ಗದಗ ತಾಲೂಕಿನ ಹೊಂಬಳ ಮತ್ತು ಮುಂಡರಗಿ ತಾಲ್ಲೂಕಿನ ಚುರ್ಚಿಹಾಳ, ಡಂಬಳ, ಕದಂಪೂರ, ಪೇಟಾಲೂರ ವಿವಿಧ ಗ್ರಾಮಗಳಲ್ಲಿ ಬುಧವಾರ ಅಧಿಕ ಮಳೆಯಿಂದ ಆಗಿರುವ ಬೆಳೆ ಹಾನಿ ಪ್ರದೇಶಕ್ಕೆ ಭೇಟಿ ನೀಡಿ, ಬೆಳೆ ಹಾನಿ ಪರಿಸ್ಥಿತಿಯನ್ನು ಜಿಲ್ಲಾಧಿಕಾರಿ ಗೋವಿಂದರೆಡ್ಡಿ ಪರಿಶೀಲಿಸಿದರು.
ಸರ್ಕಾರದ ನಿಯಮಾವಳಿಯಂತೆ ಬೆಳೆ ಹಾನಿಯಾದ ಅರ್ಹ ರೈತರಿಗೆ ಸರ್ಕಾರದ ಸಹಾಯ ಧನ ಸರಿಯಾಗಿ ತಲುಪಬೇಕು. ಮಾರ್ಗಸೂಚಿಯನ್ವಯ ಕೃಷಿ ಇಲಾಖೆ , ತೋಟಗಾರಿಕೆ ಇಲಾಖೆ ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳು ಜಂಟಿ ಸಮೀಕ್ಷೆ ಕೈಗೊಳ್ಳುವ ಮೂಲಕ ಶೀಘ್ರವಾಗಿ ಪೂರ್ಣಗೊಳಿಸಿ, ಬೆಳೆಹಾನಿ ಆಗಿರುವ ಅರ್ಹ ರೈತರಿಗೆ ಸರ್ಕಾರದ ಸಹಾಯ ಧನ ದೊರಕಿಸಿಕೊಡುವಂತೆ, ತಾಲೂಕು ಇಲಾಖಾಧಿಕಾರಿಗಳು ಕಾರ್ಯ ನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಕೃಷಿ ಹಾಗೂ ತೋಟಗಾರಿಕೆ ಬೆಳೆಗಳಾದ ಮೆಕ್ಕೆಜೋಳ, ಮೆಣಸಿನಕಾಯಿ , ಈರುಳ್ಳಿ ಬೆಳೆಗಳ ಹಾನಿ ವೀಕ್ಷಣೆ ನಡೆಸಿ, ಅಧಿಕ ಮಳೆಯಿಂದ ಅಪಾರ ಪ್ರಮಾಣದ ಹಾನಿಯಾಗಿದೆ. ಬೆಳೆ ಹಾನಿ ಜಂಟಿ ಸಮೀಕ್ಷೆ ನಡೆಸುವವರು ಸರಿಯಾಗಿ ಸಮೀಕ್ಷೆ ಕಾರ್ಯ ಕೈಗೊಳ್ಳಬೇಕು ಹಾಗೂ ಸಮೀಕ್ಷೆ ಕಾರ್ಯವು ನಿಖರತೆಯಿಂದ ಕೂಡಿರಲಿ ಹಾಗೂ ಸಮೀಕ್ಷೆಯು ಚುರುಕಿನಿಂದ ಪೂರ್ಣವಾಗಬೇಕು ಎಂದು ತಿಳಿಸಿದರು.
ಬೆಳೆ ಹಾನಿ ಸಮೀಕ್ಷೆ ಕಾರ್ಯ ನಡೆಯುತ್ತಿದೆ. ಸರ್ಕಾರದ ನಿಯಮಾವಳಿಗಳಲ್ಲಿ ಇರುವ ಅವಕಾಶಗಳನ್ನು ಬಳಸಿಕೊಂಡು ಅರ್ಹ ಬೆಳೆ ಹಾನಿ ರೈತರಿಗೆ ಬೆಳೆ ಹಾನಿ ನಷ್ಟವನ್ನು ಕೊಡಿಸುವುದಾಗಿ ಜಿಲ್ಲಾಧಿಕಾರಿ ಗೋವಿಂದರೆಡ್ಡಿ ರೈತರಿಗೆ ಭರವಸೆ ನೀಡಿದರು.
ಇದನ್ನೂ ಓದಿದ್ದೀರಾ?ನಟ ದರ್ಶನ್ ಅಭಿಮಾನಿಗಳ ಅತಿರೇಕಕ್ಕೆ ಕೊನೆಯೇ ಇಲ್ಲವೇ, ಕೊಲೆಯೂ ಸಮರ್ಥನೀಯವೇ?
ಈ ಸಂದರ್ಭದಲ್ಲಿ ತೋಟಗಾರಿಕೆ ಇಲಾಖೆಯ ಉಪನಿರ್ದೇಶಕರಾದ ಶಶಿಕಾಂತ ಕೋಟೆಮನಿ, ಮುಂಡರಗಿ ತಾಲೂಕಿನ ತಹಶೀಲ್ದಾರ್, ಕೃಷಿ ಇಲಾಖೆ ಅಧಿಕಾರಿಗಳು ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿ ಸಿಬ್ಬಂದಿಗಳು , ರೈತರು ಹಾಗೂ ಸಾರ್ವಜನಿಕರು ಉಪಸ್ಥಿತಿಯಲ್ಲಿದ್ದರು.