ಉಡುಪಿ ನಗರದ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಸನಿಹ ಅಸಹಾಯಕ ಸ್ಥಿತಿಯಲ್ಲಿದ್ದ ಅಪರಿಚಿತ ವ್ಯಕ್ತಿಯನ್ನು ರಕ್ಷಿಸಿ, ದೊಡ್ಡಣಗುಡ್ಡೆಯ ಡಾ.ಎ.ವಿ.ಬಾಳಿಗಾ ಆಸ್ಪತ್ರೆಗೆ ದಾಖಲುಪಡಿಸಿರುವ ಘಟನೆ ನಡೆದಿದೆ.
ನಗರದ ರಸ್ತೆಗಳಲ್ಲಿ ಯುವಕನೊಬ್ಬ ಅನಾವಶ್ಯಕ ಅಲೆದಾಡುವುದನ್ನು ಗಮನಿಸಿದ, ಆಭರಣ ಮಳಿಗೆಯ ಸಿಬ್ಬಂದಿ ರುಡಲ್ಫ್ ಪ್ರಜ್ವಲ್ ಅವರು, ಸಮಾಜಸೇವಕ ನಿತ್ಯಾನಂದ ಒಳಕಾಡು ಅವರಿಗೆ ಕರೆ ಮಾಡಿ ತಿಳಿಸಿದ್ದಾರೆ.
ತಕ್ಷಣ ಸ್ಥಳಕ್ಕೆ ಬಂದ ನಿತ್ಯಾನಂದ ಅವರು ಯುವಕನನ್ನು ವಿಚಾರಿಸಿದಾಗ ಸರಿಯಾದ ಸ್ಪಂದನೆ ದೊರೆಯಲಿಲ್ಲ, ಮಾನಸಿಕ ರೋಗಿ ಎಂದು ತಿಳಿದುಬಂದಿತು. ಯುವಕನಿಗೆ ತುರ್ತು ಚಿಕಿತ್ಸೆಯ ಅವಶ್ಯಕತೆ ಇರುವುದರಿಂದ ನಗರ ಪೋಲಿಸ್ ಠಾಣೆಯ ಎ.ಎಸ್.ಐ ಹರೀಶ್ ಅವರಿಂಧ ನೆರವು ಪಡೆದು, ರಕ್ಷಿಸಲ್ಪಟ್ಟ ಯುವಕನನ್ನು ದೊಡ್ಡಣಗುಡ್ಡೆಯ ಬಾಳಿಗ ಆಸ್ಪತ್ರೆಗೆ ದಾಖಲುಪಡಿಸಿದ್ದರು.
ಯುವಕನ ಸಂಬಂಧಿಕರ ವಿವರಗಳನ್ನು ಪತ್ತೆ ಹಚ್ಚಲೆಂದು ಪೊಲೀಸರು ಯುವಕನ ಫೋಟೋ ಹಾಗೂ ವಿವರಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟಿಸಿದ್ದರು. ಆ ಬಳಿಕ ಯುವಕನ ಸಂಬಂಧಿಕರನ್ನು ಪತ್ತೆಹಚ್ಚುವಲ್ಲಿ ಯಶಸ್ವಿಯಾದರು.
ಇದನ್ನು ಓದಿದ್ದೀರಾ? ಚಾಮರಾಜ ನಗರ | ಹೊಗೇನಕಲ್ ಫಾಲ್ಸ್: ಪೊಲೀಸರ ಜಂಟಿ ಸಭೆ ಯಶಸ್ವಿ; ತೆಪ್ಪ ಸಂಚಾರ ಪುನರಾರಂಭ
ಯುವಕನ ಹುಡುಕಾಟದಲ್ಲಿದ್ದ ಮನೆಯವರು, ಬೆಂಗಳೂರಿನಿಂದ ಬಂದು ಆಸ್ಪತ್ರೆಯಲ್ಲಿ ಯುವಕನನ್ನು ಸಂಪರ್ಕಿಸಲಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
