ಬೆಳಗಾವಿ ಜಿಲ್ಲಾಡಳಿತ ನವೆಂಬರ್ 1ರಂದು ‘ಕರಾಳ ದಿನ’ ಆಚರಿಸುವುದನ್ನು ನಿಷೇಧಿಸಿದ ಬಳಿಕವೂ ಮಹಾರಾಷ್ಟ್ರ ಏಕೀಕರಣ ಸಮಿತಿ(ಎಂಇಎಸ್) ಶುಕ್ರವಾರ ಬೆಳಿಗ್ಗೆ ನಗರದಲ್ಲಿ ಬೃಹತ್ ‘ಕರಾಳ ದಿನ’ ರ್‍ಯಾಲಿ ನಡೆಸಿದ್ದು, ಪೊಲೀಸ್ ಇಲಾಖೆ ಜಾಣ ಕುರುಡು ಪ್ರದರ್ಶಿಸಿದೆ.
ಬೆಳಗಾವಿ ನಗರದ ಧರ್ಮವೀರ ಸಂಭಾಜಿ ಉದ್ಯಾನದಿಂದ ಪ್ರಾರಂಭವಾದ ಬೈಕ್ ರ್‍ಯಾಲಿಯನ್ನು ನಿಯಂತ್ರಿಸುವಲ್ಲಿ ಪೊಲೀಸರು ವಿಫಲರಾಗಿದ್ದಾರೆ.
ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ಸಾವಿರಾರು ಜನರು ಹಣೆ ಮತ್ತು ಭುಜಗಳಿಗೆ ಕಪ್ಪು ಕಪ್ಪು ಪಟ್ಟಿ ಧರಿಸಿ, ಬೈಕ್ ರ್‍ಯಾಲಿಯಲ್ಲಿ ಭಾಗವಹಿಸಿದ್ದರು. ಎಂಇಎಸ್ ರ್‍ಯಾಲಿ ಮತ್ತು ರಾಜ್ಯೋತ್ಸವ ರ್‍ಯಾಲಿ ನಡುವೆ ಘರ್ಷಣೆ ನಡೆಯದಂತೆ ತಡೆಯುವಲ್ಲಿ ಪೊಲೀಸರು ಅಸಹಾಯಕರಾದರು.
ಭಾರೀ ಬಂದೋಬಸ್ತ್ ಹೊರತಾಗಿಯೂ, ಪ್ರತಿ ಸಣ್ಣ ಮತ್ತು ದೊಡ್ಡ ಬೀದಿಗಳಿಂದ ಜನರು ಕೇಸರಿ ಮತ್ತು ಕಪ್ಪು ಧ್ವಜಗಳನ್ನು ಹಿಡಿದು ರ್‍ಯಾಲಿಯಲ್ಲಿ ಸೇರುತ್ತಿದ್ದುದರಿಂದ ಜನಸಮೂಹ ಹೇಗೆ ಹೆಚ್ಚುತ್ತಿದೆಯೆಂಬುದರ ಕುರಿತು ಪೊಲೀಸರು ಗೊಂದಲಕ್ಕೊಳಗಾಗಿದ್ದರು.
ಬೆಳಗಾವಿ, ನಿಪ್ಪಾಣಿ, ಖಾನಾಪುರ, ಕಾರವಾರ, ಬೀದರ್ ಮತ್ತು ಭಾಲ್ಕಿಯನ್ನು ಮಹಾರಾಷ್ಟ್ರಕ್ಕೆ ವಿಲೀನಗೊಳಿಸುವಂತೆ ಒತ್ತಾಯಿಸಿ ಘೋಷಣೆಗಳನ್ನು ಕೂಗಿದರು. ರ್‍ಯಾಲಿಯ ನಂತರ, ಬಹುತೇಕ ಎಲ್ಲ ವಾಣಿಜ್ಯ ಸಂಸ್ಥೆಗಳು ಮುಚ್ಚಲ್ಪಟ್ಟಿದ್ದು, ವಿಶೇಷವಾಗಿ ಹಳೆಯ ಬೆಳಗಾವಿಯ ಶಹಾಪುರ, ವಡಗಾಂವ್, ಅನಗೋಳ, ತಿಲಕವಾಡಿ, ಹಿಂದವಾಡಿ ಮತ್ತು ಉದ್ಯಾಂಬಾಗ್ ಪ್ರದೇಶಗಳಲ್ಲಿ ಸಂಪೂರ್ಣ ಬಂದ್ ಮಾಡಲಾಗಿತ್ತು.
ಧರ್ಮವೀರ ಸಂಭಾಜಿ ಉದ್ಯಾನದಿಂದ ಪ್ರಾರಂಭವಾದ ಜಾಥಾ ತಾನಾಜಿ ಗಲ್ಲಿ, ಭಂಡೂರ್ ಗಲ್ಲಿ, ಪಾಟೀಲ್ ಗಲ್ಲಿ, ರಾಮಲಿಂಗ ಖಿಂಡ್ ಗಲ್ಲಿ, ಹೇಮು ಕಲಾನಿ ಚೌಕ್, ತಹಶೀಲ್ದಾರ್ ಗಲ್ಲಿ, ಫುಲ್ಬಾಗ್ ಗಲ್ಲಿ, ಕಪಿಲೇಶ್ವರ ಸೇತುವೆ, ಎಪಿಎಂಸಿ ರಸ್ತೆ, ಶಿವಾಜಿ ಗಾರ್ಡನ್, ನರ್ವೇಕರ್ ಗಲ್ಲಿ, ಆಚಾರ್ಯ ಗಲ್ಲಿ, ಸರಾಫ್ ಗಲ್ಲಿ, ಬಸವನ ಗಲ್ಲಿ, ಗಣೇಶ್ ಗಲ್ಲಿ, ಜೆಡ್ ಗಲ್ಲಿ, ಕೋರೆ ಗಲ್ಲಿ, ಕೆ ಮೀರಾಪುರ್ ಗಲ್ಲಿ, ಖಾಡೆ ಬಜಾರ್, ಮಹಾತ್ಮಾ ಫುಲೆ ರಸ್ತೆ ಮತ್ತು ಗೋವಾಸ್ ವೃತ್ತ ಸೇರಿದಂತೆ ರೈಲ್ವೆ ಮೇಲ್ಸೇತುವೆ ಬಳಿಯ ಮರಾಠಾ ಮಂದಿರದಲ್ಲಿ ಮುಕ್ತಾಯಗೊಂಡಿತು.
ಈ ಸುದ್ದಿ ಓದಿದ್ದೀರಾ? ಕಲಬುರಗಿ | ಕಲ್ಯಾಣ ಕರ್ನಾಟಕ ಪ್ರತ್ಯೇಕ ರಾಜ್ಯಕ್ಕೆ ಆಗ್ರಹಿಸಿ ಪ್ರತಿಭಟನೆ: ಹಲವರು ಪೊಲೀಸ್ ವಶಕ್ಕೆ
‘ಕರಾಳ ದಿನ’ ರ್‍ಯಾಲಿಯಲ್ಲಿ ಭಾಗವಹಿಸಲು ಮಹಾರಾಷ್ಟ್ರ ನಾಯಕರು ಬೆಳಗಾವಿಗೆ ಪ್ರವೇಶಿಸುವುದನ್ನು ಜಿಲ್ಲಾಡಳಿತ ನಿಷೇಧಿಸಿದೆ. ನಗರದಾದ್ಯಂತ, ವಿಶೇಷವಾಗಿ ಎಂಇಎಸ್ ಮೆರವಣಿಗೆ ನಡೆಯುವ ಮಾರ್ಗವಾದ ಹಳೆ ಬೆಳಗಾವಿಯಲ್ಲಿ ಹೆಚ್ಚಿನ ಸಂಖ್ಯೆಯ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು. ‘ಕರಾಳ ದಿನ’ ರ್‍ಯಾಲಿಯಲ್ಲಿ ಭಾಗವಹಿಸುವ ಗುಂಪಿನ ಮೇಲೆ ನಿಗಾ ಇಡಲು ಇಲಾಖೆ ಸಿಸಿಟಿವಿ ಮತ್ತು ಡ್ರೋನ್ ಕ್ಯಾಮೆರಾಗಳನ್ನು ವ್ಯವಸ್ಥೆ ಮಾಡಿದೆ.
ಹದಿನೈದು ದಿನಗಳ ಹಿಂದೆ ಕನ್ನಡ ರಾಜ್ಯೋತ್ಸವದ ಪೂರ್ವಸಿದ್ಧತಾ ಸಭೆಯಲ್ಲಿ ಅನುಮತಿ ಕೋರಿ ಜಿಲ್ಲಾಧಿಕಾರಿಯನ್ನು ಭೇಟಿಯಾದ ಎಂಇಎಸ್ ನಾಯಕರಿಗೆ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅವರು ರ್‍ಯಾಲಿಗೆ ಅನುಮತಿ ನಿರಾಕರಿಸುವುದಾಗಿ ಘೋಷಿಸಿದ್ದರು.