ನಾವು ಕನ್ನಡ ರಾಜ್ಯೋತ್ಸವವನ್ನು ಸಂಭ್ರಮದಿಂದ ಆಚರಿಸಿಕೊಳ್ಳುತ್ತಿರುವ ಈ ಸಂದರ್ಭದಲ್ಲಿ ನಾವು ಮರೆಯದೇ ಅರಿಯಬೇಕಾಗಿರುವ ಐದು ಕನ್ನಡದ ಗುಣಗಳಿವು.
‘ಕನ್ನಡತನ’ ಸಂಶೋಧನಾ ಕೃತಿ ಕನ್ನಡದ ಈ ಐದು ಮುಖ್ಯ ಗುಣಗಳನ್ನು ಗುರುತಿಸಿದೆ. ಅವುಗಳೆಂದರೆ:
1. ಪ್ರಜಾಪ್ರಭುತ್ವಕ್ಕೆ ಸಂವಾದಿ
2. ಸಮುದಾಯ ಪ್ರಜ್ಞೆ
3. ಬುದ್ಧಿಪ್ರಧಾನ
4. ಜಂಗಮರೂಪಿ
5. ದೇಶಿಯತೆ.
1. ಪ್ರಜಾಪ್ರಭುತ್ವಕ್ಕೆ ಸಂವಾದಿ
ಪ್ರಜಾಪ್ರಭುತ್ವಕ್ಕೆ ಸಂವಾದಿಯಾಗಿ ಕನ್ನಡ ಭಾಷೆ ಎಂಬುದನ್ನು ಗ್ರಹಿಸಬೇಕು. ಪ್ರಜಾಪ್ರಭುತ್ವಕ್ಕೆ ಎರವಾದ ಸಂಗತಿಗಳು ಘಟಿಸುತ್ತಿರುವಾಗ ಪ್ರಜಾಪ್ರಭುತ್ವ ನಶಿಸುತ್ತಿರುವದರ ಬಗ್ಗೆ ಚಕಾರ ಎತ್ತದೆ ಕೇವಲ ಭಾಷಾ ಕೇಂದ್ರಿತವಾಗಿ ಚಿಂತಿಸಿದರೆ ಅದು ಆತ್ಯಂತಿಕವಾಗಿ ಕನ್ನಡ ಭಾಷೆಯ ಹಿತವನ್ನೂ ಕಾಯಲಾರದು. ಕನ್ನಡಜನಗಳ ಪಾಲಿಗೆ ಪ್ರಜಾಪ್ರಭುತ್ವವನ್ನು ಯಶಸ್ವಿಯಾಗಿ ಮಾಡಬಲ್ಲ ಭಾಷೆ ಕನ್ನಡವೊಂದೇ.
2. ಸಮುದಾಯ ಪ್ರಜ್ಞೆ
ಕರಾವಳಿ ಕನ್ನಡ ಸಮುದಾಯ, ಹೈದ್ರಾಬಾದ್ ಕರ್ನಾಟಕ ಪ್ರಾಂತ್ಯ. ಈ ಯಾವುದೇ ಒಂದು ಭಾಗಕ್ಕೆ, ಸಮುದಾಯಕ್ಕೆ ಅಪಾಯ ಬಂದರೆ ಅದು ಕನ್ನಡಕ್ಕೆ ಆಗಿರುವ ಅಪಾಯ ಅಂತ ಗಮನಿಸಬೇಕು. ಕನ್ನಡದ ಕಾಡುಗಳ ಬಗ್ಗೆ, ಕನ್ನಡದ ನದಿಗಳ ಬಗ್ಗೆ, ಕನ್ನಡದ ರೈತರ ಬಗ್ಗೆ ಯೋಚನೆ ಮಾಡದಿರುವ ಹೋರಾಟ ಕನ್ನಡದ ಹೋರಾಟ ಅಲ್ಲ. ಕನ್ನಡದ ಪ್ರಶ್ನೆಗಳು, ಕನ್ನಡ ಸಮಾಜದ ಪ್ರಶ್ನೆಗಳು ಅಂದರೆ ಕನ್ನಡ ಸಮುದಾಯದ ಪ್ರಶ್ನೆಗಳು. ಕನ್ನಡವನ್ನು ಸಾವಿರಾರು ವರ್ಷ ಕಾಪಾಡಿಕೊಂಡು ಬಂದಂತಹ ಶ್ರಮವರ್ಗದ ಪ್ರಶ್ನೆಗಳೇ ಕನ್ನಡದ ಪ್ರಶ್ನೆಗಳು. ಕನ್ನಡದ ಪರವಾಗಿ ಇರುವುದು ಎಂದರೆ ವಚನಕಾರರು ಚಿಂತಿಸಿದಂತೆ ಸ್ಥಳೀಯ ಸಮುದಾಯದ ಆಶೋತ್ತರಗಳ ಪರವಾಗಿ ಇರುವುದು.
ಇದನ್ನು ಓದಿದ್ದೀರಾ?: ಹೆಸರಾಯ್ತು ಕರ್ನಾಟಕ; ವರುಷವಾಯ್ತು ಐವತ್ತು
3. ಬುದ್ಧಿಪ್ರಧಾನ
‘ಭಾವಪ್ರಧಾನ’ ಆಂಶಗಳತ್ತಲೇ ಕನ್ನಡ ಅಸ್ಮಿತೆಯ ಒತ್ತು ಬಿದ್ದಿರುವುದು ಕನ್ನಡ, ಕರ್ನಾಟಕದ ಆರೋಗ್ಯಕರ ಬೆಳವಣಿಗೆಯ ಮೇಲೆ ವ್ಯತಿರಿಕ್ತ ಪರಿಣಾಮಗಳನ್ನು ಬೀರಿದೆ. ‘ಭಾವಪ್ರಧಾನ’ ಅಂಶಗಳಿಗಿಂತ ‘ಬುದ್ಧಿಪ್ರಧಾನ’ ವೈಚಾರಿಕತೆ ಭಾಷೆಯನ್ನು ಆರೋಗ್ಯಕರವಾಗಿ ಬೆಳೆಸುತ್ತದೆ.
4. ಜಂಗಮ ಸ್ವರೂಪಿ
ಕನ್ನಡ ಅಸ್ಮಿತೆ ಎನ್ನುವುದು ಜಂಗಮ ಸ್ವರೂಪಿ. ಕನ್ನಡದ ಗುರುತು ಎನ್ನುವ ಕಲ್ಪನೆ ಆಕ್ರಮಣಶೀಲವಾಗಬಹುದು. ಅದು ಅನ್ಯರನ್ನು ಬಹಳ ಅಸಹನೆಯಿಂದ ಕಾಣಬಹುದು. ‘ನಾವು ಎದುರಿಗೆ ಕಾಣುವುದು ಇದೇ ಕನ್ನಡ, ಇದೇ ಕರ್ನಾಟಕ, ಇದು ಹೀಗೆ, ಇದೇ ಕನ್ನಡ’ ಎಂದು ವಾದ ಮಾಡುವುದಕ್ಕೆ ಶುರುಮಾಡಿದರೆ ನಮ್ಮ ಗುರುತಿನ ಹುಡುಕಾಟದಲ್ಲಿ ಅದು ಇತರರ ಮೇಲೆ ಅಸಹನೆಯನ್ನು ತೋರಬಹುದು. ಆದ್ದರಿಂದ ಕನ್ನಡ ಅನ್ನುವುದು ಇನ್ನೂ ಆಗಿಲ್ಲದಂತಹ ಸ್ಥಿತಿ, ಕನ್ನಡ ನಾಡು ಅಂದ್ರೆ ನಾವು ಯಾವಾಗಲೂ ಕನಸು ಕಾಣೋ ಸ್ಥಿತಿ. ಕನ್ನಡ ಭಾಷಿಕರು ಮೆಟ್ಟುವ ನೆಲವೇ ಕರ್ನಾಟಕ, ಮೂಲತಃ ಕನ್ನಡವು ಪರಿಭಾವಿಸುವ ಒಂದು ಕ್ರಿಯೆ.
5. ದೇಶಿಯತೆ ಪರ
‘ಕನ್ನಡತನ’ ಎನ್ನುವುದು ‘ಭಾಷೆಗೆ’ ಸೀಮಿತವಾದಂತೆಲ್ಲ ಭಾಷೆಯಾಗಿಯೂ ಅದು ಹಿನ್ನಡೆಯನ್ನು ಅನುಭವಿಸುತ್ತದೆ. ಒಂದು ನಾಡಿನ ಜನರ ಸಾಮಾಜಿಕ ಆರ್ಥಿಕ ಬದುಕು ನೆಟ್ಟಗಾಗದೆ ಆ ನಾಡಿನ ಸಂಸ್ಕೃತಿಯ ಚರ್ಚೆಗೆ ಏನೂ ಅರ್ಥವಿಲ್ಲ. ಕನ್ನಡ ಅಸ್ಮಿತೆ ಎಂದರೆ ಈ ನಾಡಿನಲ್ಲಿ ಬದುಕುತ್ತಿರುವ ಎಲ್ಲ ಜನಸಮುದಾಯಗಳ ಚಿಂತನೆ ಮತ್ತು ನಡಾವಳಿಗಳ ರೀತಿ. ಕನ್ನಡದ ಪರವಾಗಿ ಇರುವುದು ಎಂದರೆ ವಚನಕಾರರು ಚಿಂತಿಸಿದಂತೆ ದೇಶೀಯತೆಯ ಪರವಾಗಿ ಇರುವುದು.

ಡಾ. ಸರ್ಜಾಶಂಕರ್ ಹರಳಿಮಠ
ಲೇಖಕರು