ಕೇಂದ್ರ ಗೃಹ ಸಚಿವ ಅಮಿತ್ ಶಾ ವಿರುದ್ಧ ಕೆನಡಾ ಮಾಡಿದ ಆರೋಪಗಳು ಕಳವಳಕಾರಿ ಎಂದು ಬುಧವಾರ ಅಮೆರಿಕ ಹೇಳಿದೆ. ಜೊತೆಗೆ ಈ ಬಗ್ಗೆ ಕೆನಡಾದೊಂದಿಗೆ ಸಮಾಲೋಚನೆ ಮುಂದುವರಿಸುವುದಾಗಿ ಅಮೆರಿಕ ವಕ್ತಾರ ಮ್ಯಾಥ್ಯೂ ಮಿಲ್ಲರ್ ಸುದ್ದಿಗಾರರಿಗೆ ತಿಳಿಸಿದರು.
ಕೆನಡಾದಲ್ಲಿ ಖಲಿಸ್ತಾನಿ ಪ್ರತ್ಯೇಕತಾವಾದಿಗಳನ್ನು ಗುರಿಯಾಗಿಸುವ ಅಭಿಯಾನದ ಹಿಂದೆ ಅಮಿತ್ ಶಾ ಇದ್ದಾರೆ ಎಂದು ಕೆನಡಾ ಆರೋಪಿಸಿರುವುದಾಗಿ ವಾಷಿಂಗ್ಟನ್ ಪೋಸ್ಟ್ ವರದಿ ಮಾಡಿತ್ತು. ಇದಾದ ಬಳಿಕ ಕೆನಡಾದ ರಾಷ್ಟ್ರೀಯ ಭದ್ರತೆ ಮತ್ತು ಗುಪ್ತಚರ ಸಲಹೆಗಾರರಾದ ನಥಾಲಿ ಡ್ರೊಯಿನ್ ಮತ್ತು ಉಪ ವಿದೇಶಾಂಗ ಸಚಿವ ಡೇವಿಡ್ ಮಾರಿಸನ್ ತಾವು ಈ ಆರೋಪ ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ.
ಇದನ್ನು ಓದಿದ್ದೀರಾ? ‘ಖಲಿಸ್ತಾನಿ ಹೋರಾಟಗಾರರ ವಿರುದ್ಧ ಹಿಂಸಾಚಾರಕ್ಕೆ ಆದೇಶಿಸಿದ್ದೇ ಅಮಿತ್ ಶಾ’; ಕೆನಡಾ ಆರೋಪ
2023ರ ಜೂನ್‌ನಲ್ಲಿ ಕೊಲಂಬಿಯಾದಲ್ಲಿ ಕೆನಡಾದ ಸಿಖ್ ಕಾರ್ಯಕರ್ತ ಹರ್ದೀಪ್ ಸಿಂಗ್ ನಿಜ್ಜಾರ್ ಹತ್ಯೆಯಾಗಿದೆ. ಈ ಹತ್ಯೆಯಲ್ಲಿ ಭಾರತ ಸರ್ಕಾರದ ಏಜೆಂಟರು ಭಾಗಿಯಾಗಿದ್ದಾರೆ ಎಂಬುದಕ್ಕೆ ಕೆನಡಾ ಪುರಾವೆಗಳನ್ನು ಹೊಂದಿದೆ ಎಂದು ಪ್ರಧಾನ ಮಂತ್ರಿ ಜಸ್ಟಿನ್ ಟ್ರುಡೊ ಒಂದು ವರ್ಷದ ಹಿಂದೆ ಹೇಳಿದ್ದರು. ಇದನ್ನು ಕೆನಡಾದ ಅಧಿಕಾರಿಗಳು ಪದೇ ಪದೇ ಪುನರುಚ್ಛರಿಸುತ್ತಿದ್ದಾರೆ.
ಆದರೆ ಕೆನಡಾ ಪುರಾವೆಗಳನ್ನು ಒದಗಿಸಿರುವುದನ್ನು ಭಾರತೀಯ ಅಧಿಕಾರಿಗಳು ಪದೇ ಪದೇ ನಿರಾಕರಿಸಿದ್ದಾರೆ. ಆರೋಪಗಳು ಅಸಂಬದ್ಧವೆಂದು ಕರೆದಿದ್ದಾರೆ. ಇದೀಗ ಕೆನಡಾದಲ್ಲಿ ಖಲಿಸ್ತಾನಿ ಪ್ರತ್ಯೇಕತಾವಾದಿಗಳ ವಿರುದ್ಧದ ಅಭಿಯಾನದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಹೆಸರು ಕೇಳಿಬಂದಿದೆ.
ಇನ್ನು ಒಟ್ಟಾವಾದಲ್ಲಿರುವ ಭಾರತದ ರಾಯಭಾರ ಕಚೇರಿಯು ಅಮಿತ್ ಶಾ ವಿರುದ್ಧದ ಆರೋಪದ ಕುರಿತು ಪ್ರತಿಕ್ರಿಯೆಯನ್ನು ನೀಡಿಲ್ಲ.
