ಉತ್ತರ ಪ್ರದೇಶದ ಫತೇಪುರ್ ಜಿಲ್ಲೆಯಲ್ಲಿ ನಿನ್ನೆ ತಡರಾತ್ರಿ ಸುದ್ದಿಸಂಸ್ಥೆ ಎಎನ್‌ಐ ಪತ್ರಕರ್ತನನ್ನು ಚಾಕುವಿನಿಂದ ಇರಿದು ಹತ್ಯೆ ಮಾಡಲಾಗಿದೆ. 38 ವರ್ಷದ ಪತ್ರಕರ್ತ ದಿಲೀಪ್ ಸೈನಿ ಮೇಲೆ ದಾಳಿ ನಡೆಸಿದ ವೇಳೆ ಪತ್ರಕರ್ತನ ಜೊತೆಗಿದ್ದ ಅವರ ಸ್ನೇಹಿತ, ಬಿಜೆಪಿ ಮುಖಂಡರೊಬ್ಬರ ಮೇಲೆಯೂ ದಾಳಿ ನಡೆದಿದೆ ಎಂದು ವರದಿಯಾಗಿದೆ.
ಭೂಮಿಗೆ ಸಂಬಂಧಿಸಿದ ಕೆಲವು ವಿವಾದಗಳಿಂದಾಗಿ ಹತ್ಯೆ ನಡೆದಿದೆ ಎನ್ನಲಾಗಿದೆ. ಪತ್ರಕರ್ತನ ಸ್ನೇಹಿತ, ಬಿಜೆಪಿ ಮುಖಂಡ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಸೈನಿ ಅವರ ಸ್ನೇಹಿತ ಹಾಗೂ ಬಿಜೆಪಿಯ ಅಲ್ಪಸಂಖ್ಯಾತ ವಿಭಾಗದ ಮುಖಂಡ ಶಾಹಿದ್ ಖಾನ್ ಅವರು ದಿಲೀಪ್ ಸೈನಿ ಅವರನ್ನು ರಕ್ಷಿಸಲು ಯತ್ನಿಸಿದಾಗ ಅವರ ಮೇಲೆಯೂ ದಾಳಿಯಾಗಿದೆ ಎಂದು ವರದಿ ಉಲ್ಲೇಖಿಸಿದೆ.
ಇದನ್ನು ಓದಿದ್ದೀರಾ? ಉತ್ತರ ಪ್ರದೇಶ | ಭೀಕರ ಅಪಘಾತ: ಒಂದೇ ಕುಟುಂಬದ ನಾಲ್ವರು ಸೇರಿ ಆರು ಮಂದಿ ದಾರುಣ ಸಾವು
“ನಾವು ದಿಲೀಪ್ ಸೈನಿ ಜೊತೆ ರಾತ್ರಿ ಊಟ ಮಾಡುತ್ತಿದ್ದೆವು. ಈ ವೇಳೆ ಅವರು (ದಾಳಿ ನಡೆಸಿದವರು) ಒಳಗೆ ಬಂದು ದಿಲೀಪ್‌ಗೆ ಇರಿದಿದ್ದಾರೆ. ನಾನು ಅವರನ್ನು ಕಾಪಾಡಲು ಯತ್ನಿಸಿದೆ. ಆಗ ನನಗೂ ಇರಿದಿದ್ದಾರೆ. ಗುಂಡು ಕೂಡಾ ಹಾರಿಸಿ ಸೈನಿ ಹತ್ಯೆ ಮಾಡಿದ್ದಾರೆ” ಎಂದು ಶಾಹಿದ್ ಖಾನ್ ಹೇಳಿದ್ದಾರೆ.
ಆಸ್ಪತ್ರೆಗೆ ಕರೆದೊಯ್ಯುವಾಗ ದಾರಿ ಮಧ್ಯೆಯೇ ದಿಲೀಪ್ ಸೈನಿ ಸಾವನ್ನಪ್ಪಿದ್ದಾರೆ. ಶಾಹಿದ್ ಖಾನ್ ಅವರನ್ನು ಜಿಲ್ಲಾಸ್ಪತ್ರೆಗೆ ಕರೆದೊಯ್ದು ನಂತರ ಕಾನ್ಪುರದ ಲಾಲಾ ಲಜಪತ್ ರಾಯ್ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಫತೇಪುರ್ ಪೊಲೀಸ್ ಮುಖ್ಯಸ್ಥ ಧವಲ್ ಜೈಸ್ವಾಲ್ ಮಾಹಿತಿ ನೀಡಿದ್ದಾರೆ.
“ನಾವು ಪ್ರಕರಣವನ್ನು ದಾಖಲಿಸಿ ಎಲ್ಲಾ ಸಂಗತಿಗಳನ್ನು ಪರಿಶೀಲಿಸಲಾಗುವುದು. ಕ್ರಮ ಕೈಗೊಳ್ಳಲಾಗಿದೆ” ಎಂದು ತಿಳಿಸಿದರು.