ಆರೋಗ್ಯ ಕ್ಷೇತ್ರದಲ್ಲಿ ಕ್ರಾಂತಿಕಾರಕ ಬದಲಾವಣೆ ಅವಶ್ಯವಿದೆ. ಕಾರ್ಮಿಕರಿಗೆ ಉತ್ತಮ ಆರೋಗ್ಯ ಸೌಲಭ್ಯ ಸಿಗಲು ಸುಸಜ್ಜಿತ ಇಎಸ್‌ಐ ಆಸ್ಪತ್ರೆ ನಿರ್ಮಾಣವಾಗುತ್ತಿರುವುದು ಈ ಭಾಗಕ್ಕೆ ಉಪಯುಕ್ತವಾಗಿದೆ ಎಂದು ಸಂಸದ ಡಾ. ಸಿ ಎನ್ ಮಂಜುನಾಥ್ ಹೇಳಿದರು.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಆನೇಕಲ್ ತಾಲೂಕಿನ ಚಂದಾಪುರ ಪುರಸಭೆ ವ್ಯಾಪ್ತಿ ಇಗ್ಗಲೂರು ಬಳಿ ₹290ಕೋಟಿ ವೆಚ್ಚದಲ್ಲಿ 200 ಹಾಸಿಗೆಯುಳ್ಳ ಇಎಸ್‌ಐ ಆಸ್ಪತ್ರೆ ನಿರ್ಮಾಣ ಕಾರ್ಯಕ್ಕೆ ನಡೆದ ಪೂಜಾ ಕಾರ್ಯಕ್ರಮದಲ್ಲಿ ಮಾತನಾಡಿದರು.
“ಆಯುಷ್ಮಾನ್ ಭಾರತ್ ಯೋಜನೆ ಖಾಸಗಿ ಆಸ್ಪತ್ರೆಯಲ್ಲೂ ಸಿಗಬೇಕು. ಇದಕ್ಕೆ ರಾಜ್ಯ ಸರ್ಕಾರ ಕೆಲವು ಬದಲಾವಣೆ ತಂದು ಸಹಕಾರ ನೀಡಬೇಕು. ಇದರಿಂದ ಜನರಿಗೆ ಅಗತ್ಯ ಆರೋಗ್ಯ ಸೌಲಭ್ಯ ಸಿಗಲಿದೆ” ಎಂದು ಹೇಳಿದರು.
ಆಸ್ಪತ್ರೆ ವಿಶೇಷತೆ: ಐದು ಎಕರೆ ಪ್ರದೇಶದಲ್ಲಿ ಏಳು ಮಹಡಿ ಆಸ್ಪತ್ರೆ, ಆಸ್ಪತ್ರೆ ಉದ್ಯೋಗಿಗಳಿಗೆ ವಸತಿ ಗೃಹ, ಕ್ಯಾಂಟೀನ್ ಸೇರಿದಂತೆ ಸುಸಜ್ಜಿತ ಹಲವು ಸೌಲಭ್ಯಗಳನ್ನು ಒಳಗೊಳ್ಳಲಿದೆ ಎಂದಿದ್ದಾರೆ.
ಕಾರ್ಮಿಕರಿಗೆ ಆರೋಗ್ಯ ಸೌಲಭ್ಯ ಒದಗಿಸಲು ಇಎಸ್‌ಐ ಆಸ್ಪತ್ರೆ ತಾಲೂಕಿನಲ್ಲಿ ಸ್ಥಾಪಿತವಾಗಿದ್ದು, ಐದು ಎಕರೆ ಪ್ರದೇಶದಲ್ಲಿ ಏಳು ಮಹಡಿ ಆಸ್ಪತ್ರೆ, ಆಸ್ಪತ್ರೆ ಉದ್ಯೋಗಿಗಳಿಗೆ ವಸತಿ ಗೃಹ ಕ್ಯಾಂಟೀನ್ ಸೇರಿದಂತೆ ಸುಸಜ್ಜಿತ ಸೌಲಭ್ಯವುಳ್ಳ ಆಸ್ಪತ್ರೆಗೆ ಭೂಮಿ ಪೂಜೆ ನೆರವೇರಿಸಲಾಗಿದೆ. ಬೊಮ್ಮಸಂದ್ರ, ಜಿಗಣಿ, ಅತ್ತಿಬೆಲೆ, ವೀರಸಂದ್ರ, ಎಲೆಕ್ಟ್ರಾನಿಕ್ ಸಿಟಿ ಸೇರಿದಂತೆ ಐದು ಕೈಗಾರಿಕಾ ಪ್ರದೇಶಗಳಿವೆ.
ಈ ಸುದ್ದಿ ಓದಿದ್ದೀರಾ? ಮಂಡ್ಯ | ಪಟಾಕಿಗೆ ಹೆಚ್ಚು ಮಹತ್ವ ನೀಡದೆ ಪರಿಸರ ಉಳಿಸಿ: ಜಯ ಕರ್ನಾಟಕ ಪರಿಷತ್ ಮುಖಂಡ ನಾರಾಯಣ್
ಕೈಗಾರಿಕಾ ಪ್ರದೇಶಗಳಲ್ಲಿ ಲಕ್ಷಾಂತರ ಮಂದಿ ಕಾರ್ಮಿಕರಿದ್ದಾರೆ. ವಾರ್ಷಿಕ ₹140 ಕೋಟಿಗೂ ಹೆಚ್ಚು ಹಣ ಇಎಸ್‌ಐಗೆ ಬೊಮ್ಮಸಂದ್ರ ಕೈಗಾರಿಕಾ ಪ್ರದೇಶದಿಂದಲೇ ಜಮೆಯಾಗುತ್ತಿದೆ. ಬಹುದಿನಗಳ ಕಾರ್ಮಿಕರ ಬೇಡಿಕೆ ಈಡೇರಿದಂತಾಗಿದ್ದು, ಎರಡೂವರೆ ವರ್ಷಗಳಲ್ಲಿ ಇಎಸ್‌ಐ ಆಸ್ಪತ್ರೆ ನಿರ್ಮಾಣವಾಗುವ ಸಾಧ್ಯತೆ ಇದೆ.