ತೀರ್ಪಿನ ಚಾರಿತ್ರಿಕ ಮಹತ್ವವನ್ನು ಹಲವು ಮಾಧ್ಯಮ ಸಂಸ್ಥೆಗಳು ಅರಿಯಲಿಲ್ಲ. ಬಹುಕೋಟಿ ಹಗರಣ ನಾಡಿನ ರಾಜಕೀಯ, ಆರ್ಥಿಕ ಮತ್ತು ಸಾಮಾಜಿಕ ಕ್ಷೇತ್ರದಲ್ಲಿ ಉಂಟು ಮಾಡಿದ ಪಲ್ಲಟಗಳ ಕುರಿತು ಗಂಭೀರ ಚರ್ಚೆಗಳಾಗಲಿಲ್ಲ. ಅಕ್ರಮ ಗಣಿಗಾರಿಕೆ ಮತ್ತು ಕಳ್ಳಸಾಗಾಣಿಕೆ ವ್ಯವಸ್ಥೆಯನ್ನು ಬುಡಮೇಲು ಮಾಡಿದ್ದನ್ನು ಜನರಿಗೆ ಮನದಟ್ಟು ಮಾಡಿಸಲಿಲ್ಲ.
ನ್ಯಾಯಾಂಗದ ಅಂಗಳದಿಂದ ಮರಕುಂಬಿ ಪ್ರಕರಣಕ್ಕೆ ಸಿಕ್ಕ ನ್ಯಾಯದ ಬೆನ್ನಿಗೇ, ಬೇಲೆಕೇರಿ ಬಹುಕೋಟಿ ಹಗರಣದಲ್ಲೂ ದಿಟ್ಟ ತೀರ್ಪು ಪ್ರಕಟವಾಗಿದೆ. ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಸಂತೋಷ ಗಜಾನನ ಭಟ್, ಕಾರವಾರ–ಅಂಕೋಲಾ ಶಾಸಕ ಸತೀಶ್ ಸೈಲ್‌ರನ್ನು ಅದಿರು ಕಳ್ಳ ಎಂದು ತೀರ್ಮಾನಿಸಿ 7 ವರ್ಷಗಳ ಕಠಿಣ ಶಿಕ್ಷೆ, 42 ಕೋಟಿ ದಂಡ ವಿಧಿಸಿದ್ದಾರೆ.
ಅಕ್ಟೋಬರ್ 24, 2024ರಂದು ಪ್ರಕಟವಾದ ಈ ತೀರ್ಪು, ನ್ಯಾಯಾಂಗ ವ್ಯವಸ್ಥೆಯಲ್ಲಿ ಚಾರಿತ್ರಿಕವಾದುದು. ಮಾದರಿಯಾಗಿ ನಿಲ್ಲುವಂಥದು. ಉಲ್ಲೇಖಕ್ಕೆ ಯೋಗ್ಯವಾದುದು. ನ್ಯಾಯ ವ್ಯವಸ್ಥೆ ಬಗೆಗಿದ್ದ ಜನರ ನಂಬಿಕೆಯನ್ನು ಗಟ್ಟಿಗೊಳಿಸುವಂಥದು. ಸಮಾಜದಲ್ಲಿ ಜನಸಾಮಾನ್ಯರಾಗಲೀ, ಜನನಾಯಕರೇ ಆಗಲೀ, ತಪ್ಪೆಸಗಿದಾಗ ಕಾನೂನು ಎಲ್ಲರಿಗೂ ಒಂದೇ ಎನ್ನುವ ಸಂದೇಶವನ್ನು ಸಾರುವಂಥದು. ಹಾಗೆಯೇ, ಸಂವಿಧಾನದ ಮುಂದೆ ಯಾರೂ ದೊಡ್ಡವರಿಲ್ಲ ಎಂಬುದನ್ನು ಹೇಳುವಂಥದು.
ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ಈ ತೀರ್ಪು ಪ್ರಕಟವಾಗುವುದಕ್ಕೂ ಮುನ್ನ, ರಾಜ್ಯದ ಸುದ್ದಿ ಮಾಧ್ಯಮಗಳಲ್ಲಿ ಇದು ಬಹುಕೋಟಿ ಹಗರಣವೆಂದು ಭಾರೀ ಸಂಚಲನ ಸೃಷ್ಟಿಸಿತ್ತು. ಪ್ರತಿಕ್ಷಣವೂ ಬಹುಕೋಟಿ ಬೇಲೆಕೇರಿಯದೇ ಸುದ್ದಿಯಾಗಿತ್ತು. ಆದರೆ, ತೀರ್ಪು ಪ್ರಕಟವಾಗುತ್ತಿದ್ದಂತೆ, ಅದು ಒಂದು ಸುದ್ದಿಗಷ್ಟೇ ಸೀಮಿತವಾಯಿತು. ಕೆಲವು ಮಾಧ್ಯಮಗಳು ಸುದ್ದಿಯನ್ನು ಜೀವಂತವಾಗಿದ್ದು ಬಿಟ್ಟರೆ, ಹಲವು ಮಾಧ್ಯಮಗಳು ಈ ತೀರ್ಪಿಗೆ ತಿಪ್ಪೆ ಸಾರಿಸಿ, ಬಹಳ ದೊಡ್ಡ ಮೋಸವೆಸಗಿದವು.
ತೀರ್ಪಿನ ಚಾರಿತ್ರಿಕ ಮಹತ್ವವನ್ನು ಹಲವು ಮಾಧ್ಯಮ ಸಂಸ್ಥೆಗಳು ಅರಿಯಲಿಲ್ಲ. ಬಹುಕೋಟಿ ಹಗರಣ ನಾಡಿನ ರಾಜಕೀಯ, ಆರ್ಥಿಕ ಮತ್ತು ಸಾಮಾಜಿಕ ಕ್ಷೇತ್ರದಲ್ಲಿ ಉಂಟು ಮಾಡಿದ ಪಲ್ಲಟಗಳ ಕುರಿತು ಗಂಭೀರ ಚರ್ಚೆಗಳಾಗಲಿಲ್ಲ. ಅಕ್ರಮ ಗಣಿಗಾರಿಕೆ ಮತ್ತು ಕಳ್ಳಸಾಗಾಣಿಕೆ ವ್ಯವಸ್ಥೆಯನ್ನು ಬುಡಮೇಲು ಮಾಡಿದ್ದನ್ನು ಜನರಿಗೆ ಮನದಟ್ಟು ಮಾಡಿಸಲಿಲ್ಲ.
ಅದಕ್ಕಿಂತ ಹೆಚ್ಚಾಗಿ ಬೇಲೆಕೇರಿ ಅದಿರು ಹಗರಣವನ್ನು ಹೊರಗೆಳೆದ ಲೋಕಾಯುಕ್ತ ನ್ಯಾ. ಸಂತೋಷ್ ಹೆಗಡೆ, ಅರಣ್ಯ ಅಧಿಕಾರಿಗಳು ಮತ್ತು ಸಿಬ್ಬಂದಿಯ ದಕ್ಷತೆ ಮತ್ತು ಪ್ರಾಮಾಣಿಕತೆ ಬಗ್ಗೆ ಬಾಯಿಮಾತಿನ ಪ್ರಶಂಸೆಯೂ ವ್ಯಕ್ತವಾಗಲಿಲ್ಲ. ಹಗರಣವನ್ನು ಸಿಬಿಐ ತನಿಖೆಗೆ ವಹಿಸಬೇಕೆಂದು ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಹಾಕಿ ಹೋರಾಟ ಮಾಡಿದ ಸಮಾಜ ಪರಿವರ್ತನಾ ಸಮುದಾಯದ ಮುಖ್ಯಸ್ಥ ಎಸ್.ಆರ್. ಹಿರೇಮಠರ ಜನಪರ ಕಾಳಜಿಯನ್ನು ಗುರುತಿಸುವ, ಗೌರವಿಸುವ ಕೆಲಸವೂ ಆಗಲಿಲ್ಲ.
ನೈತಿಕ ಸ್ಥೈರ್ಯ ಕಳೆದುಕೊಂಡ ಮಾಧ್ಯಮಗಳಿಗೆ ಜನಪ್ರತಿನಿಧಿಗಳ ಭ್ರಷ್ಟಾಚಾರ ಇವತ್ತು ಇಷ್ಯೂ ಅಲ್ಲ. ಜನನಾಯಕರ ಭ್ರಷ್ಟಾಚಾರದ ಬಗ್ಗೆ ಮಾತನಾಡಿದರೆ ಟಿಆರ್‍ಪಿ ಏರುವುದಿಲ್ಲ. ಅದರ ಬದಲಿಗೆ ನಟ ದರ್ಶನ್ ಕ್ಯಾಮರಾಗಳಿಗೆ ಬೆರಳು ತೋರಿದ್ದು ಮಹಾಪರಾಧವಾಗಿ ಕಾಣುತ್ತದೆ. ದಿನವಿಡೀ ಸುದ್ದಿಯಾಗುತ್ತದೆ. ಚರ್ಚೆಯಾಗುತ್ತದೆ. ಏಕೆಂದರೆ ಅದರಲ್ಲಿ ಸೆಕ್ಸ್, ಕ್ರೈಮ್, ಗ್ಲ್ಯಾಮರ್ ಇದೆ.
ಇದನ್ನು ಓದಿದ್ದೀರಾ?: ಈ ದಿನ ಸಂಪಾದಕೀಯ | ಮೀಸಲಾತಿಗೇ ಕುತ್ತು ಬಂದಿರುವಾಗ, ಒಳಮೀಸಲಿನ ನಿಜವನ್ನು ಇನ್ನೆಷ್ಟು ಕಾಲ ಮುಂದೂಡುತ್ತೀರಿ?
ಅಕ್ರಮ ಗಣಿಗಾರಿಕೆ ಮತ್ತು ಕಳ್ಳಸಾಗಾಣಿಕೆಯಲ್ಲಿ ಅತಿರಥ ಮಹಾರಥರಿದ್ದಾರೆ. ಎಂಟು ಲಕ್ಷ ಮೆಟ್ರಿಕ್ ಟನ್ ಕಬ್ಬಿಣದ ಅದಿರಿನ ಹಿಂದೆ ಸಾವಿರಾರು ಕೋಟಿ ರೂ.ಗಳ ವಹಿವಾಟಿದೆ. ಅದರಿಂದ ಸುಮಾರು ಇನ್ನೂರು ಕೋಟಿ ಸರ್ಕಾರಕ್ಕೆ ನಷ್ಟವಾಗಿದೆ. ಅದರಲ್ಲಿ ಭಾಗಿಯಾದವರು- ಬಿಜೆಪಿ, ಕಾಂಗ್ರೆಸ್, ಜೆಡಿಎಸ್- ಮೂರೂ ಪಕ್ಷಗಳಲ್ಲಿ ಹರಿದು ಹಂಚಿಹೋಗಿದ್ದಾರೆ. ಅದರಲ್ಲೂ ದೇಶಭಕ್ತ ಬಿಜೆಪಿ 2008ರಲ್ಲಿ ರಾಜ್ಯದಲ್ಲಿ ಅಧಿಕಾರಕ್ಕೆ ಏರಿದ್ದು, ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿದ್ದು ಅಕ್ರಮ ಗಣಿಗಾರಿಕೆಯ ಹಣದಿಂದ ಎನ್ನುವುದು ಎಲ್ಲರಿಗೂ ಗೊತ್ತಿದೆ. ಅಷ್ಟೇ ಅಲ್ಲ, ಗಣಿ ಕುಳಗಳು ರಾಜಕೀಯ ರಂಗ ಪ್ರವೇಶಿಸಿ, ಶಾಸಕ, ಸಂಸದ, ಸಚಿವರಾಗಿದ್ದು ಕೂಡ ಬಿಜೆಪಿಯಿಂದ ಎಂಬುದು ತಿಳಿದಿದೆ.
ರಾಜಕೀಯ ಪಕ್ಷಗಳು ಮತ್ತು ನಾಯಕರು ಅಕ್ರಮ ಗಣಿಗಾರಿಕೆಯನ್ನು ಅಧಿಕಾರ ಮತ್ತು ಹಣದ ಬಲದಿಂದ ಸಕ್ರಮಗೊಳಿಸಿರಬಹುದು. ಗಣಿ ಕುಳಗಳನ್ನೇ ಶಾಸಕ, ಸಚಿವರನ್ನಾಗಿ ಮಾಡಿ ರಾಜಕೀಯ ಕ್ಷೇತ್ರವನ್ನು ಯಾರೂ ಗಂಭೀರವಾಗಿ ಪರಿಗಣಿಸದಂತೆ ಮಾಡಿರಬಹುದು. ಆದರೆ, ನಾಡಿನ ಪ್ರಜ್ಞಾವಂತ ನಾಗರಿಕರು, ಪ್ರಾಮಾಣಿಕ ಅಧಿಕಾರಿಗಳು ನೆಲದ ಕಾನೂನಿನಡಿ ಅನಿಲ್ ಲಾಡ್, ನಾಗೇಂದ್ರ, ಆನಂದ್ ಸಿಂಗ್, ಜನಾರ್ದನ ರೆಡ್ಡಿ ಮತ್ತು ಸತೀಶ್ ಸೈಲ್ ಗಳಂತಹ ವ್ಯಕ್ತಿಗಳನ್ನು ಜೈಲಿಗೆ ತಳ್ಳಿರುವುದನ್ನು ಮರೆಯಬಾರದು.
ಮೂರು ಉಪಚುನಾವಣೆಯ ಬಿಸಿಯಲ್ಲಿರುವ ಮೂರೂ ಪಕ್ಷಗಳ ನಾಯಕರಿಗೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ತೀರ್ಪು ನುಂಗಲಾರದ ತುತ್ತಾಗಿದೆ. ನಾಯಕರಾರೂ ತೀರ್ಪಿನ ಕುರಿತು ಸ್ವತಂತ್ರ ಹೇಳಿಕೆ ಕೊಡುವ ಧೈರ್ಯ ಮಾಡದಂತಾಗಿದೆ. ಏಕೆಂದರೆ, ಅಕ್ರಮ ಗಣಿಗಾರಿಕೆಯಲ್ಲಿ ಮೂರೂ ಪಕ್ಷಗಳು ಭಾಗಿಯಾಗಿವೆ. ಉಪ ಚುನಾವಣೆಯಲ್ಲಿ ಗಣಿ ಹಣ ಹರಿದಾಡುತ್ತಿದೆ. ಎಲ್ಲರೂ ಗಾಜಿನ ಮನೆಯಲ್ಲಿದ್ದಾರೆ. ಕಳ್ಳರು ಹೆದರಿದ್ದಾರೆ. ಹಾಗಾಗಿ ಮೂರೂ ಪಕ್ಷಗಳ ನಾಯಕರು ಬುದ್ಧಿಪೂರ್ವಕವಾಗಿ ನಿರ್ಲಕ್ಷಿಸಿದ್ದಾರೆ.
ಈಗ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ಕಠಿಣ ಶಿಕ್ಷೆಗೆ ಗುರಿಯಾಗಿರುವ ಶಾಸಕ ಸತೀಶ್ ಸೈಲ್ ಕಾಂಗ್ರೆಸ್ ಪಕ್ಷಕ್ಕೆ ಸೇರಿದವರು. ಅವರ ಅಕ್ರಮ ವ್ಯವಹಾರದ ಪೋಷಕರು ಗಾಲಿ ಜನಾರ್ದನ ರೆಡ್ಡಿಯವರು. ರೆಡ್ಡಿಯವರನ್ನು ಬಿಜೆಪಿ ಬೆಳೆಸಿದೆ ಮತ್ತು ಬಿಗಿದಪ್ಪಿಕೊಂಡಿದೆ. ಈ ಬಗ್ಗೆ ಮಾತನಾಡಬೇಕಾದ ಕೇಂದ್ರದ ಕೈಗಾರಿಕಾ ಸಚಿವ ಕುಮಾರಸ್ವಾಮಿ, ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡಿದ್ದಾರೆ. ಅಕ್ರಮ ಗಣಿಗಾರಿಕೆಯ ವಿರುದ್ಧ ವಿಧಾನಸಭೆಯಲ್ಲಿ ಗುಡುಗಿ, 400 ಕಿ.ಮೀ. ಪಾದಯಾತ್ರೆ ಮಾಡಿ ಮುಖ್ಯಮಂತ್ರಿಯಾದ ಸಿದ್ದರಾಮಯ್ಯನವರೇ ಈಗಲೂ ಅಧಿಕಾರದಲ್ಲಿದ್ದಾರೆ. ತೀರ್ಪು ಕುರಿತು ಪ್ರತಿಕ್ರಿಯಿಸದೆ ಮೌನವಾಗಿದ್ದಾರೆ.
ರಾಜಕೀಯ ಪಕ್ಷಗಳಿಗೆ, ನಾಯಕರಿಗೆ ಅಧಿಕಾರ ಮತ್ತು ಭ್ರಷ್ಟಾಚಾರ ಅನಿವಾರ್ಯವಾಗಿರಬಹುದು. ಅಕ್ರಮ ಗಣಿಗಾರಿಕೆ ಹಣ ಬಾಯ್ಕಟ್ಟಿರಬಹುದು. ಆದರೆ ಮಾಧ್ಯಮಗಳು ಮೌನಕ್ಕೆ ಜಾರಬೇಕಿಲ್ಲ. ಪ್ರಭುತ್ವದ ಪರವಿದ್ದು, ತಮಗೆ ಬೇಕಾದ್ದನ್ನು ತೋರಿದರೆ, ಪ್ರಭುಗಳ ತಿರಸ್ಕಾರಕ್ಕೆ ಒಳಗಾಗುವುದರಲ್ಲಿ ಅನುಮಾನವಿಲ್ಲ.
