್ಪಿನಿಂದ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ” ಎಂದು ಅಭಿಪ್ರಾಯಪಟ್ಟರು.
“ಬಿಜೆಪಿ ನಮ್ಮ ಶೇ.5ರಷ್ಟು ಓಟು ತೆಗೆದುಕೊಂಡರು, ಕಾಂಗ್ರೆಸ್ ಮತಗಳು ಹೆಚ್ಚುವರಿ ಆಯ್ತು. ಈ ಚುನಾವಣೆ ಲೋಕಸಭೆ ಚುನಾವಣೆ ಪರಿಣಾಮ ಬೀರುವುದಿಲ್ಲ. ಕಾಂಗ್ರೆಸ್ನಿಂದ ಯಾರೇ ಮುಖ್ಯಮಂತ್ರಿ ಆದರೂ ಸ್ವಾಗತ ಮಾಡುವೆ. ಯಾರೇ ಸಿಎಂ ಆದರೂ ರಾಜ್ಯದಲ್ಲಿ ಉತ್ತಮ ಆಡಳಿತ ನೀಡಲಿ, ವಿದ್ಯುತ್ ದರ ಇಳಿಸಲಿ, ಗ್ಯಾರಂಟಿಗಳನ್ನು ಈಡೇರಿಸಲಿ” ಎಂದ ಅವರು, ನನಗೆ ಸಿದ್ದರಾಮಯ್ಯ ಅವರ ಮೇಲೆ ವೈಯಕ್ತಿಕವಾಗಿ ಗೌರವವಿದೆ. ಆದರೆ, ರಾಜಕೀಯ ಬೇರೆ ಎಂದು ಪರೋಕ್ಷವಾಗಿ ಸಿದ್ದರಾಮಯ್ಯ ಅವರನ್ನು ಬೆಂಬಲಿಸಿದರು.
ಈ ಸುದ್ದಿ ಓದಿದ್ದೀರಾ? ದಿಟ್ಟ ನಿರ್ಧಾರ ತೆಗೆದುಕೊಳ್ಳಲು ಸಹಕರಿಸಿದಕ್ಕೆ ಧನ್ಯವಾದ: ಹಂಗಾಮಿ ಸಿಎಂ ಬೊಮ್ಮಾಯಿ
ದೇವೇಗೌಡರನ್ನು ಲೋಕಸಭಾ ಚುನಾವಣೆಗೆ ನಿಲ್ಲಿಸುತ್ತೇವೆ
ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡರು ಇನ್ನೂ ಏಳೆಂಟು ವರ್ಷ ಬದುಕಿರುತ್ತಾರೆ. ದೇವೇಗೌಡರನ್ನು ಮತ್ತೆ ಪಾರ್ಲಿಮೆಂಟ್ಗೆ ಕರ್ಕೊಂಡು ಹೋಗುತ್ತೇವೆ. ದೇವೇಗೌಡರನ್ನು ಲೋಕಸಭೆ ಚುನಾವಣೆಗೆ ನಿಲ್ಲಿಸುತ್ತೇವೆ. ಯಾವ ಕ್ಷೇತ್ರ ಎಂದು ಮುಂದೆ ನೋಡೊಣ ಎಂದು ಹೇಳಿದರು.
ದೇವೇಗೌಡರಿಗೆ ಇನ್ನೂ ಹೋರಾಟ ಮಾಡುವ ಶಕ್ತಿ ಇದೆ. ಅವರು ಲೋಕಸಭೆ ಚುನಾವಣೆಗೆ ನಿಲ್ಲಲ್ಲ ಎಂದರೂ ನಾವು ಬಿಡುವುದಿಲ್ಲ. ಹಾಸನ ಲೋಕಸಭಾ ಕ್ಷೇತ್ರದಿಂದ ಮತ್ತೆ ಪ್ರಜ್ವಲ್ ರೇವಣ್ಣ ಅವರೇ ಸ್ಪರ್ಧೆ ಮಾಡುತ್ತಾರೆ ಎಂದು ಸ್ಪಷ್ಟಪಡಿಸಿದರು.